ಉದಯರಶ್ಮಿ ದಿನಪತ್ರಿಕೆ
ಇಂಡಿ: ಸತ್ಯ ಮಾರ್ಗ ಮನುಷ್ಯನನ್ನು ಬದಲಿಸುತ್ತದೆ. ಮನುಷ್ಯನ ನಡೆ ನುಡಿಗಳು ಜೀವನ ವಿಕಾಸಕ್ಕೆ ಅಡಿಪಾಯ. ಸಾಧನೆಯ ಹಾದಿಯಲ್ಲಿ ಎಷ್ಟೇ ಸಂಕಷ್ಟ ಬಂದರೂ ಬಿಡದಿರುವುದೇ ನಿಜವಾದ ಸಾಧನೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ಇಂಡಿ ನಗರದ ಸದಾಶಿವ ನಗರದ ಶಿರಶ್ಯಾಡ ಶಾಖಾ ಮಠದಲ್ಲಿ ನಿರ್ಮಾಣವಾಗುತ್ತಿರುವ ಬಡಮಕ್ಕಳ ಶಿಕ್ಷಣ ಹಾಗೂ ಉಚಿತ ಅನ್ನಪ್ರಸಾದ ಮತ್ತು ವಸತಿ ನಿಲಯದ ಮಹಾಧ್ವಾರದ ಪ್ರಥಮ ಹೊಸ್ತಿಲ (ಶಿಲಾಧ್ವಾರ)ದ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬದುಕು ಸುಖ, ದು:ಖ, ನೋವು-ನಲಿವು, ಮಾನ-ಅಪಮಾನ, ಜಯ-ಅಪಜಯ ಮೊದಲಾದ ದ್ವಂದ್ವಗಳಿAದ ಕೂಡಿದೆ. ಸುಖ ಬಯಸುವುದು ಮನುಷ್ಯನ ಸಹಜ ಗುಣ. ಆದರೆ ಸುಖದ ಬದುಕಿಗೆ ಆಚರಿಸುವ ಮೌಲ್ಯಗಳನ್ನು ಮನುಷ್ಯ ಮರೆಯುತ್ತಿದ್ದಾನೆ. ಅಧಿಕಾರ ಕೀರ್ತಿ ಧನ ಕನಕ ವಸ್ತು ವಾಹನ ಮತ್ತು ದೇಹ ಸೌಖ್ಯಕ್ಕಾಗಿ ಬಡಿದಾಡಿ ಮಡಿದವರೆಷ್ಟೋ ಜನ. ಜಗದ ಜನರಿಗೆ ಬೆಳಕು ತೋರುವ ಜೀವನ ಸಾಗಿಸಿದ ಆಚಾರ್ಯರ ಮತ್ತು ಋಷಿ ಮುನಿಗಳ ಮಾತುಗಳನ್ನು ಯಾರೂ ಮರೆಯುವುದಿಲ್ಲ. ಒಂದು ಒಳ್ಳೇ ಕಾರ್ಯ ಮಾಡಲು ಹೊರಟಾಗ ಅಡೆ ತಡೆಗಳು ಬರುವುದು ಸಹಜ. ಅವುಗಳನ್ನು ಲೆಕ್ಕಿಸದೇ ಮುನ್ನಡೆಯುವುದೇ ಮನುಷ್ಯನ ಧರ್ಮವಾಗಬೇಕು. ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶಗಳಿಲ್ಲದೆ ಬದುಕಿದರೆ ಬದುಕಿಗೆ ಅವಮಾನ ಎಂಬ ಸ್ವಾಮಿ ವಿವೇಕಾನಂದರ ಮಾತು ಸತ್ಯವಾದುದು. ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯ ಸ್ವಾಮಿಗಳು ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಅದ್ಭುತ ಕಾರ್ಯಗಳನ್ನು ಮಾಡುತ್ತಿರುವುದು ಸಂತೋಷದ ಸಂಗತಿ. ಶ್ರೀಗಳವರು ಹಮ್ಮಿಕೊಂಡ ಜನಹಿತ ಎಲ್ಲ ಕಾರ್ಯಗಳಿಗೆ ಶ್ರೀ ಪೀಠದ ಆಶೀರ್ವಾದ ಸದಾ ಇರುತ್ತದೆ ಎಂದರು.
ಸಮಾರಂಭದಲ್ಲಿ ಪಾಲ್ಗೊಂಡ ನೊಣವಿನಕೆರೆ ಡಾ. ಕರಿವೃಷಭ ಶಿವಯೋಗೀಶ್ವರ ಸ್ವಾಮಿಗಳು ಮಾತನಾಡಿ ಆದರ್ಶ ಮೌಲ್ಯಗಳ ಸಂವರ್ಧನೆಗಾಗಿ ಸದಾ ಶ್ರಮಿಸಬೇಕಾಗುತ್ತದೆ. ವೀರಶೈವ ಧರ್ಮದಲ್ಲಿ ಕ್ರಿಯಾಶೀಲ ಬದುಕಿಗೆ ಬಹಳಷ್ಟು ಪ್ರಾಧಾನ್ಯತೆ ಕೊಟ್ಟಿದ್ದಾರೆ. ಶಿರಶ್ಯಾಡ ಶ್ರೀಗಳವರ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಾಜಿ ಸಚಿವ ಮುರುಗೇಶ ನಿರಾಣಿ ಕಷ್ಟಗಳು ಸುಖಾಗಮನದ ಹೆಗ್ಗುರುತು. ಜೀವನದ ಹೂದೋಟದಲ್ಲಿ ಅರಳುವ ಹೂಗಳೆಷ್ಟೋ ಬಾಡುವ ಜೀವಗಳೆಷ್ಟೋ ಹೇಳಲಾಗದು. ಭೌತಿಕ ಸಂಪತ್ತಿಗಿಂತ ಆಧ್ಯಾತ್ಮದ ಜ್ಞಾನ ಸಂಪತ್ತು ಶ್ರೇಷ್ಠ. ಶಿರಶ್ಯಾಡ ಅಭಿನವ ಮುರುಘೇಂದ್ರ ಶಿವಾಚಾರ್ಯರ ಸಾಮಾಜಿಕ ಕಳಕಳಿ ಅವರಲ್ಲಿರುವ ಧರ್ಮ ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದರು. ನೇತೃತ್ವ ವಹಿಸಿದ ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ ಸತ್ಯದ ಜೊತೆ ದೈವ ಶಕ್ತಿ ಇರುತ್ತದೆ. ಮಹಾತ್ಮರಿಗೂ ಸಂಕಷ್ಟಗಳು ತಪ್ಪಿದ್ದಲ್ಲ. ಅವುಗಳನ್ನು ಛಲದಿಂದ ಸಾಧಿಸಿ ಜೀವನದಲ್ಲಿ ಶ್ರೇಯಸ್ಸನ್ನು ಕಂಡಿದ್ದಾರೆ. ಮಹಾ ಗುರುವಿನ ಅನುಗ್ರಹ ಬಲದಿಂದ ಮತ್ತು ಭಕ್ತರ ಸಹಕಾರದಿಂದ ಒಳ್ಳೆಯ ಕಾರ್ಯಗಳು ನಡೆದಿರುವುದು ನಮಗೆ ಆತ್ಮ ಸಂತೃಪ್ತಿ ಉಂಟು ಮಾಡಿದೆ ಎಂದರು. ಕಾರ್ಯಕ್ರಮದಲ್ಲಿ ಶಾಂತೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಕಾಸುಗೌಡ ಈ. ಬಿರಾದಾರ, ಉದ್ದಿಮೆದಾರ ಅನೀಲಪ್ರಸಾದ ಎಂ. ಏಳಗಿ, ಅನಂತ ಜೈನ್, ಮುಖಂಡರಾದ ಮಂಜುನಾಥ ವಂದಾಲ ಸೇರಿದಂತೆ ವಿವಿಧ ಕ್ಷೇತ್ರಗಳ ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ೫೦೦೧ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಸಾರೋಟ ಮೆರವಣಿಗೆಯ ಮೂಲಕ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಸುಮಂಗಲೆಯರು ಜಾನಪದ ಕಲಾ ತಂಡಗಳು ಉತ್ಸವಕ್ಕೆ ಮೆರಗನ್ನು ತಂದ ದೃಶ್ಯ ಅಪೂರ್ವವಾಗಿತ್ತು.

