ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಮಾರುತಿ ದೇವರ ನೀರಓಕುಳಿ ಉತ್ಸವವು ರವಿವಾರ ಅತ್ಯಂತ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆಯಿಂದಲೇ ಗ್ರಾಮದ ಭಕ್ತರು ದೇವಸ್ಥಾನಕ್ಕೆ ಹರಿದುಬಂದು ವಿಶೇಷ ಪೂಜೆಗಳು, ಅಭಿಷೇಕ ಹಾಗೂ ಅಲಂಕಾರ ಸೇವೆಗಳಲ್ಲಿ ಭಾಗವಹಿಸಿದರು. ಮುಂಚೆಯ ದಿನ ಶನಿವಾರ ದೇವರ ಮೂರ್ತಿಗೆ ಗ್ರಾಮದೆಲ್ಲೆಡೆ ಭವ್ಯ ಮೆರವಣಿಗೆ ನಡೆಸಲಾಗಿದ್ದು, ಭಜನೆ, ಡೊಳ್ಳು-ತಾಸೆ ಹಾಗೂ ನೃತ್ಯಗಳೊಂದಿಗೆ ಉತ್ಸವಕ್ಕೆ ಮತ್ತಷ್ಟು ಕಳೆ ತಂದಿತು.
ನೀರಓಕುಳಿ ಸಂಪ್ರದಾಯದಂತೆ ಪರಸ್ಪರ ನೀರು ಎರಚಿಕೊಂಡು ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭ ಯುವಕರು, ಮಹಿಳೆಯರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.
ಗ್ರಾಮದ ಹಿರಿಯರು ಹಾಗೂ ಮುಖಂಡರು ಪಾಲ್ಗೊಂಡು ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದರು. ಎಲ್ಲರೂ ಸಮಾರಂಭದಲ್ಲಿ ಶಾಂತಿ, ಸೌಹಾರ್ದತೆಯ ಸಂದೇಶ ಸಾರಲಾಗಿತ್ತು, ಗ್ರಾಮದ ಏಕತೆ ಮತ್ತಷ್ಟು ಬಲವತ್ತಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಉತ್ಸವದ ಅಂಗವಾಗಿ ಅನ್ನಸಂತರ್ಪಣೆ ಕಾರ್ಯಕ್ರಮವೂ ಏರ್ಪಡಿಸಲಾಗಿದ್ದು, ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪರಮಗೊಂಡ ದಾನಗೌಡˌ ಗುರಪಾದಯ್ಯ ಹಿರೇಮಠˌ ಚಂದಪ್ಪ ಕಡಕೋಳˌ ಸಿದ್ದಪ್ಪ ಮುತ್ತೂರˌ ಬಸಪ್ಪ ನ್ಯಾಮಗೌಡˌ ವೆಂಕಪ್ಪ ಸಂತಿˌ ಶ್ರೀಶೈಲ್ ಕಂಕಣವಾಡಿˌ ಭರತೇಶ ಕಡಕೋಳ ˌ ಮಹಾದೇವ ಕಲ್ಯಾಣಿˌ ಸುರೇಶ ದಾನಗೌಡˌ ಹೊಳಬಸಪ್ಪ ದಾನಗೌಡˌ ಸೇರಿದಂತೆ ಅನೇಕರಿದ್ದರು.

