ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜೀವನ ಎಂಬ ರಥದಲ್ಲಿ ಭಕ್ತಿ ಎಂಬ ಕೀಲಿ ಪ್ರತಿಯೊಬ್ಬರಿಗೂ ಅತೀ ಮುಖ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಿದ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಇಂದಿನ ಒತ್ತಡದ ಬದುಕಿನಲ್ಲಿ ಬಹುತೇಕರು ಭಕ್ತಿಮಾರ್ಗದಿಂದ ವಿಮುಖರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಅದೆಷ್ಟೇ ಒತ್ತಡ ಇದ್ದರೂ ಪ್ರತಿಯೊಬ್ಬರೂ ಭಕ್ತಿ ಮಾರ್ಗವನ್ನು ಮರೆಯಬಾರದು ಎಂದು ಡಾ. ಔದ್ರಾಮ ಹೇಳಿದರು.
ಎತ್ತಿನ ಬಂಡಿಗೆ ಕೀಲು ಇಲ್ಲದಿದ್ದರೆ ಅದು ಸರಾಗವಾಗಿ ಚಲಿಸುವುದಿಲ್ಲ ಅದರಂತೆ ಪ್ರತಿಯೊಬ್ಬರಿಗೂ ಭಕ್ತಿ ಎಂಬ ಕೀಲು ಇರಬೇಕು. ಭಕ್ತಿಯನ್ನು ಅಳವಡಿಸಿಕೊಂಡರೆ ಜೀವನ ಹೂವಿನಷ್ಟೇ ಹಗುರ ಹಾಗೂ ಸುಮಧುರವಾಗುತ್ತದೆ ಎಂದು ಡಾ. ಔದ್ರಾಮ ಭಕ್ತಿಯ ಮಹತ್ವ ಉಣಬಡಿಸಿದರು.
ಬಿ.ಎಂ.ನೂಲವಿ ಮಾತನಾಡಿದರು.
ಸಂತೋಷಕುಮಾರ ಎಸ್. ಬಂಡೆ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ರಾಹುಲ್ ಭಾವಿದೊಡ್ಡಿ, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಮಹಾವೀರ ಬೋರಣ್ಣನವರ್, ಚುನಾವಣಾ ತಹಶೀಲ್ದಾರರಾದ ಪಿ. ಜಿ ಪವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸೇರಿದಂತೆ ಅಧಿಕಾರಿ, ಸಿಬ್ಬಂದಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

