ಡಿಸೆಂಬರ್ 24ರಂದು ಆಲಮೇಲದಲ್ಲಿ ನಡೆಯುವ 12ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ.ಆರ್.ನಾಡಗೌಡ ಅವರ ಕುರಿತ ವಿಶೇಷ ಲೇಖನ
ಉದಯರಶ್ಮಿ ದಿನಪತ್ರಿಕೆ
ಲೇಖನ: ಗುರು ಆರ್ ಹಿರೇಮಠ
ಆಲಮೇಲ: ಮಕ್ಕಳ ಸಾಹಿತ್ಯದ ತೊಟ್ಟಿಲು ಎಂದು ಕರೆಸಿಕೊಳ್ಳುವ ವಿಜಯಪುರ ಜಿಲ್ಲೆಯು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಪ್ರತಿಭಾವಂತ ಮಕ್ಕಳ ಸಾಹಿತಿಗಳನ್ನು ಕೊಟ್ಟಿದೆ. ಪ್ರಮುಖವಾಗಿ ಶಂ.ಗು .ಬಿರಾದಾರ, ಶಿಶು ಸಂಗಮೇಶ , ಈಶ್ವರ್ ಚಂದ್ರ ಚಿಂತಾಮಣಿ, ಶರಣಪ್ಪ ಕಂಚಾಣಿ, ಪ.ಗು.ಸಿದ್ದಾಪುರ, ಹ.ಮ. ಪೂಜಾರ, ಜಂಬುನಾಥ್ ಕಂಚಾಣಿ, ರಾ.ಶಿ.ವಾಡೇದ, ಬಾ.ಈ. ಕುಮುಟೆ ಮುಂತಾದ ಹಿರಿಯ ಮಕ್ಕಳ ಸಾಹಿತಿಗಳನ್ನು ಹೆಸರಿಸಬಹುದಾಗಿದೆ. ಇಂತಹ ಹಿರಿಯ ಮಕ್ಕಳ ಸಾಹಿತಿಗಳ ಸಾಲಿನಲ್ಲಿ ಶ್ರೀ ಬಿ. ಆರ್. ನಾಡಗೌಡರು ಸಹ ಪ್ರಮುಖರಾಗಿದ್ದಾರೆ.
ಇದೇ ಡಿಸೆಂಬರ 24 ರಂದು ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ವಿಜಯಪುರ ಹಾಗೂ ವಿಶ್ವೇಶ್ವರ ಬಾಲ ಭಾರತಿ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಆಲಮೇಲದಲ್ಲಿ ಜರುಗಲಿರುವ 12ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಮಕ್ಕಳ ಬಿ. ಆರ್. ನಾಡಗೌಡ ಎಂಬ ಕಾವ್ಯನಾಮದಿಂದ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡ ಹಿರಿಯ ಮಕ್ಕಳ ಸಾಹಿತಿಗಳಾದ ಬಿಂದುರಾವ್ ರಾಮರಾವ್ ನಾಡಗೌಡ ಅವರು 10ನೇ ಏಪ್ರಿಲ್ 1944 ರಂದು ರಾಮರಾವ್ ಮತ್ತು ಕಮಲಾಭಾಯಿಯವರ ಸುಪುತ್ರರಾಗಿ ಸಿಂದಗಿಯಲ್ಲಿ ಜನಿಸಿದರು. ನಾಡಗೌಡ ಅವರ ತಂದೆಯವರು ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಾಥಮಿಕ ಶಿಕ್ಷಣವನ್ನು ಬಿಜಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್-3 ರಲ್ಲಿ ಕಲಿತು, ಪ್ರೌಢಶಾಲಾ ಶಿಕ್ಷಣವನ್ನು ಪಿ.ಡಿ.ಜೆ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಹುನಗುಂದದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಟಿ.ಸಿ.ಎಚ್. ಪಾಸಾಗಿ 1966 ರಲ್ಲಿ ತಿಕೋಟಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಶಿಕ್ಷಕ ವೃತ್ತಿ ಜೀವನವನ್ನು ಆರಂಭಿಸಿದರು. 1970ರಲ್ಲಿ ಅಥರ್ಗಾದ ಶಾರದಾ ಎಂಬ ಸಾಧ್ವಿ ಶಿಕ್ಷಕಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿ .ಆರ್. ನಾಡಗೌಡ ಅವರಿಗೆ ಸ್ನೇಹಲತಾ ಎಂಬ ಏಕೈಕ ಪುತ್ರಿ ಇದ್ದಾರೆ. ಅವರು ಎಂ.ಎಸ್. ಸಿ ಪದವೀಧರೆಯಾಗಿ ಕಲಬುರ್ಗಿಯಲ್ಲಿ ಪ್ರೌಢಶಾಲಾ ಮುಖ್ಯಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸತಿಪತಿಗಳಿಂದೊಡಗೂಡಿದ ಭಕ್ತಿ ಹಿತವಾಗಿ ಒಪ್ಪದು ಶಿವಂಗೆ ಎಂಬಂತೆ ದಂಪತಿಗಳಿರುವರು ಪವಿತ್ರವಾದ ಶಿಕ್ಷಕ ವೃತ್ತಿಯಲ್ಲಿದ್ದು ಮಕ್ಕಳ ಏಳಿಗೆಗಾಗಿ ಶ್ರಮಿಸಿದ್ದಾರೆ. ಬಿ.ಆರ್. ನಾಡಗೌಡರು ತಮ್ಮ ಶಿಕ್ಷಕ ವೃತ್ತಿಯನ್ನು ಹೆಚ್ಚಾಗಿ ತಿಕೋಟದಲ್ಲಿ ಮಾಡಿದ್ದು ವಿಶೇಷ ಎಂದೇ ಹೇಳಬೇಕು. ವೃತ್ತಿಯಿಂದ ಶಿಕ್ಷಕರಾದ ನಾಡಗೌಡರು ಪ್ರವೃತ್ತಿಯಿಂದ ಮಕ್ಕಳ ಸಾಹಿತಿಗಳಾಗಿ ನಾಡಿನ ಹೆಸರಾಂತ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಸುಧಾ, ಕರ್ಮವೀರ ಮುಂತಾದ ಪತ್ರಿಕೆಗಳಿಗೆ ತಾವು ಮಕ್ಕಳಿಗಾಗಿ ಬರೆದ ಕಥೆ, ಕವನ, ಚುಟುಕು ಮತ್ತು ಲೇಖನಗಳನ್ನು ಬರೆದು ಕಳಿಸುವುದರ ಮೂಲಕ ಅವರು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಹೆಜ್ಜೆಯನ್ನಿ ಟ್ಟರು. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾದ ನಾಡಗೌಡರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ತಿಕೋಟಾದ ಶಾಲೆಯಲ್ಲಿ ಸಾಹಿತ್ಯ ಉತ್ಸವ ಮತ್ತು ಮಕ್ಕಳ ಕವಿಗೋಷ್ಠಿಗಳನ್ನು ಏರ್ಪಡಿಸುವುದರ ಮೂಲಕ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಿದ್ದಾರೆ. ಜೈನಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ವರ್ಷ ಶಿಕ್ಷಕರಾಗಿ ವಿದ್ಯಾರ್ಥಿಗಳ ಮತ್ತು ಪಾಲಕರ ಪ್ರೀತಿಗೆ ಪಾತ್ರರಾಗಿದ್ದಾರೆ. ನಂತರ ಸಾ ರವಾಡದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿ ಶಿಕ್ಷಕ ವೃತ್ತಿಯಿಂದ ಸೇವಾ ನಿವೃತ್ತಿ ಹೊಂದಿದ್ದಾರೆ. ಮಕ್ಕಳ ಸಾಹಿತಿಗಳ ತವರೂರು ವಿಜಯಪುರದ ನವರಸಪುರ ಉತ್ಸವದಲ್ಲಿ ಹಾಗೂ ಗುಬ್ಬಚ್ಚಿ ಗೂಡು ಮಕ್ಕಳ ಸಮ್ಮೇಳನದಲ್ಲಿ ಕವನ ವಾಚನ ಮಾಡಿದ್ದಾರೆ. ರಾಜ್ಯಮಟ್ಟದ ಮಕ್ಕಳ ಕಥಾ ರಚನಾ ಕಮ್ಮಟ, ನಾಟಕ ರಚನಾ ಕಮ್ಮ ಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಮಕ್ಕಳ ಸಾಹಿತ್ಯ ನಡೆದು ಬಂದ ದಾರಿ ಕುರಿತು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಬಿ. ಆರ್ .ನಾಡಗೌಡರ ವೈಜ್ಞಾನಿಕ ಕವನಗಳಾದ ಶಾಖ, ಆಮ್ಲಜನಕ, ಗ್ರಹಣ, ಬೆಳಕು, ಜೀವ ಜಲ ಮುಂತಾದವುಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಶ್ರೀಯುತರ ‘ಜೀವಜಲ ‘ ಕವಿತೆ ಐ.ಸಿ.ಎಸ್.ಇ.ಪಠ್ಯಕ್ರಮದ ನಾಲ್ಕನೇ ವರ್ಗದ ಕನ್ನಡ ಪಠ್ಯಪುಸ್ತಕದಲ್ಲಿ ಪ್ರಕಟಗೊಂಡಿರುವುದು ಅವರ ಮಕ್ಕಳ ಸಾಹಿತ್ಯಕ್ಕೆ ಸಂದ ಗೌರವವಾಗಿದೆ. ಬೆಂಗಳೂರು ದೂರದರ್ಶನ ಚಂದನ ವಾಹಿನಿಯ ಬೆಳಗು ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯ ಸಾಧಕರ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ನಾಡಗೌಡರು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಮೂರು ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಮಕ್ಕಳ ಸಾಹಿತ್ಯ ಕೃತಿಗಳೆಂದರೆ ನಮ್ಮ ನಾಡು, ಬೆಣ್ಣೆ ಮುದ್ದೆ ಮತ್ತು ರಜೆಯ ಮಜೆ ಗಳಾಗಿವೆ. ಮಕ್ಕಳ ಸಾಹಿತಿ ಬಿ.ಆರ್. ನಾಡಗೌಡ ಅವರ ವೃತ್ತಿ ಮತ್ತು ಪ್ರವೃತ್ತಿಯ ಸಾಧನೆಯನ್ನು ಗುರುತಿಸಿ ನಾಡಿನ ವಿವಿಧ ಸಂಘಟನೆಗಳು ವಿಶೇಷ ಪ್ರಶಸ್ತಿ ನೀಡಿ ಗೌರವಿಸಿವೆ. ವಿಜಯಪುರ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಮಕ್ಕಳ ಸಾಹಿತ್ಯ ಪ್ರಶಸ್ತಿ, ಶ್ರೀ ಗುರು ಪ್ರಶಸ್ತಿ, ಬಸವ ಜ್ಯೋತಿ ಪ್ರಶಸ್ತಿ, ಕರ್ನಾಟಕ ಜ್ಯೋತಿ ಪ್ರಶಸ್ತಿ, ಶಿಕ್ಷಕರ ರತ್ನ ಪ್ರಶಸ್ತಿ, ಬಸವ ರತ್ನ ಪ್ರಶಸ್ತಿ, ವಿಜಯಪುರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸದ್ಯ ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮವು ಆಲಮೇಲದಲ್ಲಿ ಇದೇ ಡಿಸೆಂಬರ 24ರಂದು ಅದ್ದೂರಿಯಿಂದ ಜರುಗಲಿರುವ 12ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿಸಿ ಗೌರವಿಸುತ್ತಿರುದು ಹೆಮ್ಮೆಯ ಸಂಗತಿಯಾಗಿದೆ. ಒಟ್ಟಾರೆ, 90 ವರ್ಷದ ತುಂಬು ಜೀವನ ನಡೆಸುತ್ತಿರುವ ಬಿ. ಆರ್.ನಾಡಗೌಡ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಅಖಂಡ 34 ವರ್ಷಗಳ ಸೇವೆಗೈಯುದರ ಮೂಲಕ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ. ಅತ್ಯಂತ ಸರಳ ಸಜ್ಜನಿಕೆಯ ಸ್ನೇಹಮಯ ವ್ಯಕ್ತಿತ್ವವನ್ನು ಹೊಂದಿದ ನಾಡಗೌಡರು ಎಲ್ಲ ಹಿರಿಯ ಮಕ್ಕಳ ಸಾಹಿತಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಚುಟುಕುಗಳ ಕೃತಿ ಶೀಘ್ರದಲ್ಲಿ ಮುದ್ರಣ ಕಾಣಲಿದೆ.


