ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಹೊರ ವಲಯದ ಹಂಚನಾಳ ಕೆರೆಯ ಕಲುಷಿತ ನೀರನ್ನು ಸಂಸ್ಕರಿಸಬೇಕು ಹಾಗೂ ಕೆರೆ ಅಭಿವೃದ್ಧಿಪಡಿಸಿ ಸೌಂದರ್ಯೀಕರಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರು.
ಇತ್ತೀಚೆಗೆ ನಡೆದ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಉಸ್ತವಾರಿ ಸಚಿವರು, ಪ್ರಾಧಿಕಾರದ ವತಿಯಿಂದ ೨೦೨೫-೨೬ ನೇ ಸಾಲಿನಲ್ಲಿ ಹಂಚನಾಳ ಕೆರೆಯ ಪುನರುಜ್ಜೀವನ ಹಾಗೂ ಸೌಂದರೀಕರಣ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದ್ದರು.
ಜೊತೆಗೆ ಹಾಲಿ ಇರುವ ಎಸ್.ಟಿ.ಪಿಯನ್ನು ಉನ್ನತೀಕರಿಸಿ, ಸಂಸ್ಕರಿಸಿದ ಶುದ್ದ ನೀರನ್ನು ಮಾತ್ರ ಹಂಚನಾಳ ಕೆರೆಗೆ ಬಿಡಬೇಕೆಂದು ಸೂಚಿಸಿದ್ದರು.
ಸಚಿವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಕೈಗೊಂಡು ಬುಧವಾರ ಹಂಚನಾಳ ಕೆರೆಗೆ ಭೇಟಿ ನೀಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆಯ ಸುತ್ತಲೂ ೩೦ ಮೀ. ಅಗಲದ ಬಫರ್ ಕಡ್ಡಾಯವಾಗಿ ಮೀಸಲಿರಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಆಯುಕ್ತ ವಿಜಯ ಮೆಕ್ಕಳಕಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಾಜಶೇಖರ ಡಂಬಳ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ನಗರಾಭಿವೃದ್ದಿ ಪ್ರಾಧಿಕಾರದ ಹಾಗೂ ಮಹಾನಗರ ಪಾಲಿಕೆಯ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು.

