ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳನ್ನು ತಾವೆ ಮಾಡಿಕೊಳ್ಳಲು ಕಲಿಸಿ. ಇದು ತಾಯಂದಿರಿಗೆ ಅನುಕೂಲವಾಗುತ್ತದೆ ಮತ್ತು ಮಗು ತನ್ನ ಮುಂದಿನ ಭವಿಷ್ಯವನ್ನು ಉತ್ತಮವಾಗಿ ಕಟ್ಟಿಕೊಳ್ಳಲು ದಾರಿಯಾಗುತ್ತದೆ ಎಂದು ಕಾರ್ಯಕ್ರಮವೊಂದರಲ್ಲಿ ಪಾಲಕರನ್ನು ಉದ್ದೇಶಿಸಿ ನಾನು ಹೇಳಿದಾಗ ವೇದಿಕೆಯ ಮೇಲೆ ಇದ್ದ ಓರ್ವ ಮಹಿಳೆ ಬೇಡ! ನನ್ನ ಸೊಸೆ ವೈದ್ಯಳಾಗಿದ್ದಾಳೆ ಆದರೂ ಕೂಡ ಪ್ರತಿದಿನ ಮಕ್ಕಳ ಎಲ್ಲ ಕೆಲಸಗಳನ್ನು ಆಕೆ ಅತ್ಯಂತ ಸಂತಸದಿಂದ ನಿರ್ವಹಿಸುತ್ತಾಳೆ.. ಆದ್ದರಿಂದ ಮಕ್ಕಳ ಎಲ್ಲಾ ಕೆಲಸಗಳನ್ನು ತಾಯಂದಿರೇ ಮಾಡಲಿ ಎಂದು ಹೇಳಿದರು.
ಅವರು ಹೇಳುವ ಮಾತಿನಲ್ಲಿಯೂ ತಥ್ಯವಿದೆ.. ಆದರೆ ಅದು ಅರ್ಧ ಸತ್ಯ. ಮಗು ತೀರಾ ಚಿಕ್ಕದಿದ್ದಾಗ ಖಂಡಿತವಾಗಿಯೂ ನಾವು ಮಕ್ಕಳ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲೇಬೇಕು ನಿಜ, ಆದರೆ ಎರಡೂವರೆ ಮೂರು ವರ್ಷದ ಹೊತ್ತಿಗೆ ಮಗು ಕೊಂಚ ಕೊಂಚವಾಗಿ ವಿಷಯಗಳನ್ನು ಅರಿಯುವ ಸಮಯಕ್ಕೆ ಖಂಡಿತವಾಗಿಯೂ ತನ್ನ ಕೆಲಸವನ್ನು ತಾನೇ ಹಂತ ಹಂತವಾಗಿ ನಿರ್ವಹಿಸಿಕೊಳ್ಳಲು ಪ್ರೋತ್ಸಾಹಿಸಲೇಬೇಕು. ಆರ್ಥಿಕವಾಗಿ ಅತ್ಯುತ್ತಮ ಸ್ಥಿತಿಯಲ್ಲಿದ್ದು ಔದ್ಯೋಗಿಕವಾಗಿಯೂ ದೊಡ್ಡ ಸ್ಥಾನದಲ್ಲಿರುವ ಜನರಿಗೆ ಮಕ್ಕಳ ಪಾಲನೆ ಮಾಡುವುದು ಸರಳವಾಗಿರಬಹುದು ಏಕೆಂದರೆ ಅವರ ಮನೆಗಳಲ್ಲಿ ಉಳಿದೆಲ್ಲ ಕಾರ್ಯಗಳಿಗೆ ಕೆಲಸಕ್ಕೆ ಜನ ಇರುತ್ತಾರೆ ಆದರೆ ಆರ್ಥಿಕವಾಗಿ ಅಷ್ಟೇನು ಅನುಕೂಲ ಇಲ್ಲದಿರುವವರು, ಅವಿಭಕ್ತ ಕುಟುಂಬ ಹೊಂದಿದವರು ಕೆಲಸಕ್ಕೆ ತೆರಳುವ ದಂಪತಿಗಳು ಮಕ್ಕಳ ಎಲ್ಲ ಕೆಲಸಗಳನ್ನು ತಾವೇ ಮಾಡುತ್ತಾ ಕುಳಿತರೆ ಅವರು ತಮ್ಮ ವೃತ್ತಿ ಮತ್ತು ಸಂಸಾರಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಒದ್ದಾಡಬೇಕಾಗುತ್ತದೆ ಬದಲಾಗಿ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ಕೊಂಚ ನಿರಾಳತೆಯನ್ನು ಅನುಭವಿಸಬಹುದು.
ನಿಮ್ಮ ಮಗು ತನ್ನ ಹಾಸಿಗೆಯನ್ನು ತಾನೇ ಮಡಚಿ ಇಡುತ್ತಿಲ್ಲವೇ?, ತನ್ನ ಶಾಲೆಯ ಡಬ್ಬಿಯನ್ನು ಒಳಗೆ ತಂದು ಅಡುಗೆ ಮನೆಯ ಸಿಂಕ್ ನಲ್ಲಿ ಇಡುತ್ತಿಲ್ಲವೇ? ತನ್ನ ಒಳ ಉಡುಪುಗಳನ್ನು ತಾನೇ ತೊಳೆದು ಕೊಳ್ಳುತ್ತಿಲ್ಲವೇ ತನ್ನ ಶಾಲೆಯ ಬ್ಯಾಗನ್ನು ತಾನೆ ಹೊಂದಿಸಿ ಇಟ್ಟುಕೊಳ್ಳುತ್ತಿಲ್ಲವೇ ತನ್ನ ದೈನಂದಿನ ಕರ್ಮಗಳನ್ನು ಯಾವುದೇ ಮೇಲ್ವಿಚಾರಣೆ ಇಲ್ಲದೆ ನಿರ್ವಹಿಸುತ್ತಿಲ್ಲವೇ? ಇದರ ಅರ್ಥ ನಿಮ್ಮ ಮಗು ಸೋಮಾರಿ ಎಂದಲ್ಲ ಬದಲಾಗಿ ಬಾಲ್ಯದಿಂದಲೂ ಆತನಿಗೆ ಬೇರೆಯವರು ಆತನ ಕೆಲಸಗಳನ್ನು ಮಾಡಿಕೊಡುತ್ತಿದ್ದರು ಎಂದು.
ಒಂದೊಮ್ಮೆ ನೀವು ನಿಮ್ಮ ಮಗುವಿಗೆ ಬಾಲ್ಯದಲ್ಲಿಯೇ ಈ ಎಲ್ಲಾ ಅಭ್ಯಾಸಗಳನ್ನು ರೂಢಿಸಿಲ್ಲ ಪಾಪ ಮಗು ಅದಕ್ಕೆನು ಗೊತ್ತಾಗುತ್ತದೆ ಎಂದು ನೀವು ಸುಮ್ಮನೆ ಇದ್ದರೆ ಮುಂದಿನ ಬದುಕಿನುದ್ದಕ್ಕೂ ಆ ಕೆಲಸಗಳನ್ನು ನೀವೇ ಮಾಡಿಕೊಡಬೇಕಾಗುತ್ತದೆ.

ಮಕ್ಕಳು ತಮ್ಮ ವೈಯಕ್ತಿಕ ಅಗತ್ಯಗಳನ್ನು ತಾವೇ ನಿರ್ವಹಿಸುವ ರೀತಿಯಲ್ಲಿ ಅವರನ್ನು ಬೆಳೆಸಬೇಕು. ಹದಿಹರೆಯದ ಎಷ್ಟೋ ಮಕ್ಕಳು ಇಂದಿಗೂ ಕೂಡ ತಮ್ಮ ಪಾಲಕರ ಮೇಲೆ ಅವಲಂಬಿತರಾಗಿರುತ್ತಾರೆ. ಬೇರೆಲ್ಲ ಕೆಲಸಕ್ಕೆ ‘ಐ ನೀಡ್ ಸಂ ಪರ್ಸನಲ್ ಸ್ಪೇಸ್’ ಎಂದು ಕಿರುಚುವ ಮಕ್ಕಳು ತಮ್ಮ ವೈಯುಕ್ತಿಕ ಕೆಲಸಗಳ ವಿಷಯ ಬಂದಾಗ ತಾಯಿಯನ್ನು ಗೋಗರೆಯುವುದು ಬಹಳಷ್ಟು ಮನೆಗಳಲ್ಲಿ ಕಂಡು ಬರುತ್ತದೆ. ಈ ತಾಯಂದಿರೋ ಚಿಕ್ಕಂದಿನಲ್ಲಿ ಮಕ್ಕಳು ಹಾಗೆ ಕರೆದಾಗ ಅತ್ಯಂತ ಹೆಮ್ಮೆಯಿಂದ ಮಗುವಿಗೆ ಮಹದುಪಕಾರ ಮಾಡುವ ಭರದಲ್ಲಿ ನಿರಂತರವಾಗಿ ಅವರ ಎಲ್ಲ ಕೆಲಸಗಳನ್ನು ತಾವೇ ನಿರ್ವಹಿಸಿ ಅವರನ್ನು ಅಚ್ಚೆಯಿಂದ ಬೆಳೆಸುತ್ತಾರೆ ಇಲ್ಲವೇ ಹೋಗಲಿ ಬಿಡು ಎಂದು ಕೈಬಿಡುತ್ತಾರೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಮಾತಿನಂತೆ ಮಕ್ಕಳಿಗೆ ಇದೀಗ ತಮ್ಮೆಲ್ಲ ಕೆಲಸಗಳಿಗೆ ಅಮ್ಮನನ್ನು ಮುಂದೆ ಮದುವೆಯಾದ ಮೇಲೆ ಸಂಗಾತಿಯನ್ನು ನಂತರ ಮಕ್ಕಳನ್ನು ಕರೆಯುವುದು ರೂಢಿಯಾಗುತ್ತದೆ.
ಪ್ರಸ್ತುತ ನಿಮ್ಮ ಮಕ್ಕಳಿಗೆ ನೀವು ಈ ವಿಷಯಗಳನ್ನು ಕಲಿಸಲೇಬೇಕು ಹಾಗೆ ಮಾಡುವ ಮೂಲಕ ನೀವು ನಿಮ್ಮ ಮಕ್ಕಳನ್ನು ಅವರ ಮುಂದಿನ ಬದುಕಿಗೆ ಅಣಿ ಮಾಡುತ್ತೀರಿ.
ನಿಜ ಹೇಳಬೇಕೆಂದರೆ ಎಷ್ಟೋ ಜನ ತಾಯಂದಿರ ಅತಿಯಾದ ಕಾಳಜಿಯ ಪರಿಣಾಮವಾಗಿ ಮಕ್ಕಳು ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳುವುದಿಲ್ಲ. ವಿಪರ್ಯಾಸವೆಂದರೆ ತಾಯಂದಿರು “ಅಯ್ಯೋ ಸಣ್ಣ ಮಕ್ಕಳು ಶಾಲೆಯಲ್ಲಿ ಇಡೀ ದಿನ ದಣಿದಿರುತ್ತಾರೆ ಮನೆಗೆ ಬಂದ ಮೇಲೂ ಕೆಲಸ ಮಾಡು ಅಂದ್ರೆ ಹೇಗೆ?ಎಂಬುದು ಒಬ್ಬರ ಮಾತಾದರೆ, ಇನ್ನೊಬ್ಬರು ನಾವು ತಾಯಂದಿರು ಇರುವುದಾದರೂ ಏಕೆ? ಮಕ್ಕಳನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಅಲ್ಲವೇ?ಎಂದು ಸಮರ್ಥಿಸಿಕೊಳ್ಳುವರು.
ಮಕ್ಕಳು ಶಾಲೆಗೆ ಪಾಠ ಕಲಿಯಲು ಹೋಗಿರುತ್ತಾರೆ . ಹೊರತು ಗುಡ್ಡ ಕಡಿಯಲು ಅಲ್ಲ ಎಂಬುದನ್ನು ಅಮ್ಮಂದಿರು ನೆನಪಿಟ್ಟುಕೊಳ್ಳಬೇಕು.
ಚಿಕ್ಕಂದಿನಲ್ಲಿ ತಮ್ಮ ಮಕ್ಕಳಿಗೆ ಶಿಸ್ತಿನ ಪಾಠವನ್ನು ಹೇಳಿಕೊಡದ, ಯಾವುದೇ ರೀತಿಯ ದೈನಂದಿನ ಕ್ರಮಗಳನ್ನು ಪರಿಚಯಿಸಿಕೊಡದೆ ಹೋದಾಗ ಮಕ್ಕಳು ಮುಂದೆ ಬೆಳೆದು ದೊಡ್ಡವರಾಗಿ ತಮ್ಮ ಹಾಸಿಗೆಗಳನ್ನು ದಿನಗಟ್ಟಲೆ ಮಡಚಿ ಇಡದೆ ಹಾಗೆಯೇ ಬಳಸುವ, ತಮಗಿಷ್ಟ ಬಂದ ಸಮಯದಲ್ಲಿ ಊಟ ಮಾಡುವ, ತಮ್ಮ ಬಾತ್ರೂಮನ್ನು ಕೂಡ ಸ್ವಚ್ಛ ಮಾಡಿಕೊಳ್ಳದೆ ಒಳ ಉಡುಪುಗಳನ್ನು ದಿನಗಟ್ಟಲೆ ಹಾಗೆಯೇ ಬಚ್ಚಲಿನಲ್ಲಿ ಬಿಟ್ಟು ಹೋಗುವುದನ್ನು ಹೇಳಿ ಬೇಸರಿಸಿಕೊಳ್ಳುತ್ತಾರೆ. ತಮ್ಮ ಬಟ್ಟೆಗಳು ಇಸ್ತ್ರಿ ಇಲ್ಲದೆ ಹೋದರೂ ಹಾಗೆಯೇ ಧರಿಸುವುದನ್ನು ನೋಡಿ ವ್ಯಥೆಪಡುತ್ತಾರೆ.. ಆದರೆ ಇದಕ್ಕೆಲ್ಲ ಕಾರಣ ತಾವೇ ಎಂಬುದನ್ನು ಮರೆತುಬಿಡುತ್ತಾರೆ.
ನಿಜ ಹೇಳಬೇಕೆಂದರೆ ಅವರ ಎಲ್ಲಾ ಕೆಲಸಗಳನ್ನು ತಾಯಂದಿರು ಮಾಡುವ ಮೂಲಕ ಮಕ್ಕಳಿಗೆ ಯಾವಾಗ ಏನು ಮಾಡಬೇಕು ಎಂಬ ಕನಿಷ್ಠ ಜ್ಞಾನವು ಇಲ್ಲದಂತಾಗುತ್ತದೆ ಅಥವಾ ಪ್ರತಿಯೊಂದು ಕೆಲಸವನ್ನು ತಾಯಿ ಹೇಳಿದ ಮೇಲೆಯೇ ಮಾಡುವ ರೂಢಿ ಉಂಟಾಗುತ್ತದೆ ಎರಡೂ ಕೂಡ ಅಪಾಯವೇ ಸರಿ!
ನಿಮ್ಮ ಮಕ್ಕಳು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವಂತಾಗಲು ನೀವು ಮಾಡಬೇಕಾಗಿರುವುದು ಇಷ್ಟು.
- ನಿಮ್ಮ ಮಗು ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವುದಿಲ್ಲ ಎಂದು ಆತ ದೊಡ್ಡವನಾದ ಮೇಲೆ ಗೊಣಗುವ ಬದಲು, ಅವರ ಮೇಲೆ ಕೂಗಾಡುವ ಬದಲು ಚಿಕ್ಕವರಿದ್ದಾಗಲೇ ಅವರಿಗೆ ಮುಂದಿನ ಬದುಕಿಗೆ ಅನುವಾಗುವಂತೆ ತಮ್ಮ ವೈಯುಕ್ತಿಕ ಕೆಲಸಗಳನ್ನು ತಾವೇ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಿ. ಪ್ರಾರಂಭದಲ್ಲಿ ತುಸು ಹೆಚ್ಚು ಕಮ್ಮಿ ಆದರೂ ಪರವಾಗಿಲ್ಲ… ಅವರು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸೂಚಿಸಿ ನಿಧಾನವಾಗಿ ಸರಿಪಡಿಸಿಕೊಳ್ಳಬೇಕಾದ ರೀತಿಯಲ್ಲಿ ತಿಳಿ ಹೇಳಿ.
- ಮೊದಲು ಅವರು ಮಾಡಿದ ಕೆಲಸವನ್ನು ತುಸುವೇ ಹೊಗಳಿ (ಒಂದು ಬ್ರೆಡ್ ಗೆ ಬೆಣ್ಣೆ ಹಚ್ಚಿದಂತೆ )ನಂತರ ಅವರು ಮಾಡಬೇಕಾದ/ ತಿದ್ದಿಕೊಳ್ಳಬೇಕಾದ ರೀತಿಯನ್ನು ಹೇಳಿ (ಸ್ಯಾಂಡ್ವಿಚ್ ನ ಒಳಗಿನ ಸ್ಟಫಿಂಗ್ ಅಥವಾ ಹೂರಣ ತುಂಬಿದಂತೆ ), ಮತ್ತೆ ನೀನು ಜಾಣ ಬೇಗ ಕಲಿತುಬಿಡುತ್ತೀಯಾ ಎಂದು ಮತ್ತೊಂದು ಬೆಣ್ಣೆ ಹಚ್ಚಿದ ಬ್ರೆಡ್ ಅನ್ನು ಇಡುವ ರೀತಿಯಲ್ಲಿ ಮಕ್ಕಳಿಗೆ ಪ್ರೋತ್ಸಾಹ ಮತ್ತು ಭರವಸೆಯನ್ನು ತುಂಬಬೇಕು. ಮನೋವಿಜ್ಞಾನದ ದೃಷ್ಟಿ ಕೋನದಲ್ಲಿ ನಾವು ಇದನ್ನು ಸ್ಯಾಂಡ್-ವಿಚ್ ಥಿಯರಿ ಎಂದು ಹೇಳುತ್ತೇವೆ. ಇಂದು ಮಕ್ಕಳಿಗೆ ನಾವು ಈ ಪಾಠವನ್ನು ಕಲಿಸದೇ ಇರಲಿ ಬಿಡು ಮುಂದೆ ಕಲಿಯುತ್ತಾರೆ ಎಂದು ಮುಂದೂಡಿದರೆ ಬದುಕಿನ ಯಾವುದು ಒಂದು ತಿರುವಿನಲ್ಲಿ ಅವರಿಗೆ ಈ ತಪ್ಪಿನಿಂದ ಬಹುದೊಡ್ಡ ನಷ್ಟವಾಗಬಹುದು.
ಆದ್ದರಿಂದ ನಿಧಾನವಾಗಿ ಒಂದೊಂದೇ ವಿಷಯಗಳನ್ನು ಮಕ್ಕಳಿಗೆ ಕಲಿಸಲು ಪ್ರಯತ್ನಿಸಿ.
ಮನೆಯನ್ನು ಇಲ್ಲವೇ ಕೋಣೆಯನ್ನು ಬಿಟ್ಟು ಹೊರಗೆ ಬರುವ ಮುನ್ನ ಕಡ್ಡಾಯವಾಗಿ ತಮ್ಮ ಹಾಸಿಗೆಯನ್ನು ಮಡಚಿ ದಿಂಬುಗಳನ್ನು ಸರಿಯಾದ ಜಾಗದಲ್ಲಿ ಇಡಲೇಬೇಕು ಎಂಬುದು ಮಾಡಲೇಬೇಕಾದ ಕೆಲಸಗಳಲ್ಲಿ ಮೊದಲನೆಯದು.

ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಯಾವುದೇ ರೀತಿಯ ಸಡಿಲತೆಗಳು ಬೇಡ… ಇದು ಮಕ್ಕಳಲ್ಲಿ ಆತ್ಮಗೌರವವನ್ನು ಹುಟ್ಟಿಸಲು ಕಾರಣವಾಗುತ್ತದೆ.
ಮಕ್ಕಳು ತಮ್ಮ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಎಂದಿಗೂ ರಿಯಾಯಿತಿ ತೋರದೆ ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಪಾಲಕರ ಕರ್ತವ್ಯ ಮಹತ್ವದ್ದು. ಹೋಗಲಿ ಬಿಡು ಎಂಬುದು ಬೇಡವೇ ಬೇಡ. ನಿಮ್ಮ ಶಿಸ್ತು ಪಾಲನೆ ನಿಮ್ಮಲ್ಲಿರುವ ಅತಿ ದೊಡ್ಡ ಅಸ್ತ್ರ. ಎಂದೋ ಒಂದು ದಿನ ಹೋಗಲಿ ಬಿಡು ಎಂದು ನೀವು ಮಾಡಿದರೆ ಮುಂದೆ ಪದೇ ಪದೇ ಮಾಡಬೇಕಾದ ಪರಿಸ್ಥಿತಿ ಒದಗುತ್ತದೆ ಎಂಬುದು ನೆನಪಿನಲ್ಲಿರಲಿ.
ಯಾವ ರೀತಿ ಮನೆಗೆ ಭದ್ರ ಅಡಿಪಾಯ ಬುನಾದಿ ಹಾಕುವುದು ಹಾಗೆಯೆ ಒಳ್ಳೆಯ ಅಭ್ಯಾಸಗಳು ಮಗುವಿನ ಭದ್ರವಾದ ಭವಿಷ್ಯಕ್ಕೆ ಅಡಿಪಾಯವಿದ್ದಂತೆ…. ಭವಿಷ್ಯದ ವಿಷಯದಲ್ಲಿ ಎಂದೂ ರಾಜಿಯಾಗಬಾರದು.
ಇಂದು ನಿಮ್ಮ ಮಕ್ಕಳಿಗೆ ನೀವು ತೋರುವ ರಿಯಾಯಿತಿ ಮಕ್ಕಳ ಮುಂದಿನ ಬದುಕಿನ ದಾರಿಯನ್ನು ಕ್ಲಿಷ್ಟವಾಗಿಸಬಹುದು.
ದೈನಂದಿನ ಚಿಕ್ಕಪುಟ್ಟ ಅಭ್ಯಾಸಗಳು ಬೆಳೆದು ದೊಡ್ಡವರಾದ ಮೇಲೆ ಅವರು ಉತ್ತಮ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಹಾಯಕ.
ಊಟದ ಮೇಜಿನ ಮುಂದೆ ಮಕ್ಕಳು ಎಲ್ಲರೊಂದಿಗೆ ತಾವು ಕುಳಿತುಕೊಂಡು ತಮ್ಮದೇ ಕೈಯಿಂದ ಊಟ ಮಾಡುವುದನ್ನು ರೂಢಿ ಮಾಡಿಸಿ. ತಮ್ಮ ಕೈ, ಬಾಯಲ್ಲಿರುವ ತುತ್ತು ಮತ್ತು ಮೆದುಳಿಗೆ ಆಂತರಿಕವಾದ ತಂತು ಬೆಸೆದಿದ್ದು ಕೈಯಲ್ಲಿ ತುತ್ತು ಮಾಡಿಕೊಳ್ಳುತ್ತಿರುವಾಗ ಮೆದುಳಿಗೆ ತಂತಾನೆ ಸಂದೇಶ ಹೋಗಿ ಬಾಯಲ್ಲಿರುವ ತುತ್ತನ್ನು ಅಗಿದು ನುಂಗುವ ಮತ್ತು ಹೊಸ ತುತ್ತಿಗೆ ದಾರಿ ಮಾಡಿಕೊಡುವ ಪ್ರಕ್ರಿಯೆ ಜರುಗುತ್ತದೆ. ಜೊತೆಗೆ ತನ್ನದೇ ಕೈಗಳನ್ನು ಬಳಸಿ ಊಟ ಮಾಡುವಾಗ ತನಗೆ ಎಷ್ಟು ಬೇಕೋ ಅಷ್ಟೇ ಆಹಾರವನ್ನು ಬಡಿಸಿಕೊಂಡು ತಿನ್ನುವುದನ್ನು ಮಗು ರೂಡಿಸಿಕೊಳ್ಳುತ್ತದೆ. ಷಡ್ರಸಗಳ ಆಸ್ವಾಧನೆಯ ಅರಿವಾಗುತ್ತದೆ. ಕೌಟುಂಬಿಕ ಬಾಂಧವ್ಯ ಮತ್ತು ಕೂಡಿ ಉಣ್ಣುವ ಸುಖಕ್ಕೆ ಮಗು ರೂಢಿಯಾಗುತ್ತದೆ. ತನಗೆ ಅರಿವಿಗೆ ಬರುವ ಮುನ್ನವೇ ತಮ್ಮ ಹಿರಿಯರು ಅನುಸರಿಸುವ ಎಲ್ಲ ವಿಧಿ ವಿಧಾನಗಳನ್ನು ಮಗು ಕೂಡ ಅನುಸರಿಸುತ್ತದೆ. ಆಹಾರ, ಅಡುಗೆಯ ಕುರಿತು ಗೌರವ ಭಾವನೆ ಮೂಡುತ್ತದೆ.
ಒಂದೊಮ್ಮೆ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವುದನ್ನು ಕಲಿತ ಮಗು ಕೆಲಸದ ಕುರಿತು ಗೌರವವನ್ನು ಬೆಳೆಸಿಕೊಳ್ಳುತ್ತದೆ. ಆ ಕೆಲಸಕ್ಕೆ ಬೇಕಾದ ಶ್ರಮ ಸಂಸ್ಕೃತಿಯ ಅರಿವನ್ನು ಮೂಡಿಸಿಕೊಳ್ಳುತ್ತದೆ.
ಕೆಲಸ ಮಾಡುವ ಇತರರಿಗೆ ಗೌರವ ನೀಡುವುದನ್ನು ಕಲಿಯುತ್ತದೆ.. ಬದುಕಿನ ಆಗುಹೋಗುಗಳಿಗೆ ಬೇರೊಬ್ಬರು ಕಾರಣ ಎಂದು ದೂರುವುದನ್ನು ನಿಲ್ಲಿಸುತ್ತದೆ. ಶಿಸ್ತು ಮತ್ತು ಸ್ವಯಂ ಪ್ರಜ್ಞೆಯ ಅರಿವನ್ನು ಮೂಡಿಸಿಕೊಳ್ಳುತ್ತದೆ.
ತನ್ನ ಮುಂದಿನ ಬದುಕಿನ ಎಲ್ಲಾ ತೀರ್ಮಾನಗಳನ್ನು ಸರಿಯಾದ ರೀತಿಯಲ್ಲಿ ಕೈಗೊಳ್ಳಲು ಈ ಸಣ್ಣಪುಟ್ಟ ಚಟುವಟಿಕೆಗಳು ಅವರಿಗೆ ಸಹಾಯ ಎಸಗುತ್ತವೆ.
ಮಕ್ಕಳಿಗೆ ಚಿಕ್ಕಂದಿನಲ್ಲಿ ಕಟ್ಟಿಕೊಟ್ಟ ಈ ಬದುಕಿನ ಬುತ್ತಿ ಜೀವಿತದ ಕೊನೆಯವರೆಗೂ ಸವೆಯಲಾರದ ಶಿಸ್ತು ಮತ್ತು ಜವಾಬ್ದಾರಿಯನ್ನು ನಿರ್ವಹಿಸುವ ಶಕ್ತಿಯನ್ನು ನೀಡುತ್ತವೆ.
ಇಷ್ಟು ಸಾಕಲ್ಲವೆ ಮಕ್ಕಳ ಭವಿಷ್ಯ ಬಂಗಾರವಾಗಲು?
