ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಒಮ್ಮೆ ಕ್ಲಾಸಿನಲ್ಲಿ ಗುರುಗಳು ಟಾಪರ್, ಎವರೆಜ್,ಬ್ಯಾಕ್‌ಬೆಂರ‍್ಸ್ಗಳ ಗುಂಪು ಮಾಡಿದರು. ಆ ಎಲ್ಲ ಮಕ್ಕಳಿಗೆ ಒಂದು ಗ್ರೂಪ್ ಪ್ರೊಜೆಕ್ಟ್ ನೀಡಿದರು. ಅರವತ್ತು ದಿನಗಳಲ್ಲಿ ಯಾರು ಹೆಚ್ಚು ಪಾಲಕ್‌ನ್ನು ಬೆಳೆಯುವರೋ ಅವರಿಗೆ ಹೆಚ್ಚು ಅಂಕ ನೀಡಲಾಗುವುದು. ಯಾರು ಕಡಿಮೆ ಬೆಳೆಯುವರೋ ಅವರಿಗೆ ಕಡಿಮೆ ಅಂಕ ಎಂದು ಘೋಷಿಸಿದರು. ಎಲ್ಲ ಮಕ್ಕಳು ಅತ್ಯುತ್ಸಾಹದಿಂದ ಯೋಜನೆ ಹಾಕಲು ಶುರು ಮಾಡಿದರು. ಮರುದಿನವೇ ಮಣ್ಣನ್ನು ಹದಗೊಳಿಸಲು ಆರಂಭಿಸಿದರು. ಬೀಜವನ್ನು ಬಿತ್ತಿದರು. ಗೊಬ್ಬರವನ್ನು ಹಾಕಿದರು. ಎಲ್ಲ ಮಕ್ಕಳುವ ಬಹಳ ಪರಿಶ್ರಮ ವಹಿಸಿದರು. ಆದರೆ ಅರವತ್ತು ದಿನಗಳ ನಂತರ ಗುರುಗಳು ಬೆಳೆಯನ್ನು ನೋಡಿದಾಗ ಎಲ್ಲಕ್ಕಿಂತ ಕಡಿಮೆ ಟಾರ‍್ಸ್ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ ಬೆಂರ‍್ಸ್ ಬೆಳೆದಿದ್ದರು. ಆದರೆ ಅದರಲ್ಲಿ ಬಹಳಷ್ಟು ಪಾಲಕ್ ನಾಶವಾಗಿತ್ತು. ಎವರೆಜ್ ಮಕ್ಕಳು ಬಹಳ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಪಾಲಕ್‌ನ್ನು ಬೆಳೆದಿದ್ದರು.
ಗುರುಗಳು ಮಕ್ಕಳನ್ನುದ್ದೇಶಿಸಿ ಹೀಗೆ ಹೇಳಿದರು: ಮಕ್ಕಳೇ, ಉಳಿದ ಎರಡು ತಂಡದವರು ಏಕೆ ವಿಫಲರಾದಿರಿ ಎಂಬುದಕ್ಕೆ ಸಿಸಿಟಿವಿ ಫೂಟೇಜ್‌ನ್ನು ಗಮನವಿಟ್ಟು ವೀಕ್ಷಿಸಿ ಟಾರ‍್ಸ್ ಬಹಳಷ್ಟು ಪರಿಪೂರ್ಣತೆಯನ್ನು ಬಯಸಿದಿರಿ. ಹೀಗಾಗಿ ಪ್ರತಿದಿನ ಸಸಿಯನ್ನು ನೆಡಲಿಲ್ಲ. ಬ್ಯಾಕ್ ಬೆಂರ‍್ಸ್ ಉತ್ಸಾಹದಿಂದ ಒಂದು ದಿನ ಬಹಳಷ್ಟು ಸಸಿಗಳನ್ನು ನೆಟ್ಟರು ನಂತರ ಕೆಲವು ದಿನ ಮೂಡ್ ಇಲ್ಲವೆಂದು ಗಿಡ ನೆಡಲಿಲ್ಲ ಮತ್ತು ಕ್ರಿಮಿ ಕೀಟಗಳಿಂದ ಸಸಿಗಳನ್ನು ರಕ್ಷಿಸಲಿಲ್ಲ. ಪರಿಪೂರ್ಣತೆ ಮತ್ತು ಮೂಡ್‌ನ್ನು ಪಕ್ಕಕ್ಕಿಟ್ಟು ಎವರೆಜ್ ಮಕ್ಕಳು ದಿನನಿತ್ಯ ಪರಿಶ್ರಮ ವಹಿಸಿದರು ಆದ್ದರಿಂದ ಅವರಿಗೆ ಗುಣಮಟ್ಟದ ಉತ್ತಮ ಪಾಲಕ್‌ನ್ನು ಬೆಳೆಯಲು ಸಾಧ್ಯವಾಯಿತು ಎಂದರು.
ಕಾರಣಗಳು

ಮೇಲಿನ ಕಥೆಯಲ್ಲಿದ್ದಂತೆ ನಿರಂತರತೆಯಿಂದ ಅಂದುಕೊಂಡದ್ದನ್ನು ಸಾಧಿಸಬಹುದು ಎಂದು ಕೇಳಲೇನೊ ಖುಷಿ ಅನಿಸುತ್ತದೆ. ಆದರೆ ಪ್ರತಿನಿತ್ಯ ಅದನ್ನು ಅನುಸರಿಸುವುದು ಅಷ್ಟು ಸುಲಭದ ಮಾತಲ್ಲ ಅನ್ನೋದು ಬಹುತೇಕ ನಮ್ಮೆಲ್ಲರ ಅನುಭವಕ್ಕೆ ಬಂದ ಸಂಗತಿಯೇ ಸರಿ. ಇದರ ಹಿಂದೆ ಅನೇಕ ಕಾರಣಗಳೇ ಇವೆ. ನಿತ್ಯವೂ ಅದೇ ಕೆಲಸದಲ್ಲಿ ತೊಡಗಿಕೊಳ್ಳಲು ಮನಸ್ಸಿರದೇ ಕಷ್ಟವೆನಿಸುವುದು. ಶಿಸ್ತು ಇಲ್ಲದೇ ಇರುವುದು ಅದಲ್ಲದೇ ನಿತ್ಯ ಅದೇ ಅಭ್ಯಾಸವನ್ನು ಮುಂದುವರೆಸಲು ಪ್ರೇರಣೆ ಇಲ್ಲದಿರುವುದೂ ಕಾರಣಗಳಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ನಾವೆಲ್ಲ ಕಾದ ಹೆಂಚಿನ ಮೇಲೆ ನಿಂತಂತೆ ಇರುತ್ತವೆ. ಹಾಗಿದ್ದರೆ ನಿರಂತರತೆ ಸಾಧ್ಯವಾಗದು. ಅದರಿಂದ ಒತ್ತಡ ಆತಂಕ ಹೆಚ್ಚಾಗುತ್ತದೆಯೇ ಹೊರತು ಬೇರೇನೂ ಆಗದು ಎಂಬುದನ್ನು ಗಮನಿಸಿದ್ದೇವೆ. ಹಾಗಾದರೆ ನಿರಂತರತೆಯನ್ನು ಕಾಪಿಟ್ಟುಕೊಳ್ಳಲು ಮಾಡುವುದಾದರೂ ಏನು ನೋಡೋಣ ಬನ್ನಿ.
ಸಣ್ಣ ಗುರಿ
ಮೊಬೈಲ್ ಕಂಪ್ಯೂಟರ್ ವಾಟ್ಸಪ್ ಫೇಸ್‌ಬುಕ್ ಇನಸ್ಟಾಗ್ರಾಂನ ಬಳಕೆಯಲ್ಲಿ ತೊಡಗಿರುವ ನಾವೆಲ್ಲ ನಿರಂತರತೆಯ ಮಹತ್ವವನ್ನು ಮರೆಯುತ್ತಿದ್ದೇವೆ. ಅದರ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದೇವೆ. ಎಲ್ಲವೂ ಡಿಜಿಟಲ್ ಆಗಿರುವಾಗ ಕನಸು ಸಹ ಬೆರಳ ತುದಿಯಲ್ಲಿ ಟಕ್ ಅಂತ ನನಸಾಗಬೇಕೆಂದು ಬಯಸುತ್ತಿದ್ದೇವೆ. ನೀರಿನಂಥ ಮೃದುವಾದ ವಸ್ತು ಮತ್ತೊಂದಿಲ್ಲ ಆದರೆ ಅದು ನಿರಂತರವಾಗಿ ಒಂದೇ ಜಾಗದಲ್ಲಿ ಬೀಳುವುದರಿಂದ ಹೆಬ್ಬಂಡೆಯ ಮೇಲೆ ರಂಧ್ರವನ್ನು ಮಾಡಬಲ್ಲದು. ಅದು ನಿರಂತರತೆಯ ಶಕ್ತಿ. ಸ್ಥಿರತೆಯನ್ನು ಬೆಳೆಸಿಕೊಳ್ಳಲು ನಿಮ್ಮ ‘ಏಕೆ’ ಎಂಬುದನ್ನು ವ್ಯಾಖ್ಯಾನಿಸಿ. ಸ್ಪಷ್ಟ ಮತ್ತು ಸಣ್ಣ ಗುರಿಗಳನ್ನು ಹೊಂದಿಸಿ.
ದಿನಚರಿ
ಯಾವುದರಲ್ಲೂ ನಿಲ್ಲದ ಮನಸ್ಸು, ನಿರುತ್ಸಾಹ, ಬದುಕಿನಲ್ಲಿ ದುಃಖವನ್ನು ಬಿಟ್ಟರೆ ಮತ್ತೇನೂ ನೀಡದು. ನಿರುತ್ಸಾಹ ನರಳುವಂತೆ ಮಾಡುತ್ತದೆ. ಉತ್ಸಾಹ ಅರಳುವಂತೆ ಮಾಡುತ್ತದೆ. ಆಯ್ಕೆ ನಮ್ಮ ಕೈಯಲ್ಲಿದೆ ಎಂಬುದನ್ನು ನೆನಪಿಡಬೇಕು. ನಿರುತ್ಸಾಹದಲ್ಲಿ ಯಥೇಚ್ಛವಾಗಿ ನಮ್ಮ ಶಕ್ತಿ ಹೆಚ್ಚು ವ್ಯಯವಾಗುತ್ತದೆ. ರೈತರು ಬಿತ್ತನೆ ಮಾಡಿ ಬಿಡುವುದಿಲ್ಲ ಅದರ ಹಿಂದೆ ಬೆನ್ನು ಹತ್ತುತ್ತಾರೆ. ನಡುವೆ ಬೆಳೆದ ಕಸವನ್ನು ಕೀಳುತ್ತಾರೆ. ಬೆಳೆದು ಫಸಲಾಗಿದ್ದನ್ನು ಕಟಾವು ಮಾಡುತ್ತಾರೆ. ಸಂಗ್ರಹಿಸಿ ಸಾಗಾಣಿಕೆ ಮಾಡುತ್ತಾರೆ. ಕೊನೆಯಲ್ಲಿ ಮಾರಾಟ ಮಾಡಿ ಕೈಗೆ ಹಣ ಸಿಗುವವರೆಗೆ ಅವರು ನಿರಂತರತೆಯನ್ನು ಕಾಪಾಡಿಕೊಳ್ಳುತ್ತಾರೆ. ಹಿಂದೆ ಆಗಿದ್ದು ಆಗಿ ಹೋಯಿತು. ಕನಿಷ್ಟ ಈಗಲಾದರೂ ನಿರಂತರತೆಯ ಬಗ್ಗೆ ಗಮನ ಹರಿಸಬೇಕು. ನಿರ್ವಹಿಸಬಹುದಾದ ದಿನಚರಿಯನ್ನು ರಚಿಸಿ. ಒಮ್ಮೆ ಅಭ್ಯಾಸವಾಗಿಬಿಟ್ಟರೆ ಇದು ಅತ್ಯಂತ ಸರಳ ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ.
ಪ್ರಯತ್ನಿಸಿ

ನಿತ್ಯ ಯಾವ ಕೆಲಸ ಕಾರ್ಯವನ್ನು ಮಾಡುವೆವೋ ಅದು ಕ್ರಮೇಣ ಸರಳವಾಗುವುದು. ಅಷ್ಟೇ ಅಲ್ಲ ಅದರಲ್ಲಿ ನಮ್ಮನ್ನು ಸರದಾರನನ್ನಾಗಿಸುತ್ತದೆ. ಆರ್‌ಸಿಬಿ ವರ್ಸಸ್ ಗುಜರಾತ ಲಯನ್ಸ್ನ ಮ್ಯಾಚಿನಲ್ಲಿ ೫೫ ಬಾಲ್‌ಗಳಲ್ಲಿ ೧೦೯ ರನ್ ಗಳಿಸಿದ ವಿರಾಟ ಕೋಹ್ಲಿ ಹೇಳಿದ್ದು ಹೀಗೆ: ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದೊಂದು ಪ್ರಜ್ಞಾಪೂರ್ವಕ ಪ್ರಯತ್ನ ಇದೊಂದು ತರ ಊಟ ನಿದ್ದೆಯಂತೆ ಪದೇ ಪದೇ ಮಾಡುತ್ತಲೇ ಇರುವುದು.’ ನಿರಂತರತೆಯಿಂದ ನಿಮ್ಮ ಆರೋಹಣದ ಮಾನದಂಡವನ್ನು ನೀವೇ ರೂಪಿಸುತ್ತೀರಿ. ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡಿ ಮತ್ತು ತಾಳ್ಮೆಯಿಂದಿರಿ. ವೈಫಲ್ಯಗಳಿಗೆ ನಿಮ್ಮನ್ನು ಕ್ಷಮಿಸುವ ಮೂಲಕ ಹಿನ್ನಡೆಗಳಿಗೆ ಸಿದ್ಧರಾಗಿರಿ. ಎಲ್ಲವನ್ನೂ ಒಂದೇ ಬಾರಿಗೆ ಮಾಡಲು ಪ್ರಯತ್ನಿಸುವ ಬದಲು ಕೆಲವು ಅಗತ್ಯ ವಿಷಯಗಳ ಮೇಲೆ ಕೇಂದ್ರೀಕರಿಸಿ. ನೀವು ಪ್ರಯತ್ನಗಳಲ್ಲಿ ತೊಡಗಿದಾಗ ನೀವು ಫಲಿತಾಂಶಗಳನ್ನು ನೋಡುತ್ತೀರಿ.
ಟಾರ್ಗೆಟ್
ಜೀವನಪೂರ್ತಿ ಬೆಳಿಗ್ಗೆ ಬೇಗ ಏಳುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಂಡು ಅದನ್ನು ಟಾರ್ಗೆಟ್ ಮಾಡಿಕೊಳ್ಳುತ್ತೇನೆ ಅದನ್ನು ರೂಢಿ ಮಾಡಿಕೊಳ್ಳುತ್ತೇನೆಂದು ನಿರ್ಧಾರ ಮಾಡಿದ ಒಂದು ವಾರ ಇಲ್ಲವೇ ಮರ‍್ನಾಲ್ಕು ದಿನ ಆದ ಮೇಲೆ ಇದು ನನ್ನಿಂದಾಗದೆಂದು ಕೈ ಚೆಲ್ಲುತ್ತೇವೆ. ಏಕೆ ಹೀಗೆ? ಇಲ್ಲಿ ಸಮಸ್ಯೆ ಇರುವುದು ಬೆಳಿಗ್ಗೆ ಬೇಗ ಏಳುವುದರಲ್ಲಿ ಅಲ್ಲ, ನಮಗೆ ನಾವು ಕೊಟ್ಟಿರುವ ದೀರ್ಘ ಸಮಯದ ಟಾರ್ಗೆಟ್‌ನಲ್ಲಿ. ಮೊದಮೊದಲು ಮನಸ್ಸಿಗೆ ಕೇವಲ ಒಂದು ವಾರ ಬೇಗ ಏಳುವ ಟಾರ್ಗೆಟ್ ನೀಡುವುದು. ಮುಂದಿನ ದಿನಗಳ ಬಗ್ಗೆ ಆಮೇಲೆ ಯೋಚಿಸುತ್ತೇನೆಂದು ಮನಸ್ಸಿಗೆ ಹೇಳಿಬಿಡುವುದು. ಹೆಚ್ಚು ಅವಧಿ ನೀಡಿದಷ್ಟು ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಕಷ್ಟವೆನಿಸುವುದು. ದಿನಾಲೂ ಕೇವಲ ೧೦ ನಿಮಿಷ ಓದಿದರೆ ಒಂದು ವರ್ಷಕ್ಕೆ ೩೬೫೦ ನಿಮಿಷ ಓದಿರುತ್ತೇವೆ ಅಂದರೆ ಒಟ್ಟು ೬೦ ಗಂಟೆಗಳ ಅಧ್ಯಯನ. ಇದು ನಿರಂತರತೆಯ ಪ್ರತಿಫಲ. ಸ್ಥಿರವಾಗಿರಲು ನಿಮಗೆ ಶಿಸ್ತು ಬೇಕು. ಶಿಸ್ತು ಎಂದರೆ ನಿಮಗೆ ಇಷ್ಟವಿರಲಿ ಇಲ್ಲದಿರಲಿ ನೀವು ಮಾಡಬೇಕಾದುದನ್ನು ಮಾಡುವುದು.
ಕೊನೆ ಹನಿ
ಇಂದು ನಾವು ಸುರಕ್ಷಿತ ವಲಯದಲ್ಲಿ ನಮ್ಮನ್ನು ನಾವು ಬಚ್ಚಿಟ್ಟುಕೊಳ್ಳುತ್ತ ಸಾಗಿದರೆ ಭವಿಷ್ಯ ಅಸುರಕ್ಷಿತ ವಲಯದಲ್ಲಿರುತ್ತದೆ. ಅದೇ ವರ್ತಮಾನ ಸುರಕ್ಷಿತ ವಲಯದಾಚೆ ಕೆಲಸ ಮಾಡುವ ಮನಸ್ಥಿತಿಯಲ್ಲಿದ್ದರೆ ಸಂದೇಹವೇ ಇಲ್ಲ ಭವಿಷ್ಯ ಸುರಕ್ಷಿತವಾಗಿರುತ್ತದೆ. ಇದನ್ನು ಇಂದೇ ನಿರ್ಧರಿಸಬೇಕು. ಬದ್ಧತೆಯನ್ನು ಅನುಸರಿಸಬೇಕು: ನಿರಂತರವಾಗಿ ಗುರಿಯತ್ತ ಹೆಜ್ಜೆ ಹಾಕುವುದರ ಮೂಲಕ. ನಿರಂತರವಾಗಿ ನಡೆಯುವವನಿಗೆ ಅನುಭವ ಹೆಚ್ಚೆಚ್ಚು ಸಿಗುವುದು. ‘ಯಶಸ್ವಿ ಜನರು ಅಸಾಧಾರಣ ಕೆಲಸಗಳನ್ನು ಮಾಡುವುದಿಲ್ಲ. ಅವರು ಸಾಮಾನ್ಯ ಕೆಲಸಗಳನ್ನು ಅಸಾಧಾರಣವಾಗಿ ಮಾಡುತ್ತಾರೆ.’ ದೊಡ್ಡ ವಿಷಯಗಳು ಸಂಭವಿಸಲು ಸಮಯ ತೆಗೆದುಕೊಳ್ಳುತ್ತದೆ. ಉಜ್ವಲ ಫಲಿತಾಂಶಗಳು ಆಕಸ್ಮಿಕವಾಗಿ ಸಂಭವಿಸುವುದಿಲ್ಲವೆಂಬುದನ್ನು ಮರೆಯದೇ ನಿರಂತರತೆಯ ದಾರಿಯಲ್ಲಿ ನಡೆಯುತ್ತಿದ್ದರೆ ಗೆಲುವು ತೆರೆದ ತೋಳುಗಳಿಂದ ಯಶಸ್ಸಿನ ಲೋಕಕ್ಕೆ ನಮ್ಮನ್ನು ಸ್ವಾಗತಿಸುತ್ತದೆ.
