ಲೇಖನ
– ಡಾ.ಜಯವೀರ ಎ.ಕೆ
ಖೇಮಲಾಪುರ
ಉದಯರಶ್ಮಿ ದಿನಪತ್ರಿಕೆ
ಲೋಕಕ್ಕೆ ಸಿಹಿ ನೀಡುವ ಸಕ್ಕರೆ ಜಿಲ್ಲೆಯ ರೈತರ ಬದುಕು ಮಾತ್ರ ಇನ್ನೂ ಸಿಹಿಯಾಗದೆ ಇರುವುದು ಘನ ಘೋರ ಸತ್ಯ. ಸುಮಾರು ಎರಡು ದಶಕಗಳಿಂದಲೂ ಗೋಗರೆಯುತ್ತಲೇ ಬಂದಿರುವ ಅವರ ಹತ್ತು ಹಲವು ಮಹತ್ವದ ಬೇಡಿಕೆಗಳು ಈವರೆಗೂ ಸರಿಯಾಗಿ ಈಡೇರದೆ ವರ್ಷವಿಡೀ ಚಿಂತೆಯ ಹೊಂಡದಲ್ಲಿ ಮುಳುಗೇಳುತ್ತಲಿರುವುದು ಮಾತ್ರ ಅನಿವಾರ್ಯವಾಗಿದೆ.
ಮಾರುಕಟ್ಟೆಯಲ್ಲಿ ರಸಗೊಬ್ಬರ ಬೆಲೆ ಏರಿಕೆ ಪರಿಣಾಮ, ಅನಾವೃಷ್ಟಿಯಿಂದ ಸಮರ್ಪಕ ಬೆಳೆ ಬಾರದಿರುವುದು, ಕೀಟಗಳ ಬಾಧೆ, ಕಬ್ಬು ಬೆಳೆಗೆ ವೈಜ್ಞಾನಿಕ ಹಾಗೂ ನ್ಯಾಯಯುತ ಸೂಕ್ತ ಬೆಲೆ ಸಿಗದೇ ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ಸಾರ್ವತ್ರಿಕ ಸತ್ಯ.
ಪ್ರಸ್ತುತ ದೀಪಾವಳಿ ಹಬ್ಬದ ಆಸುಪಾಸು ಈ ಬಾರಿ ಕಬ್ಬು ನುರಿಸುವ ಹಂಗಾಮು ಆರಂಭವಾಗುವುದಿದೆ. ಆದರೂ ಈವರೆಗೂ ದರ ಪರಿಷ್ಕರಣೆ ಆಗದೇ ಇರುವುದು ರೈತರ ತೀವ್ರ ಆತಂಕ ಹೆಚ್ಚಾಗಲು ಕಾರಣವಾಗಿದೆ.
ಪ್ರಸ್ತುತ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 29 ಸಕ್ಕರೆ ಕಾರ್ಖಾನೆಗಳಿವೆ ಎಂಬುದು ಗಮನಾರ್ಹ. ಬಹುತೇಕ ಸಕ್ಕರೆ ಕಾರ್ಖಾನೆಗಳು ಸಚಿವರ, ಶಾಸಕರ ಹಾಗೂ ಪ್ರಭಾವಿಗಳ ಹಿಡಿತದಲ್ಲಿರುವುದರಿಂದ ರೈತರ ಮೇಲೆ ಎಷ್ಟೇ ಶೋಷಣೆಯಾದರೂ ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂಬುದು ಕಹಿ ಸತ್ಯ.

ಜಿಲ್ಲಾಡಳಿತ ಎಫ್ ಆರ್ ಪಿ ಬೆಲೆ ಘೋಷಣೆ ಮಾಡುತ್ತದೆ. ಆದರೂ ಅದು ವೈಜ್ಞಾನಿಕವಾಗಿ ನ್ಯಾಯ ಸಮ್ಮತವಾಗಿರುವುದಿಲ್ಲ ಎಂಬುದು ಎಲ್ಲ ಕಬ್ಬು ಬೆಳೆಗಾರರಿಗೆ ಚೆನ್ನಾಗಿ ತಿಳಿದಿರುವ ಸಾಮಾನ್ಯ ವಿಚಾರ.
ಇತ್ತೀಚಿಗೆ ಹಾರೂಗೇರಿ ಕ್ರಾಸ್ ನಲ್ಲಿ ರಾಯಬಾಗ, ಅಥಣಿ, ಹಾಗೂ ಜಮಖಂಡಿ ಭಾಗದ ಸಾವಿರಾರು ಕಬ್ಬು ಬೆಳೆಗಾರರು ರಾಜ್ಯ ರೈತ ಸಂಘ ಹಸಿರುಸೇನೆಯ ಗೌರವಾಧ್ಯಕ್ಷ ಹಾಗೂ ಅಧ್ಯಕ್ಷರ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಹೆದ್ದಾರಿ ಸಂಚಾರ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಜಿಲ್ಲಾಡಳಿತವನ್ನು ಎಚ್ಚರಿಸಿದ್ದು ನಾವಿಲ್ಲಿ ಸ್ಮರಿಸಬಹುದು.
ಅಂದು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಕಬ್ಬು ಬೆಳೆಗಾರರ ಮನವಿ ಸ್ವೀಕರಿಸಿ ಚೆನ್ನಾಗಿ ಸ್ಪಂದಿಸಿದ ಬೆಳಗಾವಿ ಜಿಲ್ಲಾಧಿಕಾರಿಗಳು, 4 ದಿನಗಳಲ್ಲಿ ಎಲ್ಲ ಕಾರ್ಖಾನೆ ಮಾಲಿಕರ ಹಾಗೂ ಎಂಡಿಗಳ ಸಭೆ ಕರೆದು ಕಬ್ಬು ಬೆಳೆಗಾರರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಲಾಗುವುದು ಎಂದು ನೆತ್ತಿಯ ಸುಡು ಬಿಸಿಲಿನಲ್ಲಿ ಪ್ರತಿಭಟನೆಯಲ್ಲಿ ಅಂದು ನಿರತರಾಗಿದ್ದ ಸಹಸ್ರಾರು ರೈತರಿಗೆ ಡಿಸಿ ಭರವಸೆ ನೀಡಿದ್ದರು. ಈ ಬಾರಿ ರೈತರು ತಮ್ಮ ಹತ್ತು ಹಲವು ಮಹತ್ವದ ಬೇಡಿಕೆಗಳು ಈಡೇರುತ್ತವೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಯಾವುದಕ್ಕೂ ಸದ್ಯ ಕಾಲವೇ ನಿರ್ಧರಿಸಬೇಕಾಗಿದೆ.
ತೂಕದಲ್ಲಾಗುತ್ತಿರುವ ಮೋಸ ತಡೆಗಟ್ಟುವುದು. 15 ದಿನಗಳಲ್ಲಿ ಸಕಾಲಕ್ಕೆ ಬಿಲ್ ಪಾವತಿಸುವುದು. ಕಡ್ಡಾಯವಾಗಿ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಸರಕಾರಿ ತೂಕದ ಯಂತ್ರಗಳನ್ನು ಅಳವಡಿಸುವುದು. ಕಬ್ಬು ಕಟಾವು ಮುನ್ನ ಸೂಕ್ತ ವೈಜ್ಞಾನಿಕ ದರ ಘೋಷಣೆ ಮಾಡುವುದು. ಎಫ್ ಆರ್ ಪಿ ದರ ನ್ಯಾಯ ಸಮ್ಮತವಾಗಿರುವಂತೆ ನೋಡಿಕೊಳ್ಳಲು ಪ್ರಸ್ತುತ ಸರಕಾರ ಈ ಸೂಕ್ಷ್ಮ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾಮಾಣಿಕವಾಗಿ ದಿಟ್ಟ ಹೆಜ್ಜೆ ಇಡಬೇಕಾಗಿದೆ. ರೈತರ ಹೆಸರಿನಲ್ಲಿ ಸದನದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಜನಪ್ರತಿನಿಧಿಗಳು ಪ್ರತಿಷ್ಠೆ ಬದಿಗೆ ಸರಿಸಿ ನಿಸ್ವಾರ್ಥವಾಗಿ, ಹಾಗೂ ಪಕ್ಷಾತೀತವಾಗಿ ಎಲ್ಲ ಕಬ್ಬು ಬೆಳೆಗಾರರ ಹಿತ ಕಾಯಬೇಕಾಗಿದೆ. ಪ್ರಸ್ತುತ ಈ ಕಾಲಘಟ್ಟದಲ್ಲಿ ಕಬ್ಬು ಬೆಳೆಗಾರರು ವಿಪರೀತ ಸಂಕಷ್ಟದಲ್ಲಿ ತೆವಳುತ್ತಾ ಒಳಗೆ ಅಪಾರ ಕಷ್ಟಗಳನ್ನು ತುಂಬಿಕೊಂಡು ಅನಿವಾರ್ಯವಾಗಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಬದಲಾಗುತ್ತಿರುವ ಸರಕಾರದ ಈ ಮನೋಧೋರಣೆಗಳ ಭರವಸೆಯ ಬೆಳಕಿನಲ್ಲಿ ನಿತ್ಯ ನಿರಂತರ ಈ ಮಣ್ಣಿನ ಮಕ್ಕಳು ತಮ್ಮ ಬೆನ್ನಿಗೆ ಕಟ್ಟಿಕೊಂಡ ಈ ಚಿಂತೆಯ ಮೂಟೆಗಳು ಕರಗುವುದು ಯಾವಾಗ? ಈ ಯಕ್ಷ ಪ್ರಶ್ನೆಗೆ ಸದ್ಯ ಕಾಲವೇ ಉತ್ತರಿಸಬೇಕಾಗಿದೆ.
