ವಿಜಯಪುರದಲ್ಲಿ ಅಂಗನವಾಡಿ ಶಿಕ್ಷಕಿಯರು- ಸಹಾಯಕಿಯರಿಗೆ ಬುನಾದಿ ತರಬೇತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಅಂಗನವಾಡಿ ಕೇಂದ್ರಗಳು ಮಹತ್ವದ ಪಾತ್ರವಹಿಸುತ್ತಿವೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಷನ್ ಸಹಯೋಗದಲ್ಲಿ ನಗರದ ಕಂದಗಲ್ ಹನುಮತರಾಯ ರಂಗಮಂದಿರದಲ್ಲಿ ಹೊಸದಾಗಿ ನೇಮಕವಾದ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿಗೆ ಮೇ.೨೧ರಂದು ಹಮ್ಮಿಕೊಂಡಿದ್ದ ಬುನಾದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಆರೋಗ್ಯ,ಶಿಕ್ಷಣ ಮತ್ತು ಉತ್ತಮ ಸಂಸ್ಕಾರಗಳ ಬುನಾದಿ ಬಾಲ್ಯಾವಸ್ಥೆಯಲ್ಲೇ ನಿರ್ಮಾಣವಾಗುತ್ತದೆ. ಹಾಗಾಗಿ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರು ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದರು.
ಇನ್ನೊಂದೆಡೆ ಸರ್ಕಾರ ಮಕ್ಕಳ ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅಂಗನವಾಡಿ ಶಿಕ್ಷಕಿಯರು ಅಂಗನವಾಡಿ ಕೇಂದ್ರಕ್ಕೆ ಮಾತ್ರ ಸೀಮಿತವಾಗದೆ ಗ್ರಾಮ ಮತ್ತು ಸಮುದಾಯ ಮಟ್ಟದಲ್ಲಿಯೂ ಜನರಿಗೆ ಈ ಯೋಜನೆಗಳ ಮಾಹಿತಿ ತಲುಪಿಸಿ, ಅವುಗಳ ಸದುಪಯೋಗ ಪಡೆಯಲು ಪ್ರೇರಣೆ ನೀಡಬೇಕು ಎಂದರು.
ಕಾರ್ಯಕ್ರಮದ ಹೊಸದಾಗಿ ನೇಮಕವಾದ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿಗೆ ಮಕ್ಕಳ ಆರೈಕೆ, ಪೌಷ್ಟಿಕ ಆಹಾರ, ಶಿಕ್ಷಣ ಚಟುವಟಿಕೆಗಳು ಹಾಗೂ ಆರೋಗ್ಯ ಸಂಬಂಧಿತ ವಿವಿಧ ತರಬೇತಿ ಅಧಿವೇಶನಗಳನ್ನು ನಡೆಸಲಾಯಿತು.
ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಕ್ಷೇತ್ರಮಟ್ಟದ ಅನುಭವಗಳನ್ನೂ ಹಂಚಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಕೆ. ಚವ್ಹಾಣ, ಕಾರ್ಯಕ್ರಮಾಧಿಕಾರಿ ನಿರ್ಮಲಾ ಸುರಪುರ, ದೀಪಾಕ್ಷಿ, ಜಾನಕಿ, ಅಜೀಂ ಪ್ರೇಮಜಿ ಫೌಂಡೇಶನ್ ಜಿಲ್ಲಾ ಸಂಯೋಜಕ ಹರೀಶ ಕೆ.ಆರ್., ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು ಹಾಗೂ ಅಜೀಂ ಪ್ರೇಮಜಿ ಫೌಂಡೇಶನ್ ಸದಸ್ಯರು ಭಾಗವಹಿಸಿದ್ದರು.

