(ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಕುರಿತ ಲೇಖನ ಮಾಲಿಕೆ)
ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಪ್ರತಿ ಸಮಸ್ಯೆಗೂ ಒಂದು ಪರಿಹಾರವಿದೆ ಎಂಬ ವಿಶ್ವಾಸ ಮನುಷ್ಯನಲ್ಲಿ ಮೂಡಲು ಕಾರಣ ಆತನ ಜ್ಞಾನದ ಬುನಾದಿ ಮತ್ತು ಆತ ತನ್ನ ಕೆಲಸದಲ್ಲಿ ಇಟ್ಟಿರುವ ನಂಬಿಕೆ.
ಮನುಷ್ಯನಿಗೆ ಆತ್ಮವಿಶ್ವಾಸ ಬರುವುದು ಆತ ಸಮಸ್ಯೆ ಗಳನ್ನು ನೋಡುವ ಮತ್ತು ಅವುಗಳನ್ನು ಎದುರಿಸುವ ರೀತಿಯಲ್ಲಿ. ಸಮಸ್ಯೆಯನ್ನು ಕಂಟಕ ಎಂದು ನೋಡಿದಾಗ ಮನುಷ್ಯ ಬೇಸರಕ್ಕೊಳ್ಳಗಾಗುತ್ತಾನೆ ಬದಲಾಗಿ ಸಮಸ್ಯೆಯನ್ನು ಸವಾಲಾಗಿ ಭಾವಿಸಿ ಅದರ ಪರಿಹಾರಗಳನ್ನು ಯೋಚಿಸಿದಾಗ ಸಮಸ್ಯೆಗಳು ಸುಲಭವಾಗಿ ಪರಿಹರಿಸಲ್ಪಡುತ್ತವೆ. ಮತ್ತೆ ಕೆಲ ಜನರು ಪರಿಹಾರದಲ್ಲೂ ಸಮಸ್ಯೆಗಳನ್ನು ಹುಡುಕುವರು.
ನಮ್ಮಲ್ಲಿರುವ ಜ್ಞಾನ ಮತ್ತು ನಾವು ವಸ್ತು ವಿಷಯಗಳಲ್ಲಿ ಹೊಂದಿರುವ ವಿಶ್ವಾಸ ಮತ್ತು ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಕೈಗೊಳ್ಳುವ ಚಟುವಟಿಕೆಗಳು ನಮಗೆ ಸವಾಲನ್ನು ಪರಿಹರಿಸಲು ಶಕ್ತಿಯನ್ನು ನೀಡುತ್ತವೆ.
ಆದರೆ ಸಂತೋಷದ ವಿಷಯವೆಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಮತ್ತು ಅವುಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿದ್ದಾರೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇದೆ ಎಂಬ ನಂಬಿಕೆ ಜನರಲ್ಲಿ ಕ್ರಮೇಣ ಹೆಚ್ಚಾಗುತ್ತಿದೆ. ಜ್ಞಾನ,ವಿಶ್ವಾಸ ಮತ್ತು ಚಟುವಟಿಕೆಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ.
ಜ್ಞಾನ, ವಿಶ್ವಾಸ ಮತ್ತು ಚಟುವಟಿಕೆಗಳಲ್ಲಿ ನಾವು ಮೊದಲು ಚಟುವಟಿಕೆಯನ್ನು ಪರಿಗಣಿಸಿದಾಗ ಯಾವುದೇ ಒಂದು ಚಟುವಟಿಕೆ ಇಲ್ಲವೇ ಕ್ರಿಯೆಯನ್ನು ನಾವು ವಿಶ್ವಾಸದಿಂದ ಮಾಡುತ್ತೇವೆ.
ನಾವು ಬ್ಯಾಂಕಿನಲ್ಲಿ ನಮ್ಮ ಹಣವನ್ನು ಡೆಪಾಸಿಟ್ ಮಾಡುತ್ತೇವೆ, ಚಿನ್ನವನ್ನು ಇಡುತ್ತೇವೆ ಕಾರಣ ನಮಗೆ ಬ್ಯಾಂಕಿನ ಮೇಲೆ ಇರುವ ನಂಬಿಕೆ.
ಮಕ್ಕಳು ಶಾಲೆಗೆ ಹೋಗಿ ಶಿಕ್ಷಕರಿಂದ ಪಾಠ ಕಲಿಯುತ್ತಾರೆ, ಅದು ಅವರಿಗೆ ಶಿಕ್ಷಕರ ಮೇಲೆ ಇರುವ ನಂಬಿಕೆ ಇನ್ನು ಶಾಲೆಗೆ ಹೋಗುವುದು ತಮಗೆ ಅಲ್ಲಿ ಸುರಕ್ಷಿತ ವಾತಾವರಣದ ಜೊತೆಗೆ ಕಲಿಕೆ ದೊರೆಯುತ್ತದೆ ಎಂಬ ಕಾರಣಕ್ಕೆ.
ರೈತ ಹೊಲದಲ್ಲಿ ಬೆಳೆಯನ್ನು ತೆಗೆಯುತ್ತೇನೆ ಎಂಬ ನಂಬಿಕೆಯಿಂದಲೇ ಹೊಲವನ್ನು ಉತ್ತು ಹದ ಮಾಡಿ ಬೀಜವನ್ನು ಬಿತ್ತುತ್ತಾನೆ.

ಒಂದು ಒಳ್ಳೆಯ ಭವಿಷ್ಯ ನಮ್ಮ ಮಕ್ಕಳಿಗೆ ಕಾದಿದೆ ಎಂಬ ವಿಶ್ವಾಸದಿಂದಲೇ ಪಾಲಕರು ತಮ್ಮ ಮಕ್ಕಳನ್ನು ಶಾಲೆ, ಕಾಲೇಜುಗಳಿಗೆ ಕಳುಹಿಸುತ್ತಾರೆ.
ಹೀಗೆ ಎಲ್ಲ ಕೆಲಸ ಕಾರ್ಯಗಳು ನಿಂತಿರುವುದು ನಂಬಿಕೆ ಮತ್ತು ವಿಶ್ವಾಸದ ಮೇಲೆಯೇ.
ಅದೆಷ್ಟೇ ಅಪಾಯಕಾರಿ ಎಂಬ ಭಯ ಇದ್ದರೂ ಕೂಡ ವಿಶ್ವಾಸವು ಅದನ್ನು ಜಯಿಸಲು ಸಾಧ್ಯ.. ನಮ್ಮೆಲ್ಲರ ಮನೆಗಳಲ್ಲಿ ಇರುವ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಸ್ಪೋಟಿಸಬಹುದು ಎಂಬ ಅಪಾಯದ ಅರಿವಿದ್ದರೂ ಕೂಡ ನಾವು ಸ್ಪೋಟಿಸುವುದಿಲ್ಲ ಎಂಬ ನಂಬಿಕೆಯಿಂದ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಅಲ್ಲವೇ?
ಇನ್ನು ಯಾವುದಾದರೂ ಸ್ಥಳಕ್ಕೆ ನಾವು ಹೋಗುವಾಗ ಖಂಡಿತವಾಗಿಯೂ ಯಾವುದೇ ತೊಂದರೆ ಇಲ್ಲದೆ ನಿಗದಿತ ಸಮಯಕ್ಕೆ ನಾವು ಅಲ್ಲಿ ಮುಟ್ಟುತ್ತೇವೆ ಎಂದು ನಾವು ನಮ್ಮ ಕಾರಿನ ಮೇಲೆ ಭರವಸೆ ಇಟ್ಟುಕೊಳ್ಳುತ್ತೇವೆ ಅಲ್ಲವೇ?
ರಸ್ತೆಯನ್ನು ದಾಟುವ ಮಗು ಅಪ್ಪನ ಕೈಗಳಲ್ಲಿ ತಾನು ಸುರಕ್ಷಿತ ಎಂಬ ಭಾವದಿಂದಲೇ ಅಪ್ಪನ ಕೈಹಿಡಿದು
ನಡೆಯುತ್ತದೆ. ಹೀಗೆ ನಮ್ಮ ಬದುಕಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯವು ನಂಬಿಕೆಯ ತಳಹದಿಯ ಮೇಲೆಯೇ ನಡೆಯುತ್ತದೆ.
ಪಾಲಕರು ಮತ್ತು ಮಕ್ಕಳ ನಡುವಿನ ನಂಬಿಕೆಯಂತೂ ಅವಿನಾಭಾವವಾದದ್ದು. ತಮ್ಮ ಮಕ್ಕಳು ಓದಿನಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿದ್ದರೆ ಪಾಲಕರು ಕೂಡ ಅಷ್ಟೇ ಅದಮ್ಯ ಆತ್ಮವಿಶ್ವಾಸದಿಂದ ಅವರ ಓದಿಗೆ ತಮ್ಮ ಜೀವಮಾನದ ಗಳಿಕೆಯನ್ನು ಖರ್ಚು ಮಾಡುತ್ತಾರೆ. ಅದೆಷ್ಟೇ ಖರ್ಚಾಗಲಿ! ಚೆನ್ನಾಗಿ ಓದುತ್ತಿರುವ ಮಕ್ಕಳು ಮುಂದೆ ಬರಲು ಎಲ್ಲ ಖರ್ಚನ್ನು ನಿಭಾಯಿಸಲಿ ನಾನು ಸಿದ್ಧನಿದ್ದೇನೆ ಎಂಬ ನಂಬಿಕೆ ಅವರಲ್ಲಿ ಮೂಡುತ್ತದೆ.
ಕ್ರಿಯೆ ಮತ್ತು ನಂಬಿಕೆಯ ಮೂಲ ಜ್ಞಾನ
ಶಾಲೆಗೆ ಹೋಗುವ ಮಗು ತನ್ನ ಶಾಲೆ ಮತ್ತು ಶಿಕ್ಷಕರಲ್ಲಿ ನಂಬಿಕೆ ಇರುತ್ತದೆ. ತನ್ನ ಅಪ್ಪ ಅಮ್ಮ ತನ್ನ ಒಳಿತಿಗೆ ಕಾರ್ಯನಿರ್ವಹಿಸುತ್ತಾರೆ ಎಂಬ ನಂಬಿಕೆ ಮಗುವಿನ ಬದುಕಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅಂತೆಯೇ ಮಕ್ಕಳಲ್ಲಿ ಈ ನಂಬಿಕೆಯನ್ನು ಹುಟ್ಟು ಹಾಕಲು ಪಾಲಕರು ನಮ್ಮ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಅವರಲ್ಲಿ ತುಂಬಬೇಕು. ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಎಷ್ಟೋ ಸಾಂಪ್ರದಾಯಿಕ ವಿಷಯಗಳನ್ನು ನಾವು ಮಕ್ಕಳಿಗೆ ತಿಳಿಸಿ ಹೇಳುವ ಗೋಜಿಗೆ ಹೋಗುವುದಿಲ್ಲ. ಇದರಿಂದಾಗಿ ಮಕ್ಕಳಿಗೆ ಆ ವಿಷಯದ ಕುರಿತು ಜ್ಞಾನ ದೊರೆಯುವುದಿಲ್ಲ.
ಉದಾಹರಣೆಗೆ ಯಾವುದಾದರೂ ಕಾರ್ಯಕ್ರಮವನ್ನು ಆರಂಭಿಸುವಾಗ ಇಲ್ಲವೇ ಪೂಜೆಯನ್ನು ಮಾಡುವಾಗ ವಿನಾಯಕನನ್ನು ಏಕೆ ಪೂಜಿಸುತ್ತಾರೆ? ಎಂಬ ಮಗುವಿನ ಪ್ರಶ್ನೆಗೆ ನಾವು ಸರಿಯಾಗಿ ಉತ್ತರಿಸಲು ಸಾಧ್ಯವಾಗದೇ ಇದ್ದಾಗ ಮಗು ಆ ಕ್ರಿಯೆಯಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಮಗುವಿನ ಎಲ್ಲ ರೀತಿಯ ಪ್ರಶ್ನೆಗಳಿಗೆ ನಾವು ಉತ್ತರವನ್ನು ಕೊಡಲೇಬೇಕು. ನಮಗೆ ಗೊತ್ತಿದ್ದರೆ ಸರಿ… ಅವರ ಪ್ರಶ್ನೆಗೆ ಉತ್ತರ ಕೊಡಬೇಕು. ಗೊತ್ತಿಲ್ಲದಿದ್ದರೆ ಮಕ್ಕಳ ಜೊತೆಯಲ್ಲಿಯೇ ಅವರನ್ನು ಒಳಗೊಂಡಂತೆ ಉತ್ತರವನ್ನು ಹುಡುಕಲು ಪ್ರಯತ್ನಿಸಬೇಕು. ನಂಬಿಕೆ ಇಲ್ಲದೆ ಇದ್ದಾಗ ಮಗು ಆ ಕ್ರಿಯೆಯಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುತ್ತದೆ.
ಗಣೇಶನಿಗೆ 21 ಗರಿಕೆಯನ್ನು ಏರಿಸಬೇಕು… ಆ ಗರಿಕೆಯನ್ನು ಏಕೆ ಏರಿಸಬೇಕು ಎಂಬುದರ ಕಾರಣವನ್ನು ನಾವು ಮಕ್ಕಳಿಗೆ ವಿವರಿಸಿದರೆ ಮುಂದಿನ ವರ್ಷದ ಗಣೇಶೋತ್ಸವದಲ್ಲಿ ಆ ಗರಿಕೆಯನ್ನು ನಾವು ಏರಿಸುವ ಮುನ್ನವೇ ಮಕ್ಕಳು ಏರಿಸುತ್ತಾರೆ. ಏಕೆ ಎಂಬುದನ್ನು ವಿವರಿಸಿದಾಗ ಅದು ಜ್ಞಾನವಾಗಿ ಪರಿವರ್ತನೆಯಾಗುತ್ತದೆ.
ಕುಳಿತು ಊಟ ಮಾಡಬೇಕು ಎಂಬುದರ ಹಿಂದಿನ ವೈಜ್ಞಾನಿಕ ಕಾರಣವನ್ನು ನಾವು ಹೇಳಿದಾಗ ಮಗು ಮರು ಪ್ರಶ್ನಿಸದೆ ಅದನ್ನು ಒಪ್ಪಿಕೊಂಡು ಪಾಲಿಸುತ್ತದೆ. ಕ್ರಿಯೆಯು ಜ್ಞಾನವಾಗಿ, ಜ್ಞಾನವು ನಂಬಿಕೆಯಾಗಿ, ನಂಬಿಕೆಯು ಪರಂಪರೆಯಾಗಿ ಬದಲಾಗುತ್ತದೆ.
ನಮ್ಮ ಮಕ್ಕಳು ನಮ್ಮ ಸನಾತನ ಧರ್ಮದ ಸಾರವನ್ನು ಅರಿತು ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬ ಆಶಯವನ್ನು ನಾವು ಹೊಂದಿದ್ದರೆ ಅದರ ಕುರಿತು ಮಕ್ಕಳಿಗೆ ತಿಳಿಸಿ ಹೇಳುವ ಜ್ಞಾನ ಪಾಲಕರಿಗೆ ಇರಲೇಬೇಕು. ಜ್ಞಾನ ನಂಬಿಕೆಯನ್ನು ಹುಟ್ಟಿಸಿದರೆ, ನಂಬಿಕೆಯು ಕೆಲಸವನ್ನು ಕಾರ್ಯರೂಪಕ್ಕೆ, ಕೃತಿಯ ರೂಪಕ್ಕೆ ತರಲು ಸಹಾಯಕವಾಗುತ್ತದೆ.
ಪಾಲಕರು ತಮ್ಮ ಮಕ್ಕಳಿಗೆ ಪರೀಕ್ಷೆಯ ಸಮಯದಲ್ಲಿ ಬೇಗನೆ ಎದ್ದು ಓದಿಕೊಳ್ಳಲು ಹೇಳುತ್ತಾರೆ, ಆದರೆ ಮಕ್ಕಳು ಬೇಗನೆ ಎದ್ದು ಓದಿಕೊಳ್ಳುವ ಹಿಂದಿನ ಮಹತ್ವವನ್ನು ಮಕ್ಕಳಿಗೆ ತಿಳಿಸಿ ಹೇಳಿದರೆ ಮಕ್ಕಳು ತಂತಾನೆ ಪಾಲಕರ ಮಾತುಗಳನ್ನು ಕ್ರಿಯೆಯ ರೂಪಕ್ಕೆ ಇಳಿಸುತ್ತಾರೆ. ನಮ್ಮ ಪ್ರಯತ್ನವಿಲ್ಲದೆಯೇ ಮಕ್ಕಳು ನಮ್ಮ ಮಾತುಗಳನ್ನು ಕೇಳುತ್ತಾರೆ. ಇದಕ್ಕೆಲ್ಲ ಕಾರಣ ಜ್ಞಾನ.
ಜ್ಞಾನವು ನಮ್ಮ ಕುಟುಂಬವನ್ನು, ನಮ್ಮ ಮಕ್ಕಳಿಗೆ ಒಳ್ಳೆಯ ನಡುವಳಿಕೆಯನ್ನು ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಉಳಿಸಲು ಅತ್ಯವಶ್ಯಕವಾಗಿರುತ್ತದೆ.
ಮಕ್ಕಳಿಗೆ ಜ್ಞಾನವನ್ನು ನೀಡುವ ನಿಟ್ಟಿನಲ್ಲಿ ನಾವು ಶ್ರಮಿಸಬೇಕಾಗಿದೆ. ಬದಲಾಗಿ ನಮ್ಮ ಅಹಂಕಾರದಿಂದ ಒತ್ತಡದಿಂದ ನನಗೆಲ್ಲವೂ ಗೊತ್ತಿದೆ ಎಂಬ ಅಹಂ ಭಾವದಿಂದ ನಾವು ಮಕ್ಕಳಲ್ಲಿ ನಂಬಿಕೆಯನ್ನು ಹುಟ್ಟಿಸಲು ಸಾಧ್ಯವಿಲ್ಲ.
ಪ್ರಸ್ತುತ ದಿನಗಳಲ್ಲಿ ಬಹಳಷ್ಟು ಮಕ್ಕಳು ನಮ್ಮ ಸಂಸ್ಕೃತಿ ಸಂಪ್ರದಾಯಗಳಿಂದ ಗಾವುದ ದೂರ ಇದ್ದಾರೆ. ನಮ್ಮ ಮಕ್ಕಳು ನಮ್ಮ ಕುಟುಂಬದ ಸಂಪ್ರದಾಯ ಸಂಸ್ಕೃತಿಗಳನ್ನು ಅನುಸರಿಸುತ್ತಿಲ್ಲ ಎಂದು ಅಲವತ್ತುಕೊಳ್ಳುವ ಪಾಲಕರು ಈ ಹಿಂದೆ ತಾವು ಅವುಗಳನ್ನು ಅಸಡ್ಡೆ ಮಾಡಿರುವುದರ ಪರಿಣಾಮವೇ ತಮ್ಮ ಮಕ್ಕಳ ಇಂದಿನ ಪರಿಸ್ಥಿತಿಗೆ ಕಾರಣ ಎಂಬುದು ಗೊತ್ತಾಗಬೇಕು. ಮುಂದೆ ನಮ್ಮ ಮಕ್ಕಳು ಹೀಗೆ ವರ್ತಿಸಬಾರದು ಎಂಬ ಆಶಯ ನಮಗಿದ್ದರೆ ನಾವು ಪಾಲಕರಾದವರು ನಮ್ಮ ಮಕ್ಕಳಲ್ಲಿ ಸರಿಯಾದ ಮಾರ್ಗವನ್ನು ತಿಳಿಸಿ ಕೊಡುವ ಜ್ಞಾನವನ್ನು ಹೊಂದಿರಲೇಬೇಕು.
ತಮ್ಮ ಮಕ್ಕಳ ಬದುಕಿಗೆ ಅತ್ಯವಶ್ಯಕವಾದ ಜ್ಞಾನವನ್ನು ಕೊಡುವ ಸಾಮರ್ಥ್ಯ ಪಾಲಕರಲ್ಲಿ ಇದ್ದರೆ ನಮ್ಮ ಪರಂಪರೆ ಮತ್ತು ಸಂಪ್ರದಾಯಗಳನ್ನು ಉಳಿಸಲು ಸಾಧ್ಯ. ಆದ್ದರಿಂದ ಪಾಲಕರೇ ಯಾವುದೇ ವಿಷಯವು ಕ್ರಿಯಾ ರೂಪದಲ್ಲಿ ಬರಬೇಕಾದರೆ ನಾವು ಮಕ್ಕಳಲ್ಲಿ ನಂಬಿಕೆಯನ್ನು ಹುಟ್ಟಿಸಬೇಕು ಮತ್ತು ಈ ನಂಬಿಕೆಯು ಮಕ್ಕಳಲ್ಲಿ ನಾವು ತುಂಬುವ ಜ್ಞಾನದ ಬಲದಿಂದ ಕಾರ್ಯನಿರ್ವಹಿಸಬೇಕು.
ಮನೆಯಲ್ಲಿ ಹಿರಿಯರಾದವರು ತಮ್ಮ ಮೊಮ್ಮಕ್ಕಳಿಗೆ
ಪರಂಪರಾನುಗತವಾಗಿ ಬಂದ ಆಚರಣೆಗಳು ಕ್ರಿಯೆಗಳ ಮಹತ್ವವನ್ನು ತಿಳಿಸಿ ಹೇಳಲೇಬೇಕು. ಇದರಿಂದ ಮಕ್ಕಳಲ್ಲಿ ಆ ಕ್ರಿಯೆಗಳ ಕುರಿತು ನಂಬಿಕೆ ಮೂಡಿ ಅವರು ಆ ಕ್ರಿಯೆಗಳನ್ನು ತಾವು ಖುದ್ದು ಆಚರಿಸುವುದಲ್ಲದೆ ಮುಂದಿನ ತಲೆಮಾರಿಗೆ ಕೂಡ ಈ ವಿಷಯಗಳನ್ನು ಕೊಂಡೊಯ್ಯುತ್ತಾರೆ.


