ಶಾಸಕ ಅನಿಲ್ ಚಿಕ್ಕಮಾದು ಭರವಸೆ | ಪಿಂಚಣಿ ಮುಂದುವರೆಸಲು ಪತ್ರ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ವಿಕಲಚೇತನರು ಸಮಾಜದಲ್ಲಿ ಸಮಾನವಾಗಿ ಪ್ರಗತಿ ಸಾಧಿಸಲು ಸರ್ಕಾರದ ಜನಪರ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿ ಕಛೇರಿಯಲ್ಲಿ ತಾಲೂಕು ಪಂಚಾಯತ್ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರ ಸಾಧನ/ಸಲಕರಣೆ ವಿತರಣೆ ಮತ್ತು ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಮಂಡಳಿ ವತಿಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ಯಾರು ಕೂಡ ದುರ್ಬಳಕೆ ಮಾಡಿಕೊಳ್ಳಬಾರದು. ಲ್ಯಾಪ್ ಟಾಪ್ ಗಳನ್ನೂ ಸಿಬ್ಬಂದಿಗಳು ಸರ್ಕಾರಿ ಕಚೇರಿಯಲ್ಲೇ ಬಳಸಬೇಕು, ಕೆಲಸ ಮುಗಿದ ಬಳಿಕ ಆಫೀಸ್ ನಲ್ಲೇ ಇಟ್ಟು ಹೋಗಬೇಕು. ಮನೆಗೆ ತೆಗೆದುಕೊಂಡು ಹೋಗಿ ತಮ್ಮ ಮಕ್ಕಳಿಗೆ, ಸಂಬಂಧಿಕರಿಗೆ ಕೊಡುವ ಕೆಲಸ ಮಾಡಬಾರದು. ಇದನ್ನು ನಾನು ಸಹಿಸುವುದಿಲ್ಲ. ಈ ಬಗ್ಗೆ ನನ್ನ ಗಮನಕ್ಕೆ ಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಸಕ ಅನಿಲ್ ಚಿಕ್ಕಮಾದು ಎಚ್ಚರಿಕೆ ನೀಡಿದರು.
ಸಮುದಾಯ ಭವನ ಮತ್ತು ಸಭೆ ಸಮಾರಂಭ ನಡೆಸಲು ಸಭಾಂಗಣ ಬೇಕು ಎಂದು ವಿಕಲಚೇತನರು ನನಗೆ ಮನವಿ ಪತ್ರ ನೀಡಿದ್ದಾರೆ. ಖಂಡಿತವಾಗಿಯೂ ತಾಲೂಕು ಪಂಚಾಯತ್ ಕಚೇರಿ ಜಾಗದಲ್ಲೇ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿ, ಶಾಸಕರ ಅನುದಾನದಲ್ಲಿ ಆದಷ್ಟು ಬೇಗ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು. ಸ್ಥಗಿತಗೊಂಡಿರುವ ಪಿಂಚಣಿಯನ್ನು ಮತ್ತೆ ಮುಂದುವರೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಇದರ ಜೊತೆಗೆ ನಾನೇ ಖುದ್ದಾಗಿ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ರೀನಿವಾಸ್, ಇಓ ಧರಣೇಶ್, ಗಿರಿಜನ ಕಲ್ಯಾಣ ಅಧಿಕಾರಿ ಮಹೇಶ್, ದೇವರಾಜು ಅರಸು ನಿಗಮದ ಮಹದೇವ್, ರಾಘವೇಂದ್ರ ವಿಶೇಷ ಚೇತನ ತಾಲೂಕು ಸಂಯೋಜಕ ಮಹದೇವಯ್ಯ, ಸೇರಿದಂತೆ ತಾ.ಪಂ.ಸಿಬ್ಬಂದಿ ಉಪಸ್ಥಿತರಿದ್ದರು.

