ಇಂದು (ಅಕ್ಟೋಬರ-೧೧, ಶನಿವಾರ) “ವಿಶ್ವ ಹೆಣ್ಣು ಮಕ್ಕಳ ದಿನಚಾರಣೆ”ಯ ತನಿಮಿತ್ಯ ಈ ವಿಶೇಷ ಲೇಖನ)
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಜವಾಹರಲಾಲ ನೆಹರು ಅವರು, “ಒಬ್ಬ ಪುರುಷನನ್ನು ಶಿಕ್ಷಣವಂತನ್ನಾಗಿ ಮಾಡಿದರೆ ಅದು ಅವನ ವೈಯಕ್ತಿಕ ಬೆಳವಣಿಗೆ. ಒಬ್ಬ ಹೆಣ್ಣು ಮಗುವನ್ನು ಶಿಕ್ಷಣವಂತವನ್ನಾಗಿಸಿದರೆ ಅದು ಕುಟುಂಬ, ಸಮಾಜ ಮತ್ತು ಇಡೀ ರಾಷ್ಟ್ರವನ್ನೇ ಸುಶಿಕ್ಷಿತಗೊಳಿಸಿದಂತೆ. ಅದಕ್ಕಾಗಿ ಮಹಿಳೆಯ ಸಬಲೀಕರಣಕ್ಕಾಗಿ ಶಿಕ್ಷಣ ಒಂದು ಸಾಧನವಾಗಿದೆ” ಎಂದು ಹೇಳಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತಿನಂತೆ, ಪ್ರತಿ ಹೆಣ್ಣು ಮಗು ಶಿಕ್ಷಣ ಪಡೆದರೆ ಆಕೆ ಇಡೀ ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಶೈಕ್ಷಣಿಕ ಪ್ರಗತಿಗೆ ಪೂರಕವಾಗಬಲ್ಲಳು. ಹೆಣ್ಣು ಮಗು ಎಂದರೆ ಟೆನ್ಷನ್ ಅಲ್ಲ ಆಕೆಯು ಹತ್ತು ಗಂಡು ಮಕ್ಕಳಿಗೆ ಸರಸಾಟಿಯಾಗಬಲ್ಲ ಒಂದು ಶಕ್ತಿಯಾಗಿದ್ದಾಳೆ. ಈ ಭೂಮಿಯ ಮೇಲೆ ಹೆಣ್ಣು ಇಲ್ಲದಿದ್ದರೆ ಈ ಜಗತ್ತೇ ಇರುತ್ತಿರಲಿಲ್ಲ ಎಂಬುದನ್ನು ನಾವೆಲ್ಲರೂ ಮನಗಾಣಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿರುವುದು ಕಳವಳಕಾರಿ ಸಂಗತಿ. ಹೀಗೆಯೇ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ನಡೆದರೆ ಮುಂದೊಂದು ದಿನ ಇದು ದೊಡ್ಡ ಮಟ್ಟದ ಲಿಂಗಾನುಪಾತದಲ್ಲಿ ಗಂಭಿರ ಸಮಸ್ಯೆಯನ್ನು ಉಂಟು ಮಾಡಬಹುದು.
ಆಚರಣೆಯ ಉದ್ಧೇಶ
ವಿಶ್ವಸಂಸ್ಥೆಯು ಡಿಸೆಂಬರ ೧೧, ೨೦೧೧ ರಂದು ಬೀಜಿಂಗನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಗತ್ತಿನಾದ್ಯಂತ ಹೆಣ್ಣು ಮಕ್ಕಳ ಹಾಗೂ ಮಹಿಳೆಯರು ಎದುರಿಸುವ ಸವಾಲು-ಸಮಸ್ಯೆಗಳತ್ತ ಬೆಳಕು ಚೆಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಆಕೆಯು ಇತರ ಎಲ್ಲರಂತೆ ಸಮನವಾದ ಹಕ್ಕು-ಅವಕಾಶಗಳನ್ನು ಒದಗಿಸಿಕೊಟ್ಟು ಮಹಿಳಾ ಸಬಲೀಕರಣಕಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಉದ್ದೇಶದಿಂದ ಈ ದಿನದಂದು ವಿಶ್ವ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಯಿತು. ಇಂದು ಜಗತ್ತಿನಾದ್ಯಂತ ಹೆಣ್ಣು ಮಕ್ಕಳು ಹೆಣ್ಣು ಭ್ರೂಣ ಹತ್ಯೆ, ಲಿಂಗ ಭೇದ, ಲೈಂಗಿಕ ಕಿರುಕುಳ, ವರದಕ್ಷಿಣೆ, ಮಾನಸಿಕ ಹಿಂಸೆ ಮುಂತಾದ ರೀತಿಯಿಂದ ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ನಿವಾರಣೆ, ಅವರ ಮೇಲಾಗುವ ಶೋಷಣೆ ಮತ್ತು ದೌರ್ಜನ್ಯವನ್ನು ಹೋಗಲಾಡಿಸಿ, ತನ್ಮೂಲಕ ಸಮಾಜದಲ್ಲಿ ಆಕೆಗಿರುವ ಹಕ್ಕು, ಅವಕಾಶ, ಸ್ಥಾನಮಾನ-ಗೌರವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೇ ಅಕ್ಟೋಬರ ೧೧ ರಂದು ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯ ಮಹೋನ್ನತ ಉದ್ಧೇಶವಾಗಿದೆ.
೨೦೨೫ ನೆಯ ವರ್ಷದ ಘೋಷವಾಕ್ಯ

” ಎಂಬ ಘೋಷವಾಕ್ಯದೊಂದಿಗೆ ಈ ೨೦೨೪ ರ ವರ್ಷದ ವಿಶ್ವ ಹೆಣ್ಣು ಮಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಹೆಣ್ಣು ದೊರೆಯುವ ಎಲ್ಲ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ತನ್ನಲಿರುವ ಪ್ರತಿಭೆಗೆ ಒಂದು ವೇದಿಕೆಯನ್ನು ಕಲ್ಪಿಸಿಕೊಳ್ಳಬೇಕು ಮತ್ತು ಆಕೆ ಪುರುಷನಂತೆ ಎಲ್ಲ ರಂಗಗಳಲ್ಲಿಯೂ ಸಮರ್ಥ ಪೈಪೋಟಿ ನೀಡುತ್ತಾ ಅಮೋಘವಾದ ಸಾಧನೆಯನ್ನು ತೋರುವಂತಾಗಬೇಕು. ಇಂದಿನ ಆಧುನಿಕ ಯುಗದಲ್ಲಿ ಹೆಣ್ಣು ಉತ್ತಮ ಶಿಕ್ಷಣ ಪಡೆದು ತನ್ನ ಜ್ಞಾನ, ಪ್ರತಿಭೆ, ಕೌಶಲ್ಯ, ಕಾರ್ಯತತ್ಪರತೆ ಮತ್ತು ಕಾರ್ಯದಕ್ಷತೆಯಂತಹ ಪಂಚ ಗುಣಗಳಿಂದ ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದ್ದಾಳೆ. ಅದಕ್ಕಾಗಿ ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಶಿರ್ಷೀಕೆಯಡಿಯಲ್ಲಿ ಹುಟ್ಟುವ ಪ್ರತಿ ಹೆಣ್ಣು ಮಗುವಿಗೆ ಶಿಕ್ಷಣ ನೀಡಿ ಆಕೆ ಮನ, ಮನೆ, ಕುಟುಂಬ, ಸಮಾಜ, ರಾಷ್ಟ್ರ ಮತ್ತು ವಿಶ್ವದಲ್ಲಿ ಶಿಕ್ಷಣದ ಪ್ರಭೆಯನ್ನು ಎಲ್ಲೆಡೆ ಬೆಳಗಲು ಹಾಗೂ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಿ ರಾಷ್ಟçದ ಪ್ರಗತಿಗೆ ತನ್ನ ಕೊಡುಗೆಯನ್ನು ನೀಡಲು ಸೂಕ್ತ ಪರಿಸರ ಮತ್ತು ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ಅಂದಾಗ ಮಾತ್ರ ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾದ ಹೆಣ್ಣನ್ನು ಗೌರವಿಸಿದಂತಾಗುತ್ತದೆ.
ಆಚರಣೆಯ ಮಹತ್ವ

ಜಗತ್ತಿನಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ಮೊದಲು ಹೆಣ್ಣು ಮಕ್ಕಳು ಮತ್ತು ಮಹಿಳಾ ಸಬಲೀಕರಣಗೊಳಿಸಬೇಕು ಹಾಗೂ ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಪುರುಷ ಮತ್ತು ಮಹಿಳೆಯರಲ್ಲಿ ಸಮಾನತೆಯನ್ನು ತರಲು ಪ್ರೇರೇಪಿಸಬೇಕು. ಆಕೆ ವಿಶ್ವದಲ್ಲಿ ಸಾಧನೆಯ ಮೈಲಿಗಲ್ಲನ್ನು ಸಾಧಿಸುವಂತೆ ಪುರುಷ ಸಮಾಜವು ಒಳ್ಳೆಯ ಸಹಾಯ-ಸಹಕಾರ, ಉತ್ತೇಜನ ಮತ್ತು ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ನಮ್ಮ ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆ-ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತಾ, ಆ ಸವಾಲುಗಳನ್ನು ಆಕೆ ದಿಟ್ಟತನದಿಂದ ಸಮರ್ಥವಾಗಿ ಎದುರಿಸುವಂತಾಗಲು ಹಾಗೂ ಆಕೆ ಅಬಲೆಯಲ್ಲ, ಸಬಲಳು ಎಂಬುದನ್ನು ಇಡೀ ಸಮಾಜಕ್ಕೆ ತೋರ್ಪಡಿಸಬೇಕು ಎಂಬುದು ಈ ದಿನದ ಪ್ರಮುಖ ಧ್ಯೇಯವಾಗಿದೆ. ಒಂದು ಕಾಲದಲ್ಲಿ ಹೆಣ್ಣು ಎಂದರೆ ಮನೆಗೆ ಹುಣ್ಣು ಎಂಬ ಮೌಢ್ಯತೆಯ ಸೋಂಕು ಜನರಲ್ಲಿ ತುಂಬಿತ್ತು. ಆದರೆ ಇಂದು ಹೆಣ್ಣು ಮಗಳು ಕಾಲಿಡದ ಕ್ಷೇತ್ರವಿಲ್ಲ, ಆಕೆಯು ತನ್ನ ಸ್ವ-ಸಾಮಥ್ಯ, ಪ್ರತಿಭೆ, ಜಾಣ್ಮೆ, ತಾಳ್ಮೆ, ಕಾರ್ಯದಕ್ಷತೆ ಮತ್ತು ಸ್ಪರ್ಧಾತ್ಮಕ ಮನೋಭಾವ ಮತ್ತು ಆತ್ಮವಿಶ್ವಾಸದಿಂದ ಇಂದು ಶಿಕ್ಷಣ, ಕಲೆ-ಸಾಹಿತ್ಯ, ಕ್ರೀಡೆ, ಸಂಗೀತ, ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ-ಸಂಶೋಧನೆ, ಬಾಹ್ಯಾಕಾಶ-ಅಂತರಿಕ್ಷ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿಯೂ ಮಹತ್ತರವಾದ ಸಾಧನೆ ತೋರುತ್ತಾ ಮುನ್ನಡೆದಿದ್ದಾಳೆ.
ಕೊನೆಯ ನುಡಿ
ಹೆಣ್ಣೆಂದರೆ ಅದೊಂದು ಅದ್ಭುತ ಶಕ್ತಿ, ವ್ಯಕ್ತಿಯ ಮನ, ಮನೆ ಬೆಳಗುವ ಪ್ರಭೆಯಂತೆ ಇಡೀ ಕುಟುಂಬ ಸದಸ್ಯರು, ಸಮಾಜವನ್ನು ತಿದ್ದಿ-ತೀಡಿ ಸಾಮಾಜಿಕ ಪರಿವರ್ತನೆಯನ್ನು ತರುವಲ್ಲಿ ಆಕೆಯ ಪಾತ್ರ ಅನನ್ಯವಾದುದು. ಹೆಣ್ಣು ನಮ್ಮ ಮನೆಯ ನಂದಾದೀಪ ಎಂಬುದನ್ನು ಅರಿತು ಪ್ರತಿಯೊಬ್ಬರೂ ಹೆಣ್ಣು ಮಗು ಜನಿಸಿದಾಗ ಮನೆಯ ಮುಂದೆ ದೀಪ ಹಚ್ಚಿ ಸಂಭ್ರಮಿಸೋಣ. ಹೆಣ್ಣು ಇಲ್ಲದಿದ್ದರೆ ಗಂಡು ಇಲ್ಲ ಎಂಬುದನ್ನು ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸೋಣ. ಆದ್ದರಿಂದ ಪ್ರತಿ ಹೆಣ್ಣು ಮಗುವನ್ನು ಉಳಿಸಿ-ಬೆಳೆಸಿ, ಗೌರವಿಸಿ ಆಕೆಗೆ ಬದುಕಿಗೊಂದು ಆಸರೆ-ಆಶ್ರಯವಾಗಲು ಉತ್ತಮ ಶಿಕ್ಷಣ ನೀಡುತ್ತಾ, ಸಮಜದ ಮುಖ್ಯ ವಾಹಿನಿಗೆ ಬರಲು ಅವಕಾಶ ನೀಡಬೇಕು ಅಂದಾಗ ಮಾತ್ರ ಈ ವಿಶ್ವ ಹೆಣ್ಣು ಮಗು ದಿನಾಚರಣೆ ಆಚರಿಸುವುದು ಅರ್ಥಪೂರ್ಣವಾಗುತ್ತದೆ ಎಂಬುದೇ ನನ್ನ ಅಂಬೋಣ.
