ಲೇಖನ
– ಮಲ್ಲಪ್ಪ. ಸಿ.ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಬಾಲ್ಯದಲ್ಲಿ ನಾನು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಮನೋಭಿಲಾಷೆ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿದ್ದೆ. ನಾನು ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ನನ್ನ ನೆಚ್ಚಿನ ಗುರುಗಳು “ ನೀನು ಮುಂದೆ ಏನಾಗಬೇಕೆಂದು ಅಂದುಕೊಂಡಿದ್ದೀಯಾ? ಎಂದು ಕೇಳಿದರು. ಆ ಪ್ರಶ್ನೆ ನನ್ನ ಜೀವನದಲ್ಲಿ ಒಂದು ಬದಲಾವಣೆಯನ್ನು ತಂದುಕೊಟ್ಟಿತು. ನಾನು ಕಲಿತ ನಮ್ಮೂರ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಪ್ರೇಮಿ, ಪ್ರಾಮಾಣಿಕ, ಆದರ್ಶಪ್ರಾಯ, ಮೌಲ್ಯಗಳ ಆಗರವಾಗಿರುವ ಮತ್ತು ಸದಾ ವಿದ್ಯಾರ್ಥಿಗಳ ಏಳ್ಗೆಯನ್ನು ಬಯಸುತ್ತಿರುವ ನನ್ನ ಜೀವನದ ಗುರು ಎಂದೇ ಸ್ವೀಕರಿಸಿದ ಸರ್ವ ಶ್ರೇಷ್ಠ ಶಿಕ್ಷಕರ ಪ್ರಭಾವವು ನನ್ನ ಮೇಲಾಗಿತ್ತು. ಅಂದಿನಿಂದ ನಾನು ಒಬ್ಬ ನನ್ನ ಗುರುವಿನಂತೆ ಒಬ್ಬ ಶಿಕ್ಷಕನಾಗಬೇಕೆಂಬ ಮಹದಾಸೆಯು ನನ್ನ ಮನದಲ್ಲಿ ಚಿಗುರೊಡೆಯಿತು. ಅದಕ್ಕೆ ಪುಷ್ಟಿ ಕೊಡುವಂತೆ ನನಗೆ ಆ ಗುರುಗಳು ಹೇಳಿಕೊಟ್ಟ ಪಾಠ, ಕಲಿಸಿದ ವಿದ್ಯೆ, ಜ್ಞಾನಧಾರೆ, ಬದುಕಿಗೆ ತೋರಿದ ಮಾರ್ಗದರ್ಶನಗಳೆಲ್ಲವೂ ನನ್ನನ್ನು ಇಂದು ಪ್ರಾಧ್ಯಾಪಕನನ್ನಾಗಿ ರೂಪುಗೊಳ್ಳಲು ಪ್ರೇರೇಪಿಸಿದವು.
ಆದ್ದರಿಂದ ನಾವು ಜೀವನದಲ್ಲಿ ಮುಂದೊಂದು ಉದಾತ್ತವಾದ ಗುರಿ ಮತ್ತು ಹಿಂದೊಬ್ಬ ಮಹಾನ್ ಗುರು ವನ್ನು ಹೊಂದಬೇಕು. ಆ ಗುರು ತೋರಿದ ಮಾರ್ಗದಲ್ಲಿ ಮುನ್ನಡೆಯುತ್ತ ಗುರಿ ಸಾಧನೆಯತ್ತ ಹೆಜ್ಜೆ ಹಾಕಿದಾಗ ಕಂಡ ಕನಸು ನನಸಾಗಲು ಅಥವಾ ಗುರಿ ತಲುಪಲು ಸಹಕಾರಿಯಾಗುತ್ತದೆ. ಒಂದು ವೇಳೆ ಕೆಲವು ಸಲ ನಾವು ಮಾಡುವ ಅಥವಾ ಕೈಗೊಳ್ಳುವ ಕೆಲಸ-ಕಾರ್ಯಗಳಲ್ಲಿ ಯಾವುದೇ ಸೋಲು, ವೈಫಲ್ಯ, ಅಥವಾ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬಾರದೇ ಹೋದಾಗ ನಮ್ಮ ಸುತ್ತಮುತ್ತಲಿನ ಜನರು ಕಾರ್ಯದ ಬಗ್ಗೆ ಏನು ಗೊತ್ತಿರದಿದ್ದರೂ ಸುಮ್ಮನೆ ಹೀಗೆ ಆಗಬಾರದಿತ್ತು, ಹಾಗೆ ಮಾಡಬಾರದಿತ್ತು, ಹೀಗೆ ಮಾಡಬೇಕಿತ್ತು, ಈ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಹಾಗೂ ನಿನ್ನಿಂದ ಸಾಧ್ಯವಿಲ್ಲ, ಅದು ಆಗುವುದಿಲ್ಲ, ಅಸಾಧ್ಯ ಎಂಬಂತೆ ತಮ್ಮ ಮನಸ್ಸಿಗೆ ಬಂದಂತೆ ಮೂಗಿನ ನೇರಕ್ಕೆ ಮಾತಾಡುತ್ತಾರೆ. ಇದರಿಂದ ನಮ್ಮಲ್ಲಿ ನಕಾರಾತ್ಮಕ ಮನೋಭಾವನೆಯನ್ನು ಬಿತ್ತುವಂತಹ ಸನ್ನಿವೇಶಗಳನ್ನು ನಿರ್ಮಾಣ ಮಾಡುತ್ತಾರೆ. ಅದಕ್ಕಂತಲೇ ಡಿ.ವ್ಹಿ.ಗುಂಡಪ್ಪ ಅವರ “ಬದುಕು ಕ್ರಿಕೆಟ್ ಆಟವಿದ್ದಂತೆ. ಸುತ್ತಲೂ ನಿಂತವರು ನಮ್ಮವರಂತೆಯೇ ಕಂಡರೂ ಅವರು ನಮ್ಮ ಸೋಲಿಗಾಗಿಯೇ ಕಾದು ಕುಳಿತಿರುತ್ತಾರೆ ಅನ್ನೋದು ಸತ್ಯ” ಎಂಬ ಮಾತಿನಂತೆ ನಮ್ಮ ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರು ಮತ್ತು ಸುತ್ತಮುತ್ತಲಿನ ಜನ ನಾವು ಯಾವುದೇ ಕಾರ್ಯ ಕೈಗೊಳ್ಳುವಾಗ ಏನಾದರೂ ಎಡವಿದರೆ ಆಗ ನಮ್ಮನ್ನು ಹುರುದುಂಬಿಸಿ, ಪ್ರೋತ್ಸಾಹಿಸುವುದಿಲ್ಲ. ಬದಲಾಗಿ ನಮ್ಮನ್ನು ಅಸ್ಥಿರಗೊಳಿಸಲು ಹಾಗೂ ನಮ್ಮಲ್ಲಿ ಋಣಾತ್ಮಕವಾದ ಭಾವನೆಗಳನ್ನು ಬಿಂಬಿಸುತ್ತಿರುತ್ತಾರೆ.

ನಾನು ಆಗತಾನೆ ಸ್ನಾತಕೋತ್ತರ ಪದವಿ ಮುಗಿಸಿ ಶಿಕ್ಷಕ ವೃತ್ತಿಗೆ ಸೇರಿದಾಗ ನನ್ನ ಸಂಬಳ ಕೇವಲ ತಿಂಗಳಿಗೆ ಹನ್ನೆರಡು ನೂರು ರೂಪಾಯಿಗಳು ಮಾತ್ರ. ನಾನು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು ಸಂಬಳಕ್ಕಾಗಲ್ಲ ಹೊರತು ನಾನು ನನ್ನ ಗುರುವಿನಂತೆ ಮಕ್ಕಳಿಗೆ ನಿಸ್ವಾರ್ಥ ಮನೋಭಾವನೆಯಿಂದ ವಿದ್ಯಾದಾನ ಮಾಡಬೇಕೆಂಬುದಾಗಿತ್ತು. ಆದರೆ ನನ್ನ ಸಂಬಂಧಿಕರೊಬ್ಬರು ನನಗೆ ಈಗಿನ ಕಾಲದಲ್ಲಿ ಒಂದು ಹೆಣ್ಣಾಳು ತಿಂಗಳಿಗೆ ಪಡೆಯುವಷ್ಟು ಕನಿಷ್ಠ ಮಟ್ಟದ ಸಂಬಳ ಪಡೆದು ಯಾಕೆ ಶಿಕ್ಷಕ ವೃತ್ತಿಯನ್ನು ಮಾಡುತ್ತೀಯಾ? ಇದನ್ನು ಬಿಟ್ಟು ಬೇರೆ ಯಾವುದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಬಾರದೇ? ಎಂಬ ಋಣಾತ್ಮಕ ಭಾವನೆ ಬಿತ್ತಿ ನನ್ನ ಅವಮಾನಿಸಿದರು. ಆ ಒಂದು ಘಟನೆಯು ಇಂದಿಗೂ ನನ್ನ ಮನದ ಪಟಲದಲ್ಲಿ ಬಂದು ಹೋಗುತ್ತದೆ. ಆದರೆ ನಾನು ಅದನ್ನು ಅವಮಾನವೆಂದು ತಿಳಿಯದೇ ಸಕಾರಾತ್ಮಕವಾಗಿ ತೆಗೆದುಕೊಂಡೆ.
ಮೊದಲು ನಾವು ಮಾಡುವ ಕೆಲಸ-ಕಾರ್ಯ, ಹಾಕಿಕೊಂಡ ಗುರಿಯ ಸಾಧನೆಯತ್ತ ಲಕ್ಷ್ಯ ವಹಿಸಬೇಕು. ನಮ್ಮಲ್ಲಿರುವ ಶಕ್ತಿ-ಸಾಮರ್ಥ್ಯಗಳೆಲ್ಲವನ್ನು ಅರಿತು ನಾನು ಸಾಧಿಸಬಲ್ಲನೆಂಬ ಅಚಲವಾದ ನಂಬಿಕೆಯಿಂದ ಯಶಸ್ಸಿನತ್ತ ಅಣಿಯಾಗಬೇಕು.. ಯಾರಾದರೂ ನಕಾರಾತ್ಮಕವಾಗಿ ನಮ್ಮ ಕಾರ್ಯದ ಬಗ್ಗೆ ಹೀಯಾಳಿಕೆ, ತೆಗಳಿಕೆ, ಅಪಹಾಸ್ಯ, ಹಿಂದೆ ಮಾತನಾಡುವವರ ಅಥವಾ ನಿಂದಕರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳಬೇಡಿ. ಅವರ ಮಾತಿನಿಂದ ಮನಸ್ಸಿಗೆ ನೋವುಂಟಾಗಬಹುದು ಹಾಗೂ ಒಂದೊಮ್ಮೆ ಕೆಲಸ-ಕಾರ್ಯದಲ್ಲಿ ಯಶ ಕಂಡಾಗ ಅಥವಾ ಗುರಿ ತಲುಪುವ ವೇಳೆಗೆ ಪಡೆದ ನಮಗೆ ಸಂತೋಷ-ಖುಷಿ ಇಲ್ಲವಾಗುತ್ತದೆ. ಆ ಪರೀಕ್ಷೆ ಅಥವಾ ಶೋಧನೆಗಳಿಂದ ಜೀವನ ಬಿಡುಗಡೆಯಾದರೆ ಸಾಕು ಎಂಬ ಭಾವ ನಮ್ಮ ಮನದಲ್ಲಿ ಬರುತ್ತದೆ. ಹಾಗೆಂದ ಮಾತ್ರಕ್ಕೆ ನಮ್ಮ ಜೀವನದ ಖುಷಿಯ ಸಂತಸದ ಕ್ಷಣಗಳನ್ನು ಸಂಭ್ರಮಿಸುವದು ತಪ್ಪಲ್ಲ.

ನನ್ನನ್ನು ಅವಮಾನಿಸಿದ ಆ ಘಟನೆಯೇ ನನ್ನ ಜೀವನದ ದಿಕ್ಕನ್ನೇ ಬದಲಿಸಿತು. ಇಂದು ನಾನು ಸರಕಾರಿ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ನನ್ನ ಗುರುವು ತೋರಿದ ಸನ್ಮಾರ್ಗದತ್ತ ಸಾಗುತ್ತಾ ಕಷ್ಟದಿಂದ ಮೇಲೆ ಬಂದ ನನ್ನ ಜೀವನದಂತೆಯೇ ನನ್ನ ವಿದ್ಯಾರ್ಥಿಗಳ ಜೀವನವೆಂದು ಅರಿತು ಶಿಕ್ಷಣ, ವಿದ್ಯಾದಾನ ನೀಡುವ ಕಾರ್ಯದಲ್ಲಿ ಅರಿವೇ ಗುರು ಎಂದು ತಿಳಿದು ಸರಸ್ವತಿಯ ಆರಾಧಕನಾಗಿದ್ದೇನೆ. ಹೀಗೆ ಬದುಕು-ಜೀವನವೆನ್ನುವುದು ಒಂದು ಬಾಕ್ಸಿಂಗ್ ರಿಂಗ ಇದ್ದಂತೆ. ಇಲ್ಲಿ ನೀವು ಕೆಳಗೆ ಬಿದ್ದೊಡನೆ ಯಾರೂ ಸೋಲನ್ನು ಘೋಷಿಸುವಂತಿಲ್ಲ. ಕೆಳಗೆ ಬಿದ್ದೊಡನೆ ಅಥವಾ ಸೋತಾಗ ಧೃತಿಗೆಡದೆ ಮೇಲೆದ್ದು ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಮುನ್ನಡೆದರೆ ಜಯ ನಿಮ್ಮದಾಗುತ್ತದೆ. ಆದ್ದರಿಂದ ನಾವು ನಮ್ಮ ಜೀವನವನ್ನು ಚೆನ್ನಾಗಿ ಅರ್ಥೈಸಿಕೊಂಡು ಬದುಕಬೇಕು. ಈಸಬೇಕು ಇದ್ದು ಜಯಿಸಬೇಕು ಎಂಬ ನಾಣ್ಣುಡಿಯಂತೆ ಒಂದೊಂದು ಹೆಜ್ಜೆ ಇಡುವಾಗಲೂ ಬಹಳ ಜಾಗರೂಕತೆಯಿಂದ, ಜಾಣ್ಮೆಯಿಂದ ಮತ್ತು ಎಚ್ಚರಿಕೆಯ ನಡೆ ನಮ್ಮದಾಗಬೇಕು. ನಾವು ಜಗತ್ತನ್ನು ನೋಡುವ ದೃಷ್ಟಿಕೋನದಂತೆ ಜನ-ಸಮಾಜ-ಇತರರು ಇಡೀ ಜಗತ್ತು ನೋಡುತ್ತಿರುತ್ತದೆ. ನಾವು ಯಶಸ್ಸು ಗಳಿಸಿದಾಗ ಸಮಾಜದಲ್ಲಿ ನಮ್ಮನ್ನು ಮೆಚ್ಚಿ ಬೆನ್ನುತಟ್ಟಿ ಪ್ರೇರೇಪಣೆ ಮತ್ತು ಪ್ರೋತ್ಸಾಹ ನೀಡುವಂತಹ ಜನರಿಗಿಂತ ನೋಡಿ ನಗುವವರೇ ಹೆಚ್ಚು. ಆದ್ದರಿಂದ ನಾವು ಯಾವುದೇ ಹೊಗಳಿಕೆ, ಮುಖಸ್ತುತಿ, ಅಪಹಾಸ್ಯ, ಹೀಯಾಳಿಕೆ ಅಥವಾ ಗೇಲಿ ಮಾಡಲಿ ನಮ್ಮ ಬದುಕು ನಮಗೆ ಮುಖ್ಯವಾಗಿರಬೇಕು.
ನಮ್ಮನ್ನೂ ಕುರಿತಾದ ಸಮಾಜದ ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳು ಎನೇ ಇರಲಿ, ಅವುಗಳಿಗೆ ಹಿಗ್ಗದೇ, ತಗ್ಗದೇ ನಾವು ನಮ್ಮ ಮುಂದಿನ ಗುರಿ ಮತ್ತು ಸಾಗಬೇಕಾದ ಯಶಸ್ಸಿನ ಪಯಣದತ್ತ ಸಾಗಬೇಕು. ನಮ್ಮನ್ನು ನೋಡಿ ಜನ ನಾಚುವಂತೆ ನಮ್ಮ ಬದುಕನ್ನು ಸಾಗಿಸಬೇಕು. ಕಬೀರದಾಸರು ಹೇಳಿದಂತೆ, “ನಿಮ್ಮ ದಾರಿಯಲ್ಲಿ ಮುಳ್ಳು ಚೆಲ್ಲಿದವರ ದಾರಿಯಲ್ಲಿ ಹೂ ಚೆಲ್ಲಿ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅಂದರೆ ನಮ್ಮ ಸಾಧನೆಯ ಪಯಣದಲ್ಲಿ ಸಮಸ್ಯೆಗಳು ಎದುರಾದಾಗ ನಕ್ಕು ಹೀಯಾಳಿಸಿದ, ಅಪಹಾಸ್ಯ ಮಾಡಿದಜನರು ನಾಚುವಂತೆ ನಮ್ಮ ಬದುಕನ್ನು ಅವರೆಲ್ಲರಿಗೂ ಮಾದರಿ, ಆದರ್ಶಮಯ, ಪ್ರೇರೇಪಣಾತ್ಮಕ ವ್ಯಕ್ತಿ-ಶಕ್ತಿಯಾಗಿ, ಸಾಧಕರಾಗಿ ಮತ್ತು ಇನ್ನೊಬ್ಬರಿಗೆ ಅನುಕರಣೀಯವಾಗುವಂತೆ ಮತ್ತು ತಾತ್ವಿಕ ನೆಲೆಗಟ್ಟಿನ ಮೇಲೆ ನಡೆಸಬೇಕು. ಇಂತಹ ಬದುಕಿಗಾಗಿ ಒಂದಿಷ್ಟು ಛಲ, ಸ್ವಾಭಿಮಾನ ಮತ್ತು ಸಾಧಿಸಿಯೇ ತೀರುತ್ತೇನೆಂಬ ಹಠ ಎಲ್ಲವೂ ಬೇಕು. ನಮ್ಮನ್ನು ಕಂಡು ಅಪಹಾಸ್ಯ-ಅವಮಾನಿಸುವವರ ಬಗ್ಗೆ ತಲೆಕೆಡಿಸಿಕೊಳ್ಳದೇ ನಮ್ಮ ಗುರಿಯ ಸಾಧನೆಯತ್ತ ದೃಢತೆಯಿಂದ ಮುಂದೆ ಸಾಗಬೇಕು ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವೆಂಬುದೇ ನನ್ನ ಆಬಿಪ್ರಾಯ.


