ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಡೋಣೂರ ಗ್ರಾಮದ ಕೆರೆ ಅಂಗಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬಸವನಬಾಗೇವಾಡಿ ತಾಲೂಕು ಘಟಕ ಹಾಗೂ ಸಾಮಾಜಿಕ ವಲಯ ಅರಣ್ಯ ಇಲಾಖೆ ಸಹಯೋಗದೊಂದಿಗೆ ಶನಿವಾರ ಸಸಿ ನೆಡುವ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ರಾಜು ಬೆಟಗೇರಿ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಡೋಣೂರ ಗ್ರಾಮದ ಕೆರೆಯನ್ನು ಹೂಳೆತ್ತಲಾಗಿತ್ತು. ಈ ಯೋಜನೆಯಡಿ 763 ನೇ ಕೆರೆಯಾಗಿದೆ. ಇದೀಗ ಹೂಳೆತ್ತಲಾದ ಕೆರೆ ಅಂಗಳದಲ್ಲಿ 300 ವಿವಿಧ ಬಗೆಯ ಅರಣ್ಯ ಸಸಿ ನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರು ಈ ಸಸಿಗಳು ಬೆಳೆಯುವಂತೆ ನೋಡಿಕೊಳ್ಳುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯ ಕಲ್ಲನಗೌಡ ಪಾಟೀಲ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಕೆರೆ ಸಮಿತಿಯ ಅಧ್ಯಕ್ಷರು ಮಹಾಂತೇಶ ಕೆರೂಟಗಿ, ಸದಸ್ಯ ಬಂದೇನಮಾಜ ಸುತಾರ, ಕೃಷಿ ಪತ್ತಿನ ಸಹಕಾರಿ ಸಂಘದ ಶಾಖಾ ಪ್ರಬಂಧಕ ಸಂಗಮೇಶ ಹಳ್ಳಿ, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು,ಗ್ರಾಮಸ್ಥರು ಇದ್ದರು.