ಉದಯರಶ್ಮಿ ದಿನಪತ್ರಿಕೆ
ಚಡಚಣ: ಮಾತೋಶ್ರೀ ಹೇಮಾವತಿ ಹೆಗ್ಗಡೆ ಅಮ್ಮನವರ ಎಪ್ರೀಲ್ 02 ರಂದು ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಚಡಚಣ ಹಾಗೂ ಇಂಡಿ ತಾಲೂಕಿನ ನಿರ್ಗತಿಕರು ಹಾಗೂ ಹಿರಿಯ ಮಹಿಳೆಯರ ಮನೆ ಮನೆಗೆ ಹೋಗಿ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಿನ ಯೋಜನಾಧಿಕಾರಿ ನಟರಾಜ ಎಲ್.ಎಂ ಅವರು, ಮಾತೋಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸಾದ “ವಾತ್ಸಲ್ಯ” ಕಾರ್ಯಕ್ರಮವು ನಿರ್ಗತಿಕರು ಹಾಗೂ ವಯೋವೃದ್ಧರಿಗೆ ನೆರವಾಗುವ ಉದ್ದೇಶದಿಂದ ಜಾರಿಗೆ ತರಲಾಗಿದ್ದು, ಇದು ಅತ್ಯಂತ ಮಾನವೀಯ ಸೇವೆಯಾಗಿದೆ ಎಂದು ಹೇಳಿದರು.
ಇಂಡಿ ಹಾಗೂ ಚಡಚಣ ತಾಲೂಕುಗಳಲ್ಲಿ ಒಟ್ಟು 128 ನಿರ್ಗತಿಕರಿಗೆ ಪ್ರತಿ ತಿಂಗಳು ₹1000 ಮಾಶಾಸನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡಲಾಗುತ್ತಿದೆ. ಜೊತೆಗೆ 5 ಜನರಿಗೆ ಮನೆ ನಿರ್ಮಾಣ ಕಾರ್ಯವೂ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಮಹಾಂತೇಶ್ ವಿ.ಎ., ಗಣ್ಯರಾದ ವಿಕಾಸ್ ಪಾಟೀಲ, ಡಾ. ರಾಮಕೃಷ್ಣ ಕುಲಕರ್ಣಿ, ಸಮನ್ವಯ ಅಧಿಕಾರಿ ಜಯಶ್ರೀ, ಸೇವಾ ಪ್ರತಿನಿಧಿಗಳಾದ ವಿಮಲಾ ಗೌಡ್ನೂರ ಹಾಗೂ ಲಕ್ಷ್ಮಿ ಮಠಪತಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

