ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮೇ.೨೮ರಂದು ನಡೆಯಲಿರುವ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ಗೊಂದಲ ಅಥವಾ ಅಶಾಂತಿಗೆ ಆಸ್ಪದ ನೀಡಬಾರದು. ಸಿಂದಗಿ ಜನತೆ ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾದವರು ಪಿಎಸ್‌ಐ ಶ್ರೀಕಾಂತ ಕಾಂಬಳೆ ಹೇಳಿದರು.
ಸಿಂದಗಿ ನಗರದ ಪೋಲಿಸ್ ಠಾಣೆಯ ಆವರಣದಲ್ಲಿ ಬಕ್ರೀದ್ ಹಬ್ಬದ ನಿಮಿತ್ಯ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಹಬ್ಬಗಳ ಸಂದರ್ಭದಲ್ಲೂ ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಿದ್ದಾರೆ. ಇದೇ ಸಹಕಾರ ಮುಂದುವರಿಯಬೇಕು. ಇತರರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲರೂ ನಡೆದುಕೊಳ್ಳಬೇಕು. ಯಾವುದೇ ಅಹಿತಕರ ಘಟನೆ ಕಂಡುಬಂದರೆ ಕಾನೂನು ಕೈಗೆ ತೆಗೆದುಕೊಳ್ಳದೆ ಪೊಲೀಸರ ಗಮನಕ್ಕೆ ತರಬೇಕು. ಹಬ್ಬದ ಸಂದರ್ಭದಲ್ಲಿ ನಗರ ಸೇರಿದಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ವೇಳೆ ಕ್ರೈಂ ಪಿಎಸ್‌ಐ ಎಂ.ಬಿ.ಬಿರಾದಾರ ಮಾತನಾಡಿ, ಇತ್ತೀಚೆಗೆ ಸಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿಗಳು ಹರಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ಧಿಗಳಿಂದ ಯಾರೂ ಪ್ರಚೋದನೆಗೆ ಒಳಗಾಗದೆ ಎಚ್ಚರಿಕೆ ವಹಿಸಬೇಕು. ಧಾರ್ಮಿಕ ಮತ್ತು ಸಾಮಾಜಿಕ ಘರ್ಷಣೆ ಹೆಚ್ಚಲು ಸುಳ್ಳು ಸುದ್ಧಿಗಳೇ ಕಾರಣ. ಹೀಗಾಗಿ ಸುಳ್ಳು ಸುದ್ದಿ ಪತ್ತೆಗೆ ಮತ್ತು ಅದನ್ನು ಹರಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಕಾರಣ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬ ಆಚರಣೆ ಮಾಡಲು ಎಲ್ಲ ಸಮುದಾಯಗಳು ಸಹಕರಿಸಬೇಕು ಎಂದರು.
ಈ ವೇಳೆ ಹಿರಿಯ ಮುಖಂಡ ರಾಜಣ್ಣ ನಾರಾಯಣಕರ ರಜಾಕ್ ಮುಜಾವರ, ಸೈಫನ್ ನಾಟೀಕಾರ, ರಮೇಶ ಮೋರಟಗಿ, ಎಂ.ಎಂ.ಸಿಂದಗಿಕರ್, ನಾಗಪ್ಪ ಪಾತ್ರೋಟ್ಟಿ, ಅಂಬರೀಷ ಚೌಗಲೆ ಸೇರಿದಂತೆ ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.

