ಹಿಂದಿ ಸೇರಿ ತೃತೀಯ ಭಾಷೆಗಳ ಅಂಕಗಳಿಗೆ ಕೊಕ್ | ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ
ಬೆಂಗಳೂರು: SSLC ಪರೀಕ್ಷೆಯ ಅಂಕಗಳನ್ನು 625ಕ್ಕೆ ಬದಲಿಗೆ 525 ಅಂಕಗಳಿಗೆ ಇಳಿಕೆ ಮಾಡಲಾಗಿದೆ. ಹಿಂದಿ ಸೇರಿ ತೃತೀಯ ಭಾಷೆಗಳ ಅಂಕಗಳಿಗೆ ಕೊಕ್ ನೀಡಲಾಗಿದ್ದು ಹಿಂದಿನ ವರ್ಷಗಳಂತೆ ಅವರು 100 ಅಂಕಗಳಿಗೆ ಪರೀಕ್ಷೆ ಬರೆಯಲಿದ್ದು, ಅಂಕಪಟ್ಟಿಯಲ್ಲಿ ಗ್ರೇಡ್ ಅಂತ ನಮೂದಿಸಲಾಗುತ್ತದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ, ಮಧು ಬಂಗಾರಪ್ಪ, ಈ ನಿಯಮ 2026ರಲ್ಲಿ ನಡೆಯುತ್ತಿರುವ ಎಸ್ಎಸ್ಎಲ್‌ಸಿ ಪರೀಕ್ಷೆಯಿಂದಲೇ ಅನ್ವಯವಾಗಲಿದೆ ಎಂದರು. ಈ ಹಿಂದೆ 625 ಅಂಕಗಳಿಗೆ ಮಕ್ಕಳು ಪರೀಕ್ಷೆ ಬರೆಯುತ್ತಿದ್ದರು. ಆದರೆ ಈಗ ಅಂಕಪಟ್ಟಿಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಯ 100 ಅಂಕಗಳನ್ನು ಅಂಕಪಟ್ಟಿಯಲ್ಲಿ ನಮೂದಿಸುವುದಿಲ್ಲ. 525 ಅಂಕಗಳಿಗೆ ಪ್ರತಿ ವಿದ್ಯಾರ್ಥಿಯೂ ಪಡೆದ ಅಂಕಗಳಷ್ಟೇ ಇರುತ್ತವೆ ಎಂದು ಹೇಳಿದರು.

16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧ
ಬೆಂಗಳೂರು: ರಾಜ್ಯದಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಗೀಳನ್ನು ನಿಯಂತ್ರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಶೀಘ್ರದಲ್ಲೇ ಸಮಗ್ರ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಮುಂದಿನ ಅಧಿವೇಶನದಲ್ಲಿ ವಿಶೇಷ ಮಾರ್ಗಸೂಚಿಗಳನ್ನು ರಚಿಸಿ ಸದನದಲ್ಲಿ ಮಂಡನೆ ಮಾಡಲಿದ್ದೇವೆಂದು ಹೇಳಿದರು.
ವಿರೋಧ ಪಕ್ಷದ ಸದಸ್ಯರು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮೊಬೈಲ್ ವ್ಯಸನದ ಬಗ್ಗೆ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಚಿಚವರು ಪ್ರತಿಕ್ರಿಯಿಸಿದರು.
ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಮೊಬೈಲ್ ಅತಿಯಾದ ಬಳಕೆ ಗಂಭೀರ ಸಮಸ್ಯೆಯಾಗಿದೆ. ಕೆಲವರು ಆತ್ಮಹತ್ಯೆ ಯತ್ನಕ್ಕೂ ಮುಂದಾಗುತ್ತಿದ್ದಾರೆ. ಹೀಗಾಗಿ, ದೇಶದಲ್ಲೇ ಮೊದಲ ಬಾರಿಗೆ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೊಬೈಲ್ ಬಳಕೆ ನಿಷೇಧಿಸಲು ರಾಜ್ಯ ಸರ್ಕಾರ ಮುಂದಾಗಿದೆ” ಎಂದು ಹೇಳಿದರು.

