ಭಾವರಶ್ಮಿ
ಲೇಖನ
– ರಶ್ಮಿ ಕೆ. ವಿಶ್ವನಾಥ್
ಮೈಸೂರು
ಉದಯರಶ್ಮಿ ದಿನಪತ್ರಿಕೆ
“ಗುರುರ್ ಬ್ರಹ್ಮ ಗುರುರ್ ವಿಷ್ಣು ಗುರುರ್ ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ “
ಇದರ ಅರ್ಥ
“ಗುರುವು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಾಕಾರವಾಗಿದ್ದು, ಸ್ವತಃ ಪರಬ್ರಹ್ಮನೇ ಆಗಿರುವ ಗುರು ಅಜ್ಞಾನವೆಂಬ ಕತ್ತಲಿನಿಂದ ಜ್ಞಾನವೆಂಬ ಬೆಳಕಿನೆಡೆಗೆ ಕೊಂಡೊಯುತ್ತಾನೆ” ಎಂಬುದಾಗಿದೆ. ಅಂದರೆ ಶಿಕ್ಷಕ ಶಿಕ್ಷಣದ ಮುಖ್ಯಭಾಗ ಎಂಬುದನ್ನು ಮರೆಯುವಂತಿಲ್ಲ.
ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲು ನಿಯೋಜನೆಗೊಂಡ ಎಲ್ಲರೂ ಔಪಚಾರಿಕವಾಗಿ ಶಿಕ್ಷಕರೆ. ಅದನ್ನು ಅವರು ಮಾಡಿಯೇ ಮಾಡುತ್ತಾರೆ. ಏಕೆಂದರೆ ಅಲ್ಲೊಂದು ಕಟ್ಟುಪಾಡು, ಬದ್ಧತೆ ಇರುತ್ತದೆ. ಆದರೆ ಗುರುವಾಗುವ ಹಂತ ಬೆಣ್ಣೆಯಿಂದ ತುಪ್ಪವಾದಂತೆ. ತುಪ್ಪದ ಶುದ್ಧತೆ, ಅದನ್ನು ಕೆಡಲು ಬಿಡುವುದಿಲ್ಲ.
ಸ್ವಸ್ಥ ಸಮಾಜದ ನಿರ್ಮಾಣ ಉತ್ತಮ ಶಿಕ್ಷಕರ ಸಮರ್ಪಣಾಭಾವದಿಂದ ಸಾಧ್ಯ ಎಂಬುದನ್ನು ಯಾವ ಶಿಕ್ಷಕರೂ ಮರೆಯುವಂತಿಲ್ಲ.

ಹಿಂದೆ ಮರದ ಕೆಳಗೆ ಪಾಠಮಾಡುವ ʼಗುರುಕುಲʼ ವ್ಯವಸ್ಥೆ ಇತ್ತು. ಇಂದು ʼಗುರುಕುಲʼ ಎಂಬ ಹೆಸರಿನ ಶಾಲಾ-ಕಾಲೇಜುಗಳು ಇವೆ. ಮೊದಲಿಗೆ ಮರದ ನೆರಳಿನಲ್ಲಿ ಗುರುಕುಲ ಇತ್ತು. ಇಂದು ಗುರುಕುಲದ ಕಟ್ಟಡದ ನೆರಳಿನಲ್ಲಿ ಬೋನ್ಸಾಯ್ ಮರ ಇರುತ್ತದೆ ಅಷ್ಟೆ. ಶಿಕ್ಷಣ ಪದ್ಧತಿಯೂ ಹೆಚ್ಚು ಕಡಿಮೆ ಹೀಗೆಯೆ. ಮೊದಲಿಗೆ ಗುರುಗಳಿಗೆ ಶಿಷ್ಯರು ಹೆದರುತ್ತಿದ್ದರು. ಇಂದು ಶಿಷ್ಯರ ಬೆದರಿಕೆಗೆ ಗುರುಗಳೇ ಹೆದರಬೇಕಾಗಿದೆ.
ಹೇಳುವುದು, ಕಾರ್ಯಕ್ರಮಗಳನ್ನು ರೂಪಿಸುವುದು ಬೇರೆ. ಅದನ್ನು ಜಾರಿಗೆ ತರುವುದು ಪಾಲಿಸುವುದು, ಪಾಲಿಸುವುದಕ್ಕೆ ಸಹಕರಿಸುವುದು ಬೇರೆ.
2020ನೇ ಇಸವಿಯಲ್ಲಿ “ರಾಷ್ಟ್ರೀಯ ಶಿಕ್ಷಣ ನೀತಿ (NEP)”ಯನ್ನು ಜಾರಿಗೆ ತರಲಾಯಿತು. ಇದರ ಪ್ರಕಾರ ವಿದ್ಯಾರ್ಥಿಗಳು ಅವರಿಚ್ಚೆಯ ವಿಷಯವಸ್ತುಗಳನ್ನು ಆಯ್ಕೆ(Open elective) ಮಾಡಿಕೊಂಡು ಓದಬಹುದಾಗಿತ್ತು. ಆದು ಒಳ್ಳೆಯದೆ ವಿದ್ಯಾರ್ಥಿಗಳಿಗೆ ಅವರು ಬಯಸುವ ವಿಷಯದಲ್ಲಿ ಜ್ಞಾನಸಂಪಾದನೆ ಮಾಡಲು ಅವಕಾಶ ಸಿಗುತ್ತದೆ. ಆದರೆ ವಿದ್ಯಾರ್ಥಿಗಳು ವಿವಿಧ ವಿಷಯಗಳನ್ನು ಆಯ್ಕೆ ಮಾಡಿಕೊಂಡಾಗ, ಒಂದು ಕ್ಲಾಸಿನಲ್ಲಿರಬೇಕಾದ ವಿದ್ಯಾರ್ಥಿಗಳು ಹಲವಾರು ಸಬ್ಜೆಕ್ಟ್ ಗಳಲ್ಲಿ ಹಂಚಿಹೋಗುತ್ತಾರೆ. ಅಂತಹ ಸಂದರ್ಭಗಳಲ್ಲಿ ಕಾಲೇಜುಗಳಲ್ಲಿ ಪಾಠ ಮಾಡಲು ಪ್ರತಿಯೊಂದು ವಿಷಯ(ಸಬ್ಜೆಕ್ಟ್)ಕ್ಕೂ ಒಬ್ಬೊಬ್ಬ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದಿಲ್ಲ. ಜೊತೆಗೆ NEPಯ ಪ್ರಕಾರ ಒಂದೇ ವಿದ್ಯಾರ್ಥಿ ಒಂದೊಂದು ವರ್ಷಕ್ಕೂ ಒಂದೊಂದು ವಿಷಯವನ್ನು ತೆಗೆದುಕೊಳ್ಳಬಹುದು ಎಂದಾದರೆ, ಆ ವಿದ್ಯಾರ್ಥಿ ಎಲ್ಲಾ ವಿಷಯಗಳಲ್ಲು ಜ್ಞಾನಸಂಪಾದನೆ ಮಾಡುವುದು ನಿಜವೇ ಆದರು, ಯಾವುದಾದರು ಒಂದೇ ವಿಷಯದಲ್ಲಿ ಅಷ್ಟಾಗಿ ಪರಿಣಿತರಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರಿಗೆ ಕೆಲಸ ಕೊಡಬೇಕಾದವರೂ ಸಹ ಆತ/ಆಕೆಗೆ ಯಾವ ಕೆಲಸವನ್ನು ಕೊಡಬೇಕು ಜೊತೆಗೆ ಅವರ ಕೆಲಸಕ್ಕೆ ಯಾವ ಸಬ್ಜೆಕ್ಟ್ ಓದಿರುವವರನ್ನು ತೆಗೆದುಕೊಳ್ಳಬೇಕು ಎಂಬ ಗೊಂದಲ ಶುರುವಾಗುತ್ತದೆ. ಹಾಗಾಗಿ ಅಂತಹ ವಿದ್ಯಾರ್ಥಿಗಳು ಕೆಲಸ ಗಿಟ್ಟಿಸಿಕೊಳ್ಳುವುದರಲ್ಲು ಸಹ ವಿಫಲವಾಗಬಹುದು.
ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು SEP ಜಾರಿಗೆ ಬಂದಿತು. CBCS, NEP, SEP,… ಹೀಗೆ ಮುಂದುವರೆಯುತ್ತಾ ಹೋದರೆ, ಶಿಕ್ಷಕರು ಪದೇ ಪದೇ ಆಯಾ ಸಿಲಬಸ್ ಕಲಿಯುತ್ತಲೇ ಹೋಗಬೇಕಾಗುತ್ತದೆ. ವಿದ್ಯಾರ್ಥಿಗಳೂ ಸಹ ಗೊಂದಲಗೊಳ್ಳುತ್ತಾರೆ.

ಇವಾಗ ಜಾರಿಯಲ್ಲಿರುವ SSLC ಮತ್ತು PUCಗೆ 3 ಪರೀಕ್ಷೆಗಳು ಎನ್ನುವ ನಿಯಮ ಬೇಕಿತ್ತಾ? ಹೀಗಾದರೆ ಪರೀಕ್ಷೆ ಎಂಬ ಗಾಂಭೀರ್ಯತೆ (ಸೀರಿಯಸ್ನೆಸ್) ವಿದ್ಯಾರ್ಥಿಗಳಿಗೂ ಇರುವುದಿಲ್ಲ, ಮೇಲ್ವಿಚಾರಕರಿಗೂ (ಇನ್ವಿಜಿಲೇಟರ್ಸ್) ಇರುವುದಿಲ್ಲ, ಮೌಲ್ಯಮಾಪಕರಿಗೂ ಇರುವುದಿಲ್ಲ. ಯಾವುದು ಹೇಗಿರಬೇಕೋ ಹಾಗಿದ್ದರೇನೆ ಚೆನ್ನ. ಮೊದಲೇ ಇಂಜಿನಿಯರಿಂಗ್ ಓದುವ ಕೆಲವು ಡಿಗ್ರಿ ವಿದ್ಯಾರ್ಥಿಗಳಿಗೂ ಕೂಡಾ ಒಂದು ವಿನಂತಿ(ರಿಕ್ವೆಸ್ಟ್ ಲೆಟರ್) ಪತ್ರವನ್ನು ಸರಿಯಾಗಿ ಬರಿಯಲಿಕ್ಕೆ ಬರುವುದಿಲ್ಲ. ಅದಿರಲಿ ‘Principal’ ಎಂಬ ಒಂದು ಪದವನ್ನೂ ಸಹ ಸರಿಯಾಗಿ ಬರಿಯಲಿಕ್ಕೆ ಬರದೇ ಇರುವ ಕೆಲವು ವಿದ್ಯಾರ್ಥಿಗಳಿದ್ದಾರೆ. ಇಂತಹ ಶೋಚನೀಯ ಸ್ಥಿತಿ ಇರುವಂತಹ ಸಂದರ್ಭದಲ್ಲಿ ಇರುವವರನ್ನೆಲ್ಲ ಪಾಸು ಮಾಡಬೇಕು ಎಂಬ ೩ ಪರೀಕ್ಷೆ ಪದ್ಧತಿ ಎಷ್ಟು ಸರಿ? ಅಂದರೆ ಪದವಿಗೋಸ್ಗರ ಮಾತ್ರ ಓದಿದರೆ ಸಾಕಾ? ಗುಣಮಟ್ಟ ಎನ್ನುವುದು ಬೇಡವೇ?
ಮೈಸೂರು ದಸರಾ ನಾಡಿದ್ದು ಎನ್ನುವಾಗಲೂ ಇನ್ನೂ ಮೈಸೂರಿನ ಕೆಲವು ರಸ್ತೆಗಳಿಗೆ ಡಾಂಬರೀಕರಣ ನಡೆಯುತ್ತಿರುತ್ತದೆ. ಹಾಗೆ ಸರ್ಕಾರವೇ ಬಿಡುಗಡೆ ಮಾಡುವ ವೇಳಾಪಟ್ಟಿಯ ಪ್ರಕಾರವೇ ಕಾಲೇಜುಗಳು ಮೇ – ಜೂನ್ ನಲ್ಲಿ ಪ್ರಾರಂಭವಾದರೂ ಕೂಡಾ ಜೂಲೈ – ಆಗಸ್ಟ್ ಮುಗಿದರೂ ಕೆಲವು ಪಠ್ಯಪುಸ್ತಕಗಳೇ ಬಂದಿರುವುದಿಲ್ಲ, ಅಂತರ್ಜಾಲ(ಆನ್ಲೈನ್)ದಲ್ಲಿಯೂ ಸಿಗುವುದಿಲ್ಲ. ಹೀಗಾದರೆ ಉಪನ್ಯಾಸಕರು, ಪ್ರಾಧ್ಯಾಪಕರು ಹೇಗೆ ಪಾಠಮಾಡಲು ಸಾಧ್ಯ? ಶಾಲಾ -ಕಾಲೇಜುಗಳ ವೇಳಾಪಟ್ಟಿ ಬಿಡುಗಡೆ ಮಾಡುವ ಸರ್ಕಾರ ಅದಕ್ಕೆ ತಕ್ಕಂತೆ ಪೂರ್ವಭಾವಿಯಾಗಿ ಪಠ್ಯಪುಸ್ತಕಗಳ ವ್ಯವಸ್ಥೆಗಳನ್ನು ಮಾಡುವುದೊಳಿತು. ತನಗೆ ಹೆಸರು ಬರಬೇಕೆಂದೊ ಅಥವಾ ಕೆಲವು ಶೈಕ್ಷಣಿಕ ಯೋಜನೆಗಳಿಂದ ಹೆಚ್ಚು ಹಣ ಸಿಗುತ್ತದೆ ಎಂದೋ ಅಥವಾ ಇನ್ನೇನೋ ಕಾರಣಗಳಿಂದಲೋ ಮನಸೋ ಇಚ್ಚೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವುದರ ಬದಲು, ಅದರ ಆಗುಹೋಗುಗಳನ್ನು ಯೋಚಿಸಿ, ಯೋಜನೆಗಳನ್ನು ಜಾರಿಗೆ ತಂದು, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮೇಲೆ ಅದರ ದುಷ್ಪರಿಣಾಮ ಆಗದಂತೆ ನೋಡಿಕೊಳ್ಳುವುದೊಳಿತು
ರಾಸಾಯನಿಕಯುಕ್ತ ಆಹಾರದಿಂದ ಹಾರ್ಮೋನುಗಳ ವ್ಯತ್ಯಾಸ, ಸಾಮಾಜಿಕ ಜಾಲತಾಣಗಳ ಆಕರ್ಷಣೆ, ಸುಲಭವಾಗಿ ಕೈಗೆಟಕುತ್ತಿರುವ ಸಮಾಜಕಾರಕಗಳ ಹಾವಳಿ, ಪೋಷಕರು ತಮ್ಮ ಕೆಲಸಗಳಲ್ಲೇ ತಮ್ಮನ್ನು ತೊಡಗಿಸಿಕೊಂಡು ಅಲ್ಲಿಯೇ ಹೆಚ್ಚು ಮಗ್ನರಾಗಿರುವುದರಿಂದ ಮಕ್ಕಳ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗದೇ ಇರುವುದು, ಒಬ್ಬರಿಗೊಬ್ಬರು ಪೈಪೋಟಿಯಲ್ಲಿ ಐಷಾರಾಮಿ ಜೀವನದಲ್ಲಿ ತೊಡಗಿಕೊಂಡಿರುವುದು ಇವೇ ಮುಂತಾದ ಕಾರಣಗಳಿಂದಾಗಿ ವಿದ್ಯಾರ್ಥಿಗಳ ಏಕಾಗ್ರತೆ ಕಡಿಮೆಯಾಗಿ, ವಿದ್ಯಾಭ್ಯಾಸದ ಕಡೆ ಕೇಂದ್ರೀಕರಣ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳಿಂದ ಶಿಕ್ಷಕರಾಗಲಿ, ಪೋಷಕರಾಗಲಿ ಗೌರವವನ್ನು ನಿರೀಕ್ಷಿಸಲಾಗದ ಮಟ್ಟಿಗೆ ವಿದ್ಯಾರ್ಥಿವೃಂದ ಬೆಳೆದು ನಿಂತಿದೆ. ಕೆಟ್ಟ ಚೆಟಗಳ ಹಾವಳಿ ಮಿತಿಮೀರುತ್ತಿದೆ. ಸಾಮಾಜಿಕ ಜಾಲತಾಣವನ್ನೇ ಹಾಸುಹೊಕ್ಕು ಮಾಡಿಕೊಂಡು, ಮೋಜುಮಸ್ತಿಯೇ ಜೀವನವೆಂದುಕೊಂಡಿದ್ದಾರೆ.
ಇವುಗಳೆಲ್ಲವನ್ನು ಗಮನದಲ್ಲಿಟ್ಟುಕೊಂಡು, ಈಗಾಗಲೇ ಜಾರಿಯಲ್ಲಿರುವ ಹಲವಾರು ಉತ್ತಮ ಶಿಕ್ಷಣ ನೀತಿಗಳನ್ನು ಹಾಗೆಯೇ ಉಳಿಸಿಕೊಂಡು, ಅದರ ಜೊತೆಗೆ ಇನ್ನಷ್ಟು ರೂಪು ರೇಷೆಗಳನ್ನು ರೂಪಿಸಿ, ಜಾರಿಗೆ ತಂದು ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳಬೇಕಾಗಿದೆ.


