ಲೇಖನ
– ಬಸವರಾಜ್ ಹೂಗಾರ್
ನಿಕಟ ಪೂರ್ವ ಜಿಲ್ಲಾಧ್ಯಕ್ಷರು
ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ
ವಿಜಯಪುರ ಜಿಲ್ಲೆ
ಮೊ: 9740207097
ಉದಯರಶ್ಮಿ ದಿನಪತ್ರಿಕೆ
ಕೇರಳದ ಚುನಾವಣಾ ರಾಜಕೀಯದಲ್ಲಿ ಈ ಬಾರಿ ಒಂದು ಮಹತ್ವದ ಸಂದೇಶ ಸ್ಪಷ್ಟವಾಗಿ ಮೂಡಿಬಂದಿದೆ. ವರ್ಷಗಳಿಂದ ಒಂದೇ ವಂಶ, ಒಂದೇ ಗುಂಪು, ಒಂದೇ ಚಿಂತನೆಗೆ ಸೀಮಿತವಾಗಿದ್ದ ಕೇರಳ ರಾಜಕೀಯಕ್ಕೆ ಬಿಜೆಪಿ ಯುವಶಕ್ತಿಯ ಮೂಲಕ ಸವಾಲು ಹಾಕಿದೆ. ಇದು ಕೇವಲ ಚುನಾವಣಾ ಪ್ರಯೋಗವಲ್ಲ; ಇದು ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸುವ ಕ್ರಾಂತಿಕಾರಿ ಹೆಜ್ಜೆ.
ಬಿಜೆಪಿ ಯಾವತ್ತೂ ಹೇಳುತ್ತಾ ಬಂದಿರುವ “Party With Difference” ಎಂಬ ಮಾತು ಈ ಬಾರಿ ಕೇವಲ ಘೋಷಣೆಯಾಗಿರಲಿಲ್ಲ ಅದು ಕಾರ್ಯರೂಪಕ್ಕೆ ಬಂದಿದೆ. ರಾಜಕೀಯ ಅನುಭವವೇ ಇಲ್ಲದ, ಸರಳ ಕುಟುಂಬಗಳಿಂದ ಬಂದ ಯುವಕ ಯುವತಿಯರಿಗೆ, ಸಾಮಾನ್ಯ ಜನರ ನಡುವೆ ಬದುಕು ಕಟ್ಟಿಕೊಂಡ ಸಹೋದರ ಸಹೋದರಿಯರಿಗೆ ಟಿಕೆಟ್ ನೀಡುವ ಮೂಲಕ, ಬಿಜೆಪಿ ಕೇರಳ ಒಂದು ಸ್ಪಷ್ಟ ಸಂದೇಶ ನೀಡಿದೆ.
ರಾಜಕೀಯವು ಸಿರಿವಂತರ ಸ್ವತ್ತಲ್ಲ, ಅದು ಸಾಮಾನ್ಯ ಕಾರ್ಯಕರ್ತನ ಸೇವೆಯ ವೇದಿಕೆ.
ಇತರ ಪಕ್ಷಗಳು ಗೆಲುವಿನ ಲೆಕ್ಕಾಚಾರಕ್ಕೆ ಮಾತ್ರ ಸೀಮಿತಗೊಂಡಾಗ, ಬಿಜೆಪಿ ಭವಿಷ್ಯದ ನಾಯಕತ್ವವನ್ನು ಸೃಷ್ಟಿಸುವ ಧೈರ್ಯ ತೋರಿಸಿದೆ. ಗೆಲುವಿಲ್ಲದಿದ್ದರೂ ಹೋರಾಟವೇ ದೊಡ್ಡ ಸಾಧನೆ ಎಂಬುದನ್ನು ಈ ಯುವ ಅಭ್ಯರ್ಥಿಗಳು ಸಾಬೀತುಪಡಿಸಿದ್ದಾರೆ. ಅವರ ಹೋರಾಟ, ಅವರ ಉತ್ಸಾಹ, ಅವರ ಪ್ರಾಮಾಣಿಕತೆ ಇವೆಲ್ಲವೂ ನಾಳೆಯ ಕೇರಳದ ರಾಜಕೀಯದ ಬೀಜಗಳು.
ಈ ಚುನಾವಣೆಯಲ್ಲಿ ಕಂಡುಬಂದ ಸಂಭ್ರಮವೂ ವಿಭಿನ್ನವಾಗಿತ್ತು. ಅತಿರೇಕದ ವಿಜಯೋತ್ಸವವಲ್ಲ, ಆದರೆ ಹೋರಾಟದ ಹೆಮ್ಮೆ, ನಾಳೆಯ ವಿಶ್ವಾಸ ಮತ್ತು ಯುವಚೇತನದ ಉರಿತ ಎಲ್ಲೆಡೆ ಕಂಡುಬಂತು. ವಿಶೇಷವಾಗಿ ಮಹಿಳಾ ಯುವಕರಿಗೆ ನೀಡಲಾದ ಅವಕಾಶ, ಕೇರಳ ರಾಜಕೀಯದಲ್ಲಿ ಬಿಜೆಪಿ ತರುತ್ತಿರುವ ಬದಲಾವಣೆಯ ಸ್ಪಷ್ಟ ಸಾಕ್ಷಿ.
ಇಂದು ಕೇರಳದಲ್ಲಿ ಬಿಜೆಪಿ ಸ್ಥಾನಗಳ ಸಂಖ್ಯೆಯಲ್ಲಿ ಸೀಮಿತವಾಗಿರಬಹುದು. ಆದರೆ ಚಿಂತನೆ, ಸಂಘಟನೆ ಮತ್ತು ಯುವಶಕ್ತಿಯಲ್ಲಿ ಬಿಜೆಪಿ ದಿನೇದಿನೇ ಬಲಿಷ್ಠವಾಗುತ್ತಿದೆ. ಇದು ತಾತ್ಕಾಲಿಕ ರಾಜಕೀಯವಲ್ಲ ಇದು ದೀರ್ಘಕಾಲದ ಪರಿವರ್ತನೆಯ ಆರಂಭ.
ಇಂತಹ ಹತ್ತಾರು ಪ್ರಯತ್ನಗಳ ಮೂಲಕವೇ ಬಿಜೆಪಿ ತನ್ನನ್ನು ತಾನು “ಪಾರ್ಟಿ ವಿತ್ ಡಿಫರೆನ್ಸ್” ಎಂದು ಸಾಬೀತುಪಡಿಸುತ್ತಾ ಬಂದಿದೆ. ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ, ಯುವಕರಿಗೆ ವಿಶ್ವಾಸ, ಮಹಿಳೆಯರಿಗೆ ನಾಯಕತ್ವ ಈ ಮೌಲ್ಯಗಳೇ ಬಿಜೆಪಿಯನ್ನು ಇತರ ಪಕ್ಷಗಳಿಂದ ಭಿನ್ನವಾಗಿಸುತ್ತವೆ.
ಈ ಕಾರಣಕ್ಕೇ ನಾವು ಬಿಜೆಪಿ ಕಾರ್ಯಕರ್ತರಾಗಿದ್ದಕ್ಕೆ ಹೆಮ್ಮೆಪಡುತ್ತೇವೆ.
ಈ ಕಾರಣಕ್ಕೇ ಬಿಜೆಪಿ ಕೇವಲ ಪಕ್ಷವಲ್ಲ ಅದು ಒಂದು ಚಳವಳಿ.


