ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕಬ್ಬಿನ ಗದ್ದೆಗೆ ತಗುಲಿದ್ದ ಬೆಂಕಿಯನ್ನು ನಂದಿಸಲು ಹೋಗಿದ್ದ ರೈತನೊಬ್ಬ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ಪಟ್ಟಣದ ಸಮೀಪದ ಮಹಾದೇವಪ್ಪನ ತೆವೆರ ಬಳಿ ನಡೆದಿದೆ.
ಮೃತರನ್ನು ಸಂಗಪ್ಪ ಈರಪ್ಪ ಕುಂಬಾರ (80) ಎಂದು ಗುರುತಿಸಲಾಗಿದೆ. ರವಿವಾರ ತಮ್ಮ ಸ್ವಂತ ಜಮೀನಿನಲ್ಲಿದ್ದ ಗೋಧಿ ಹುಲ್ಲು ಸುಡಲು ಬೆಂಕಿ ಹಚ್ಚಿದ ವೇಳೆ, ಆ ಬೆಂಕಿ ಪಕ್ಕದ ಜಮೀನಿನ ಕಬ್ಬಿನ ಗದ್ದೆಗೆ ಹಬ್ಬಿದೆ. ಅದನ್ನು ನಂದಿಸಲು ತೆರಳಿದ ಸಂಗಪ್ಪ ಅವರು ಅಕಸ್ಮಿಕವಾಗಿ ಬೆಂಕಿಗೆ ಸಿಲುಕಿದ್ದು, ಮಧ್ಯಾಹ್ನ ಸಮಯದಲ್ಲಿ ಸಜೀವ ದಹನಗೊಂಡಿದ್ದಾರೆ.
ಘಟನೆ ನಡೆದ ವೇಳೆ ಸುತ್ತಮುತ್ತ ಯಾರೂ ಇರಲಿಲ್ಲ. ಸಂಜೆ ವೇಳೆಗೆ ಮನೆಗೆ ಮರಳದ ಹಿನ್ನೆಲೆ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿ ತಿಳಿದ ಕೊಲ್ಹಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

