ಲೇಖನ
– ಡಾ.ಶಶಿಕಾಂತ.ಪಟ್ಟಣ
ಪುಣೆ – ರಾಮದುರ್ಗ
ಉದಯರಶ್ಮಿ ದಿನಪತ್ರಿಕೆ
ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದ ನೆಲದಲ್ಲಿ ಬಸವಣ್ಣ ಮತ್ತು ಅನೇಕ ಶರಣರ ನೇತೃತ್ವದಲ್ಲಿ ನಡೆದ ಅಭೂತಪೂರ್ವವಾದ ಸಮತೆಯ ಕ್ರಾಂತಿಯ ಫಲವಾಗಿ ಸಾರ್ವಕಾಲಿಕ ಸಮಾನತೆಯ ಆಂದೋಲನ ಆರಂಭವಾಯಿತು. ಇದು ವರ್ಗ ವರ್ಣ ಲಿಂಗ ಭೇದ ರಹಿತ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಶ್ರೇಣೀಕೃತವಲ್ಲದ ಶ್ರೇಷ್ಠ ಚಳುವಳಿಯಾಗಿದೆ. ಯಾವುದೇ ಹಂತದಲ್ಲೂ ಜೇಷ್ಠತೆ ಶ್ರೇಷ್ಠತೆ ಅಲ್ಲಗಳೆದು ಎಲ್ಲ ಕಾಲಕ್ಕೂ ಅರ್ಥಪೂರ್ಣ ಸಾಮಾಜಿಕ ಧಾರ್ಮಿಕ ಆಧ್ಯಾತ್ಮಿಕ ಸಾಹಿತಿಕ ಸೈದ್ಧಾಂತಿಕ ನಿಲುವನ್ನು ಗಟ್ಟಿಗೊಳಿಸಿದ ಜಗವು ಕಂಡ ಶ್ರೇಷ್ಠ ಸಿದ್ಧಾಂತವಾಗಿದೆ.
“ಲಾಂಛನಕ್ಕೆ ಶರಣೆಂಬೆ
ಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದೊಡೆ
ನಿನ್ನ ಸಾಕ್ಷಿಯಾಗಿ ಚಿ ಎಂಬೆ
ಕೂಡಲ ಸಂಗಮದೇವ”
ಅಂದು ಮಠಗಳನ್ನು ಕಾವಿಧಾರಿಗಳನ್ನು ಅಕ್ಕ ಮಾತೆ ಸ್ವಾಮಿ ಎಂಬ ದುಡಿಯದ ಜನರನ್ನು ಬಸವಣ್ಣ ಮತ್ತು ಶರಣರು ತಿರಸ್ಕರಿಸಿ ಅವರು ಕಾವಿ ಕಾವಿ ಹೊದ್ದು ತಿರುಗುವ ಜೀವಗಳ್ಳರು ಎಂದು ಕರೆದದ್ದುಂಟು. ಅಂದು ಬಸವಣ್ಣನವರು ಅಸ್ಪ್ರಶ್ಯರನ್ನು ದಲಿತರನ್ನು ಅಪ್ಪಿಕೊಂಡು ಮುಖ್ಯ ವಾಹಿನಿಗೆ ತಂದರು. ಇಂದು ಲಿಂಗಾಯತರೆನಿಸಿದ ನಾವು ಅವರನ್ನು ಮತ್ತೆ ಸಮಾಜದಿಂದ ದೂರ ಇಟ್ಟಿದ್ದೇವೆ. ಪೌರೋಹಿತ್ಯವನ್ನು ಬೇರು ಸಮೇತ ಕಿತ್ತು ಹಾಕಿದ ಬಸವಣ್ಣನವರ ವಚನ ಚಳುವಳಿಯಲ್ಲಿ ಗುರು ವ್ಯಕ್ತಿ ಅಲ್ಲ ಲಿಂಗ ವಸ್ತು ಅಲ್ಲ ಜಂಗಮ ಜಾತಿ ಅಲ್ಲ ಎಂಬ ಅಂಶಗಳನ್ನು ನೂರು ಬಾರಿ ಸಾರಿ ಸಾರಿ ಹೇಳಿದ್ದಾರೆ.

ಇಂದು ಬಸವ ಭಕ್ತರೆನಿಸಿಕೊಳ್ಳುತ್ತಿರುವ ನಾವು ಲಿಂಗ ತತ್ವವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಲಿಂಗವನ್ನು ಪೂಜೆ ಮಾಡುತ್ತಾ ಒಂದು ಹುಸಿ ಭ್ರಮೆ ಬ್ರಾಂತಿ ಉನ್ಮಾದದಲ್ಲಿ ಬದುಕುತ್ತಿದ್ದೇವೆ. ಇಂದು ಲಾಂಛನಧಾರಿಗಳು ಸೋಮಾರಿಗಳು ಬಸವನ ಹೆಸರು ಹೇಳಿ ಬದುಕುವ ಭಾಸವೋದ್ಯಮಿಗಳು ಆಷಾಡಭೂತಿಗಳು ಜಗತ್ತಿನ ಸರ್ವ ಶ್ರೇಷ್ಠ ಸಿದ್ಧಾಂತವನ್ನು ಮರೆತು ಕಾವಿಧಾರಿಗಳಿಗೆ ಸ್ವಾಮೀಜಿಗಳಿಗೆ ಅಕ್ಕ ಅಣ್ಣನವರಿಗೆ ಗುಲಾಮರಾಗಿದ್ದೇವೆ. ವಚನಗಳು ಪಚನವಾಗದ ಹಿನ್ನೆಲೆಯಲ್ಲಿ ನಮಗಿನ್ನೂ ಬಸವಣ್ಣ ಮತ್ತು ಅವರ ಸಮಾನತೆಯ ಚಳುವಳಿ ಅರ್ಥವಾಗುವದಿಲ್ಲ.
ಕೆಲ ಮಠಗಳ ಪಟಾಲಂ ಹಿಂಬಾಲಕರು ಸ್ವಾರ್ಥ ಸಾಧಕರು ರಾಜಕಾರಣಿಗಳು ಲಿಂಗಾಯತ ಧರ್ಮವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಿರುವುದು ಮತ್ತು ಇದನ್ನು ನೋಡಿಯೂ ಮೂಕರಾದ ಬಸವ ಭಕ್ತರ ಅಸಹಾಯಕತೆ ನಾಚಿಕೆ ತರಿಸುವಂತದ್ದು.
ಇತ್ತೀಚಿಗೆ ಒಬ್ಬ ಬಸವ ಪರಂಪರೆಯ ಹಿರಿಯ ಸ್ವಾಮಿಗಳು ತಮ್ಮ ಕಾರ್ಯಕ್ರಮದಲ್ಲಿ ಹೆಲಿಕ್ಯಾಪ್ಟರ್ ಮೂಲಕ ಪುಷ್ಪ ವೃಷ್ಟಿ ಮಾಡಿಸಿಕೊಂಡರು. ಇದಕ್ಕೆ ತಗುಲಿದ ಖರ್ಚು ಎಷ್ಟು ಗೊತ್ತೇ 12 ಲಕ್ಷ ರೂಪಾಯಿಗಳು. ಮಠಗಳು ವ್ಯವಹಾರಿಕ ವಾಣಿಜ್ಯ ಮಳಿಗೆಗಳಾಗಿವೆ. ಮುಗ್ಧ ಭಕ್ತರು ಸ್ವಾಮಿಗಳಿಗೆ ಚಿನ್ನದ ಕಿರೀಟ ಬೆಳ್ಳಿಗಧೆ ಸಿಂಹಾಸನ ವಿರಕ್ತ ಮತ್ತು ಗುರು ಪರಂಪರೆಯ ಸ್ವಾಮಿಗಳ ಆಡಂಬರ ಯಾವುದೇ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳಿಗೆ ಕಡಿಮೆ ಇಲ್ಲ. ಕೋಟಿ ಕೋಟಿ ಬೆಲೆ ಬಾಳುವ ವಿದೇಶಿ ಬುಲೆಟ್ ಪ್ರೂಫ್ ಕಾರುಗಳು. ವರ್ಷಕ್ಕೆರಡು ಮೂರು ಬಾರಿ ವಿದೇಶಿ ಪಯಣ. ಆಯುಷಾರಾಮಿ ಜೀವನ. ಕೊಪ್ಪಳ ಜಿಲ್ಲೆಯ ಗಂಗಾವತಿ ಮಠದ ಸ್ವಾಮಿಗಳೊಬ್ಬರು ಇತ್ತೀಚಿಗೆ ಕೆಲ ಅಸಭ್ಯ ವರ್ತನೆಯಿಂದಾಗಿ ಟಿ ವಿ ಮಾಧ್ಯಮದವರಿಗೆ ಆಹಾರವಾಗಿದ್ದರು. ಮುಂದೆ ಅಲ್ಲಿಯ ಪ್ರಮುಖ ರಾಜಕಾರಣಿಗಳು ಮುಖಂಡರು ಅಂತಪ್ಪ ಭ್ರಷ್ಟ ಸ್ವಾಮಿಯನ್ನು ಮಠದಲ್ಲಿಯೇ ಉಳಿಸಿಕೊಂಡರು. ಇದರ ವಿರುದ್ಧ ಯಾವೊಬ್ಬ ಸ್ವಾಮಿಗಳು ಧ್ವನಿ ಎತ್ತಲಿಲ್ಲ.
ದಲಿತರಿಗೆ ಸಿಗುವ ಕೆಲವೇ ಸೌಲಭ್ಯಗಳನ್ನು ಕಸಿದುಕೊಂಡು ವೀರ ಮಾಹೇಶ್ವರ ವರ್ಗದ ಜನರಿಗೆ ಬೇಡ ಜಂಗಮ ಜಾತಿ ಮೀಸಲಾತಿ ಪಡೆದುಕೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಯಾವೊಬ್ಬ ಬಸವ ಭಕ್ತರು ವಿರೋಧಿಸಿಲ್ಲ, ಒಂದು ಕಡೆಗೆ ತಮ್ಮ ಜಾತಿಯ ಶ್ರೇಷ್ಠತೆಯ ಪಾರುಪತ್ಯೆ ಇನ್ನೊಂದು ಕಡೆಗೆ ಮೀಸಲಾತಿಯ ಭಿಕ್ಷೆಗೆ ಬೇಡಿಕೆ. ನಾಡಿನ ಪ್ರಗತಿಪರ ಮಠಾಧೀಶರು ಇಂತಹ
ಮೀಸಲಾತಿಯನ್ನು ವಿರೋಧಿಸಿಲ್ಲ. ಇತ್ತೀಚಿಗೆ ಕೆಲ ಸ್ವಾಮಿಗಳು ತಮ್ಮ ಜಾತಿಯ ಮೀಸಲಾತಿಯನ್ನು ಪಡೆದು ಸಂಸದ ಶಾಸಕರಾಗುವ ಎಲ್ಲ ತಯಾರಿ ನಡೆದಿವೆ ಮತ್ತು ಅಂತಹ ಅನೇಕ ಜೀವಂತ ಉದಾಹರಣೆಗಳು ಈಗಾಗಲೇ ಸಾಕಾರವೆನಿಸಿವೆ.
ಇಂತಹ ಅನಾಹುತಗಳಿಗೆ ಈಗಲೇ ಕಡಿವಾಣ ಹಾಕದಿದ್ದರೆ ಮುಂದೆ ಲಾಂಛನಧಾರಿಗಳ ಪಾರುಪಥ್ಯದಲ್ಲಿ ನಾವು ನೀವು ಬಳಲುವುದು ಖಂಡಿತ. ಇದು ಎಲ್ಲ ಕಾವಿಧಾರಿಗಳು ಲಾಂಛನಧಾರಿಗಳು
ಮಠಾಧೀಶರಿಗೆ ಅನ್ವಯವಾಗುವದಿಲ್ಲ. ಬಸವ ಪ್ರಜ್ಞೆಯನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ ನಾವು ಮಾಡಬೇಕೆಂದರೆ ಈಗಲೇ ಶರಣ ಪಥಕ್ಕೆ ಹೆಜ್ಜೆ ಹಾಕೋಣ ಸಾಂಸ್ಥಿಕರಣದಿಂದ ಮುಕ್ತರಾಗೋಣ
ಜೈ ಬಸವಣ್ಣ
