“When Teachers Breakdown Silently: The Hidden Cost of Disrespect” ಲೇಖನದ ಭಾವಾನುವಾದ
ಅನುವಾದ
– ಪ್ರಶಾಂತ ಕುಲಕರ್ಣಿ
ಶಿಕ್ಷಕ, ಲೇಖಕ
ಶ್ರೀ ಪದ್ಮರಾಜ ಬಿ.ಎಡ್ ಕಾಲೇಜ್
ಸಿಂದಗಿ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಇಂದಿನ ಸಮಾಜದಲ್ಲಿ ಹಿಂಸಾಚಾರ, ಸುಲಿಗೆ, ಮೋಸ, ನೈತಿಕ ಕುಸಿತ ಇತ್ಯಾದಿ ಘಟನೆಗಳು ಹೆಚ್ಚುತ್ತಿವೆ. ಪ್ರತೀ ಸಾರಿ ಇಂತಹ ಘಟನೆಗಳು ಸಂಭವಿಸಿದಾಗ ಜನರ ಮೊದಲ ಪ್ರತಿಕ್ರಿಯೆ — “ಈಗಿನ ಮಕ್ಕಳು ಸರಿಯಿಲ್ಲ!” ಎನ್ನುವುದು. ಆದರೆ ಮಕ್ಕಳು ಅಂಥವರಾಗಲು ಕಾರಣವೇನು ಎನ್ನುವುದರ ಬಗ್ಗೆ ಯಾರೂ ಆಳವಾಗಿ ಚಿಂತಿಸೋದಿಲ್ಲ.
ಮಕ್ಕಳ ನಡೆ-ನುಡಿಗಳ ಹಿಂದೆ ಮನೆಯ ವಾತಾವರಣ, ಪೋಷಕರ ಧೋರಣೆ ಮತ್ತು ಶಿಕ್ಷಣ ವ್ಯವಸ್ಥೆಯ ಪ್ರಭಾವ ಅಡಗಿದೆ. ಇವೆಲ್ಲದರಲ್ಲಿಯೂ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ ಎಂಬುದು ನಿಸ್ಸಂಶಯ. ಆದರೆ ತಪ್ಪು ನಡೆದರೆ ಎಲ್ಲರ ತೋರು ಬೆರಳು ನೇರವಾಗಿ ಶಿಕ್ಷಕರತ್ತ ತಿರುಗುತ್ತದೆ.
ಒಂದು ಕಾಲದಲ್ಲಿ ಶಿಕ್ಷಕರು ದೇವರಷ್ಟೇ ಗೌರವಿಸಲ್ಪಡುತ್ತಿದ್ದರು. ರಸ್ತೆ ಮೇಲೆ ಶಿಕ್ಷಕರು ಎದುರಾದರೆ ಮಕ್ಕಳು ಮಾತ್ರವಲ್ಲದೆ ಅವರ ಪೋಷಕರೂ ಸಹ ಗೌರವದಿಂದ ನಮನ ಮಾಡುತ್ತಿದ್ದರು. “ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ” ಎಂಬ ಮಾತು ಕೇವಲ ಶ್ಲೋಕವಾಗಿರಲಿಲ್ಲ – ಅದು ಬದುಕಿನ ಮೌಲ್ಯವಾಗಿತ್ತು.
ಆದರೆ ಕಾಲ ಬದಲಾಗಿದೆ. ಇಂದು ಡೊನೇಷನ್, ಖಾಸಗಿ ಶಾಲೆ, ಕಂಪಿಟೇಷನ್‌ಗಳು ಎಲ್ಲವೂ ಶಿಕ್ಷಣದ ಮೌಲ್ಯವನ್ನು ವ್ಯಾಪಾರೀಕರಣಗೊಳಿಸಿವೆ.

ವ್ಯಕ್ತಿತ್ವ ನಿರ್ಮಾಣದ ಶಿಲ್ಪಿಗಳು
“ನಾವು ಕೊಡುವ ಹಣದಲ್ಲಿ ನಿಮಗೆ ಸಂಬಳ ಸಿಗುತ್ತದೆ, ಆದ್ದರಿಂದ ನೀವು ನಮ್ಮ ಸೇವಕರು” ಎಂಬ ಧೋರಣೆ ಶಿಕ್ಷಕರತ್ತ ಬೆಳೆಯುತ್ತಿದೆ. ಈ ಮನೋಭಾವನೆಯೇ ಸಮಾಜದಲ್ಲಿ ಶಿಕ್ಷಣದ ಗೌರವವನ್ನು ಕುಗ್ಗಿಸುತ್ತಿದೆ.
ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ. ಅವರು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದ ಶಿಲ್ಪಿಗಳು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಕರು ನಿಜಕ್ಕೂ ತ್ರಿಕೋನದೊಳಗೆ ಸಿಕ್ಕಿಹಾಕಿಕೊಂಡಿದ್ದಾರೆ —
ಒಂದು ಕಡೆ ವಿದ್ಯಾರ್ಥಿಗಳ ನಿರ್ಲಕ್ಷ ಮತ್ತು ಶಿಸ್ತುಹೀನತೆ,
ಇನ್ನೊಂದು ಕಡೆ ಪೋಷಕರ ಅನಗತ್ಯ ಹಸ್ತಕ್ಷೇಪ ಮತ್ತು ಅಗೌರವ,
ಮತ್ತೊಂದು ಕಡೆ ವ್ಯವಸ್ಥೆಯ ಅಸಮರ್ಪಕ ನೀತಿಗಳು.
ಈ ಎಲ್ಲದಕ್ಕೂ ಮಧ್ಯೆ ಶಿಕ್ಷಕರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸುತ್ತಿದ್ದಾರೆ.
ಪ್ರತಿ ಪಾಠದ ಯೋಜನೆ ರೂಪಿಸುವುದರಿಂದ ಹಿಡಿದು ತಡರಾತ್ರಿ ತನಕ ಪೇಪರ್ ಪರಿಶೀಲನೆ, ತರಗತಿಯಲ್ಲಿ ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು — ಇವೆಲ್ಲವೂ ಅವರ ದಿನನಿತ್ಯದ ಹೋರಾಟದ ಭಾಗ. ಆದರೆ ಈ ಹೋರಾಟಕ್ಕೆ ಸಾಮಾಜಿಕ ಗುರುತಿನ ಅಭಾವವೇ ಹೆಚ್ಚು ನೋವುಂಟುಮಾಡುತ್ತದೆ.
ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶಿಕ್ಷಕರು ತಮ್ಮ ಶಾಂತಿಯನ್ನು, ಸಮಯವನ್ನು, ಕುಟುಂಬದ ನೆಮ್ಮದಿಯನ್ನು ತ್ಯಜಿಸುತ್ತಾರೆ. ತಮ್ಮ ಮಾನಸಿಕ ಶಕ್ತಿ ಕುಗ್ಗಿದರೂ ತರಗತಿಯಲ್ಲಿ ನಗುಮುಖದಿಂದ ಪಾಠ ಹೇಳುತ್ತಾರೆ.
ಆದರೆ ಪ್ರತಿಫಲವಾಗಿ ಅವರಿಗೆ ಸಿಗುವುದು ನಿರ್ಲಕ್ಷ, ಅನುಮಾನ ಅಥವಾ ತೀಕ್ಷ್ಣ ಟೀಕೆ.
ಶಿಕ್ಷಣ ವೃತ್ತಿ ಕೇವಲ ಉದ್ಯೋಗವಲ್ಲ
“ನಿಮ್ಮ ಕೆಲಸ ಪಾಠ ಹೇಳುವುದಷ್ಟೇ ಅಲ್ಲವೇ?” ಎಂಬ ಪ್ರಶ್ನೆಗಳು ಶಿಕ್ಷಕರ ಹೃದಯವನ್ನು ಗಾಯಗೊಳಿಸುತ್ತವೆ.
ಇಂತಹ ಸಂದರ್ಭಗಳಲ್ಲಿ ಶಿಕ್ಷಕರು ಒಳಗೆ ಒಳಗೆ ಕುಸಿಯುತ್ತಾರೆ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ, ನೈತಿಕವಾಗಿ ನಿರಾಶರಾಗುತ್ತಾರೆ.
ಆದರೂ ಅವರು ತರಗತಿಗೆ ಹಾಜರಾಗುತ್ತಾರೆ. ತಮ್ಮ ನೋವನ್ನು ಮರೆಮಾಚಿ ಮಕ್ಕಳ ಮುಂದೆ ನಗುತ್ತಾರೆ. ಏಕೆಂದರೆ ಅವರಿಗೆ ಶಿಕ್ಷಣ ವೃತ್ತಿ ಕೇವಲ ಉದ್ಯೋಗವಲ್ಲ – ಅದು ಸೇವೆ, ಅದು ಸಾಧನೆ.
ಶಿಕ್ಷಕರು ಯಂತ್ರಗಳಲ್ಲ – ಅವರು ಮಾನವೀಯ ಹೃದಯಗಳು
ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮೊಬೈಲ್, ಇಂಟರ್ನೆಟ್, ಕೃತಕ ಬುದ್ಧಿಮತ್ತೆ (AI)ಗಳಿಂದ ಪ್ರಭಾವಿತರಾಗುತ್ತಿದ್ದಾರೆ. ಮಾಹಿತಿ ಸಿಗುತ್ತಿದೆಯಾದರೂ ಮೌಲ್ಯಗಳು ಮಾಯವಾಗುತ್ತಿವೆ.
ಈ ಸಂದರ್ಭದಲ್ಲಿ ಶಿಕ್ಷಕರ ಪಾತ್ರ ಇನ್ನಷ್ಟು ಮಹತ್ವದಾಗಿದೆ. ಅವರು ಕೇವಲ ವಿಷಯ ತಿಳಿಸುವವರಲ್ಲ, ಮೌಲ್ಯಗಳ ಮಾರ್ಗದರ್ಶಕರು.
ಶಿಕ್ಷಕರಿಗೂ ಸಂವೇದನೆಗಳಿವೆ
ಆದರೆ ಸಮಾಜ ಅವರನ್ನು ಗೌರವಿಸಲು ಮರೆತುಬಿಟ್ಟಿದೆ.
ಶಿಕ್ಷಕರಿಗೂ ಸಂವೇದನೆಗಳಿವೆ. ಅವರು ನೋವನುಭವಿಸುತ್ತಾರೆ, ದಣಿಯುತ್ತಾರೆ, ನೊಂದಾಗ ಸಮಾಧಾನ ಬೇಕು, ಗೌರವ ಬೇಕು. ಒಂದು “ಧನ್ಯವಾದ” ಅಥವಾ “ಗುರುತಿಸುವ ನಗು” ಕೂಡ ಅವರ ಚೈತನ್ಯಕ್ಕೆ ಹೊಸ ಜೀವ ತುಂಬಬಹುದು.
ಕೃತಜ್ಞತೆಯ ನಮನ ಸಲ್ಲಿಸಿ
ಪೋಷಕರು ಮಕ್ಕಳ ಶಿಕ್ಷಣದ ಹಾದಿಯಲ್ಲಿ ಶಿಕ್ಷಕರ ಸಹಯಾತ್ರಿಗಳು. ಶಿಕ್ಷಕರು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನಿಮ್ಮಷ್ಟೇ ಕನಸು ಕಾಣುವವರು.
ಆದ್ದರಿಂದ ಪೋಷಕರು ಶಿಕ್ಷಕರನ್ನು ಭೇಟಿಯಾದಾಗ ಅವರ ಕೆಲಸವನ್ನು ಅನುಮಾನಿಸದೆ, ಅವರ ತ್ಯಾಗವನ್ನು ಗುರುತಿಸಿ. ಅವರಿಗೂ ಕೃತಜ್ಞತೆಯ ನಮನ ಸಲ್ಲಿಸಿ.
ಶಿಕ್ಷಕರ ಗೌರವ ಎಂದರೆ ಶಿಕ್ಷಣದ ಗೌರವ
ಶಿಕ್ಷಕರು ದಣಿಯದಿರಲಿ, ಮೌನವಾಗದಿರಲಿ, ನೈತಿಕವಾಗಿ ಕುಸಿಯದಿರಲಿ — ಅವರ ಚೈತನ್ಯವೇ ಸಮಾಜದ ಬೆಳಕು.
ನಾವು ಎಲ್ಲರೂ ಅವರ ಶ್ರಮವನ್ನು ಗುರುತಿಸದಿದ್ದರೂ ಪರವಾಗಿಲ್ಲ;
ಆದರೆ ಅವರನ್ನು ಅವಮಾನಿಸಬೇಡಿ, ಅನುಮಾನಿಸಬೇಡಿ.
