ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಬತಗುಣಕಿ ಗ್ರಾಮದಲ್ಲಿ ಇತ್ತೀಚೆಗೆ ಬಯಲಾಟ ಕಲಾವಿದರ ಸಮೀಕ್ಷೆಯನ್ನು ನಡೆಸಲಾಯಿತು.
ಗ್ರಾಮದ ಬಸವಣ್ಣ ದೇವರ ಗುಡಿಯ ಆವರಣದಲ್ಲಿ ಹಲವಾರು ಕಲಾವಿದರು ಪಾಲ್ಗೊಂಡು ತಮ್ಮ ತಮ್ಮ ಮಾಹಿತಿಯನ್ನು ದಾಖಲಿಸಿದರು.
ರಾಜ್ಯ ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್. ದುರ್ಗಾ ದಾಸ್ ಅವರ ನಿರ್ದೇಶನದ ಮೇರೆಗೆ ವಿಜಯಪುರದ ಡಾ. ಮೀನಾಕ್ಷಿ ಪಾಟೀಲ್ ಅವರು ಕಲಾವಿದರ ಸಮೀಕ್ಷಾ ಕಾರ್ಯವನ್ನು ನಡೆಸಿದರು.
ಇಂಡಿ ತಾಲೂಕಿನ ಬತಗುಣಕಿ ಗ್ರಾಮದಲ್ಲಿ ಬಯಲಾಟ ತಂಡದ ಮುಖ್ಯಸ್ಥರಾದ ಕಾಶಿನಾಥ ಪಾಟೀಲ್ ಅವರ ಮುಖಂಡತ್ವದಲ್ಲಿ ಸುಮಾರು 60ಕ್ಕಿಂತ ಹೆಚ್ಚು ಕಲಾವಿದರು ತಮ್ಮ ಹೆಸರನ್ನು ನೋಂದಾಯಿಸಿದರು.
ಗ್ರಾಮೀಣ ಜನತೆ ತಮ್ಮ ನಿತ್ಯದ ಕೃಷಿ ಕಾಯಕದೊಂದಿಗೆ ಈಗಲೂ ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಅಭಿಮಾನದ ಸಂಗತಿ ಎಂದು ಕಲಾವಿದರನ್ನು ಕುರಿತು ಡಾ. ಮೀನಾಕ್ಷಿ ಪಾಟೀಲ್ ಮಾತನಾಡಿದರು. ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಇಂಥ ಅಪರೂಪದ ಮೂಲ ಕಲೆಗಳು ಮರೆಯಾಗುತ್ತಿರುವುದನ್ನು ಮನಗಂಡು, ಮತ್ತೆ ಅದನ್ನು ಪುನಶ್ಚೇತನಗೊಳಿಸುವ ಪ್ರಯತ್ನವಾಗಿ ಆಗಾಗ ಬಿಡುವಿನ ವೇಳೆಯಲ್ಲಿ ಬಯಲಾಟ ಪ್ರದರ್ಶನವನ್ನು ಮಾಡುತ್ತಿರುವ ಕಲಾವಿದರ ಬಗ್ಗೆ ಹೆಮ್ಮೆ ಅನಿಸುತ್ತದೆ. ಮುಂದಿನ ಪೀಳಿಗೆಗೆ ಈ ಕಲೆಯನ್ನು ಪರಿಚಯಿಸುವ ಮೂಲಕ ಬಯಲಾಟದ ಕಲೆಯನ್ನು ಜೀವಂತವಾಗಿರಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಾಗಿದೆ.
ಇದೇ ಸಂದರ್ಭದಲ್ಲಿ ಕಲಾವಿದರ ಜೀವಿತ ಪ್ರಮಾಣ ಪತ್ರವನ್ನು ವರ್ಷಕ್ಕೆ ಒಂದು ಬಾರಿ ಬದಲಾಗಿ ಎರಡು ಬಾರಿ ನೀಡಬೇಕೆನ್ನುವ ಅಕಾಡೆಮಿಯ ಆದೇಶವನ್ನು ರದ್ದುಪಡಿಸಿ ಮೊದಲಿನಂತೆ ವರ್ಷಕ್ಕೆ ಒಮ್ಮೆ ಪ್ರಮಾಣ ಪತ್ರವನ್ನು ಪಡೆಯಲು ಆಗ್ರಹಿಸಲಾಯಿತು. ನಿರಂತರ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುವ ಹಲವಾರು ಬಡ ಕಲಾವಿದರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ, ಮತ್ತು ಮಾಶಾಸನವು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಬೇಕೆಂದು ಅಕಾಡೆಮಿ ಅಧ್ಯಕ್ಷರಲ್ಲಿ ಈ ಮೂಲಕ ವಿನಂತಿಯನ್ನು ಮಾಡಿಕೊಳ್ಳಲಾಯಿತು.