ಇಂದು (ಮೇ. ೨೪, ರವಿವಾರ) “ರಾಷ್ಟ್ರೀಯ ಸಹೋದರರ ದಿನ. ಅದರ ಪ್ರಯುಕ್ತ ಈ ವಿಶೇಷ ಲೇಖನ)
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಅಣ್ಣ.. ನೀ ಪ್ರಾಣವು ನನಗೆ, ನಿನ್ನೆದುರಲಿ ನಾನು, ನನ್ನೆದುರಲಿ ನೀನು, ಜೊತೆ ಜೊತೆಯಲಿ ಹೀಗೆ, ಇರುವೆ ಜೊತೆಗೆ, ಉಸಿರಾಗಿರು ಹೀಗೆ ಉಸಿರಾ ಜೊತೆಗೆ” ಎಂಬ ಹಾಡು ಅಣ್ಣ-ತಂಗಿಯರ ಜನುಮ ಜನುಮಗಳ ಅನುಬಂಧ, ಪ್ರೀತಿ, ಮಮತೆ ಮತ್ತು ಅಣ್ಣ-ತಂಗಿಯರ ನಡುವಿನ ಭಾವಬಂಧವನ್ನು ಅಭಿವ್ಯಕ್ತಗೊಳಿಸುತ್ತಾ, ಸಹೋದರತೆಯ ಅನ್ಯೋನ್ಯ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ತಪ್ಪು ಮಾಡಿಆಗ ಬೈದು ತಿದ್ದುವನು ನನ್ನಣ್ಣ, ದಾರಿ ಕಾಣದಾದಾಗ ಕೈ ಹಿಡಿದು ನಡೆಸುವನು ನನ್ನಣ್ಣ. ಕಷ್ಟದಲ್ಲಿದ್ದಾಗ ಧೈರ್ಯ ತುಂಬುವನು ತಂದೆಯ ಕಾಳಜಿ ನೀಡಿ ಜೋಪಾನ ಮಾಡುವನು. ಕೆಲವು ಸಲ ನಮಗೆ ತಂದೆ-ತಾಯಿಯ ಮುಂದೆ ಹೇಳಲಿಕ್ಕೆ ಆಗದ ಕೆಲವೊಂದು ವಿಷಯಗಳಿದ್ದಾಗ ಆ ಮಾತುಗಳನ್ನು ನಿಜವಾಗಿಯೂ ಸಹೋದರ ಕೇಳುವವನಾಗುತ್ತಾನೆ. ಏನೋ ಸಮಸ್ಯೆ ಬಂದಾಗ, ತಪ್ಪು ಮಾಡಿದಾಗ ಅಥವಾ ಅಂತರಾಳದಲ್ಲಿ ಉಂಟಾಗುವ ಬದಲಾವಣೆಗಳನ್ನು ನೇರವಾಗಿ ಹಿರಿಯರಿಗೆ ಹೇಳಲು ಸಾಧ್ಯವಿಲ್ಲ.
ಹಿರಿಯಣ್ಣನ ಸ್ಥಾನದಲ್ಲಿ ನಿಂತು ತಾಳ್ಮೆಯಿಂದ ಕೇಳಿ ಅದಕ್ಕೊಂದು ಪರಿಹಾರ ಸೂಚಿಸುವವನೇ ಸಹೋದರ ಅಥವಾ ಅಣ್ಣನೇ ಆಗಿರುತ್ತಾನೆ. ಅವನು ಅಣ್ಣನಾಗಿರಬಹುದು ಅಥವಾ ತಮ್ಮನಾಗಿರಬಹುದು. ಆ ಕ್ಷಣಕ್ಕೊಂದು ಸಮಾಧಾನ ಮಾಡುವ ಮತ್ತು ಸಾಂತ್ವನ ನೀಡುವ ವ್ಯಕ್ತಿಯೇ ಸಹೋದರ. ಮನೆಯಲ್ಲಿ ಒಬ್ಬರಿರಲಿ ಅಥವಾ ಇಬ್ಬರು ಸಹೋದರರು ಇರಲಿ ಅಥವಾ ಸಹೋದರರೇ ಇಲ್ಲದಿರಲಿ ನಾವು ಎಲ್ಲರಲ್ಲೂ ಸಹೋದರತೆ ಮತ್ತು ಸಹೋದತ್ವದ ಭಾವದಿಂದ ಕಾಣಬೇಕು ಮತ್ತು ಪ್ರೀತಿಯ ಸಹಬಾಳ್ವೆಯಿಂದ ಬದುಕಬೇಕು.

ಭಾವನಾತ್ಮಕ ಪ್ರೀತಿ ಮತ್ತು ಸಹೋದರತೆಯ ಬಾಂಧವ್ಯವನ್ನು ಗಟ್ಟಿಗೊಳಿಸುವಂತಾಗಲಿ: ಸಹೋದರರೆಂದರೆ ಕೇವಲ ಒಡಹುಟ್ಟಿದವರು ಅಥವಾ ರಕ್ತ ಸಂಬಂಧಿಗಳಾಗಿರಬೇಕೆಂದಿಲ್ಲ. ಇತ್ತೀಚೆಗೆ ಹೊಸದಾಗಿ ಹುಟ್ಟಿಕೊಂಡಿರುವ ಟ್ರೆಂಡ್ ‘ಬ್ರೋ’ ಹೆಚ್ಚು ಮಹತ್ವ ನೀಡುತ್ತಿರುವ ಈಗಿನ ವಿಶೇಷವಾಗಿದೆ. ಇಡೀ ವಿಶ್ವದೆಲ್ಲೆಡೆ ಎಲ್ಲರಲ್ಲಿಯೂ ಸಹೋದರತೆ, ಸಹೋದರತ್ವ ಮತ್ತು ಭ್ರಾತೃತ್ವದ ಭಾವವನ್ನು ಒಡಮೂಡಿಸಲು ಮತ್ತು ಕುಟುಂಬದಲ್ಲಿ ಪ್ರೀತಿ-ವಾತ್ಸಲ್ಯ, ಮಮತೆ, ಅನ್ಯೋನ್ಯತೆ, ಸುಮಧುರ ಬಾಂಧವ್ಯವನ್ನು ಗಟ್ಟಿಗೊಳಿಸಲು ಮತ್ತು ಅಣ್ಣ-ತಮ್ಮಂದಿರ ತ್ಯಾಗವನ್ನು ಸ್ಮರಿಸಲು ಪ್ರತಿ ವರ್ಷ ಮೇ ೨೪ ರಂದು ಜಾಗತಿಕವಾಗಿ ‘ಸಹೋದರರ ದಿನ’ ವನ್ನು ಆಚರಿಸಲಾಗುತ್ತಿದೆ. ಒಬ್ಬರಿಗೊಬ್ಬರು ಪರಸ್ಪರ ಅರ್ಥೈಸಿಕೊಂಡು ತಮ್ಮ ಅನು-ತನು ಹಂಚಿಕೊಳ್ಳುವ ಮತ್ತು ಆಪತ್ತು ಬಂದಾಗ ಸಹಾಯ-ಸಹಕಾರ ನೀಡುವ ಮನೋಭಾವವನ್ನು ಬೆಳೆಸುವುದರ ಮೂಲಕ ಸಹೋದರತ್ವದ ಭಾವ ಮೂಡಿಸಿ, ಭಾವಾನುಬಂಧವನ್ನು ಗಟ್ಟಿಗೊಳ್ಳಬೇಕೆಂಬುದೇ ಈ ದಿನದ ಆಚರಣೆಯ ಪ್ರಮುಖ ಉದ್ಧೇಶವಾಗಿದೆ.
ಅಣ್ಣ-ತಮ್ಮಂದಿರರಲ್ಲಿ ಭ್ರಾತೃತ್ವ ಭಾವ ಮತ್ತು ಭಾವಾನುಬಂಧ ಬೆಸೆಯಲಿ: ಮೇ ೨೪, ೨೦೦೫ ರಂದು ಯುನೈಟೆಡ್ ಸ್ಟೇಟ್ಸ್ (ಅಮೇರಿಕಾ) ದಲ್ಲಿ ಮೊಟ್ಟಮೊದಲು ಅಲಬಾಮಾ ಮೂಲದ ಸಿ. ಡ್ಯಾನಿಯಲ್ ರೋಡ್ಸ್ ಎಂಬುವವರು ಈ ‘ಸಹೋದರರ ದಿನ’ ವನ್ನು ಆಚರಿಸಲು ಕರೆ ಕೊಟ್ಟರು. ಯು.ಎಸ್.ಎ. ಮೊದಲ ಸಹೋದರ ಸಂಘಟನೆ ಫ್ರೀಮಾಸನ್ಸ್ ಸ್ಥಾಪನೆಯನ್ನು ದಿನವನ್ನು ಸ್ಮರಿಸುವ ದಿನವೇ ಈ ಸಹೋದರರ ದಿನ. ಅಣ್ಣ-ತಮ್ಮಂದಿರ ನಡುವಿನ ಪ್ರೀತಿ, ಸಹಕಾರ, ತ್ಯಾಗಕ್ಕೆ ಗೌರವ ನೀಡುವ ದಿನ ಇದಾಗಿದೆ. ಸಹೋದರ-ಸಹೋದರಿಯರ ನಡುವಿನ ಅವಿನಾಭಾವ ಸಂಬಂಧ ಮತ್ತು ಭ್ರಾತೃತ್ವದ ಭಾವ ಬೆಸೆಯುವ ಅನುಬಂಧವಾಗಿದೆ. ನಮ್ಮ ಸಹೋದರರೊಂದಿಗಿನ ಸಂಬಂಧಗಳನ್ನು ಪಾಲಿಸಲು ಮತ್ತು ನಮ್ಮ ಜೀವನಕ್ಕೆ ಸಂತೋಷ ಮತ್ತು ಬೆಂಬಲವನ್ನು ತರುವ ಜೀವಮಾನದ ಸಂಪರ್ಕವನ್ನು ಬಲಪಡಿಸಲು ಈ ದಿನವು ನೆನಪಿಸುತ್ತದೆ.

ಸಹೋದರತ್ವದ ಸುರಕ್ಷೆಯ ಸಂಕೇತ ಮತ್ತು ಭಾವನೆ-ಬಾಂಧವ್ಯ ಗಟ್ಟಿಗೊಳಿಸುವ ವೃದ್ಧಿಸುವಂತಾಗಬೇಕು: ಬಾಲ್ಯದ ಆಟದ ಸಂಗಾತಿಯಾಗಿ, ಕಷ್ಟ-ಸುಖಗಳಲ್ಲಿ ಜೊತೆಯಾಗಿ ನಿಲ್ಲುವ ಅಣ್ಣ-ತಮ್ಮಂದಿರ ಅಮರ ಮತ್ತು ಮಧುರ ಪ್ರೀತಿಯನ್ನು ಗೌರವಿಸುವ ದಿನವೇ ಈ ಸಹೋದರರ ದಿನ. ನಮ್ಮ ಭಾರತೀಯ ಸಂಸ್ಕೃತಿಯ ರಕ್ಷಾ ಬಂಧನ ಹಬ್ಬದಲ್ಲಿ ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿ ಕಟ್ಟುವ ಮೂಲಕ ಅಣ್ಣಂದಿರ ಯಶಸ್ಸು, ಆರೋಗ್ಯ, ಶ್ರೇಯೋಭಿವೃದ್ಧಿ, ರಕ್ಷಣೆ ಹಾಗೂ ನೆಮ್ಮದಿ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ತಂಗಿಯು ಅಣ್ಣ ಅಥವಾ ತಮ್ಮನಿಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸಹೋದರನ ಆರ್ಶೀವಾದ ಬೇಡುತ್ತಾಳೆ. ಈ ದಿನವು ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿ ಯಿಂದ ಮತ್ತು ಸಹೋದರರ ರಕ್ಷಣೆ ಎಂಬ ಭಾತೃತ್ವದ ಭಾವ ಬೆಸೆಯುವ ಅನುಬಂಧವಾಗಿದೆ. ಅಣ್ಣ-ತಂಗಿಯರ ನವಿರಾದ ಭಾವನೆಗಳನ್ನು ಗಟ್ಟಿಗೊಳಿಸುವ, ಬಾಂಧವ್ಯ ವೃದ್ಧಿಸುವ ಹಾಗೂ ಸಹೋದರತೆಯ ಸಂಕೇತವಾಗಿ ಆಚರಿಸಲಾಗುತ್ತಿರುವ ಸಹೋದರ-ಸಹೋದರಿಯರ ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಸಹೋದರತ್ವದ ಸುರಕ್ಷೆಯ ಸಂಕೇತವಾಗಿದೆ.
೨೦೨೬ ನೇಯ ವರ್ಷದ ಘೋಷವಾಕ್ಯ
“ಭಾವನಾತ್ಮಕ ಮತ್ತು ಸ್ನೇಹಪರವಾದ ಬಾಂಧವ್ಯವನ್ನು ಬಲಪಡಿಸುವುದು” ಈ ವರ್ಷದ ಆಚರಣೆಯ ಧ್ಯೇಯವಾಕ್ಯ. ಇದರಿಂದ ಅಣ್ಣ-ತಮ್ಮಂದಿರು ತಮ್ಮ ಹಳೆಯ ನೆನಪುಗಳ ಮೆಲುಕು ಹಾಕುತ್ತಾ, ಸದಾ ನಗು-ನಗುತ್ತಾ, ಸಹೋದರರ ನಡುವೆ ಅನ್ಯೋನ್ಯತೆ ಮತ್ತು ಸುಮಧುರ ಬಾಂಧವ್ಯವನ್ನು ಬೆಸಯುವಂತೆ ಬದುಕಬೇಕು. ಮುಂದೆ ಬಂದಾಗ ಶುಭ ಕೋರುವುದು, ಒಳ್ಳೆಯ ಮಾತುಗಳನ್ನಾಡುವುದು ಅಥವಾ ಕೇಕ್ ಕತ್ತರಿಸಿದರೆ ಅಥವಾ ಉಡುಗೊರೆಗಳನ್ನು ನೀಡಿದರೆ ಈ ದಿನದ ಆಚರಣೆಯು ಅರ್ಥಪೂರ್ಣವಾಗುವುದಿಲ್ಲ. ಅಣ್ಣ-ತಮ್ಮ ಎಲ್ಲೇ ಇರಲಿ, ಹೇಗೆ ಇರಲಿ, ಸದಾ ಸುಖವಾಗಿರಲಿ ಮತ್ತು ಕಷ್ಟದ ಕಾಲದಲ್ಲಿ ಸಹಾಯ-ಸಹಕಾರ ನೀಡುವ ಭಾವ ಒಡಮೂಡಬೇಕು. ಅಂದಾಗ ಮಾತ್ರ ಈ ದಿನದ ಆಚರಣೆಯು ಮೌಲ್ವಿಕ ಸಂದೇಶವನ್ನು ಕೊಡುತ್ತದೆ.
ಕೊನೆಯ ನುಡಿ
ಥಾಮಸ್ ಕಾರ್ಲೈಲ್ ಅವರು, “ಸಹೋದರತ್ವವು ಆಜ್ಞೆಗಿಂತ ಮಾದರಿಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದಾದ ಆದರ್ಶವಾಗಿದೆ” ಎಂದು ಹೇಳಿದ್ದಾರೆ. ನೈಜವಾಗಿ ಕುಟುಂಬದ ಸದಸ್ಯರ, ಸಹೋದರರ, ಅಣ್ಣ-ತಮ್ಮಂದಿರ ಮತ್ತು ಸಹೋದರಿಯರ ನಡುವಿನ ಅನ್ಯೋನ್ಯ ಸಂಬಂಧ, ಸುಮಧುರ ಬಾಂಧವ್ಯ, ಪ್ರೀತಿ-ವಾತ್ಸಲ್ಯ ಮತ್ತು ಸಹೋದರತೆಯನ್ನು ರಕ್ಷಿಸುವಂತಾಗಬೇಕು. ಕಷ್ಟಕಾಲದಲ್ಲಿ ಇದ್ದಾಗ ಅವರು ಬೆನ್ನೆಲುಬಾಗಿ ನಿಂತು ಸಹಾಯ ಮಾಡುವ ಸಹೋದರತ್ವದ ಭಾವವನ್ನು ಅಭಿವ್ಯಕ್ತಗೊಳಿಸಬೇಕು. ಪರಿಶುದ್ಧ ಪ್ರೀತಿ ನೀಡುವ ಸಹೋದರರ ಬಾಂಧವ್ಯವನ್ನು ಗೌರವಿಸುವ ಈ ದಿನದ ಆಚರಣೆಯು ಕೇವಲ ದಿನಾಚರಣೆಗೆ ಮಾತ್ರ ಸೀಮಿತವಾಗಬಾರದು. ಅದು ‘ಹುಟ್ಟಿನಿಂದಲೇ ಅಣ್ಣ-ತಮ್ಮಂದಿರು ಬೆಳೆಯುತ್ತಲೇ ದಾಯಾದಿಗಳು’ ಅಂತ ಆಗಬಾರದು. ಪ್ರತಿ ಮನೆಯಲ್ಲಿ ಪ್ರೀತಿ-ಪ್ರೇಮ, ಮಮತೆ, ಸಹಾಯ-ಸಹಕಾರದಿಂದ ಸಹಬಾಳ್ವೆ ಮಾಡುವ ಮತ್ತು ನೋವು-ನಲಿವು, ಸುಖ-ದುಃಖದಲ್ಲಿ ಭಾಗಿಯಾಗುವ ಮತ್ತು ಪರಸ್ಪರ ಹಂಚಿಕೊಂಡು ಸಂತೈಸುವ ಮನಸ್ಸು ನಮ್ಮದಾಗಬೇಕು. ಪ್ರೀತಿಯಿಂದ ಕಾಣುವ ಮತ್ತು ಗೌರವಿಸುವ ಭಾವ ಎಲ್ಲರಲ್ಲಿ ಮೂಡಬೇಕು ಅಂದಾಗ ಮಾತ್ರ ಈ ದಿನದ ಆಚರಣೆಯು ಅರ್ಥಪೂರ್ಣವಾಗುವುದು ಎಂಬುದೇ ನನ್ನ ಆಶಯ.


