ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ದಲಿತ ಸಮುದಾಯವನ್ನು ಮತ್ತು ಅಲ್ಪ ಸಂಖ್ಯಾತರನ್ನು ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿರುವದನ್ನು ಬಿಟ್ಟರೆ ಆ ಸಮುದಾಯದ ಯಾರನ್ನೂ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಕಲ್ಪಿಸಿಕೊಟ್ಟ ಉದಾಹರಣೆಗಳೇ ಇಲ್ಲ ಆದ್ದರಿಂದ ರಾಜ್ಯದಲ್ಲಿ ವಾಸಿಸುವ ಎರಡೂ ಸಮುದಾಯದ ನಾಗರಿಕರು ಎಚ್ಚೆತ್ತುಕೊಂಡು ರಾಷ್ಟ್ರದ ಹಿತದೃಷ್ಟಿಯಿಂದ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕು ಎಂದು ವಿಧಾನ ಪರಿಷತನ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿದರು.
ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಪ್ರ.ಶಿಕ್ಷಣ ಅಭಿಯಾಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದಾಗ ಅವಳಿ ಜಿಲ್ಲಾ ಕೆಎಂಎಫ್ ಮಾಜಿ ನಿರ್ದೇಶಕ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಾಗಿದ್ದ ಗುರು ಚಲವಾದಿ ಅವರನ್ನು ಮತ್ತು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು ಬಂದಾಗ ಸ್ವಾಗತಿಸಿ ಮಾತನಾಡಿದರು.
ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ ದಲಿತ ಮತ್ತು ಮುಸ್ಲೀಂ ಸಮುದಾಯವನ್ನು ರಾಜಕೀಯವಾಗಿ ಬಳಸುವದಿಲ್ಲ ಆರ್ಥಿಕವಾಗಿ ಸಬಲರನ್ನಾಗಿ ಮಾಡುವದಿಲ್ಲ ಹಲವಾರು ವಿಷಯಗಳ ಕುರಿತು ಕಪೋಲ ಕಲ್ಪಿತ ವಿಷಬೀಜವನ್ನೇ ಈ ಸಮುದಾಯದ ನಾಗರಿಕರಲ್ಲಿ ಬಿತ್ತುತ್ತಾ ಬಂದಿರುವ ಕಾಂಗ್ರೆಸ್ ಪಕ್ಷವು ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ವೆಂಟಿಲೇಟರ್ ಮೂಲಕ ಉಸಿರಾಟ ಮಾಡುತ್ತಿದ್ದು ಆ ವೆಂಟಿಲೇಟರ್ ಎಂದರೆ ದಲಿತ ಮತ್ತು ಮುಸ್ಲೀಂ ಸಮುದಾಯದ ಮತಗಳಾಗಿದ್ದು ತಾವುಗಳು ಪರಿವರ್ತನೆಯಾಗಿ ದೇಶದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಲು ಸಂಘಟಿತರಾಗಿ ಬರಬೇಕೆಂದು ಕರೆ ಕೊಟ್ಟರು.
ನೂರಾರು ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರ್ಪಡೆಯಾದ ಗುರು ಚಲವಾದಿ ಮಾತನಾಡಿ, ಕಳೆದ ೨೫ ವರ್ಷಗಳಿಂದ ಆ ಪಕ್ಷದ ಕಾರ್ಯಕರ್ತನಾಗಿ ನನ್ನದೇ ಆದ ವ್ಯಕ್ತತ್ವವನ್ನು ರೂಪಿಸಿಕೊಂಡು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವದನ್ನು ಗುರುತಿಸಿ ರಾಜಕೀಯವಾಗಿ ಎತ್ತರಕ್ಕೆ ಬೆಳೆಯಬಾರದು ಎನ್ನುವ ದುಷ್ಟ ಬುದ್ದಿಯನ್ನು ತೋರಿಸಿದ ಕಾಂಗ್ರೆಸ್ ಪಕ್ಷದ ಬಸವನ ಬಾಗೇವಾಡಿ ಮತಕ್ಷೇತ್ರದ ಮುಖಂಡರ ನಡವಳಿಕೆಗೆ ಬೇಸತ್ತು ನಾನು ಕಾಂಗ್ರೆಸ್ ಪಕ್ಷದಲ್ಲಿದ್ದರೂ ನನ್ನನ್ನು ರಾಜಕೀಯವಾಗಿ ಬೆಳೆಯಲು ಸಹಕರಿಸಿದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿಯವರು ಮತ್ತು ಬಿಜೆಪಿ ಪಕ್ಷವು ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನ ಕೊಟ್ಟಿರುವ ಉದಾಹರಣೆಯನ್ನು ತಿಳಿದುಕೊಂಡು ಬೇಷರತ್ತಾಗಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಚಂದ್ರಶೇಖರ ಕವಟಗಿ, ಮಂಡಲ ಅಧ್ಯಕ್ಷ ಸಿದ್ದರಾಮ ಕಾಖಂಡಕಿ, ಪದ್ಮಾವತಿ ಗುಡಿ, ಶಾಂತಾಬಾಯಿ ಬೀಳಗಿ, ಪರವೀನಬಾನು ಟಕ್ಕಳಕಿ, ಚಿದಾನಂದ ಚಲವಾದಿ, ಅಖಿಲಗೌಡ ಪಾಟೀಲ, ಸಗರೆಪ್ಪ ಮುರಣಾಳ, ಜಗದೀಶ ಸುಣಗದ, ಪ್ರಶಾಂತ ಪವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

