ಉದಯರಶ್ಮಿ ದಿನಪತ್ರಿಕೆ
ಇಂಡಿ: ಶನಿವಾರ ರಾತ್ರಿ ಸುರಿದ ಗುಡುಗು-ಗಾಳಿ ಸಹಿತ ಮಳೆಗೆ ತಾಲೂಕಿನ ವಿವಿಧೆಡೆ ಸಾಕಷ್ಟು ಬೆಳೆ ಹಾನಿಯಾಗಿವೆ.
ತಾಲೂಕಿನ ಸಾಲೋಟಗಿ ಗ್ರಾಮದ ರೈತ ಧರ್ಮರಾಯ ಚನ್ನಪ್ಪ ನರಳೆ ಇವರಿಗೆ ಸೇರಿದ ೨೦೫೫ ಬಾಳೆ ಗಿಡಗಳು ಮತ್ತು ಸಿದ್ದು ದೇವೆಂದ್ರ ನರಳೆ ಇವರಿಗೆ ಸೇರಿದ ೧೯೫೦ ಬಾಳೆ ಗಿಡಗಳು ಸಂಪೂರ್ಣ ನೆಲಸಮವಾಗಿವೆ.
ಬಾಳೆ ಗಿಡಗಳು ಕೇವಲ ೧೫ ದಿನದಲ್ಲಿ ಮಾರಾಟಕ್ಕೆ ಹೋಗುವ ಸ್ಥಿತಿಯಲ್ಲಿ ಇದ್ದವು. ಹೀಗಾಗಿ ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಸಿ ನೆಟ್ಟು, ಗೊಬ್ಬರಹಾಕಿ, ಔಷಧಿ ಸಿಂಪರಣೆ ಮಾಡಿದ್ದ ರೈತರಿಗೆ ತಾವು ಖರ್ಚು ಮಾಡಿದ ಹಣವೂ ಸಹ ಕೈಗೆ ಸಿಗದಂತಾಗಿದೆ.
ತಾಲೂಕಿನ ತಾಂಬಾ ಗ್ರಾಮದ ರೈತ ಮಹಿಳೆ ಕಸ್ತೂರಬಾಯಿ ಈರಣ್ಣ ತೆಗ್ಗೆಳ್ಳಿ ಅವರ ೧ ಎಕರೆ ಜಮೀನಿನಲ್ಲಿ ಬೆಳೆದ ಡ್ರೆöÊಗನ್ ಬೆಳೆ ಸಂಪೂರ್ಣವಾಗಿ ನೆಲಕ್ಕುರುಳಿವೆ.
ತಾಲೂಕಿನ ಶಿರಗೂರ ಇನಾಂ ಗ್ರಾಮದ ಸಿದರಾಯ ದೇವಸ್ಥಾನದ ಆವರಣದಲ್ಲಿ ೮೦ ಲಕ್ಷ ರೂವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಮಾಲಗಂಬ ೪೪ ಅಡಿ ನಿರ್ಮಾಣವಾಗಿತ್ತು. ಅಂದಾಜು ೪೦ ಲಕ್ಷಕ್ಕೂ ಹೆಚ್ಚಿನ ಹಣ ಖರ್ಚಾಗಿದ್ದು ರಾತ್ರಿ ಬೀಸಿದ ಗಾಳಿಯಲ್ಲಿ ನೆಲಕ್ಕುರುಳಿದ್ದು, ದೇವಸ್ಥಾನದ ಕೋಣೆ ಮತ್ತು ಸಾರ್ವಜನಿಕರೋರ್ವರ ಮನೆ ಮತ್ತು ಪತ್ರಾಸ್ ಶೇಡ್ ಮೇಲೆ ಮಾಲಗಂಬ ಬಿದ್ದು ಹಾನಿಯಾಗಿದೆ.
ತಾಲೂಕಿನ ಸಾಲೋಟಗಿ ಗ್ರಾಮದ ರೈತರ ಜಮೀನಿಗೆ ಜೆಡಿಎಸ್ ಧುರೀಣರಾದ ಬಿ.ಡಿ.ಪಾಟೀಲ ಭೇಟಿ ನೀಡಿದ್ದು ಪೃಕೃತಿ ವಿಕೋಪ ಪರಿಹಾರದ ಅಡಿಯಲ್ಲಿ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿದ್ದಾರೆ.
*ಬಿರುಗಾಳಿ ಹಾಗೂ ಮಳೆಯಿಂದ ಹಾನಿಯಾದ ತೋಟಗಾರಿಕೆ ಬೆಳೆಗಳ ಮಾಹಿತಿ ಪಡೆಯಲಾಗುತ್ತಿದೆ. ಗ್ರಾಮ ಆಡಳಿತಾಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಸರ್ವೇ ನಡೆಸಲಾಗುತ್ತಿದೆ. ಸರ್ವೇ ನಡೆಸಿ ಮೇಲಾಧಿಕಾರಿಗಳಿಗೆ ಕಳುಹಿಸಿ ಕೊಡುತ್ತೇವೆ.”
– ಹೆಚ್.ಎಸ್. ಪಾಟೀಲ
ಹಿರಿಯ ನಿರ್ದೆಶಕರು, ತೋಟಗಾರಿಕೆ ಇಲಾಖೆ ಇಂಡಿ.
ಇಂಡಿ ನಗರದಲ್ಲಿ ೨೬.೬ ಎಂ.ಎಂ ಮಳೆ
ಶನಿವಾರ ರಾತ್ರಿ ಇಂಡಿ ನಗರದಲ್ಲಿ ೨೬.೬ ಎಂ.ಎಂ, ನಾದ ಬಿ.ಕೆ. ೮ ಎಂ.ಎಂ, ಅಗರಖೇಡ ೧೩.೩ ಎಂ.ಎಂ, ಹೋರ್ತಿ ೧೯.೭ ಎಂ.ಎಂ, ಚಡಚಣ ೧೪.೨ ಎಂ.ಎಂ ಮಳೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.

