೨ ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ | ಸಂಚಾರ ಅಸ್ತವ್ಯಸ್ತ | ಪರದಾಡಿದ ಪ್ರಯಾಣಿಕರು
ತಿಕೋಟಾ: ನಾಡಿನಾದ್ಯಂತ ಕಳೆದ ೩ ತಿಂಗಳಿನಿಂದ ಮಳೆ ಬಾರದೇ ಬರಗಾಲದ ದವಡೆಗೆ ಸಿಲುಕಿರುವ ನಾಡಿನ ಅನ್ನದಾತರ ಸಂಕಷ್ಟಕ್ಕೆ ಧ್ವನಿಯಾಗಬೇಕಿರುವ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ೧೩ ತಾಲೂಕುಗಳ ಪೈಕಿ ತಿಕೋಟಾ ಹೋರತುಪಡಿಸಿರುವುದು ತುಂಬಾ ದುಃಖದ ಸಂಗತಿ. ಈ ಕೂಡಲೇ ತಿಕೋಟಾ ತಾಲೂಕನ್ನು ಸಂಪೂರ್ಣ ಬರಗಾಲ ಎಂದು ಘೋಷಣೆ ಮಾಡಿ ಪ್ರತಿ ಎಕರೆಗೆ ೫೦ ಸಾವಿರ ರೂ. ಪರಿಹಾರ ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾದ್ಯಕ್ಷ ಚೂನ್ನಪ್ಪಾ ಪೂಜೇರಿ ಹೇಳಿದರು.
ಬುಧವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಿಕೋಟಾ ತಾಲೂಕು ಬರಗಾಲ ಘೋಷಣೆ ಮಾಡಬೇಕೆಂದು ಆಗ್ರಹಿಸಿ ವಿವಿಧ ರೈತ ಸಂಘಗಳಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಪ್ರತಿಭಟನೆ ಮಾಡಲಾಯಿತು.
ರಾಜ್ಯ ಕಾರ್ಯಧ್ಯಕ್ಷ ರಾಜು ಪವಾರ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಮಹಿಳಾ ಜಿಲ್ಲಾಧ್ಯಕ್ಷೆ ರೇಖಾ ಪಾಟೀಲ, ರಾಜ್ಯಾಧ್ಯಕ್ಷ ಮೋತಿರಾಮ ಲಮಾಣಿ, ಹೆಚ್.ಡಿ.ಧರೆಪ್ಪ, ಮಾತನಾಡಿ, ವಿದ್ಯುತ್ ಸಮಸ್ಯೆ, ಕಳೆದ ೨-೩ ವರ್ಷಗಳಿಂದ ಫಸಲ್ ಭೀಮಾ ಯೋಜನೆಯಲ್ಲಿ ಪರಿಹಾರ ಕೊಡದೇ ಆಟ ಆಡುತ್ತಿರುವ ವಿಮಾ ಕಂಪನಿ ಕುರಿತು, ಅಪೂರ್ಣಗೊಂಡ ಕಾಲುವೆಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾತನಾಡಿದರು.
ಮನವಿಯನ್ನು ತಹಶಿಲ್ದಾರ ಪ್ರಶಾಂತ ಚನಗೊಂಡ ಅವರ ಕೈಗೆ ಕೊಡುವುದಿಲ್ಲ, ಜಿಲ್ಲಾಧಿಕಾರಿಗಳೇ ಬರಬೇಕು ಎಂದು ಹಟ ಹಿಡಿದ ರೈತ ಹೋರಾಟಗಾರು, ನಂತರ ಎ.ಡಿ.ಸಿ ಬಸವರಾಜ ಕಲಶೆಟ್ಟಿ ಅವರು ಸ್ಥಳಕ್ಕೆ ಬಂದು ಹೋರಾಟಗಾರರ ಮನವಿ ಸ್ವೀಕರಿಸಿ ಆದಷ್ಟು ಬೇಗನೇ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟ ನಂತರ ಹೋರಾಟ ಕೈಬಿಡಲಾಯಿತು.
ಇದರ ಜೊತೆಗೆ ಸರಿಯಾದ ಸಮಯಕ್ಕೆ ವಿದ್ಯುತ ಕೊಡದೇ ರೈತರ ಜೀವನದೊಂದಿಗೆ ಆಟ ಆಡುತ್ತಿರುವ ಹೆಸ್ಕಾಂ ಅಧಿಕಾರಿಗಳಿಗೆ ತರಾಟೆ ತೆಗೆದುಕೊಳ್ಳಲಾಯಿತು.
ಈ ವೇಳೆ ತಿಕೋಟಾ ತಾಲೂಕಾ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ಜಿಲ್ಲಾ ಗೌರವಾಧ್ಯಕ್ಷ ಕಲ್ಲಪ್ಪ ಪಾರಶೆಟ್ಟಿ, ರಾಮನಗೌಡ ಬಿರಾದಾರ, ಮಮ್ಮು ಮುಂದಗನೂರ, ಹಮೀಧ ಭಾಗವಾನ, ನಜೀರ ನಂದರಗಿ, ಶಾನೂರ ನಂದರಗಿ, ಹಣಮಂತ ಬ್ಯಾಡಗಿ, ಮಹಾದೇವ ಕದಂ, ಸೋಮು ಬಿರಾದಾರ, ಮಹಾದೇವಪ್ಪ ತೇಲಿ, ಜಿ.ಜಿ.ಪವಾರ, ರಾಮನಗೌಡ ಪಾಟೀಲ, ಶ್ರೀಮಂತ ಓಲಕಾರ, ಸಂಗೀತಾ ರಾಠೋಡ, ರೇಷ್ಮಾ ರಾಠೋಡ, ಸತ್ಯಪ್ಪ ಕೊಲ್ಲೊಳ್ಳಿ, ನಾಮದೇವ ಬಂಡಘರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.