ಜಯ್ ನುಡಿ:
ಜಯಶ್ರೀ ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ
ತುಂಬಾ ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಕಾರ್ಯದ ಮೇಲೆ ಕೇಂದ್ರೀಕರಿಸುವ ಮೆದುಳಿನ ಸಾಮರ್ಥ್ಯ ಹೆಚ್ಚು ಕಷ್ಟಕರವಾಗಿದೆ. ಒಂದು ಅಧ್ಯಯನದ ಪ್ರಕಾರ ಮೂರು ನಿಮಿಷಕ್ಕೊಮ್ಮೆ ವಿಚಿಲಿತರಾಗುತ್ತಿದ್ದೇವೆ. ತ್ವರಿತವಾಗಿ ನಿಗದಿತ ಸಮಯದಲ್ಲಿ ಗಮನವಿರಿಸಿ ಕೆಲಸ ಮಾಡುವುದು ಒಂದು ದೊಡ್ಡ ಸವಾಲಿನಂತೆ ಕಾಣುತ್ತದೆ. ಅಸಾಧ್ಯವೆಂದು ತೋರುತ್ತದೆ. ಆದಾಗ್ಯೂ ಮನಸ್ಸು ಮಾಡಿದರೆ ಅದೊಂದು ಕಠಿಣ ಕಾರ್ಯವೇನಲ್ಲ. ಅನಗತ್ಯ ವಿಷಯಗಳ ಕಡೆ ಗಮನ ಸೆಳೆಯುವ ಇಷ್ಟೆಲ್ಲ ಸಂಗತಿಗಳು ಇರುವಾಗಲೂ ಮಾಡುವ ಕೆಲಸದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವುದು ಉತ್ತಮ ಅಭ್ಯಾಸದಂತೆ ಬೆಳೆಸಿಕೊಳ್ಳುವುದಕ್ಕೆ ಕೆಲವು ಸಲಹೆಗಳು.
ವಿಚಲಿತರಾಗದಿರಿ
ಹಾಗೆ ನೋಡಿದರೆ ಪ್ರಪಂಚವು ಒಂದು ವಿಚಲಿತ ಸ್ಥಳ. ಹೀಗಾಗಿ ಸಾಮಾನ್ಯವಾಗಿ ಕೆಲಸ ಮಾಡುವಾಗ ಸುತ್ತಮುತ್ತಲ ವಾತಾವರಣವು ನಮ್ಮನ್ನು ವಿಚಲಿತಗೊಳಿಸುತ್ತದೆ. ನೂರಾರು ವಿಷಯಗಳು ಸುತ್ತಮುತ್ತಲೂ ನಡೆಯುತ್ತಿರುತ್ತವೆ. ಆದರೂ ಕೆಲಸದ ಮೇಲೆ ಹೇಗೆ ಗಮನ ಹರಿಸಬೇಕು? ನಿಮ್ಮ ಸಮಯವನ್ನು ವ್ಯರ್ಥ ಮಾಡುವ ನಿಮ್ಮ ಗೆಳೆಯರಿರಬಹುದು ಇಲ್ಲವೇ ಮನೆಯವರಿರಬಹುದು. ಕಛೇರಿಯಲ್ಲಿ ಸಹೋದ್ಯೋಗಿಗಳು ಸೆಲ್ ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ನೋಟಿಫಿಕೇಶನ್‌ಗಳು ಇರಬಹುದು. ಅಂತೆಯೇ ಕಿರಿಕಿರಿಯುಂಟುಮಾಡುವಂತಹ ಅನೇಕ ಅಂಶಗಳು ಗಮನದ ನಷ್ಟಕ್ಕೆ ಕಾರಣವಾಗಬಹುದು. ವಿಚಲಿತ ಸ್ಥಳವು ಇದರಲ್ಲಿ ಯಾವುದೇ ಒಂದನ್ನು ಒಳಗೊಂಡಿದ್ದರೂ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದು ದುರ್ಲಭವೆನಿಸುವುದು.
ಗಮನ ಕೊಡಿ
ನಿಮ್ಮ ಬಗ್ಗೆ ನೀವು ಗಮನ ಕೊಡಿ. ನೀವು ಯಾವಾಗ ಮತ್ತು ಹೇಗೆ ವಿಚಲಿತರಾಗುತ್ತೀರಿ ಎಂಬುದನ್ನು ಗಮನಿಸಲು ಪ್ರಾರಂಭಿಸಿ. ಮೊದಲು ಯಾವ ಆಲೋಚನೆಗಳು ಬರುತ್ತವೆ? ನೀವು ದಣಿದಿದ್ದೀರಾ? ಹಸಿದಿದ್ದೀರಾ? ಬೇಸರಗೊಂಡಿದ್ದೀರಾ? ಆತಂಕಕ್ಕೊಳಗಾಗಿದ್ದೀರಾ? ಇಲ್ಲವೇ ಭಯಗೊಂಡಿದ್ದೀರಾ? ಅಥವಾ ಗೊಂದಲದಲ್ಲಿ ಇರುವಿರಾ? ಎಂಬುದನ್ನು ತಿಳಿದುಕೊಂಡರೆ ಅವುಗಳನ್ನು ಹೊರಗಿಟ್ಟು ಕೆಲಸದ ಮೇಲೆ ಗಮನ ಕೇಂದ್ರೀಕರಿಸಬಹುದು. ಗಮನ ಕೊಡದಿದ್ದರೆ ಕೆಲಸದ ದಕ್ಷತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ನಿಯಮಿತ ವ್ಯಾಯಾಮ ಉತ್ತಮ ನಿದ್ರೆಯೂ ಮುಖ್ಯ. ಧ್ಯಾನವು ಒಂದು ಉತ್ತಮ ಮಾರ್ಗವಾಗಿದೆ. ಏಕೆಂದರೆ ಇದು ಕೇವಲ ನೀವು ಮತ್ತು ನಿಮ್ಮ ಆಲೋಚನೆಗಳನ್ನು ನಿಯಂತ್ರಿಸುತ್ತದೆ. ಒಂದು ಸಮಯದಲ್ಲಿ ಒಂದೇ ಕೆಲಸ ಮಾಡಿ. ಊಟದ ಸಮಯದಲ್ಲಿ ಕೇವಲ ತಿನ್ನಿರಿ. ಅದೇ ಸಮಯದಲ್ಲಿ ಪತ್ರಿಕೆ ಓದಬೇಡಿ. ಅಥವಾ ಇ ಮೇಲ್‌ನ್ನು ಪರಿಶೀಲಿಸಬೇಡಿ. ಶಾಂತವಾದ ಸ್ಥಳವನ್ನು ಹುಡುಕುವ ಅಗತ್ಯತೆಯಿದೆ. ಹಿಡಿದ ಕೆಲಸ ಮುಗಿಯುವವರೆಗೆ ನಿಮ್ಮ ಫೋನ್‌ನ್ನು ಸೈಲೆಂಟ್ ಮೋಡ್‌ನಲ್ಲಿ ಹಾಕಿಬಿಡುವುದು ಉಚಿತ. ನಿಮಗೆ ಅಗತ್ಯವಿದ್ದರೆ ತುರ್ತು ಸಂದೇಶಗಳು ತಲುಪಲು ವ್ಯವಸ್ಥೆಯನ್ನು ಮಾಡಿಕೊಳ್ಳಿ.
ಸ್ಪಷ್ಟ ಗುರಿ ಹೊಂದಿಸಿ
ನಮ್ಮಲ್ಲಿ ಹೆಚ್ಚಿನವರು ಗಮನ ಕಳೆದುಕೊಳ್ಳಲು ಒಂದು ಪ್ರಮುಖ ಕಾರಣವೆಂದರೆ ಸರಿಯಾದ ಯೋಜನೆ ಸ್ಪಷ್ಟ ಗುರಿಯಿಲ್ಲದಿರುವುದು. ‘ನಾನು ಪ್ರತಿದಿನ ಎಂಟು ಗಂಟೆಗಳ ಕಾಲ ಕೆಲಸ ಮಾಡಲಿದ್ದೇನೆ.’ ಎಂದು ಹೇಳುವ ಬದಲು ಸ್ಷಷ್ಟವಾದ ಗುರಿಯನ್ನು ಹೊಂದಿಸಿ. ಪ್ರಮುಖವಾಗಿ ಒಂದು ವಾರದ ಮಾಡಲೇಬೇಕಾದ ಕೆಲಸಗಳನ್ನು ಪಟ್ಟಿ ಮಾಡಿ. ಆದ್ಯತೆಗಳ ಪಟ್ಟಿಯು ಅನವಶ್ಯಕ ಕೆಲಸಗಳನ್ನು ಮಾಡದಿರುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಸುಮ್ಮನೆ ಯಾವ್ಯಾವುದಕ್ಕೋ ಪ್ರತಿಕ್ರಿಯಿಸದಂತೆ ತಡೆಯುತ್ತದೆ. ಕೆಲಸದ ಹಾದಿಯಲ್ಲಿ ಬರುವ ಗೊಂದಲಗಳನ್ನು ನಿವಾರಿಸುತ್ತದೆ. ಪ್ರತಿದಿನ ಬೆಳಿಗ್ಗೆ ನಿಮ್ಮ ಪಟ್ಟಿಯನ್ನು ಪರಿಶೀಲಿಸಿ ಮತ್ತು ಆ ದಿನ ನೀವು ಯಾವ ಕಾರ್ಯಗಳನ್ನು ಸಾಧಿಸಬಹುದು ಎಂಬುದನ್ನು ವಾಸ್ತವಿಕವಾಗಿ ನಿರ್ಧರಿಸಿ. ಅಂತೆಯೇ ಇಂತಿಷ್ಟು ಕೆಲಸಗಳನ್ನು ಇಷ್ಟು ಹೊತ್ತಿಗೆ ಮುಗಿಸಲಿದ್ದೇನೆ ಎಂದು ನಿಗದಿಪಡಿಸಿಕೊಳ್ಳಿ. ಇಲ್ಲದಿದ್ದರೆ ಕೋತಿಯಂಥ ಮನಸ್ಸು ಎಲ್ಲೆಲ್ಲೋ ಹಾರಾಡುತ್ತದೆ. ಚಿಕಾಗೋ ವಿಶ್ವವಿದ್ಯಾಲಯವು ಹರಿವು ಪಡೆಯುವುದು ಹೇಗೆ ಕಾರ್ಯಕ್ಷಮತೆ ಮತ್ತು ಕಲಿಕೆಯ ಮಟ್ಟವನ್ನು ಕೇಂದ್ರೀರರಿಸಲು ಗರಿಷ್ಠಗೊಳಿಸಲು ನಿಮ್ಮ ಸಾಮರ್ಥ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆಂಬುದನ್ನು ವಿವರಿಸುತ್ತದೆ.
ವಿರಾಮವಿರಲಿ
ನೀವು ಇನ್ನು ಮುಂದೆ ಕಾರ್ಯದ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ ಅನಿಸಿದಾಗ ನೀವು ಮಾಡಲೇಬೇಕಾದ ಉತ್ತಮ ಕೆಲಸವೆಂದರೆ ವಿರಾಮ ತೆಗೆದುಕೊಳ್ಳುವುದು. ನಮ್ಮ ಮೆದುಳು ಹೆಚ್ಚು ಗಂಟೆಗಳ ಕಾಲ ಗಮನವನ್ನು ಉಳಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿಲ್ಲ. ಆದ್ದರಿಂದ ಪ್ರತಿ ೬೦ ನಿಮಿಷಗಳ ನಿರಂತರ ಕೆಲಸದ ನಂತರ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಬಿಟ್ಟೂ ಬಿಡದೇ ಕೆಲಸ ಮಾಡುವ ವಿಧಾನ ನಿಮ್ಮ ಕಾರ್ಯದ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ. ಮತ್ತು ನೀವು ಕೆಲಸ ಮಾಡುವಾಗ ನಿಮ್ಮ ಜಾಗೂರಕತೆಯನ್ನು ಕಡಿಮೆ ಮಾಡುತ್ತದೆ. ಅನಗತ್ಯ ಕೆಲಸಗಳ ಪ್ರತಿ ಗೊಂದಲದ ಆಮಿಷವನ್ನು ಹೆಚ್ಚಿಸುತ್ತದೆ. ಒಂದೇ ಸಮನೆ ಕೆಲಸ ಮಾಡುವುದರಿಂದ ದಣಿವು ಉಂಟಾಗುವುದು. ನಡುನಡುವೆ ಅಂದರೆ ಒಂದು ಗಂಟೆಯ ನಂತರ ಟೈಮರ್ ಅನ್ನು ಹೊಂದಿಸಿ ಮತ್ತು ಪ್ರತಿ ಚಕ್ರದ ಕೊನೆಯಲ್ಲಿ ವಿರಾಮ ತೆಗೆದುಕೊಳ್ಳಿ. ಕೆಲ ನಿಮಿಷಗಳ ಕಾಲ ನೀವು ಆಲಿಸಿದ ಸಂಗೀತವಿರಬಹುದು ಇಲ್ಲವೇ ಕೆಲ ಹೊತ್ತಿನ ನಡಿಗೆ ಇರಬಹುದು ನಿಮ್ಮನ್ನು ದಣಿವು ಆರಿಸಿಕೊಳ್ಳುವಂತೆ ಮಾಡುತ್ತದೆ. ಇದರಿಂದ ತಾಜಾತನ ಹೊರಹೊಮ್ಮುತ್ತದೆ. ಮತ್ತೆ ನಿಮ್ಮ ಗಮನವನ್ನು ಮರುಹೊಂದಿಸಿ ಕೆಲಸ ಮಾಡಲು ಸಹಕರಿಸುತ್ತದೆ.
ಅನುಕೂಲಕ್ಕೆ ಬಳಸಿಕೊಳ್ಳಿ
ತಂತ್ರಜ್ಞಾನದಿಂದ ನಿಮ್ಮ ಸಮಯ ಮತ್ತು ಗಮನ ಹಾಳಾಗದಂತೆ ನೋಡಿಕೊಳ್ಳಬೇಕು. ಸಮಯ ತಿನ್ನುವ ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವುದರಿಂದ ಹಿಡಿದು ವೆಬ್‌ನಲ್ಲಿ ಸರ್ಫಿಂಗ್ ಮಾಡಲು ಎಷ್ಟು ಸಮಯವನ್ನು ಕಳೆಯುತ್ತೀರಿ ಎಂಬುದನ್ನು ಟ್ರ್ಯಾಕ್ ಮಾಡುವವರೆಗೆ ಅನೇಕ ಅಪ್ಲಿಕೇಶನ್‌ಗಳು ನಿಮಗೆ ಸಹಾಯ ಮಾಡುತ್ತವೆ. ನಿಮ್ಮ ಅಭ್ಯಾಸಗಳು ಏನೆಂದು ನೀವು ಒಮ್ಮೆ ಗುರುತಿಸಿದರೆ ನಿಮ್ಮ ಗುರಿಗಳನ್ನು ಪೂರೈಸಲು ನಿಮಗೆ ಸಹಾಯ ಮಾಡುವ ಅಪ್ಲಿಕೇಶನ್‌ಗಳನ್ನು ಆರಿಸಿಕೊಳ್ಳಬಹುದು. ಆದರೆ ಅವುಗಳು ತಮ್ಮಲ್ಲೇ ಗೊಂದಲವಾಗಲು ಬಿಡಬೇಡಿ. ನಿಮ್ಮ ಕಾರ್ಯಸ್ಥಳವನ್ನು ಸ್ವಚ್ಛವಾಗಿ ಮತ್ತು ಸಂಘಟಿತವಾಗಿ ಇರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ನಿಮ್ಮ ಗಮನವನ್ನು ಹಾಗೆಯೇ ಇರಿಸಿಕೊಳ್ಳಲು ಮತ್ತು ನಿಮ್ಮ ಉತ್ಪಾದಕತೆಯನ್ನು ಒಂದು ಹಂತಕ್ಕೆ ಒಯ್ಯಲು ಭಾರಿ ಪರಿಣಾಮ ಬೀರುತ್ತವೆ.
ಗೊಂದಲಗಳನ್ನು ನಿಗದಿಪಡಿಸಿ
ಗೊಂದಲಗಳು ಎಲ್ಲವೂ ಕೆಟ್ಟದ್ದಲ್ಲ. ಆದರೆ ನೀವು ಸರಿಯಾಗಿ ಗಮನವಿಟ್ಟು ಕೆಲಸಮಾಡಲು ಅವುಗಳನ್ನು ಸಮಯಾನುಸಾರ ಬಗೆಹರಿಸಿ. ನಿಮ್ಮ ಗೆಳೆಯರಿಗೆ ಕರೆ ಮಾಡುವುದು ಇಲ್ಲವೇ ಫೇಸ್‌ಬುಕ್ ಟ್ವಿಟರ್ ಇತರ ಜನರ ನವೀಕರಣಗಳನ್ನು ಪೋಸ್ಟ್ ಮಾಡಲು ಅಥವಾ ಬ್ರೌಸ್ ಮಾಡಲು ನಿಮ್ಮ ವೇಳಾಪಟ್ಟಿಯಲ್ಲಿ ಸಮಯವನ್ನು ನಿರ್ಬಂಧಿಸಿ. ಆದರೆ ನಿಮ್ಮ ವೇಳಾಪಟ್ಟಿಗೆ ಅಂಟಿಕೊಳ್ಳಿ. ನೆನಪಿಡಿ ನೀವು ಗೊಂದಲವನ್ನು ನಿಯಂತ್ರಿಸುತ್ತೀರಿ. ನಿಮ್ಮ ಅಭ್ಯಾಸಗಳು ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬಗಳಾಗಿವೆ. ಬಹುತೇಕರು ಕೆಲಸವನ್ನು ಮುಂದೂಡುತ್ತಲೇ ಇರುತ್ತಾರೆ. ಆಲಸ್ಯವು ಕ್ರೆಡಿಟ್ ಕಾರ್ಡ್ನಂತೆ, ನೀವು ಬಿಲ್ ಪಡೆಯುವವರೆಗೆ ಅದು ತುಂಬಾ ಖುಷಿಯಾಗುತ್ತದೆ. ಆಲಸ್ಯವೆನ್ನುವುದು ಅಂತ್ಯವನ್ನು ಹೊಂದಿಲ್ಲ. ಇಂದು ಬಾಕಿಯಿರುವ ಯಾವುದನ್ನಾದರೂ ಮರುದಿನ ಮಾಡಲು ನಿರ್ಧರಿಸಿದರೆ ಇದರ ಪರಿಣಾಮವಾಗಿ ಕೈಯಲ್ಲಿರುವ ಕಾರ್ಯದ ಮೇಲೆ ಕೇಂದ್ರೀಕರಿಸಲು ನಿಮಗೆ ಕಷ್ಟವಾಗುತ್ತದೆ.
ಕೊನೆ ಹನಿ
ನಾವೆಲ್ಲರೂ ಉತ್ತಮ ಬಹುಕಾರ್ಯಕ ಕೌಶಲ್ಯಗಳೊಂದಿಗೆ ಹುಟ್ಟಿಲ್ಲ. ಆದರೂ ನಮ್ಮಲ್ಲಿ ಹೆಚ್ಚಿನವರು ಇದಕ್ಕೆ ಬಲಿಯಾಗುತ್ತಾರೆ. ದಿನಚರಿಯಲ್ಲಿ ತುಂಬಿರುವ ಅಸಂಖ್ಯಾತ ಚಟುವಟಿಕೆಗಳನ್ನು ನಿರಂತರವಾಗಿ ಬದಲಾಯಿಸುವುದರಿಂದ ದಣಿಯುವ ಸಾಧ್ಯತೆಯೇ ಹೆಚ್ಚು. ಮತ್ತು ಇದು ಬಹುಕಾರ್ಯಕ ಉದ್ದೇಶವನ್ನು ಸೋಲಿಸುತ್ತದೆ. ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯವು ಸ್ನಾಯುವಿನಂತೆಯೇ ಇರುತ್ತದೆ ನೀವು ಅದನ್ನು ಹೆಚ್ಚು ವ್ಯಾಯಾಮ ಮಾಡಿದರೆ ಅದು ಉತ್ತಮವಾಗಿ ಅಭಿವೃದ್ಧಗೊಳ್ಳುತ್ತದೆ. ಇದು ಆರಂಭದಲ್ಲಿ ಸ್ವಲ್ಪ ಕಷ್ಟವಾಗಬಹುದು. ಆದರೆ ಅಭ್ಯಾಸ ಮತ್ತು ನಿರ್ಣಯದೊಂದಿಗೆ ನಿಮ್ಮ ಮೆದುಳಿಗೆ ಉತ್ತಮವಾಗಿ ಗಮನಹರಿಸಲು ತರಬೇತಿ ನೀಡಬಹುದು. ಗಮನ ಕೇಂದ್ರೀಕರಿಸಿ ಮಾಡುವ ಕೆಲಸಗಳು ಆಭರಣಗಳಿಗಿಂತ ಹೆಚ್ಚು ಅಮೂಲ್ಯವಾದುವು.