ಇಂದು (ಡಿಸೆಂಬರ ೨೪) “ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ”ದ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
-ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಸೇಥ್ ಗೋಡೀನ್ ಅವರು “ಉತ್ಪಾದಕರು ಗ್ರಾಹಕರನ್ನು ಹುಡುಕಬೇಡಿ. ಗ್ರಾಹಕರಿಗೆ ಏನು ಬೇಕಾಗಿದೆ ಆ ವಸ್ತುವನ್ನು ಅನ್ವೇಷಿಸಿ, ಅವಿಷ್ಕರಿಸಿ ಮತ್ತು ಉತ್ಪಾದಿಸಿ ಅಥವಾ ಸೇವೆ ನೀಡಬೇಕು”ಎಂದು ಹೇಳಿದ್ದಾರೆ. ಇಂದಿನ ಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಗ್ರಾಹಕನೇ ಮಹಾಪ್ರಭು. ಉತ್ಪಾದಕರು ಮತ್ತು ಮಾರಾಟಗಾರರು ಗ್ರಾಹಕನ ವರ್ತನೆಯಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅ ಮೂಲಕ ಸರಕು-ಸೇವೆಗಳನ್ನು ಮಾರಾಟ ಮಾಡುವ ತಂತ್ರಗಾರಿಕೆಯಲ್ಲಿ ತೊಡಗಬೇಕು. ಕಂಪನಿಗಳ ಬ್ರ್ಯಾಂಡ್ ಎಂದರೆ ಗ್ರಾಹಕನ ವಿಶ್ವಾಸ-ನಂಬಿಕೆ ಮತ್ತು ವಿಧೇಯತೆಯನ್ನು ಪಡೆಯುವ ಮೂಲಕ ಗ್ರಾಹಕನ ಹಕ್ಕುಗಳನ್ನು ಸಂರಕ್ಷಣೆ ಮಾಡುವುದು ಮತ್ತು ಪರಿಣಾಮಕಾರಿಯಾದ ಮಾರಾಟ ಮಾಡುವ ತಂತ್ರಗಾರಿಕೆಯೇ ಬಹು ಮುಖ್ಯವಾಗಿರುತ್ತದೆ. ಇಂದಿನ ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದಿಂದಾಗಿ ನಮ್ಮ ದೇಶೀಯ ಗ್ರಾಹಕರ ಬಯಕೆ, ಬೇಕು-ಬೇಡಗಳು, ಆಸೆ-ಆಕಾಂಕ್ಷೆಗಳು, ಅಪೇಕ್ಷೆ-ಕೊಂಡುಕೊಳ್ಳುವಿಕೆ ಮತ್ತು ಬಣ್ಣ, ರಚನೆ, ವಿನ್ಯಾಸಗಳೆಲ್ಲವೂ ಕ್ಷಿಪ್ರವಾಗಿ ಬದಲಾವಣೆಯ ರೂಪವನ್ನು ಪಡೆದುಕೊಳ್ಳುತ್ತಿವೆ. ಇದರಿಂದ ಮಾರುಕಟ್ಟೆಯ ಚಿತ್ರಣವೇ ಸಮಗ್ರವಾಗಿ ಬದಲಾಗುತ್ತಾ ಸಾಗುತ್ತಿದೆ.
ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಪ್ರಭಾವದಿಂದ ವಿಶ್ವದೆಲ್ಲೆಡೆ ಗ್ರಾಹಕರ ಆಸೆ-ಆಕಾಂಕ್ಷೆ, ಬೇಕು-ಬೇಡಗಳಿಗೆ ತಕ್ಕಂತೆ ಗ್ರಾಹಕನಿಗೆ ಕೈಗೆಟುಕುವ ಬೆಲೆಯಲ್ಲಿ ವಸ್ತುಗಳು ದೊರೆಯುತ್ತಿರುವದು ಗ್ರಾಹಕರ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಪ್ರತಿಯೊಂದು ಕಂಪನಿ, ಉತ್ಪಾದನಾ ಸಂಸ್ಥೆ, ವ್ಯಾಪಾರಿಗಳು ಗ್ರಾಹಕರ ಹಕ್ಕುಗಳನ್ನು ರಕ್ಷಿಸಬೇಕು. ವಸ್ತುವಿನ ಕಳಪೆ ಗುಣಮಟ್ಟ, ಕಲಬೆರಕೆ, ಕಾಳ ಸಂತೆ, ಕೃತಕ ಸಂಗ್ರಹಣೆ, ದುಬಾರಿ ಬೆಲೆ ವಿಧಿಸುವುದು, ತೂಕದಲ್ಲಿ ಮೋಸ-ವಂಚನೆ ಇತ್ಯಾದಿ ಶೋಷಣೆಗಳನ್ನು ತಡೆಗಟ್ಟಲು ಹಾಗೂ ಗ್ರಾಹಕ ಮತ್ತು ಮಾರಾಟಗಾರರಲ್ಲಿ ಸೂಕ್ತ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ ೨೪ ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಆಚರಣೆಯ ಹಿನ್ನೆಲೆ
ಆದ್ದರಿಂದ “ಜಾಗೋ ಗ್ರಾಹಕ ಜಾಗೋ” ಎಂಬ ಘೋಷವಾಕ್ಯದೊಂದಿಗೆ ಉತ್ತಾದಕರು ಮತ್ತು ವ್ಯಾಪಾರಸ್ಥರಿಂದ ಗ್ರಾಹಕರ ಶೋಷಣೆಯಾಗದಂತೆ ತಡೆಯಲು ಮತ್ತು ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಮಹೋನ್ನತ ಉದ್ಧೇಶದಿಂದ ಭಾರತದಲ್ಲಿ ಡಿಸೆಂಬರ ೨೪ ರಂದು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ದೇಶದಲ್ಲಿ ಏಕಸ್ವಾಮ್ಯ ನಿಯಂತ್ರಣ ಮತ್ತು ವ್ಯಾಪಾರ ಕಾರ್ಯಾಚರಣೆಯ ಹೆಸರಿನಲ್ಲಿ ಉತ್ಪಾದಕರು ಮತ್ತು ವ್ಯಾಪಾರಿಗಳಿಂದ ಗ್ರಾಹಕರು ಶೋಷಣೆಯಾಗದಂತೆ ನಿಯಂತ್ರಿಸಲು ಭಾರತದಲ್ಲಿ ೧೯೮೬ ರಲ್ಲಿ ಗಾಹಕರ ಹಿತರಕ್ಷಣಾ ಕಾಯಿದೆಯನ್ನು ಜಾರಿಗೆ ತರಲಾಯಿತು. ಪ್ರತಿವರ್ಷ ಡಿಸೆಂಬರ ೨೪ ರಂದು ರಾಷ್ಟ್ರದಾದ್ಯಂತ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವದರ ಜೊತೆಗೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಂದ ಶೋಷಣೆ ಮತ್ತು ವಂಚನೆಯನ್ನು ತಡೆಯಲು ಹಾಗೂ ಗ್ರಾಹಕರಿಗೆ ಸಾಮಾಜಿಕ ನ್ಯಾಯ ದೊರೆಕಿಸಿಕೊಡಲು ವಿಶೇಷವಾಗಿ ಈ ಕಾಯಿದೆಯ ಪ್ರಮುಖ ಧ್ಯೇಯೋದ್ಧೇಶವಾಗಿದೆ.
೨೦೨೫ ರ ಘೋಷವಾಕ್ಯ ೨೦೨೫ ನೇಯ ವರ್ಷದ ಈ ಘೋಷವಾಕ್ಯವು “ಸುಸ್ಥಿರ ಜೀವನ ಶೈಲಿಗೆ ನ್ಯಾಯಯುತ ಪರಿವರ್ತನೆ “ ಧ್ಯೇಯವಾಕ್ಯವು ಎಲ್ಲ ಗ್ರಾಹಕರಿಗೆ ಆರೋಗ್ಯಕರ, ಪರಿಸರ ಸ್ನೇಹಿ ಮತ್ತು ಸುಸ್ಥಿರ ಆಯ್ಕೆಗಳು ಸುಲಭವಾಗಿ ಮತ್ತು ಕೈಗೆಟುಕುವಂತಿರವೇಕು ಎಂಬ ಸಂದೇಶವನ್ನು ಒತ್ತಿ ಹೇಳುತ್ತದೆ. ಅನ್ಯಾಯ ಅಥವಾ ವಂಚನೆಗೆ ಒಳಗಾದ ಗ್ರಾಹಕರು ತಮ್ಮ ಹಕ್ಕುಗಳಿಗಾಗಿ ಹೋರಾಡುವಂತೆ ಪ್ರೋತ್ಸಾಹಿಸಬೇಕೆಂಬ ಮಹೋನ್ನತ ಧ್ಯೇಯೋದ್ಧೇಶವನ್ನು ಹೊಂದಿದೆ.
ಆಚರಣೆಯ ಮಹತ್ವ
ಇಂದಿನ ಮಾರುಕಟ್ಟೆಯಲ್ಲಿ ಉತ್ಪಾದನಾ ಸಂಸ್ಥೆಗಳು ಅಥವಾ ವ್ಯಾಪಾರಸ್ಥರು ಕೇವಲ ಲಾಭ ಸಂಪಾದನೆಗೆ ಪ್ರಾಶಸ್ತ್ಯ ನೀಡದೇ ಬಹು ಮುಖ್ಯವಾಗಿ ಗ್ರಾಹಕ ಕೊಂಡುಕೊಳ್ಳಬಯಸುವ ವಸ್ತುಗಳನ್ನು ಉತ್ತಮ ಗುಣಮಟ್ಟ, ಸರಿಯಾದ ಬೆಲೆ, ತಾಳಿಕೆ-ಬಾಳಿಕೆ, ಮಾರಾಟ ನಂತರದ ಸೇವೆಯನ್ನು ಜೊತೆಗೆ ಗ್ರಾಹಕ ಸಂತೃಪ್ತಿ-ಸಂತುಷ್ಟಿಗೊಳಿಸುವ ನಿಟ್ಟಿನಲ್ಲಿ ವ್ಯವಹಾರವನ್ನು ಕೈಗೊಳ್ಳಬೇಕು. ಅಂದಾಗ ಮಾತ್ರ ಆ ಸಂಸ್ಥೆಗಳು ಉತ್ಪಾದಿಸುವ ಮತ್ತು ಮಾರಾಟ ಮಾಡುವ ಸರಕು-ಸೇವೆಗಳ ಮೇಲೆ ಗ್ರಾಹಕ ವಿಶ್ವಾಸ-ನಂಬಿಕೆ, ವಿಧೇಯತೆ ಮತ್ತು ಬ್ರ್ಯಾಂಡ್ ಇಮೇಜ್ ಮೂಡಲು ಸಾಧ್ಯವಾಗುತ್ತದೆ.
ಗ್ರಾಹಕರ ರಕ್ಷಣೆ ಹೇಗೆ? ಗ್ರಾಹಕ ಹಿತರಕ್ಷಣಾ ಕಾಯಿದೆ ೧೯೮೬ ರ ಪ್ರಕಾರ ಪ್ರತಿಯೊಬ್ಬ ಗ್ರಾಹಕರು ಖರೀದಿಸುವ ವಸ್ತವಿನ ಗುಣಮಟ್ಟ, ಬೆಲೆ, ನೀಡುವ ಸೇವೆಗಳಲಿ ಯಾವುದೇ ರೀತಿಯ ಶೋಷಣೆಯಾಗಬಾರದೆಂಬ ಮಹತ್ವಾಕಾಂಕ್ಷೆಯೊಂದಿಗೆ ಗ್ರಾಹಕರ ಹಕ್ಕು-ಬಾಧ್ಯತೆ, ಶೋಷಣೆಗೆ ಒಳಪಟ್ಟಂತಹ ಸಂದರ್ಭದಲ್ಲಿ ತನಗಾದ ಅನ್ಯಾಯದಿಂದ ಯೋಗ್ಯ ಪರಿಹಾರ ಮತ್ತು ನ್ಯಾಯ ದೊರೆಕಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಗ್ರಾಹಕರು ಮೋಸ ಹೋದಾಗ ಅಥವಾ ಶೋಷಣೆಯಾದಾಗ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಗ್ರಾಹಕ ಹಿತರಕ್ಷಣಾ ಮಂಡಳಿಗಳಿಗೆ ಹೇಗೆ ದೂರು ಸಲ್ಲಿಸುವದು, ಅವುಗಳ ಕಾರ್ಯವಿಧಾನ ಮತ್ತು ಅನುಸರಿಸಬೇಕಾದ ನೀತಿ-ನಿಯಮಾವಳಿಗಳು ಮತ್ತು ಒದಗಿಸಬೇಕಾದ ಅಗತ್ಯ ದಾಖಲೆಗಳ ಬಗ್ಗೆ ಸಮಗ್ರವಾಗಿ ವಿವರಿಸಲಾಗಿದೆ. ಈ ಕಾಯಿದೆಯ ಪರಿಚ್ಛೇದ ೧೪ ರಿಂದ ೧೯ ರವರೆಗೆ ಹಾಗೂ ಮಾಹಿತಿ ಹಕ್ಕು ಕಾಯಿದೆಯನ್ವಯ ಗ್ರಾಹಕರು ಉತ್ಪಾದಕರು ಮತ್ತು ವ್ಯಾಪಾರಿಗಳಿಂದ ಯಾವುದೇ ರೀತಿಯಿಂದ ತೊಂದರೆ, ಶೋಷಣೆ, ಮೋಸ-ವಂಚನೆಯ ಮಾಡಿದಾಗ ಅದರಿಂದ ಆ ಗ್ರಾಹಕನಿಗಾದ ನಷ್ಟಕ್ಕೆ ಪರಿಹಾರ ಪಡೆಯಲು ಸಂಬಂಧಪಟ್ಟ ಗ್ರಾಹಕ ಹಿತರಕ್ಷಣಾ ಮಂಡಳಿಗಳಿಗೆ ನೇರವಾಗಿ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕೊನೆಯ ನುಡಿ
ಆದ್ದರಿಂದ ಪ್ರತಿಯೊಂದು ವ್ಯಾಪಾರಿ-ವ್ಯವಹಾರಿ ಸಂಸ್ಥೆಯು ಕೇವಲ ಲಾಭ ಸಂಪಾದನೆ ಅಥವಾ ವಾಣಿಜ್ಯದ ದೃಷ್ಟಿಯಿಂದ ಗ್ರಾಹಕರಿಗೆ ಸರಕು-ಸೇವೆಗಳನ್ನು ಮಾರಾಟ ಮಾಡದೇ ಗ್ರಾಹಕನ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಅವನ ಬಯಕೆ-ಅಪೇಕ್ಷೆ, ಆಶೆ-ಆಕಾಂಕ್ಷೆ, ಕೊಂಡುಕೊಳ್ಳುವ ಮನೋಭಿಲಾಷೆ, ಆದಾಯದ ಮೂಲ, ಕೊಳ್ಳುವ ಶಕ್ತಿ, ಇತರ ಆರ್ಥಿಕ -ಸಾಮಾಜಿಕ ಮತ್ತು ಗ್ರಾಹಕನ ವರ್ತನೆಯಲ್ಲಾಗುವ ಬದಲಾವಣೆಗಳಿಗೆ ತಕ್ಕಂತೆ ಮಾರಾಟ ಮಾಡುವದರ ಮೂಲಕ ಗ್ರಾಹಕನನ್ನು ಸಂತೃಪ್ತಿಪಡಿಸುವದೇ ಆಗಿರಬೇಕು. ಉದ್ಯಮಿ ವಾರೆನ್ ಬಫೆಟ್ ಅವರ ಪ್ರಕಾರ, ಈoಛಿus oಟಿ ಥಿouಡಿ ಛಿusಣomeಡಿ ಚಿಟಿಜ ಟeಚಿಜ ಥಿouಡಿ ಠಿeoಠಿಟe ಚಿs ಣhough ಣheiಡಿ ಟives iಟಿ ಜeಠಿeಟಿಜ oಟಿ ಥಿouಡಿ suಛಿಛಿess” ಎಂದು ಹೇಳಿದ್ದಾರೆ. ಆದ್ದರಿಂದ ಪ್ರತಿಯೊಂದು ವ್ಯವಹಾರಿ ಸಂಸ್ಥೆಯು ಮುಖ್ಯವಾಗಿ ತನ್ನ ಗ್ರಾಹಕರನ್ನು ಕೇಂದ್ರೀಕರಿಸಿಕೊಂಡು ಅವರ ಅಗತ್ಯತೆ ಮತ್ತು ಅವಶಕ್ಯತೆಗಳನ್ನು ಗುರುತಿಸಿ, ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುವುದರ ಮೂಲಕ ಸಂತೃಪ್ತಿಗೊಳಿಸುವುದೇ ಆ ಸಂಸ್ಥೆಯ ಯಶಸ್ಸಿಗೊಂದು ದಾರಿದೀಪವಾಗಿದೆ. ಗ್ರಾಹಕನೇ ದೇವರು ಎಂದು ನಂಬಿ ತಮ್ಮ ಮಳಿಗೆಗೆ ವಸ್ತುವನ್ನು ಖರೀದಿಸಲು ಬಂದ ಗ್ರಾಹಕನನ್ನು ಕಡೆಗಣಿಸದೇ ಅವರ ಆಶೋತ್ತರಗಳಿಗೆ ಪೂರಕವಾಗಿ ಉತ್ತಮ ಗುಣಮಟ್ಟದ ವಸ್ತುವನ್ನು ಸರಿಯಾದ ಬೆಲೆಗೆ ಮಾರಾಟ ಮಾಡುವದರ ಜತೆಗೆ ಸಮರ್ಪಕ ಸೇವೆಗಳನ್ನು ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಈ ರಾಷ್ಟ್ರೀಯ ಗ್ರಾಹಕ ಹಿತರಕ್ಷಣಾ ಕಾಯಿದೆಯ ಧ್ಯೇಯೋದ್ಧೇಶ ಮತ್ತು ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದಂತಾಗುತ್ತದೆ ಎಂಬುದೊಂದು ನನ್ನ ಅಂಬೋಣ.


