ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಪ್ರೀತಿ ಅಂದ್ರೆ ಎರಡು ದೇಹಗಳನ್ನು ಒಂದೇ ಜೀವವನ್ನಾಗಿಸೋದು ಎನ್ನೋದು ಎಲ್ಲರ ಅಂಬೋಣ. ಅದು ಕೊಡುವ ರೋಮಾಂಚನದ ಭಾವವನ್ನು ಇನ್ನಾವದೂ ಕೊಡಲಾರದು. ಇನ್ನಾವುದರಲ್ಲಿ ಅದು ಸಿಗಲು ಸಾಧ್ಯವೇ ಇಲ್ಲ. ಪ್ರೀತಿಗೆ ಕರಗದ ಮನಸ್ಸಿಲ್ಲ. ಎಲ್ಲರಿಂದ ಪೆದ್ದು ಎಂದು ಕರೆಸಿಕೊಳ್ಳುವವರಿಗೂ ಒಂದು ಕಿರುನಗೆ ಬಿಸಾಕಿದರೆ ಸಾಕು. ಒಂದು ಕಣ್ಸನ್ನೆ ಮಾಡಿದರೆ ಸಾಕು. ಇದುವರೆಗೂ ಸೈಲೆಂಟಾಗಿದ್ದ ಅವರ ಮನಸ್ಸು ವೈಬ್ರೇಟ್ ಮೋಡಿನಲ್ಲಿ ವಿಹರಿಸುತ್ತೆ.
ಈ ಪ್ರೀತಿಯನ್ನು ಹೊಸ ಮುತ್ತಿನಂತೆ ಎದೆಚಿಪ್ಪಿನಲ್ಲಿ ಕೂಡಿಟ್ಟುಕೊಂಡು ಬದುಕಿನ ಒಂದಲ್ಲ ಒಂದು ಹಂತದಲ್ಲಿ ಎಲ್ಲರೂ ಅನುಭವಿಸಿಯೇ ಇರುತ್ತಾರೆ. ಪ್ರೀತಿಯ ಗಾಳಕ್ಕೆ ಸಿಗದವರು ತುಂಬಾ ವಿರಳ. ಪ್ರೀತಿಯ ಉಸಾಬರಿಯೇ ಬೇಡ ನನ್ನ ಪಾಡಿಗೆ ನಾನಿರುತ್ತೇನೆ ಎಂದು ಗಟ್ಟಿಯಾಗಿ ನಿಂತವನ ಮುಂದೆ ಅದೆಲ್ಲಿಂದಲೋ ಬಂದ ನೀನು ಅದೊಂದು ದಿನ ನನ್ನ ಕಣ್ಣಿಗೆ ಬಿದ್ದೆ, ನೀನು ಕಣ್ಣಿಗೆ ಬಿದ್ದ ಕ್ಷಣದಿಂದ ನಿಂತಲ್ಲೇ ನಿಲ್ಲಲಾರದ ಕೂತಲ್ಲೇ ಕೂರಲಾರದ ಪರಿಸ್ಥಿತಿ. ಅರೆ ಗಳಿಗೆಯಲ್ಲಿ ನೀನು ಅದೇನು ಜಾದೂ ಮಾಡಿದೆ. ನನ್ನ ಮನಸ್ಸೀಗ ವೈಶಾಖ ಮಾಸದಲ್ಲಿ ಏಕಾಂಗಿಯಾಗಿ ಸಂಗಾತಿಗಾಗಿ ಹುಡಕುವಂತ ಸ್ಥಿತಿಗೆ ತಂದಿಟ್ಟೆ. ಬೇರೇನೂ ನೆಪ ಹೇಳದೆ ನನ್ನ ಪಾಲಿಗೆ ನನ್ನ ಪ್ರೀತಿ ಕೊಟ್ಟು ಬಿಡು. ಎಲ್ಲ ಜಾಗದಲ್ಲೂ ಎಲ್ಲ ಹುಡುಗಿಯರಲ್ಲೂ ನಿನ್ನ ರೂಪವೇ ಕಾಣುತ್ತಿದೆ. ನಿನ್ನ ಪ್ರೀತಿಯ ಹುಚ್ಚು ದಿನವೂ ಹೆಚ್ಚುತ್ತಿದೆ. ಹಿತವಾಗಿ ಎದೆಗೆ ದಿನವೂ ಚುಚ್ಚುತ್ತಿದೆ.

ನೀನಿಲ್ಲದ ಬಾಳು ನೆನೆದರೆ ಬೇರು ಮುರಿದ ಮರದ ನೆನಪಾಗುವದು. ಎಲ್ಲಿ ಹೋದರೂ ನಿನ್ನ ಕಣ್ಸನ್ನೆ ನನ್ನನ್ನು ನೆರಳಿನಂತೆ ಹಿಂಬಾಲಿಸುತಿದೆ. ನೀನು ನಿನ್ನ ಕಣ್ಸನ್ನೆಯಲ್ಲೇ ಪ್ರೀತಿಯ ಮೊಗ್ಗು ಅರಳಿಸಿದ್ದು ಬೆನ್ನು ಬಿಡದ ಶಾಪದಂತೆ ಕಾಡುತ್ತಿದೆ. ಪ್ರೀತಿ ದೂರ ಸರಿಸಿ ಸನ್ಯಾಸಿಯಂತೆ ಬಾಳಬೇಕೆಂದವನ ಬಾಳಲ್ಲಿ ಹೃದಯ ಸಾಗರದಿ ಸುಮಧುರ ಭಾವನೆಗಳ ಅಲೆಯನ್ನು ಚಿಮ್ಮಿಸಿದೆ. ಮಾತು ಮರೆತಂತೆ ನಿಂತಾಗ ನನ್ನ ಮಾತಿಗೆ ದನಿಯಾದವಳು ನೀನು. ಮುನಿಸಿಕೊಂಡಾಗ ಮಾತಿನಲ್ಲೇ ಮೋಡಿ ಮಾಡಿ ನಗುವಿನ ಹೊನಲು ಹರಿಸಿದವಳು ನೀನು. ನಿನ್ನಂಥ ಮಾಯಗಾತಿಯೊಬ್ಬಳು ನನ್ನ ಎದೆಯಲ್ಲಿ ಬಂದು ಬಿಡಾರ ಹೂಡುತ್ತಾಳೆ ಎಂಬುದು ನನಗೆ ಈಗಲೂ ನಂಬಲಾಗದ ಸಂಗತಿ. ನನ್ನ ಮನಸ್ಸು ನಿನ್ನತ್ತ ವಾಲುವದೆಂದು ನನಗೇ ತಿಳಿದಿರಲಿಲ್ಲ. ನಿನ್ನ ನೆನಪೇ ನನ್ನ ಉಸಿರಾಗುವದೆಂದೂ ನಾನೆಂದೂ ಭಾವಿಸಿರಲಿಲ್ಲ. ನಿನ್ನ ನೆನೆದು ನನ್ನ ಕಂಗಳು ತೇವಗೊಳ್ಳುವವೆಂದು ಎಂದೂ ಅಂದುಕೊಂಡಿರಲಿಲ್ಲ. ಒಂದೇ ಒಂದು ಕುಡಿನೋಟಕೆ ಹೃದಯ ಕುಣಿದಾಡುವದೆಂದು ಎಣಿಸಿಯೇ ಇರಲಿಲ್ಲ. ನೀನು ನನ್ನಿಂದ ವಿನಾಕಾರಣ ದೂರಾಗುತ್ತಿಯಾ ಅಂತ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ.
ನಮ್ಮದು ಪ್ರಥಮ ನೋಟದಲ್ಲೇ ಮೂಡಿದ ಪ್ರೀತಿಯಂತೂ ಅಲ್ಲವೇ ಅಲ್ಲ ಅಂತ ಹೇಳುವದು ಹೇಗೆ? ನಿನ್ನ ನಡೆ ನುಡಿ ನೋಡುತ ನೋಡುತ ನಿನ್ನಲ್ಲಿಯೇ ಕಳೆದು ಹೋದೆ. ಕಳೆದು ಹೋದ ಕ್ಷಣದಲ್ಲಿಯೇ ನಿನ್ನ ಪ್ರೀತಿಗಾಗಿ ಹಂಬಲಿಸಿದೆ. ಹಾಗೆ ನಿನ್ನ ಪ್ರೀತಿಯನ್ನು ಬಯಸಿದ್ದೇ ತಪ್ಪಾಯಿತೆ? ಕಂಡ ಕನಸುಗಳನ್ನು ಕರಗಿಸಬೇಕೆಂದುಕೊಂಡು ನಾನೆಷ್ಟು ಪ್ರಯತ್ನಿಸಿದರೂ ಕಣ್ಣು ಒಪ್ಪಿಗೆ ಸೂಚಿಸುತ್ತಿಲ್ಲ. ಮನಸ್ಸೂ ಮುದ್ರೆ ಒತ್ತುತ್ತಿಲ್ಲ. ಕಣ್ಣಿಗೆ ಹಗಲು ರಾತ್ರಿ ನಿನ್ನದೇ ಗುಂಗು ಹೃದಯವೂ ಬಿಡುವು ಕೊಡದೇ ನಿನ್ನನ್ನೇ ಪ್ರೀತಿಸುತ್ತಿದೆ. ಯಾವ ಚೆಲುವೆಗೂ ಸೋಲದ ನಾನು ನಿನಗೆ ಸೋತೆ. ನಿನ್ನನ್ನು ಗೆಲ್ಲಲು. ಪ್ರೀತಿಯ ಬಲೆಯಲ್ಲಿ ಬಿದ್ದಾಗಿಂದ ಹಸಿವು ನಿದಿರೆ ಹತ್ತರವೇ ಸುಳಿಯುತ್ತಿಲ್ಲ. ಕಣ್ಣಿನ ರೆಪ್ಪೆಗಳನ್ನು ಅರಳಿಸಿ ಹಾಯಾಗಿ ಒಂದು ರಾತ್ರಿಯಾದರೂ ಮಲಗಬೇಕೆಂದರೆ ನೀನು ಕಣ್ಣು ದೊಡ್ಡದಾಗಿ ಬಿಟ್ಟುಕೊಂಡು ನನ್ನನ್ನೇ ನೋಡುತ್ತಿದ್ದ ಪರಿ ನೆನಪಾಗಿ ರೆಪ್ಪೆಗಳು ಒಂದಕ್ಕೊಂದು ಬಿಗಿಯಾಗಿ ಅಪ್ಪಿಕೊಳ್ಳಲು ಸಂಪು ಹೂಡುತ್ತಿವೆ. ರಂಪ ಮಾಡುತ್ತಿವೆ.
ಜೀವ ತುಂಬಿರುವ ಬೊಂಬೆಯಂತಿರುವ ನಿನ್ನ ಬಗ್ಗೆ ಬೇಡ ಬೇಡವೆಂರು ಹೃದಯ ತಿರುಗಿ ತಿರುಗಿ ವಿಚಾರಿಸುತ್ತಿದೆ. ಜೊತೆಯಲಿ ಬದುಕಲು ಕಿರುಬೆಳು ಹಿಡಿದು ಸಪ್ತಪದಿ ತುಳಿಯಲು ಮನಸ್ಸು ಹಾತೊರೆಯುತ್ತಿದೆ. ಮೊಲದ ಬಣ್ಣದಂತ ನನ್ನ ಮನಸ್ಸು ಪುನಃ ಪುನಃ ನಿನ್ನ ಪ್ರೀತಿಸುವ ಬೇಡಿಕೆಯನ್ನು ಮುಂದಿಟ್ಟು ತಲೆಕೆಡಿಸುತ್ತಿದೆ.ಇಷ್ಟು ದಿನ ನೋಡದೆ ಇರಲಾರದವನಿಗೆ ಸ್ವಾತಿ ಮಳೆಯಂತೆ ನಿನ್ನ ನೆನಪುಗಳು ಬಿಟ್ಟೂ ಬಿಡದೇ ಕಾಡುತ್ತಲೇ ಇವೆ. ಅದೇಕೋ ಗೊತ್ತಿಲ್ಲ ಹುಡುಗಿ, ನೀನು ದೂರ ಹೋದಷ್ಟು ಹೃದಯಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದಿಯಾ ಎಷ್ಟು ಕಾಡಿಸಿ ಪೀಡಿಸಿ ಕೇಳಿದರೂನ ನಿನ್ನಿಂದ ದೂರ ಸರಿದಿರುವ ಕಾರಣವನ್ನು ಹೇಳಲು ತುಟಿ ಪಿಟಕ್ಕೆನಿಸಿರಲಿಲ್ಲ.
ಮೊನ್ನೆ ನಿನ್ನ ಆಪ್ತ ಗೆಳತಿಯೊಬ್ಬಳು ಕಾಲೇಜಿನ ಹೂದೊಟದಲ್ಲಿ ಕಂಡಾಗ ನನ್ನ ಮನ ಎಳೆಬಿಸಿಲು ಕಂಡ ನವಿಲಿನಂತಾಗಿ ನೀ ನನ್ನಿಂದ ದೂರ ಸರಿದ ಕಾರಣವ ಅವಳನ್ನು ಕೇಳಿತು.ನನ್ನ ತುಟಿಗಳ ನಡುವೆ ತನಗಾಗಿ ಜಾಗ ಪಡೆದ ಉಂಗುರುಂಗುರವಾಗಿ ಹೊರಗೆ ಬಿಡುವ ಬೆಳ್ಳಗಿರುವ ತೆಳ್ಳಗಿರುವ ಸುಂದರಿ (ಸಿಗರೇಟ್) ಯನ್ನು ಕಂಡಿರುವದೇ ಕಾರಣವೆಂದು ತಿಳಿದು ಹೊಟ್ಟೆ ತುಂಬಾ ನಕ್ಕೆ. ಅಂದಿನಿಂದ ಅದನ್ನು ನಿನ್ನಿಂದ ದೂರ ಮಾಡಿದ್ದೇನೆ.ನನ್ನ ಆರೋಗ್ಯದ ಕುರಿತು ನೀನು ತೋರಿದ ಕಾಳಜಿ ಅಪರಮಿತವಾದುದೆಂದು ನನಗೆ ಅರ್ಥವಾಗಿದೆ. ನಿನ್ನನ್ನು ಪಡೆಯಬೇಕೆಂಬ ಹಂಬಲದಲ್ಲಿ ಎಷ್ಟೊಂದು ಕಷ್ಟ ಪಡುತಿದ್ದೇನೆ. ನಿನ್ನನ್ನು ಎದೆಯೊಳಗೆ ತುಂಬಿಕೊಂಡು ಆರಾಧಿಸುತ್ತಿದ್ದೇನೆ. ಇನ್ನೆಂದೂ ಬೆಳ್ಳನೆಯ ಸುಂದರಿಯನ್ನು ನನ್ನ ಕೈಬೆರಳುಗಳ ನಡುವೆ ಸಿಕ್ಕಿಸಿಕೊಂಡು ನನ್ನ ತುಟಿಗಳ ನಡುವೆ ಅವಳಿಗೆ ಜಾಗ ಕೊಡುವದಿಲ್ಲವೆಂದು ಈ ಮೂಲಕ ಭಗವದ್ಗೀತೆಯ ಮೇಲೆ ಕೈ ಇಟ್ಟು ಸತ್ಯವನ್ನು ಹೇಳುತ್ತ ಪ್ರತಿಜ್ಞೆಗೈಯುತ್ತೇನೆ. ನಿನ್ನ ಮುದ್ದು ಮುದ್ದಾದ ಸವಿ ಮಾತುಗಳನ್ನು ಕೇಳಲು ನಿನ್ನ ಅರಳಿಸಿಕೊಂಡ ಮುಖ ಕಣ್ತುಂಬಿಸಿಕೊಳ್ಳಲು ನಸು ನಾಚಿಕೆಯಿಂದ ನೀನು ಹೇಳುವ ಜಗದಲ್ಲಿಯೇ ಅತಿ ಸುಂದರವಾದ ಮೂರು ಪದಗಳು (ಐ ಲವ್ ಯು) ಕೇಳಲು ಕಾತುರದಿಂದ ಕಾಲೇಜಿನ ಹೂದೋಟದಲ್ಲಿ ಕಾಯುತ್ತಿರುವೆ ಬೇಗ ಬಂದು ಬಿಡು ಗೆಳತಿ..


