ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಜಗತ್ತಿನಲ್ಲಿ ಸುಮಾರು ೬೦೦೦ ಕ್ಕೂ ಅಧಿಕ ಭಾಷೆಗಳಿದ್ದು ಅವುಗಳಲ್ಲಿ ೨೫೦೦ ಕ್ಕೂ ಹೆಚ್ಚು ಭಾಷೆಗಳು ಭಾರತದಲ್ಲಿವೆ. ಇನ್ನು ಕೆಲವು ಭಾಷೆಗಳು ಅಳಿವಿನಂಚಿನಲ್ಲಿವೆ. ಇವುಗಳ ಮಧ್ಯದಲ್ಲಿ ಸಾವಿಲ್ಲದ, ಕೊನೆಯಿಲ್ಲದ ಭಾಷೆ ಎಂದರೆ ಅದು ನಮ್ಮ ಕನ್ನಡ ಭಾಷೆ ಎಂದು ಸಿಂದಗಿಯ ಜಿ.ಪಿ.ಪೋರವಾಲ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ನಾಗರಾಜ ಮುರಗೋಡ ಹೇಳಿದರು.
ಸಿಂದಗಿ ನಗರದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕನ್ನಡ ಸಂಘದ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡವೆಂದರೆ ಕೇವಲ ನುಡಿ, ಭಾಷೆಯಲ್ಲ ನಾವಾಡುವ ಪ್ರತಿ ಭಾವನೆಯಾಗಿದೆ. ಉದ್ಯೋಗಕ್ಕಾಗಿ ಅನ್ಯ ಭಾಷೆಗಳನ್ನು ಕಲಿಯಿರಿ ಆದರೆ ಮನೆ ಮಾತು ಶಿಕ್ಷಣದ ಮಾಧ್ಯಮ ಕನ್ನಡವಾಗಿರಲಿ ಎಂದರು.
ಈ ವೇಳೆ ಸಾರಂಗಮಠದ ಉತ್ತರಾಧಿಕಾರಿಗಳಾದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಲಬುರಗಿಯ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಡಾ.ಶಿವುಕುಮಾರ ಹುಣಚಾಳ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯೆ ಜೆ.ಸಿ.ನಂದಿಕೋಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಅಧ್ಯಕ್ಷ ದಾನಯ್ಯ ಮಠಪತಿ ಹಾಗೂ ಕಾರ್ಯದರ್ಶಿ ಪುಂಡಲೀಕ ದೊಡಮನಿ, ಡಾ.ಶರಣಬಸವ ಜೋಗೂರ, ಎನ್.ಬಿ.ಪೂಜಾರಿ, ಪಿ.ವ್ಹಿ.ಮಹಲಿನಮಠ, ಸುಧಾಕರ ಚವ್ಹಾಣ, ಪ್ರಶಾಂತ ಕುಲಕರ್ಣಿ, ಆರ್.ಎ.ಹಾಲಕೇರಿ, ಭಾಗ್ಯಜ್ಯೋತಿ ದಸ್ಮಾ, ನಾಜೀಯಾ ಮುಲ್ಲಾ, ಚನ್ನು ಕತ್ತಿ, ಅರುಣಾ ಹಿರೇಮಠ, ಶ್ವೇತಾ ರೆಬಿನಾಳ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಇದ್ದರು.

