ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ನೆಲ್ಸನ್ ಮಂಡೇಲಾ ಅವರು, ಜನರಿಗೆ ಅವರ ಮಾನವ ಹಕ್ಕುಗಳನ್ನು ನಿರಾಕರಿಸುವುದು ಅವರ ಮಾನವೀಯತೆಯನ್ನು ಸವಾಲು ಮಾಡಿದಂತೆ” ಎಂದು ಹೇಳಿದ್ದಾರೆ. ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗಳಿಗೂ ಜೀವಿಸುವ ಹಕ್ಕಿದೆ. ಸ್ವತಂತ್ರವಾಗಿ ಬದುಕುವ, ವಾಸಿಸುವ, ಆಚರಿಸುವ, ಮಾತನಾಡುವ ಹಕ್ಕಿದೆ. ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಮಾನವನ ಹಕ್ಕುಗಳು ಸಂರಕ್ಷಿಸಲ್ಪಡಬೇಕು. ಅವು ಯಾರಿಂದಲೂ ಹತ್ತಿಕ್ಕುವ ಅಥವಾ ದಮನಿಸುವಂತಾಗಬಾರದು, ಮಾನವ ಹಕ್ಕುಗಳು ಎಂದರೆ ಜಾತಿ, ಮತ, ಪಂಥ, ಪಂಗಡ, ಜನಾಂಗ, ಲಿಂಗ, ರಾಷ್ಟ್ರೀಯತೆ, ಭಾಷೆ, ಧರ್ಮ ಅಥವಾ ಯಾವುದೇ ಇತರ ಹಿನ್ನೆಲೆಗಳನ್ನು ಪರಿಗಣಿಸದೇ ಎಲ್ಲಾ ಮಾನವರಿಗೆ ಸಹಜವಾಗಿ ದೊರೆಯುವ ಮೂಲಭೂತ ಹಕ್ಕುಗಳು, ಬದುಕುವ ಹಕ್ಕು, ಸಮಾನತೆ, ಸ್ವಾತಂತ್ರö್ಯ, ಅವಕಾಶ, ಶಿಕ್ಷಣ, ಆರೋಗ್ಯ ಮತ್ತು ಘನತೆ-ಗೌರವದ ಹಕ್ಕುಗಳನ್ನು ಒಳಗೊಂಡಿದೆ ಎಂದು ಹೇಳಬಹುದು. ಪ್ರತಿಯೊಬ್ಬ ತನ್ನ ಘನತೆ-ಗೌರವವನ್ನು ರಕ್ಷಿಸಿಕೊಳ್ಳಲು ಜವಾಬ್ದಾರನಾಗಿರುತ್ತಾನೆ. ಹೀಗೆ ಮನುಷ್ಯನಿಗೆ ಜೀವನ ನಿರ್ವಹಣೆಗೆ ಕನಿಷ್ಠ ಅಗತ್ಯತೆಗಳು ಸಿಗಬೇಕು ಮತ್ತು ಅವರ ಹಕ್ಕುಗಳಿಗೆ ಗೌರವ ನೀಡಬೇಕೆಂಬ ಮಹೋನ್ನತವಾದ ಉದ್ಧೇಶದಿಂದ ಡಿಸೆಂಬರ ೧೦ ರಂದು ಪ್ರತಿವರ್ಷ ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.
ಈ ಭೂಮಿಯ ಮೇಲೆ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ನ್ಯಾಯಯುವ, ಶಾಂತಿಯುತ ಮತ್ತು ಸಮೃದ್ಧ ಸಮಾಜವನ್ನು ನಿರ್ಮಿಸಲು ಈ ಮಾನವ ಹಕ್ಕುಗಳು ಅಡಿಪಾಯ ಹಾಕುತ್ತವೆ. ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಣ, ಆರೋಗ್ಯ ಮತ್ತು ವಾಕ್ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳು ಇಡೀ ಮಾನವ ಸಂಕುಲದ ಅಭಿವೃದ್ಧಿಗೆ ಸಹಕಾರಿಯಾಗಿವೆ. ಮಾನವ ಹಕ್ಕುಗಳು ಕೇವಲ ಆದರ್ಶಗಳಲ್ಲ. ಅವು ಇಡೀ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಆತ್ಮಗೌರವ, ಘನತೆ ಮತ್ತು ಸ್ವಾತಂತ್ರ್ಯ, ನ್ಯಾಯ, ನಿಷ್ಠೆ ಮತ್ತು ಒಟ್ಟಾರೆ ಇಡೀ ಜಗತ್ತನೆಲ್ಲೆಡೆ ವಿಶ್ವಶಾಂತಿಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ನೈತಿಕ ಆಧಾರಸ್ತಂಭಗಳಾಗಿವೆ ಎಂದರೆ ತಪ್ಪಾಗಲಾರದು.
ಆಚರಣೆಯ ಹಿನ್ನೆಲ್ಲೆ

೧೯೪೮ ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಡಿಸೆಂಬರ ೧೦ ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಸಾರ್ವತ್ರಿಕವಾಗಿ ಆಚರಿಸುವಂತೆ ಕರೆ ಕೊಟ್ಟಿತು. ಜಾಗತಿಕವಾಗಿ ನಾಗರೀಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ. ಜನಜಾಗೃತಿಗಾಗಿ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಾಂಗ, ಲಿಂಗ, ಧರ್ಮ, ರಾಷ್ಟ್ರೀಯತೆಗಳಲ್ಲಿ ಯಾವುದೇ ಭೇದವನ್ನು ಎಣಿಸದೇ ಎಲ್ಲರೂ ಸಮಾನರಾಗಿದ್ದು, ಸಮಾನ ಅವಕಾಶ, ಹಕ್ಕು ಮತ್ತು ಸ್ವಾತಂತ್ರ್ಯವನ್ನು ಹೊಂದಿರುವ ಬಗ್ಗೆ ಖಚಿತಪಡಿಸುತ್ತದೆ.
ಆಚರಣೆಯ ಮಹತ್ವ
ಮಾನವ ಹಕ್ಕುಗಳು ವ್ಯಕ್ತಿಗಳ ಮಧ್ಯೆ ಇರುವ ಅಂತರ್ಗತ ಘನತೆ, ಗೌರವ ಮತ್ತು ಮಾನವೀಯ ಮೌಲ್ಯಗಳನ್ನು ರಕ್ಷಿಸುವುದರ ಮೂಲಕ ಪರಸ್ಪರ ಮಾನವೀಯ ಸಂಬಂಧ ಮತ್ತು ಅನ್ಯೋನ್ಯತೆಯನ್ನು ಬೆಳೆಸುತ್ತವೆ. ಜಾತಿ, ಜನಾಂಗ, ಲಿಂಗ, ಧರ್ಮಗಳ ಮಧ್ಯೆ ಇರುವ ಭೇದ-ಭಾವವನ್ನು ಹೋಗಲಾಡಿಸಿ ಎಲ್ಲರಿಗೂ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ನೀಡುತ್ತಾ, ಪರಸ್ಪರ ನಾವೆಲ್ಲರೂ ಒಂದು ಮತ್ತು ಸಮಷ್ಠಿಭಾವದ ಸಂದೇಶವನ್ನು ಸಾರುತ್ತವೆ. ಪ್ರತಿಯೊಬ್ಬ ವ್ಯಕ್ತಿಯು ತಾನು ಸರ್ವತಂತ್ರ ಸ್ವತಂತ್ರನಾಗಿದ್ದೂ ತನ್ನ ಜೀವನ, ವಾಕ್ ಸ್ವಾತಂತ್ರ್ಯ, ನಂಬಿಕೆ ಮತ್ತು ಬದುಕುವ ಸ್ವಾಯತ್ತತೆಯ ಹಕ್ಕನ್ನು ಹೊಂದಿರುತ್ತಾನೆ ಎಂಬುದನ್ನು ಮಾನವ ಹಕ್ಕುಗಳ ದಿನದ ಮೂಲಕ ಅಭಿವ್ಯಕ್ತಗೊಳಿಸುತ್ತದೆ.
ಕೊನೆಯ ನುಡಿ
ಹೋರಾಟಗಾರ್ತಿ ಮಲಾಲಾ ಯುಸುಫ್‌ಜಾಯ್ ಅವರು “ಒಂದು ಪುಸ್ತಕ, ಒಂದು ಪೆನ್ನು, ಒಂದು ಮಗು ಮತ್ತು ಒಬ್ಬ ಶಿಕ್ಷಕ ಈ ಜಗತ್ತನ್ನು ಬದಲಾಯಿಸಬಹುದು ಎಂಬುದನ್ನು ನೆನಪಿನಲ್ಲಿಟ್ಟಿಕೊಳ್ಳಬೇಕು” ಎಂದು ಹೇಳಿದ್ದಾರೆ. ಈ ಮಾನವ ಹಕ್ಕುಗಳ ದಿನವು ಪ್ರತಿ ವ್ಯಕ್ತಿಯ ಗೌರವ, ಸಮಾನತೆ ಮತ್ತು ಬೆಂಬಲ ನೀಡುವ ದಿನವಾಗಿದೆ. ನಾವು ಒಂದಾಗಿ ಎಲ್ಲರ ಹಕ್ಕುಗಳನ್ನು ಗುರುತಿಸುವ, ರಕ್ಷಿಸುವ ಮತ್ತು ಆಚರಿಸುವ ನಾವು ಪ್ರಪಂಚ ನಿರ್ಮಾಣ ಮಾಡಬೇಕಾಗಿದೆ. ಇದು ಕೇವಲ ಒಂದು ಆಚರಣೆಯಲ್ಲ. ಬದಲಾಗಿ ಮಾನವ ಘನತೆಯನ್ನು ಎತ್ತಿ ಹಿಡಿಯುವ ನಮ್ಮ ನಿರಂತರ ಬದ್ಧತೆಯಾಗಬೇಕೆನ್ನುವುದೇ ನನ್ನ ಅಂಬೋಣ..


