ಇಂದು (ಅಕ್ಟೋಬರ ೧೫, ಬುಧವಾರ) “ಜಾಗತಿಕ ಕೈ ತೊಳೆಯುವ ದಿನ” ದ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಮಹಾತ್ಮಾ ಗಾಂಧೀಜಿಯವರು ಹೇಳಿರುವಂತೆ,Cleaniness is next to Godliness ” ಯಾವುದೇ ವ್ಯಕ್ತಿಯ ಆರೋಗ್ಯ ಉತ್ತಮವಾಗಿರಬೇಕಾದರೆ ಶುಚಿತ್ವ, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಇದರಿಂದ ರೋಗ-ರುಜಿನಗಳು ಬರದಂತೆ ತಡೆಗಟ್ಟಬಹುದು ಮತ್ತು ಜೀವ ಉಳಿಸಲು ಪರಿಣಾಮಕಾರಿ. ಯಾವುದೇ ಕೆಲಸ-ಕಾರ್ಯ ಮಾಡಿದ ನಂತರ ಸ್ವಚ್ಛವಾಗಿ ಕೈ ತೊಳೆದುಕೊಂಡು ನಮ್ಮ ದೈಹಿಕ ಆರೋಗ್ಯವನ್ನು ರೋಗಮುಕ್ತಗೊಳಿಸಬಹುದು. ಹೀಗೆ ಜನರು ತಮ್ಮ ಆರೋಗ್ಯವನ್ನು ಉತ್ತಮವನ್ನಾಗಿಸಿಕೊಳ್ಳಲು ಮತ್ತು ಕೈ ತೊಳೆಯುವಂತೆ ಪ್ರೇರೇಪಿಸಲು ಮತ್ತು ಶುಚಿತ್ವ ಮತ್ತು ನೈರ್ಮಲ್ಯತೆ ಕಾಪಾಡಿಕೊಳ್ಳಬೇಕೆಂದು ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ ೧೫ ರಂದು ಜಾಗತಿಕ ಕೈ ತೊಳೆಯುವ ದಿನವನ್ನು ಆಚರಿಸಲಾಗುತ್ತಿದೆ.
ಆಚರಣೆಯ ಇತಿಹಾಸ

ಮೊಟ್ಟಮೊದಲು ೨೦೦೮ ರಲ್ಲಿ ಗ್ಲೋಬಲ್ ಹ್ಯಾಂಡ್ ವಾಷಿಂಗ್ ಪಾರ್ಟನರ್‌ಶಿಫ್ ಸಂಸ್ಥೆಯು ಅಕ್ಟೋಬರ ೧೫ ರಂದು ಜಾಗತಿಕವಾಗಿ ಕೈ ತೊಳೆಯುವ ದಿನವನ್ನು ಆಚರಿಸಲು ಕರೆ ಕೊಟ್ಟಿತು. ವಿಶ್ವದಾದ್ಯಂತ ಸುಮಾರು ೭೦ ಕ್ಕೂ ದೇಶಗಳಲ್ಲಿ ೧೨೦ ಮಿಲಿಯನ್ ಗಿಂತಲೂ ಹೆಚ್ಚು ಮಕ್ಕಳು ಸೋಪಿನಿಂದ ಕೈ ತೊಳೆದುಕೊಂಡು ಈ ದಿನವನ್ನು ವಿಶಿಷ್ಟವಾಗಿ ಆಚರಿಸಿದರು. ಅಂದಿನಿಂದ ಪ್ರಾರಂಭಗೊಂಡ ಈ ಜಾಗೃತಿ ಅಭಿಯಾನವು ಇಂದು ವಿಶ್ವದೆಲ್ಲೆಡೆ ಪಸರಿಸಿದ್ದು, ಸ್ವಚ್ಛತೆ ಮತ್ತು ಆರೋಗ್ಯಕ್ಕಾಗಿ ಕೈ ತೊಳೆಯುವ ದಿನವು ಸಾಧನವಾಗಿ ಮಾರ್ಪಟ್ಟಿದೆ. ಪ್ರಪಂದಾದ್ಯಂತ ಕೈ ತೊಳೆಯುವ ಮಹತ್ವವನ್ನು ತಿಳಿಸಿಕೊಡುವ ಭಾಗವಾಗಿ ಸ್ವಚ್ಛತೆಯ ಸಂಸ್ಕೃತಿಯನ್ನು ಬೆಳೆಸಲು ಹಾಗೂ ಉತ್ತೇಜಿಸಲು ಈ ದಿನವನ್ನು ಆಚರಣೆಯ ಪ್ರಮುಖ ಉದ್ಧೇಶವಾಗಿದೆ. ಪ್ರತಿ ವರ್ಷ ಅಕ್ಟೋಬರ ೧೫ ರಂದು ಶಾಲೆ-ಕಾಲೇಜು, ಅಂತರಾಷ್ಟ್ರೀಯ ಸಂಸ್ಥೆಗಳು, ಎನ್.ಜಿ.ಓ, ಖಾಸಗಿ ಕಂಪನಿಗಳು ಈ ದಿನವನ್ನು ಆಚರಿಸುತ್ತಾ, ಶುಚಿತ್ವಕ್ಕೆ ಕೈ ಜೋಡಿಸುತ್ತಿವೆ.
ಈ ದಿನದ ಆಚರಣೆಯ ಮಹತ್ವ
ಶೀತ, ಜ್ವರ, ಅತಿಸಾರ ಕಾಯಿಲೆಗಳು ಮತ್ತು ಸಾಕ್ರಾಂಮಿಕ ರೋಗಗಳಿಂದ ಮುಕ್ತವಾಗಲು ಮತ್ತು ಸುರಕ್ಷಿತರಾಗಿರಲು ಕೈ ತೊಳೆಯುವುದು ಸುರಕ್ಷಿತ ಮಾರ್ಗಗಳಲ್ಲೊಂದಾಗಿದೆ. ಮಕ್ಕಳು, ಯುವಕರು, ಮಹಿಳೆಯರು ಮತ್ತು ಸಮುದಾಯದ ಜನರಲ್ಲಿ ಸೋಪ್ ಬಳಕೆ ಮತ್ತು ನೀರಿನಿಂದ ಕೈ ತೊಳೆದು ಶುಚಿತ್ವವನ್ನು ಹೊಂದಬೇಕೆಂಬ ವಿಷಯದ ಕುರಿತು ಅರಿವು ಮೂಡಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ಅದರಲ್ಲೂ ವಿಶೇಷವಾಗಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್‌ನಂತಹ ಕಾಲಘಟ್ಟದಲ್ಲಿ ವೈರಸ್, ಬ್ಯಾಕ್ಟೀರಿಯಾ ಮತ್ತು ಕ್ರಿಮಿ-ಕೀಟಾಣುಗಳಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಮೇಲಿಂದ ಮೇಲೆ ಸ್ವಚ್ಛವಾಗಿ ಕೈ ತೊಳೆದು ಮತ್ತು ಸೆನಿಟೈಜರ್ ಬಳಸುತ್ತಾ, ನೈರ್ಮಲ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಸುಲಭ ಮತ್ತು ಸರಳ ವಿಧಾನವಾದ ಕೈ ತೊಳೆಯುವದರ ಮೂಲಕ ನಮ್ಮ ಮತ್ತು ಇತರರಿಗೆ ರೋಗಾಣುಗಳು ಹರಡುವುದನ್ನು ತಡೆಯಬಹುದು ಮತ್ತು ನಾವು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾದ ಒಂದು ಮಹತ್ವದ ಹೆಜ್ಜೆಯಾಗಿದೆ. ಪ್ರಸ್ತುತ ಮತ್ತು ಮುಂದಿನ ಸುಸ್ಥಿರ ಭವಿಷ್ಯಕ್ಕಾಗಿ ಸಾರ್ವತ್ರಿಕ ನೈರ್ಮಲ್ಯವನ್ನು ಸಾಧಿಸಲು ಇಡೀ ಸಮಾಜದಲ್ಲಿ ‘ಸ್ವಚ್ಛತೆಯೆಡೆಗೆ ಒಂದು ನಡಿಗೆ’ ಎಂಬ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಎಲ್ಲರಲ್ಲಿಯೂ ಉತ್ತಮ ಆರೋಗ್ಯ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಮಹತ್ವದ ಕಾರ್ಯ ನಡೆಯಬೇಕಾಗಿದೆ.
೨೦೨೫ ನೇಯ ವರ್ಷಕ್ಕಾಗಿ ಈ ದಿನದ ಆಚರಣೆಯ ಘೋಷಣೆ
ಚಿಕ್ಕ ಮಕ್ಕಳಿಗೆ ಆಟವಾಡಿದ ನಂತರ ಕೈ ತೊಳೆಯುವಂತೆ ಅರಿವು ಮೂಡಿಸಿ ಅನಾರೋಗ್ಯಕ್ಕೆ ಅಥವಾ ಸೋಂಕು ಹರಡುವುದನ್ನು ತಡೆಗಟ್ಟಲು ಈ ದಿನದ ಆಚರಣೆಯು ಅವಶ್ಯಕವಾಗಿದೆ. ಈದು ಸೂಕ್ಷ್ಮ ಜೀವಿಗಳ ಹರಡುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುವ ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರ ಮೇಲೆ ಅವಲಂಬಿಸಿದೆ. “ಕೈ ತೊಳೆದು ಜೀವ ಉಳಿಸಿ” ಎಂಬ ಘೋಷಣೆಯಾಗಿದೆ. ಜಾಗತಿಕ ಮಟ್ಟದಲ್ಲಿ ಉತ್ತಮ ಮತ್ತು ಸುಸ್ಥಿರ ಆರೋಗ್ಯದ ದೃಷ್ಠಿಯಿಂದ ವಿಶ್ವದೆಲ್ಲೆಡೆ ಕಾರ್ಯಯೋಜನೆಗಳನ್ನು ರೂಪಸುತ್ತಾ, ರೋಗ ಹರಡುವಿಕೆಗೆ ಪ್ರಮುಖ ಕಾರಣವಾಗಿರುವ ಸ್ವಚ್ಛತೆಗೆ ಹೆಚ್ಚಿನ ನೀಡಬೇಕೆಂಬುದೇ ಈ ದಿನದ ಆಚರಣೆಯ ಧ್ಯೇಯೋದ್ಧೇಶವಾಗಿದೆ
ಕೊನೆಯ ನುಡಿ: ಮಹಾತ್ವಾ ಗಾಂಧೀಜಿಯವರ ‘ಸ್ವಚ್ಛ, ನೈವiðಲ್ಯ ಮತ್ತು ಆರೋಗ್ಯಯುತ ಭಾರತ’ ದ ಕನಸನ್ನು ನನಸಾಗಿಸಲು ನಾವೆಲ್ಲರೂ ಪ್ರತಿ ದಿನ ಕನಿಷ್ಠ ಮೂರು ಬಾರಿಯಾದರೂ ಊಟ ಮಾಡುವ ಮುಂಚೆ ಸ್ವಚ್ಛವಾಗಿ ಸೋಪಿನಿಂದ ಕೈ ತೊಳೆದುಕೊಂಡು ನಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕು ಮತ್ತು ಇತರರಿಗೆ ಯಾವುದೇ ವೈರಸ್ ಅಥವಾ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬೇಕಾಗಿರುವುದು ಅವಶ್ಯಕವಾಗಿದೆ. ನಾವು ಬದಲಾಗಬೇಕು ನಮ್ಮ ಸುತ್ತಮುತ್ತಲಿರುವ ಜನರಿಗೂ ಈ ಕೈ ತೊಳೆದುಕೊಳ್ಳವಂತೆ ಅರಿವು ಮೂಡಿಸಬೇಕು. ಅಂದಾಗ ಮಾತ್ರ ಈ ದಿನದ ಆಚರಣೆಯು ಅರ್ಥಪೂರ್ಣ ಮತ್ತು ಸಾರ್ಥಕತೆಯ ಮೌಲ್ಯವನ್ನು ಹೊಂದಿದಂತಾಗುತ್ತದೆ ಎಂದು ಹೇಳಬಹುದು.
