ಕನೇರಿ ಶ್ರೀಗಳ ಪುರ ಪ್ರವೇಶ ನಿರ್ಬಂಧ ಆದೇಶ | ಸಚಿವ ಎಂಬಿಪಿ ವಿರುದ್ಧ ಗುಡುಗಿದ ಮಾಜಿ ಶಾಸಕ ನಡಹಳ್ಳಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನೇರಿ ಶ್ರೀಗಳ ಜಿಲ್ಲಾ ಪ್ರವೇಶದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರೇ ಕಾರಣ, ಈ ಹಿಂದೆಯೂ ರಂಭಾಪೂರಿ, ಶ್ರೀಶೈಲ ಜಗದ್ಗುರುಗಳ ಬಗ್ಗೆ ಅತ್ಯಂತ ಅಗೌರವಯುತವಾಗಿ ಅವರು ನಡೆದುಕೊಂಡಿದ್ದರು ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ವಿರುದ್ಧ ಗುಡುಗಿದರು.
ನಾಲ್ಕು ದಿನಗಳಲ್ಲಿ ಶ್ರೀಗಳ ನಿಷೇಧ ಆದೇಶ ವಾಪಾಸ್ಸು ಪಡೆಯದೇ ಹೋದರೆ ಬಬಲೇಶ್ವರ ಮತಕ್ಷೇತ್ರದಿಂದಲೇ ಹೋರಾಟ ಆರಂಭಿಸುವೆ ಎಂದು ನಡಹಳ್ಳಿ ಗುಡುಗಿದರು.
ವಿಜಯಪುರದಲ್ಲಿ ಕನೇರಿ ಸ್ವಾಮೀಜಿಗಳ ಪ್ರವೇಶ ನಿರ್ಬಂಧವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಹಿಂದೂ ಜಾಗೃತ ವೇದಿಕೆ ನೇತೃತ್ವದಲ್ಲಿ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರು ರಂಭಾಪುರಿ, ಶ್ರೀಶೈಲ ಮೊದಲಾದ ಜಗದ್ಗುರುಗಳ ಬಗ್ಗೆ ನಡೆದುಕೊಂಡ ರೀತಿ ಇಡೀ ಜನರಿಗೆ ಗೊತ್ತಿದೆ, ಈಗಲೂ ಅವರೇ ಕನೇರಿ ಶ್ರೀಗಳ ಪ್ರವೇಶ ನಿರ್ಬಂಧದ ಹಿಂದೆ ಇದ್ದಾರೆ ಎಂದರು.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಡೆಸಿದ ನೀವು ಹಿಂದೂ ಅಲ್ಲ ಎನ್ನುತ್ತೀರಿ, ಆದರೆ ಮನೆಯಲ್ಲಿ ಶ್ರೀ ಕೃಷ್ಣನ ಪೂಜೆ ಮಾಡುತ್ತೀರಿ, ಹಾಗಾದರೆ ನೀವು ಹಿಂದೂ ಎಂಬುದನ್ನು ಒಪ್ಪಿಕೊಳ್ಳಿ, ಆಡುವ ಮಾತು ಒಂದು, ನಡೆದುಕೊಳ್ಳುವುದು ಇನ್ನೊಂದು, ಈ ರೀತಿ ಒಡೆದಾಳುವ ಬಗ್ಗೆ ಲಿಂಗಾಯತ ಮಠಾಧೀಶರು ಎಚ್ಚೆತ್ತುಕೊಳ್ಳಬೇಕು ಎಂದರು. ಧರ್ಮ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಿ, ಲಿಂಗಾಯತ ಎಂದು ಬರೆಯಿಸಿ ಎಂದು ಹೇಳುವುದು ಒಡೆದಾಳುವ ಪ್ರಯತ್ನ, ಈ ಪ್ರಯತ್ನಕ್ಕೆ ಬಲಿಯಾಗಬೇಡಿ ಎಂದರು.
ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಸಹಕಾರಿ ಧುರೀಣ ರಮೇಶ ಬಿದನೂರ ಮಾತನಾಡಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮುಖಂಡರಾದ ಉಮೇಶ ಕಾರಜೋಳ, ಗುರುಲಿಂಗಪ್ಪ ಅಂಗಡಿ, ಉಮೇಶ ವಂದಾಲ, ರಾಘವ ಅಣ್ಣಿಗೇರಿ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ವಿಜಯಕುಮಾರ ಕುಡಿಗನೂರ, ಈರಣ್ಣ ಪಟ್ಟಣಶೆಟ್ಟಿ, ಶಿವಾನಂದ ಮಖಣಾಪೂರ ಮೊದಲಾದವರು ಪಾಲ್ಗೊಂಡಿದ್ದರು.