ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯದ ವಿವಿಧ ಶಿಕ್ಷಣ ಹಾಗೂ ಸರ್ಕಾರಿ ಇಲಾಖೆಗಳಲ್ಲಿನ ದೀರ್ಘಕಾಲದಿಂದ ಖಾಲಿ ಇರುವ ಗ್ರಂಥಪಾಲಕರ ಹುದ್ದೆಗಳನ್ನು ತುರ್ತಾಗಿ ನೇಮಕ ಮಾಡಿಕೊಳ್ಳುವಂತೆ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಗ್ರಂಥಾಲಯ ಸಂಘದ ಅಧ್ಯಕ್ಷ ಎಂ.ಕೆ. ಬಿರಾದಾರ ರಾಜ್ಯದ ವಿಶ್ವವಿದ್ಯಾಲಯಗಳು, ಸರ್ಕಾರಿ ಹಾಗೂ ಅನುದಾನಿತ ಪ್ರಥಮದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಪಿಯು ಕಾಲೇಜುಗಳಲ್ಲಿ ಅನೇಕ ಮಾನ್ಯಿತ ಗ್ರಂಥ ಪಾಲಕರ ಹುದ್ದೆಗಳು ದೀರ್ಘಕಾಲದಿಂದ ಖಾಲಿಯಾಗಿವೆ. ಇದಲ್ಲವೆ ಸಾರ್ವಜನಿಕ ಗ್ರಂಥಾಲಯಗಳು ರಾಜ್ಯ ಕೇಂದ್ರ, ಜಿಲ್ಲಾಕೇಂದ್ರ, ನಗರ ಕೇಂದ್ರ ಹಾಗೂ ತಾಲೂಕು ಗ್ರಂಥಾಲಯಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಗ್ರಂಥಾಲಯಗಳು, ಕರ್ನಾಟಕ ಪಬ್ಲಿಕ್ ಶಾಲೆಗಳ ಗ್ರಂಥಾಲಯಗಳು ಹಾಗೂ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು, ವಿಧಾನಸೌಧ, ಪುರಾತತ್ವ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿಯೂ ಗ್ರಂಥಪಾಲಕರ ಕೊರತೆ ತೀವ್ರವಾಗಿದೆ ಎಂದು ಹೇಳಿದರು.
ಇದು ಕೇವಲ ಹುದ್ದೆಯ ಪ್ರಶ್ನೆಯಲ್ಲ ಇದು ಸಾವಿರಾರು ವಿದ್ಯಾವಂತ ಯುವಕರ ಬದುಕಿನ ಆಶೆಗಳ ಪ್ರಶ್ನೆಯಾಗಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಅನೇಕ ಯುವಕರು ಉನ್ನತ ಶಿಕ್ಷಣ ಪಡೆದು ವರ್ಷಗಳಿಂದ ನಿರೀಕ್ಷೆಯಲ್ಲಿದ್ದಾರೆ. ಆದ್ದರಿಂದ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಗ್ರಂಥಪಾಲಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಅತಿಥಿ ಗ್ರಂಥಪಾಲಕರು, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

