೯ ವರ್ಷಗಳಿಂದ ಬಂದಾಗಿದ್ದ: ರಾಕ್ ಉದ್ಯಾನದ ಸಿಲ್ವರ್ ಲೇಕ್
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಪ್ರವಾಸಿ ತಾಣ ಆಲಮಟ್ಟಿಯ ರಾಕ್ ಉದ್ಯಾನದಲ್ಲಿರುವ ಸಿಲ್ವರ್ ಲೇಕ್ ನಲ್ಲಿ ಕಳೆದ ೯ ವರ್ಷಗಳಿಂದ ಸ್ಥಗಿತಗೊಂಡಿದ್ದ ದೋಣಿ ವಿಹಾರಕ್ಕೆ ಜ.೨೪ ಶನಿವಾರ ಮಧ್ಯಾಹ್ನ ೩ ಕ್ಕೆ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಲಿದ್ದಾರೆ.
ಮಾಜಿ ಸಚಿವ ಎಸ್.ಆರ್. ಪಾಟೀಲ, ಮುಖ್ಯ ಎಂಜಿನಿಯರ್ ಡಿ. ಬಸವರಾಜ ಇರಲಿದ್ದಾರೆ.
ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ವತಿಯಿಂದ ೨೦೦೬ ಏಪ್ರಿಲ್ ೨೧ ರಿಂದಲೇ ಪ್ರವಾಸಿಗರಿಗಾಗಿ ಪ್ಯಾಡೆಲ್ ಬೋಟಿಂಗ್ ಕಾರ್ಯಾಚರಣೆ ಆರಂಭಗೊಂಡಿತ್ತು. ಆಗ ಇಡೀ ಜಿಲ್ಲೆಯಲ್ಲಿಯೇ ಪ್ರವಾಸಿಗರಿಗಾಗಿ ಇದ್ದ ಏಕೈಕ ಬೋಟಿಂಗ್ ತಾಣ ಇದಾಗಿತ್ತು. ಇದು ಬಹಳಷ್ಟು ಪ್ರವಾಸಿಗರನ್ನು ಆಕರ್ಷಿಸಿತ್ತು.
ಆದರೆ ೨೦೧೬ ರಲ್ಲಿ ಬೋಟಿಂಗ್ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಸಿಲ್ವರ್ ಲೇಕ್ ನಡಿ (೯ ಅಡಿ ಆಳ ಇರುವ) ಬಿದ್ದು ಮೃತಪಟ್ಟಿದ್ದ.
ಈ ಘಟನೆಯಾದಾಗಿನಿಂದ ಬೋಟಿಂಗ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ನಾನಾ ತಾಂತ್ರಿಕ, ಕಾನೂನು ಸಮಸ್ಯೆಯ ಕಾರಣ ಬೋಟಿಂಗ್ ಆರಂಭಗೊಳ್ಳಲೇ ಇಲ್ಲ. ಆಲಮಟ್ಟಿಗೆ ನಿತ್ಯ ಬರುತ್ತಿದ್ದ ಸಹಸ್ರಾರು ಪ್ರವಾಸಿಗರು ಬೋಟಿಂಗ್ ಇಲ್ಲದೇ ನಿರಾಶೆ ಹಾಗೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.
ಪೆಡೆಲ್ ಬೋಟ್, ಸ್ಪೀಡ್ ಬೋಟ್, ಕಯಾಕಿಂಗ್, ಚಾರ್ಬಿಂಗ್, ರಾಫ್ಟಿಂಗ್, ರೋಯಿಂಗ್, ಸೇರಿದಂತೆ ನಾನಾ ಬೋಟ್ ಗಳು ಕಾರ್ಯನಿರ್ವಹಿಸಲಿದ್ದು, ಒಂದು ರೈಡ್ ಗೆ ಪ್ರತಿ ವ್ಯಕ್ತಿಗೆ ೫೦ ರೂ ಹಾಗೂ ೧೦೦ ರೂ ದರ ನಿಗದಿಗೊಳಿಸಲಾಗಿದೆ.
ವಾರ್ಷಿಕ ೧೧.೫೦ ಲಕ್ಷ ರೂ ಗೆ ಟೆಂಡರ್ ಆಗಿದ್ದು, ಬೋಟ್ ಗಳನ್ನು ಗುತ್ತಿಗೆದಾರರೇ ತಂದು ನಿರ್ವಹಿಸಬೇಕು, ಜತೆಗೆ ಎಲ್ಲಾ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳಬೇಕು, ಬೋಟಿಂಗ್ ಮಾಡುವ ಪ್ರತಿ ಪ್ರವಾಸಿಗರೂ ಲೈಫ್ ಜಾಕೆಟ್ ಹಾಕಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ ಎಂದು ಕೆಬಿಜೆಎನ್ ಎಲ್ ಅಧಿಕಾರಿಗಳು ಮಾಹಿತಿ ನೀಡಿದರು.

