ಲೇಖನ
– ವೀಣಾ ಹೇಮಂತಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ತನ್ನ ಹೊಲವನ್ನು ಚೆನ್ನಾಗಿ ಹದ ಮಾಡಿ ಬೀಜ ಬಿತ್ತಿ ಅವುಗಳು ಮೊಳಕೆಯೊಡೆದು ಸಸಿಯಾಗಿ ಹುಲುಸಾಗಿ ದವಸ ಧಾನ್ಯಗಳನ್ನು ಬೆಳೆದು ಮತ್ತೆ ರಾಶಿ ಮಾಡುವ ಮುನ್ನ ವಿಶೇಷ ಅಡುಗೆಗಳನ್ನು ತಯಾರಿಸಿ ಬಂಧು ಬಾಂಧವರೊಡಗೂಡಿ ಭೂಮಿ ತಾಯಿಯ ಪೂಜೆಯನ್ನು ಮಾಡುತ್ತಾನೆ. ಬಂಗಾರದ ಬೆಳೆಯನ್ನು ನೀಡುವ ಭೂಮಿ ತಾಯಿಗೆ ಪೂಜೆಯ ಮೂಲಕ ಆತ ಕೃತಜ್ಞತೆಯನ್ನು ತೋರುತ್ತಾನೆ. ತನ್ನ ಬದುಕಿಗೆ ಆಧಾರವನ್ನು ಮೂಲಭೂತ ಸೌಕರ್ಯವಾದ ಆಹಾರವನ್ನು ನೀಡುವ ಭೂಮಿತಾಯಿಗೆ ಪೂಜೆಯನ್ನು ಮಾಡುವ ಮೂಲಕ ಆತ ಸಂಭ್ರಮ ಪಡುತ್ತಾನೆ.

ನಮ್ಮ ಹುಟ್ಟಿಗೆ ಕಾರಣರಾಗಿರುವ ನಮ್ಮ ತಂದೆ ತಾಯಿಗಳು ನಮ್ಮನ್ನು ಲಾಲಿಸಿ ಪಾಲಿಸಿ ಬೆಳೆಸುತ್ತಾರೆ. ನಮ್ಮೆಲ್ಲ ಬೇಕು ಬೇಡಗಳಿಗೆ ಸ್ಪಂದಿಸುವ ನಮ್ಮ ತಂದೆ ತಾಯಿ ತಮ್ಮೆಲ್ಲ ತೊಂದರೆಗಳನ್ನು ಮೀರಿಯೂ ಕೂಡ ನಾವು ಬದುಕಿನಲ್ಲಿ ಮುನ್ನಡೆಯಲು ಸಹಾಯ ಹಸ್ತವನ್ನು ಎಸಗುತ್ತಾರೆ. ಮುಂದೆ ನಾವು ಬದುಕಿನಲ್ಲಿ ಮುಂದೆ ಬಂದು ಉನ್ನತ ಸ್ಥಾನವನ್ನು ಗಳಿಸಿದಾಗ ಹೆಮ್ಮೆಯಿಂದ ಬೀಗುತ್ತಾರೆ. ಅಂತಹ ತಂದೆ ತಾಯಿಗಳಿಗೆ ನಾವು ಕೃತಜ್ಞರಾಗಿರಬೇಕು.
ಇದನ್ನು ನೋಡುವ ಮಕ್ಕಳು ನಾವು ನಮ್ಮ ಸುತ್ತಲಿನ ಪರಿಸರಕ್ಕೆ ನಮ್ಮ ಪಾಲಕರಿಗೆ ನಮ್ಮ ಗುರುಗಳಿಗೆ, ನಮ್ಮ ಸಮಾಜಕ್ಕೆ ಕೃತಜ್ಞರಾಗಿರಬೇಕು ಎಂಬುದನ್ನು
ಎನ್ನುತ್ತಾರೆ.
ಇತ್ತೀಚೆಗೆ ನಾನು ಓದಿರುವ “ದಿ ಲಾ ಅಫ್ ಅಟ್ರಾಕ್ಷನ್” ಎಂಬ ಪುಸ್ತಕದಲ್ಲಿ ಗ್ರಾಟಿಟ್ಯೂಡ್ ಎಂಬ ಒಂದು ಲೇಖನವಿದೆ. ಗ್ರ್ಯಾಟಿಟ್ಯುಡ್ ಅಂದರೆ ಕೃತಜ್ಞತೆಯ ಕುರಿತು ಸಾಕಷ್ಟು ಚರ್ಚೆಗಳು, ಮಾತುಕತೆಗಳು ನಡೆಯುತ್ತಿವೆ. ಕಂಪ್ಲೇಂಟ್ ( ದೂರು) ಮತ್ತು ಪ್ರಾಬ್ಲಮ್ (ಸಮಸ್ಯೆ) ಇವುಗಳಲ್ಲಿ ಬಹಳ ವ್ಯತ್ಯಾಸವಿದೆ. ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ಇದ್ದೇ ಇರುತ್ತದೆ, ಆದರೆ ದೂರಿಗೆ ಇಲ್ಲ.
ಯಾವುದೇ ಒಂದು ವಿಷಯವನ್ನು ನಾವು ಅದು ಇರುವಂತೆಯೇ ಬಳಸಿಕೊಳ್ಳುತ್ತೇವೆ. ನಮ್ಮ ಕೆಲಸವಾದ ನಂತರ ಆ ವಸ್ತುವಿನ ಕುರಿತು ನಾವು ದೂರನ್ನು ಹೇಳುತ್ತೇವೆ. ಹೀಗಾಗಬಾರದು ಎಂದರೆ ನಾವು ಕೃತಜ್ಞತಾ ಭಾವವನ್ನು ವ್ಯಕ್ತಪಡಿಸುವುದನ್ನು ಕಲಿಯಬೇಕು.
ನಮ್ಮ ತಟ್ಟೆಗೆ ಬಂದು ಬೀಳುವ ಆಹಾರ ನೂರಾರು ಜನರ ಶ್ರಮದ ಫಲವಾಗಿರುತ್ತದೆ.. ಅದಕ್ಕೆ ನಾವು ಕೃತಜ್ಞರಾಗಿರಬೇಕು ಎಂಬ ಅರಿವು ಮಕ್ಕಳಲ್ಲಿ ಮೂಡಿದಾಗ ಅವರಿಗೆ ಗೊತ್ತಿಲ್ಲದಂತೆಯೇ ಅವರಲ್ಲಿ ಒಂದು ಅಗೋಚರವಾದ ಭಾವ ಮೂಡುತ್ತದೆ. ಈ ಅಗೋಚರ ಭಾವ ಕೃತಜ್ಞತೆಯಾಗಿದ್ದು ಪ್ರಸ್ತುತ ಬದುಕಿನಲ್ಲಿ ಅದು ಅತ್ಯವಶ್ಯಕ.
ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ ಈ ಹಿಂದೆ ಶಾಲೆಯನ್ನು ‘ಸಾಲಿ ಗುಡಿ’ ಎಂದು ಕರೆಯುತ್ತಿದ್ದರು. “ಜ್ಞಾನ ದೇಗುಲವಿದು.. ಕೈಮುಗಿದು ಒಳಗೆ ಬಾ” ಎಂಬ ಹೇಳಿಕೆಗಳು ಶಾಲೆಯ ಗೋಡೆಯ ಮೇಲೆ ಇರುತ್ತಿದ್ದವು.
ನಾವು ಓದುತ್ತಿದ್ದ ಶಾಲೆ ಕುಳಿತುಕೊಳ್ಳುತ್ತಿದ್ದ ತರಗತಿಗಳು,ಮೇಜು, ಬೆಂಚು ಎಲ್ಲವೂ ಅವರಿಗೆ ಪವಿತ್ರ ಎಂಬ ಭಾವವನ್ನು ಮೂಡಿಸುತ್ತದೆ. ಶಾಲೆ ಒಂದು ದೇವಾಲಯ ಮತ್ತು ಶಿಕ್ಷಕರು ದೇವರಂತೆ ಎಂಬ ಭಾವ ಅವರಲ್ಲಿ ಉನ್ನತ ಮೌಲ್ಯಗಳನ್ನು ತುಂಬಲು ಸಹಾಯಕವಾಗುತ್ತದೆ. ಅಮೂಲ್ಯಗಳನ್ನು ಬೆಳೆಸುವುದೇ ಪಾಲಕರ ಜವಾಬ್ದಾರಿ.
ಇದೇ ರೀತಿ ಪ್ರಪಂಚದಲ್ಲಿರುವ ಎಲ್ಲ ವಸ್ತುಗಳನ್ನು ಪೂಜ್ಯ ಭಾವದಿಂದ ಅವು ಇರುವ ಹಾಗೆಯೇ ನೋಡಿ ಅವು ಇರುವಂತೆಯೇ ಒಪ್ಪಿಕೊಳ್ಳುವ ಮನುಷ್ಯ ಯಾವುದಕ್ಕೂ ದೂರುವುದಿಲ್ಲ. ಹೀಗೆ ಬೆಳೆದ ವ್ಯಕ್ತಿ ಬದುಕಿನ ಎಲ್ಲಾ ಆಯಾಮಗಳಲ್ಲೂ ತನ್ನ ವ್ಯಕ್ತಿತ್ವವನ್ನು ಸಮಗ್ರವಾಗಿ ಬೆಳೆಸಿಕೊಳ್ಳುತ್ತಾನೆ.
ಇದೇ ರೀತಿ ಸಾರ್ವಜನಿಕ ಸಾರಿಗೆಯಲ್ಲಿ ನಾವು ಪ್ರಯಾಣಿಸುವಾಗ ಮಕ್ಕಳು ತಾವು ತಿಂದು ಬಿಟ್ಟ ಚಿಪ್ಸ್, ಬಿಸ್ಕತ್ತಿನ ಪ್ಯಾಕೆಟ್ ಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂಬ ತಿಳುವಳಿಕೆಯನ್ನು ಮಕ್ಕಳಲ್ಲಿ ಮೂಡಿಸಬೇಕು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕೂಡ ನಮ್ಮ ಜವಾಬ್ದಾರಿ ಎಂಬುದರ ಅರಿವನ್ನು ಮಕ್ಕಳಿಗೆ ಮೂಡಿಸಬೇಕು.
ಅಂತೆಯೇ ನಮ್ಮ ಸುತ್ತಲಿನ ಪರಿಸರವನ್ನು, ನಿಸರ್ಗವನ್ನು ನಾವು ಕಾಪಾಡಿಕೊಳ್ಳಬೇಕು. ನಾವು ನೋಡಿದಂತೆ ನಮ್ಮ ನೋಟ.. ಒಂದೇ ಸಮನೆ ಸುರಿಯುತ್ತಿರುವ ಮಳೆಯನ್ನು ನೋಡಿ ಒಬ್ಬ ವ್ಯಕ್ತಿ ಈ ಹಾಳು ಮಳೆ ನಮ್ಮೆಲ್ಲ ಕೆಲಸವನ್ನು ತೋಪೆಬ್ಬಿಸಿತು ಎಂದು ಹೇಳಿದರೆ ಮತ್ತೋರ್ವ ವ್ಯಕ್ತಿ ಅಬ್ಬ! ಎಷ್ಟು ಒಳ್ಳೆಯ ಮಳೆ ಸುರಿಯುತ್ತಿದೆ, ಭೂಮಿ ತಂಪಾಗಿದೆ ಸುತ್ತಲೂ ಹಸಿರು ಹೆಚ್ಚುತ್ತದೆ. ನೋಡಲು ಅದೆಷ್ಟು ಚೆನ್ನ ಎಂದು ಹೇಳಬಹುದು.
ಹೀಗೆ ನಾವು ನೋಡುವ ನೋಟವನ್ನು ಸರಿಯಾಗಿ ಇಟ್ಟುಕೊಂಡರೆ ನಮ್ಮ ಮಕ್ಕಳು ಕೂಡ ಅದೇ ಮೌಲ್ಯಗಳನ್ನು ತಮ್ಮಲ್ಲಿಯೂ ಅಳವಡಿಸಿಕೊಳ್ಳುತ್ತಾರೆ. ಇದು ಮಕ್ಕಳಲ್ಲಿ ಋಣಾತ್ಮಕತೆಯನ್ನು ತೆಗೆದುಹಾಕಿ ಧನಾತ್ಮಕತೆಯನ್ನು ತುಂಬುತ್ತದೆ. ಆದ್ದರಿಂದ ತನ್ನ ಮಕ್ಕಳು ಬದುಕಿನಲ್ಲಿ ಧನಾತ್ಮಕವಾಗಿ ಬದುಕಬೇಕು ಎಂಬ ಆಶಯವನ್ನು ಹೊಂದಿರುವ ಪಾಲಕರು ಮಕ್ಕಳಿಗೆ ಅವರು ನೋಡುವ ಎಲ್ಲದರಲ್ಲಿಯೂ ಒಳ್ಳೆಯದನ್ನು ಹುಡುಕುವ ಗುರುತಿಸುವ ಮತ್ತು ಅರಿಯುವ ರೀತಿಯಲ್ಲಿ ಬೆಳೆಸಬೇಕು.


