ರೈತರು ಏಜೆಂಟರ ಮಾತು ನಂಬಿ ಮೋಸ ಹೋಗದಿರಲು ಶಾಸಕ ನಾಡಗೌಡ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ರೈತರ ಬೆಳೆ ಪರಿಹಾರ ಅಥವಾ ಬೆಳೆ ವಿಮೆಯ ಹಣ ಮಂಜೂರು ಮಾಡಿಸಿಕೊಟ್ಟಿದ್ದೇವೆ ಎಂದು ಹೇಳಿಕೊಂಡು ಕೆಲವು ಏಜೆಂಟರು ರೈತರಿಂದ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹವರ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ನಾಡಗೌಡ(ಅಪ್ಪಾಜಿ) ಅವರು ರೈತರಿಗೆ ಮನವಿ ಮಾಡಿದ್ದಾರೆ.
ಬೆಳೆ ಪರಿಹಾರ ಅಥವಾ ಬೆಳೆ ವಿಮೆಯ ಹಣ ರೈತರ ಖಾತೆಗೆ ಜಮೆಯಾಗಿರುವುದಾಗಿ ಹೇಳಿ, ತಾವೇ ಹಣ ಮಂಜೂರು ಮಾಡಿಸಿಕೊಟ್ಟಿದ್ದೇವೆ ಎಂದು ನಂಬಿಸಿ ರೈತರಿಂದ ಹಣ ಪಡೆಯುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇಂತಹ ವ್ಯಕ್ತಿಗಳ ಮಾತುಗಳನ್ನು ನಂಬಿ ರೈತರು ತಮ್ಮ ಕಷ್ಟದ ದುಡಿಮೆಯ ಹಣವನ್ನು ಕಳೆದುಕೊಳ್ಳಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಸರ್ಕಾರವು ಬೆಳೆ ಪರಿಹಾರ ವಿತರಣೆಗಾಗಿ ಯಾವುದೇ ಏಜೆಂಟರನ್ನು ನೇಮಕ ಮಾಡುವುದಿಲ್ಲ. ಅರ್ಹ ರೈತರಿಗೆ ಸರ್ಕಾರದ ನಿಯಮಗಳ ಪ್ರಕಾರ ದೊರೆಯಬೇಕಾದ ಪರಿಹಾರದ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಹೀಗಾಗಿ, ಪರಿಹಾರದ ಹಣ ಕೊಡಿಸುವ ನೆಪದಲ್ಲಿ ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೆ ರೈತರು ಅಂತಹವರನ್ನು ನಂಬಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರೈತರನ್ನು ವಂಚಿಸುವ ಇಂತಹ ಏಜೆಂಟರ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲು ಸಜ್ಜಾಗಿದೆ. ಯಾರಾದರೂ ತಪುö್ಪ ಮಾಹಿತಿ ನೀಡಿ ಅಥವಾ ಹಣ ಮಂಜೂರು ಮಾಡಿಸಿಕೊಡುವುದಾಗಿ ಆಮಿಷವೊಡ್ಡಿ ಹಣ ವಸೂಲಿ ಮಾಡಲು ಮುಂದಾದರೆ, ರೈತರು ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕು ಎಂದು ಶಾಸಕ ನಾಡಗೌಡ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.
ರೈತರು ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡದೆ, ಬೆಳೆ ಪರಿಹಾರ ಮತ್ತು ಬೆಳೆ ವಿಮೆಗೆ ಸಂಬAಧಿಸಿದ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಪಡೆದುಕೊಳ್ಳಬೇಕು. ವಂಚನೆಗೆ ಒಳಗಾಗದಂತೆ ಜಾಗರೂಕರಾಗಿರಬೇಕು ಎಂದು ಅವರು ಮನವಿ ಮಾಡಿದ್ದಾರೆ.

