ಉದಯರಶ್ಮಿ ದಿನಪತ್ರಿಕೆ
ವಿಶೇಷ ವರದಿ : ಶ್ರೀಕಂಠ ಈಶ್ವರ್
ಹೆಚ್ ಡಿ ಕೋಟೆ : ಕರ್ನಾಟಕ ಕೇರಳ ಸಂಪರ್ಕಿಸುವ ಬಂಡೀಪುರ ಅರಣ್ಯ ಮಾರ್ಗಕ್ಕೆ ಪರ್ಯಾಯವಾಗಿ ಸುರಂಗ ಮಾರ್ಗ ಮಾಡುವ ಕುರಿತು ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚನೆ ಮಾಡಿರುವ ಬೆನ್ನಲ್ಲೇ ಪ್ರವಾಸೋದ್ಯಮಕ್ಕೆ ಮತ್ತೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿ ಪುನಾರಂಭ ಮಾಡುವ ಸಾಧ್ಯತೆ ದಟ್ಟವಾಗಿದೆ.
ಬಂಡೀಪುರ ಅರಣ್ಯ ವ್ಯಾಪ್ತಿಗೆ ಬರುವ ಸರಗೂರು ತಾಲೂಕಿನ ಕಾಡಂಚಿನ ಭಾಗದಲ್ಲಿ ಹುಲಿ ದಾಳಿ ನಡೆಸಿ ಮೂವರ ಪ್ರಾಣ ತೆಗೆದಿತ್ತು. ಒಂದೇ ತಿಂಗಳಲ್ಲಿ ನಾಲ್ವರ ಮೇಲೆ ದಾಳಿ ನಡೆಸಿ, ಮೂವರನ್ನು ಬಲಿ ಪಡೆದ ಬಳಿಕ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಕಾಡುಪ್ರಾಣಿಗಳು ನಾಡಿಗೆ ಬರಲು ಸಫಾರಿಯೇ ಕಾರಣ ಎಂಬ ಆರೋಪ ರೈತರಿಂದ ಕೇಳಿಬಂದ ಹಿನ್ನೆಲೆ ಸಫಾರಿಯನ್ನು ಬಂದ್ ಮಾಡಲಾಗಿದೆ. ಆದರೆ ಬಂದ್ ಮಾಡಿ ಇನ್ನೇನು ಮೂರು ತಿಂಗಳು ಕಳೆಯುತ್ತಾ ಬಂದರೂ ಸಫಾರಿ ಪುನಾರಂಭವಾಗಿಲ್ಲ. ಇದರಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಪ್ರವಾಸಿಗರಿಲ್ಲದೆ ರೆಸಾರ್ಟ್ ಗಳು ಬಿಕೋ ಎನ್ನುತ್ತಿವೆ.
(
ರಾಜ್ಯ ಸರ್ಕಾರ ಮೇಲೆ ಒತ್ತಡ
ರೆಸಾರ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಸಿಗರಿಲ್ಲದ ಹಿನ್ನೆಲೆ ಆರ್ಥಿಕ ನಷ್ಟ ಅನುಭವಿಸುತ್ತಿರುವ ರೆಸಾರ್ಟ್ ಮಾಲೀಕರು ಕೆಲಸದಿಂದ ಕಾರ್ಮಿಕರನ್ನು ತೆಗೆದುಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಫಾರಿ ನಂಬಿಕೊಂಡೇ ಅದೆಷ್ಟೋ ಹೋಟೆಲ್ ಗಳು ಹೆಚ್ ಡಿ ಕೋಟೆ ಹಾಗು ಸರಗೂರಿನಲ್ಲಿ ತಲೆಯೆತ್ತಿವೆ. ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ಅಲ್ಲಲ್ಲಿ ಆರಂಭಗೊಂಡಿದ್ದ ಹೋಟೆಲ್ ಗಳು ಜನರಿಲ್ಲದೆ ಭಣಗುಡುತ್ತಿವೆ. ಅನೇಕ ಹೋಟೆಲ್ ಗಳಿಗೆ ಬೀಗ ಬಿದ್ದಿದೆ. ಸಣ್ಣ ಸಣ್ಣ ವ್ಯಾಪಾರಿಗಳ ಬದುಕು ಅತಂತ್ರವಾಗಿದೆ. ಹೀಗಾಗಿ ಸಫಾರಿ ಪುನಾರಂಭ ಮಾಡಬೇಕೆಂದು ಹೆಚ್ ಡಿ ಕೋಟೆ ತಾಲೂಕಿನಲ್ಲಿ ರೆಸಾರ್ಟ್ ಕೂಲಿ ಕಾರ್ಮಿಕರ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತ್ತು. ಅಲ್ಲದೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮೇಲೂ ಒತ್ತಡ ಹೇರಲಾಗುತ್ತಿದೆ. ಈ ಸಂಬಂಧ ವಾರದ ಹಿಂದೆಯಷ್ಟೇ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸಾಧಕ ಬಾಧಕ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸಿರುವುದಾಗಿ ಹೇಳಿದ್ದರು.
ಮತ್ತೊಂದು ಕಡೆ ಕೆಲ ರೈತ ಸಂಘಟನೆಗಳಿಂದ ಸಫಾರಿ ಪುನಾರಂಭಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿವೆ.ಹೀಗೆ ಪರ-ವಿರೋಧ ಇರುವ ಹಿನ್ನೆಲೆ ಸರ್ಕಾರ ಕೂಡ ಮೌನಕ್ಕೆ ಶರಣಾಗಿತ್ತು.
ಸಫಾರಿ ಪುನಾರಂಭ?
ಇದೀಗ ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ಪುನಾರಂಭ ಕೂಡ ಜೋರಾಗಿ ನಡೆಯುತ್ತಿದೆ. ಪ್ರವಾಸೋದ್ಯಮದ ಒತ್ತಡದ ನಡುವೆಯೇ, ಸಫಾರಿಗಳನ್ನು ಪುನಾರಂಭಿಸುವ ಕುರಿತು ವರದಿ ಸಲ್ಲಿಸಲು ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯು ಮಧ್ಯಂತರ ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಈ ವರದಿ ಆಧರಿಸಿ ಮುಂದಿನ ದಿನಗಳಲ್ಲಿ ಸಫಾರಿ ಪುನಾರಂಭ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

