ಉದಯರಶ್ಮಿ ದಿನಪತ್ರಿಕೆ
ಅಥಣಿ: ತಾಲೂಕಿನ ಹಲ್ಯಾಳ ರಸ್ತೆಯ ಬೃಂದಾವನ ಹೋಟೆಲ್ ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೆ. ಎಂ. ಸಿ. (KMC) ಸುಸಜ್ಜಿತ ಹೆರಿಗೆ ಆಸ್ಪತ್ರೆ ಕಟ್ಟಡದ ಉದ್ಘಾಟನಾ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಚಿದಾನಂದ ಸವದಿ ಅವರು ಸಸಿಗೆ ನೀರು ಎರೆಯುವ ಮೂಲಕ ನೂತನ ಸುಸಜ್ಜಿತ ಹೆರಿಗೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಅಥಣಿ ಭಾಗದ ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಒಂದೇ ಸೂರಿನಡಿ ಸಿಗುವಂತಾಗಿರುವುದು ಅತ್ಯಂತ ಶ್ಲಾಘನೀಯ. ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಹೆರಿಗೆ ಚಿಕಿತ್ಸೆ ಸಿಗುವುದು ಅತ್ಯಗತ್ಯವಾಗಿದೆ. ಸರಕಾರಿ ಆಗಲಿ ಅಥವಾ ಖಾಸಗಿ ಆಸ್ಪತ್ರೆಯಲ್ಲಾಗಲಿ, ಚಿಕಿತ್ಸೆ ಪಡೆಯಲು ಬರುವ ಕಡು ಬಡವರಿಗೆ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದಿದ್ದರೆ ಅಂತಹ ರೋಗಿಗಳಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಬೇಕು. ವೈದ್ಯಕೀಯ ವೆಚ್ಚದ ಕೊರತೆಯಿಂದಾಗಿ ಯಾರೂ ಚಿಕಿತ್ಸೆಯಿಂದ ವಂಚಿತರಾಗಬಾರದು. ಚಿಕಿತ್ಸಾ ವೆಚ್ಚ ಭರಿಸಲಾಗದ ಅಸಹಾಯಕ ಬಡ ರೋಗಿಗಳಿಗೆ ‘ಶ್ರೀ ಲಕ್ಷ್ಮಣ ಸವದಿ ಫೌಂಡೇಶನ್’ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನದಿ ಇಂಗಳಗಾಂವ ಗುರುಲಿಂಗ ದೇವರ ಮಠದ ಸಿದ್ದಲಿಂಗ ಸ್ವಾಮೀಜಿ ಹಾಗೂ ಅಥಣಿ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿ, ಆರೋಗ್ಯ ಸೇವೆಯು ಅತ್ಯಂತ ಪವಿತ್ರವಾದದ್ದು. ತಾಯಿ ಮತ್ತು ಮಗುವಿನ ಪ್ರಾಣ ರಕ್ಷಿಸುವ ಹೆರಿಗೆ ಆಸ್ಪತ್ರೆಗಳು ತಾಲೂಕಿನ ಜನರಿಗೆ ವರದಾನವಾಗಲಿ ಎಂದು ಹಾರೈಸಿದರು.
ವೈದ್ಯರಾದ ಡಾ. ಸಂಜಯ ಕುರೇನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ. ರಶ್ಮಿ ಎಸ್. ಕುರೇನ್ನವರ, ಡಾ. ಸೋಮಶೇಖರ್ ಪಾಟೀಲ್ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಡಾ.ವಿಜಯ ಕುರೆಣ್ಣವರ, ಜಿ ಎಮ್ ತೇವರಮನಿ, ಗುತ್ತಿಗೆದಾರ ಶಿವರುದ್ರ ಗೂಳಪ್ಪನ್ನವರ ಸೇರಿದಂತೆ ಸಾರ್ವಜನಿಕರು ಹಾಗೂ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.

