ಭಾವರಶ್ಮಿ
ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ಉದಯರಶ್ಮಿ ದಿನಪತ್ರಿಕೆ
ವಿವೇಕಾನಂದರು “ಸುತ್ತಲೂ ಕತ್ತಲೆ ಕವಿದಿರುವಾಗ ಎಲ್ಲೋ ಒಂದು ಸಣ್ಣ ಬೆಳಕು ಕಾಣಿಸುತ್ತದೆ. ಭರವಸೆ ಎಂದರೆ ಅದೇ. ಅದೇ ನಮ್ಮನ್ನು ಮುನ್ನಡೆಸುವ ಶಕ್ತಿ” ಎಂದು ಹೇಳಿದ್ದಾರೆ. ಇಂದಿನ ಜ್ಞಾನಕ್ಕಾಗಿ ಶಿಕ್ಷಣವೆಂದೇ ಅರ್ಥೈಸುವ ಈ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳನ್ನು ಬೆಳೆಸುವುದು ಕಷ್ಟದ ಕೆಲಸವಾಗಿದೆ. ಮೋಬೈಲ್ ಗೀಳು, ಪೋಷಕರ ವರ್ತನೆ, ಶೈಕ್ಷಣಿಕ ಒತ್ತಡ ಮತ್ತು ಸಾಮಾಜಿಕ ಸನ್ನಿವೇಶಗಳು ಮಕ್ಕಳ ಮುಗ್ಘ ಮತ್ತು ಕೋಮಲ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನುಂಟು ಮಾಡುತ್ತಿವೆ. ಇದರಿಂದ ಮಕ್ಕಳಲ್ಲಿ ಮಾನಸಿಕ ನೋವು-ದುಃಖ, ತಪ್ಪು ಕಲ್ಪನೆ, ಏಕಾಂಗಿತನ, ನಿರಂತರ ಭಯ, ಉದ್ವೇಗ, ಆವೇಶ, ಖಿನ್ನತೆ ಮತ್ತು ತೀವ್ರತರವಾದ ಮನೋದೌರ್ಬಲ್ಯಗಳಿಗೆ ಕಾರಣವಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈಗಿನ ಮಕ್ಕಳಿಗೆ ತಂದೆ-ತಾಯಿಯರು ಅಥವಾ ವಿದ್ಯಾರ್ಥಿಗಳಿಗೆ ಶಿಕ್ಷಕರು ಏನೂ ಹೇಳುವಂತಿಲ್ಲ, ಬೈಯ್ಯುವಂತಿಲ್ಲ ಮತ್ತು ಗದರಿಸುವಂತಿಲ್ಲವಾಗಿದೆ. ಇತ್ತೀಚಿಗೆ ಮಕ್ಕಳ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿದರೆ ಮೋಬೈಲ್ ಕೊಡಿಸಲಿಲ್ಲ, ಶಿಕ್ಷಕರು ಬೈದರು, ಗೆಳೆಯ ಮತ್ತು ಗೆಳತಿ ದೂರಾದನೆಂಬ ಸಣ್ಣ ಸಣ್ಣ ವಿಷಯಗಳಿಗೆ ಆತ್ಮಹತ್ಯೆಯಂತಹ ಆಲೋಚನೆಗಳನ್ನು ಮಾಡುತ್ತಿರುವುದು ತೀರ ಕಳವಳಕಾರಿ ಸಂಗತಿ.
ಮಕ್ಕಳು ಮಾನಸಿಕವಾಗಿ ಇಷ್ಟೇಕೆ ಕುಗ್ಗಿದ್ದಾರೆ? ಪೋಷಕರಾದ ನಾವು ಎಲ್ಲೊಂದು ಕಡೆ ಮಕ್ಕಳಿಗೆ ಒಳ್ಳೆಯ ಸ್ಕೂಲ್‌ನಲ್ಲಿ ಉತ್ತಮ ಶಿಕ್ಷಣ ಕೊಟ್ಟರೆ ಸಾಕು ಅಂತ ಅಂದುಕೊಂಡರೆ ಸಾಲದು. ದೈನಂದಿನವಾಗಿ ಮಕ್ಕಳು ಏನು ಮಾಡುತ್ತಾರೆ? ಅವರ ದಿನಚರಿ ಏನು? ಶಾಲಾ ವಿಷಯದಲ್ಲಿ ಪ್ರಗತಿ ಹೇಗಿದೆ? ಮತ್ತು ಮಕ್ಕಳಿಗಾಗಿ ನಾವು ಸಮಯ ಕೊಡತಾಯಿಲ್ಲ ಎನ್ನುವಂತಹ ಯಕ್ಷ ಪ್ರಶ್ನೆಗಳು ನಮ್ಮ ಮುಂದಿವೆ. ಅದಕ್ಕಾಗಿಯೇ ಮಕ್ಕಳ ಬದುಕಲ್ಲಿ ಮಹತ್ವವಾದ ಪಾತ್ರ ವಹಿಸುವವರು ಪೋಷಕರು, ಶಿಕ್ಷಕರು, ಸ್ನೇಹಿತರು ಮತ್ತು ಸಮಾಜ.

ಮಕ್ಕಳ ಆತ್ಮಹತ್ಯೆಗೆ ಕಾರಣಗಳು ಹಲವು: ಇಂದಿನ ದಿನಗಳಲ್ಲಿ ಯುವಕರು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿವೆ ಅಥವಾ ಫೇಲ್ ಆದಾಗ ಮತ್ತು ಸಾಮಾನ್ಯ ಜನರು ಸಂಸಾರದಲ್ಲಿರುವ ಎದುರಾಗುವ ಸಂಕಷ್ಟ, ರೈತರು ಸಾಲ ಬಾಧೆಯಿಂದ ಮತ್ತು ಕೌಟುಂಬಿಕ ಕಲಹದಂತಹ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ದೃಶ್ಯಗಳು ನಮ್ಮ ಕಣ್ಮುಂದೆ ಕಾಣ ಸಿಗುತ್ತವೆ. ಆತ್ಮಹತ್ಯೆಗೆ ಕಾರಣಗಳು ಹಲವು ಇರಬಹುದು. ಶೈಕ್ಷಣಿಕ ಒತ್ತಡ, ಆತ್ಮವಿಶ್ವಾಸದ ಕೊರತೆ, ಮಾನಸಿಕ ಆಘಾತ, ಆರ್ಥಿಕ ಪರಿಸ್ಥಿತಿ, ಬಡತನ, ಸೋಲು, ಪ್ರೇಮ ವೈಫಲ್ಯ, ಮೋಬೈಲ್ ಮೇಲೆ ಅತಿಯಾದ ವ್ಯಾಮೋಹ, ಪರೀಕ್ಷೆಯಲ್ಲಿ ಅನುತ್ತೀರ್ಣ ಮತ್ತು ದೈಹಿಕ-ಲೈಂಗಿಕ ದೌರ್ಜನ್ಯ ಇತ್ಯಾದಿ ಇವೆಲ್ಲವೂ ಆತ್ಮಹತ್ಯೆಗೆ ಕಾರಣಗಳಾಗಿವೆ. ಭಾರತದಲ್ಲಿ ಶೈಕ್ಷಣಿಕ ಸಾಧನೆಗಾಗಿ ಪೋಷಕರ ನಿರೀಕ್ಷೆ ಮತ್ತು ಮಕ್ಕಳ ಮೇಲೆ ಅತೀ ಹೆಚ್ಚಿನ ಮಾನಸಿಕ ಒತ್ತಡವೇ ಪ್ರಮುಖ ಕಾರಣವೆಂದು ಹೇಳಬಹುದು. ಅದರಲ್ಲೂ ಹೆಚ್ಚಾಗಿ ಯುವಕರಲ್ಲಿ ಇದು ಅತೀ ಗಂಭೀರ ಸ್ವರೂಪದ ಮಾನಸಿಕ ಸಮಸ್ಯೆಯಾಗಿ ಕಂಡುಬರುತ್ತಿದೆ. ೨೦೨೪ ರಲ್ಲಿ ೧೨ ವರ್ಷದ ಮಗ ತನ್ನ ತಾಯಿ ತನಗೆ ನೋಡಲು ಮೋಬೈಲ್ ಕೊಡಲಿಲ್ಲವೆಂದು ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಕೊಂದ ಘಟನೆ ನಮ್ಮ ಕಣ್ಮುಂದೆ ಇದೆ.
ಮಕ್ಕಳೊಂದಿಗೆ ಆರೋಗ್ಯಕರ ಬಾಂಧವ್ಯ ಬೆಳೆಸಿ
ಮಕ್ಕಳ ಮನಸ್ಸು ಮುಗ್ಧವಾಗಿದ್ದು, ಕಾರಣ-ಪರಿಣಾಮಗಳ ಬಗ್ಗೆ ವಿವೇಚಿಸುವ ಶಕ್ತಿ ಇರುವುದಿಲ್ಲ. ಶಿಕ್ಷಕರು ವಿದ್ಯಾರ್ಥಿಗಳ ವೈಯಕ್ತಿಕವಾದ ಸೂಕ್ಷ್ಮತೆ ಗಳನ್ನು ಅರಿತುಕೊಂಡು ಶಿಸ್ತು, ಶೈಕ್ಷಣಿಕ ಕಲಿಕೆಯ ಜತೆಗೆ ಅನುಕಂಪ, ಸಹಾನುಭೂತಿ, ಸಾಂತ್ವನ ತೋರುತ್ತಾ, ಕಷ್ಟದಲ್ಲಿದ್ದಾಗ ತಲೆ ಮೇಲೆ ಕೈ ಸವರಿ ತಿಳಿ ಹೇಳುವ ಗುಣವನು ಹೊಂದಿರಬೇಕು. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅವರನ್ನು ತಿದ್ದಿ-ತೀಡಿ ಸುಧಾರಿಸುವಂತಿರಬೇಕು. ಅದನ್ನು ಬಿಟ್ಟು ತಪ್ಪು ಮಾಡಿದರೆಂದು ಎಲ್ಲರ ಎದುರು ಅತಿಯಾಗಿ ನಿಂದಿಸುವ, ಅವಹೇಳನ ಮಾಡುವ ಮತ್ತು ತಪ್ಪಿತಸ್ಥನೆಂದು ಹಣೆಪಟ್ಟಿ ಕಟ್ಟುವ ಕೆಲಸ ಆಗಬಾರದು. ಹೀಗಾಗಿ ಅವರಲ್ಲಿ ಆತ್ಮಗೌರವ ಮತ್ತು ವಿಶ್ವಾಸದ ಕೊರತೆಯು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಸದಾ ವಿದ್ಯಾರ್ಥಿಗಳು ನಮ್ಮ ಮಕ್ಕಳೆಂದು ಭಾವಿಸಿ, ಜ್ಞಾನಧಾರೆ ಎರೆಯುವದರ ಜತೆಗೆ ವಿದ್ಯಾರ್ಥಿಗಳೊಂದಿಗೆ ಆರೋಗ್ಯಕರವಾದ ಬಾಂಧವ್ಯವನ್ನು ಹೊಂದುತ್ತಾ, ಫೆಸಿಲಿಟೇಟರ್ ಆಗಿ ಕಾರ್ಯನಿರ್ವಹಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ಇದೇ ಡಿಸೆಂಬರ ೫ ರಂದು ನಡೆದ ವಿದ್ಯಾರ್ಥಿಯ ಆತ್ಮಹತ್ಯೆಯಂತಹ ಪ್ರಕರಣವು ಇಡೀ ರಾಷ್ಟ್ರದೆಲ್ಲೆಡೆ ಗಂಭೀರ ಚರ್ಚಿತವಾಗಿದೆ.
ಆತ್ಮಹತ್ಯೆಯಂತಹ ದುಷ್ಕೃತ್ಯಗಳಿಂದ ಮಕ್ಕಳನ್ನು ಕಾಪಾಡುವಲ್ಲಿನ ಕೆಲವು ಸಲಹೆಗಳು
ಓದುತ್ತಿರುವ ಮತ್ತು ಹದಿಹರೆಯದ ಮಕ್ಕಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಆಲೋಚನೆಗಳನ್ನು ಹೇಗೆ ಕಂಡುಹಿಡಿಯಬೇಕೆಂಬುದನ್ನು ಈ ಕೆಳಗಿನ ಕೆಲವೊಂದು ಅಂಶಗಳಿಂದ ತಿಳಿದುಕೊಳ್ಳಬಹುದು.
ಪೋಷಕರು ಮಕ್ಕಳನ್ನು ಸದಾ ಒಂಟಿಯಾಗಿ ಬಿಡದೇ ದಿನದ ಕನಿಷ್ಠ ೨ ಗಂಟೆಯಾದರೂ ಮಕ್ಕಳ ಜೊತೆಗೆ ಬೆರೆತು ಅವರ ವ್ಯಕ್ತಿಗತವಾದ ವಿಷಯ, ಶಾಲೆಯಲ್ಲಿನ ಇಂದಿನ ದಿನಚರಿ, ಪಾಠ-ಪ್ರವಚನ ಮತ್ತು ಸ್ನೇಹಿತರ ಒಡನಾಟದ ಬಗ್ಗೆ ಕೇಳುವಂತಾಗಬೇಕು.
ಮಕ್ಕಳನ್ನು ಇತರರ ಮುಂದೆ ನಿಂದಿಸುವುದು, ಟೀಕಿಸುವುದು, ದೂಷಿಸುವುದನ್ನು ಬಿಟ್ಟು ಪ್ರೇರೇಪಿಸುವ ಮತ್ತು ಸಕಾರಾತ್ಮಕ ಭಾವನೆಯನ್ನು ಒಡಮೂಡಿಸಬೇಕು.
ಸೋಲು, ವೈಫಲ್ಯ, ಪರೀಕ್ಷೆಯಲ್ಲಿ ಕಡಿಮೆ ಅಂಕ ಅಥವಾ ಯಾವುದೇ ಸಮಸ್ಯೆ ಎದುರಾದಾಗ ಅವರಿಗೆ ಮಾನಸಿಕವಾಗಿ ಬೆಂಬಲಕ್ಕೆ ನಿಂತು, ಭವಿಷ್ಯದ ಬಗ್ಗೆ ಭರವಸೆ ಮೂಡಿಸುವ ಮತ್ತು ಸದಾ ನಾವಿದ್ದೇವೆ ಎಂಬ ಮಾನಸಿಕ ಧೈರ್ಯವನ್ನು ತುಂಬಬೇಕು.
ಮಕ್ಕಳ ನಡುವಳಿಕೆ, ವರ್ತನೆ ಮತ್ತು ದೈಹಿಕ-ಮಾನಸಿಕ ಬದಲಾವಣೆ ಕಂಡು ಬಂದರೆ ಶಿಕ್ಷಕರು ಕೂಡಲೇ ಪೋಷಕರು, ಶಿಕ್ಷಕರು ಮತ್ತು ಸ್ನೇಹಿತರ ಗಮನಕ್ಕೆ ತರಬೇಕು. ಅವಶ್ಯವಿದ್ದಲ್ಲಿ ಮನಃಶಾಸ್ತçಜ್ಞ ಅಥವಾ ಮನೋವೈದ್ಯರನ್ನು ಕಾಣುವಂತೆ ಸಲಹೆ ನೀಡಬೇಕು.
ಪೋಷಕರು ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವ ಮೂಲಕ ಮತ್ತು ಪ್ರಶ್ನೆಗಳನ್ನು ಕೇಳುವ ಮೂಲಕ ಮಗು ಯಾರೊಂದಿಗೆ ಯಾರೊಂದಿಗೆ ಸಮಯ ಕಳೆಯುತ್ತಿದೆ, ಸಹಪಾಠಿಗಳು, ಅಭ್ಯಾಸ, ಶಾಲೆಯ ದಿನಚರಿಯ ಬಗ್ಗೆ ತಿಳಿದುಕೊಳ್ಳುವುದು.
ಮಕ್ಕಳನ್ನು ಕೇವಲ ಅಂಕಗಳ ಯಂತ್ರಗಳಾಗಿ ನೋಡದೇ, ಅವರ ಅನಿಸಿಕೆ, ಭಾವನೆ, ಸಮಸ್ಯೆಗೆ ಸ್ಪಂದಿಸುವ ಮತ್ತು ಪರಿಹರಿಸುವ ಸ್ನೇಹಿತರಂತೆ ಕಾಣಬೇಕು. ಅವರೊಂದಿಗೆ ನಿರಂತರ ಸಂವಾದ ಮಾಡುತ್ತಾ, ಸಮಯೋಚಿತ ಸಹಾಯಕ್ಕೆ ನಾವಿದ್ದೇವೆ ಎಂಬ ಆಶಾಭಾವ ಮತ್ತು ಭರವಸೆಯನ್ನು ಮೂಡಿಸುವಂತಾಗಬೇಕು.
ಎಲ್ಲರಂತ ನನ್ನ ಮಗ ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆನ್ನುವ ಪೋಷಕರು ಸದಾ ಮಕ್ಕಳ ಅಭಿರುಚಿ, ಆಸಕ್ತಿ ಮತ್ತು ಕಲಿಕಾ ಸಾಮರ್ಥ್ಯದ ಆಧಾರದ ಮೇಲೆ ಶಿಕ್ಷಣ ಪಡೆಯಲು ಮುಕ್ತ ಆಯ್ಕೆ ನೀಡುವುದು ಮತ್ತು ಆ ವಿಷಯದಲ್ಲಿಯೇ ಕಲಿಕಾಸಕ್ತಿ ಬೆಳೆಸುತ್ತಾ, ಭವಿಷ್ಯ ರೂಪಿಸಿಕೊಳ್ಳುವಂತೆ ಪ್ರೇರೇಪಿಸುವುದು.
ಕೊನೆಯ ನುಡಿ: ಖ್ಯಾತ ಮನಃಶಾಸ್ತ್ರಜ್ಞ ಜೀನ್ ಫಿಗೆಟ್ ಅವರು, “ಙouಡಿ ಛಿhiಟಜಡಿeಟಿ ಟಿeeಜ ಙouಡಿ Pಡಿeseಟಿಛಿe moಡಿe ಣhಚಿಟಿ ಙouಡಿ Pಡಿeseಟಿಣs” ಎಂದು ಹೇಳಿದ್ದಾರೆ. ಅಂದರೆ ನಾವು ಮಕ್ಕಳಿಗೆ ಏನು ಕೊಡುತ್ತೇವೆ ಅನ್ನುವದು ಮುಖ್ಯವಲ್ಲ. ನಾವು ಅವರ ಭಾವನೆ, ಕಲ್ಪನೆ, ಅನಿಸಿಕೆ, ಸಮಸ್ಯೆ, ನೋವು, ಸೋಲು, ವೈಫಲ್ಯ ಮತ್ತು ಸಾಧನೆಯ ಬಗ್ಗೆ ಅರಿರುಕೊಂಡಿದ್ದೇವೆ ಎನ್ನುವುದು ಮುಖ್ಯ ಎಂದು ಹೇಳಬಹುದು. ತಂದೆ-ತಾಯಿ, ಪೋಷಕರು, ಶಿಕ್ಷಕರು ಮತ್ತು ಇಡೀ ಸಮಾಜ ಮಕ್ಕಳ ಬಗ್ಗೆ ವಿಶೇಷ ಗಮನ ವಹಿಸುತ್ತಾ, ಜೀವ ಇದ್ದರೆ ಜೀವನ ಎಂಬುದನ್ನು ಅರ್ಥೈಸಿ ಬದುಕಿನಲ್ಲಿ ಆಶಾಕಿರಣವನ್ನು ಮೂಡಿಸುವ ಕಾರ್ಯ ನಡೆಯಬೇಕು. ಮಕ್ಕಳಲ್ಲಿ ಆತ್ಮಸ್ಥೆöÊರ್ಯವನ್ನು ಬೆಳೆಸಿ, ಜೀವನ-ಬದುಕಿನ ಬಗ್ಗೆ ಭರವಸೆಯನ್ನು ಮೂಡಿಸುವ ಕಾರ್ಯ ನಡೆಯಬೇಕಾಗಿದೆ. ಶಾಲೆ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಆಪ್ತಸಮಾಲೋಚನೆ ಕೇಂದ್ರಗಳನ್ನು ತೆರೆದು ಅಂತಹ ವಿದ್ಯಾರ್ಥಿಗೆ ಆತ್ಮಸಮಾಲೋಚನೆಯನ್ನು ಕೈಗೊಂಡು ಆತ್ಮಹತ್ಯೆಯಂತಹ ಒಂದು ಕ್ಷಣದ ನಿರ್ಧಾರದಿಂದ ಹಿಂದೆ ಸರಿದರೆ ಬದುಕಿನಲ್ಲಿ ಪವಾಡವನ್ನೇ ಸೃಷ್ಟಿಸಬಹುದೆಂಬ ಅಂಶವನ್ನು ಮನವರಿಕೆ ಮಾಡಿಕೊಟ್ಟು ಜೀವನದಲ್ಲಿ ಆಶಾವಾದ ಮೂಡಿಸುವಂತಾಗಬೇಕು. ಅಂದಾಗ ಮಕ್ಕಳ ಮನಸ್ಸು ಗಟ್ಟಿಗೊಳ್ಳಲು ಸಾಧ್ಯ.


