ಇಂದು (ಅಕ್ಟೋಬರ-೧೦, ಶುಕ್ರವಾರ) ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಗೌತುಮ ಬುದ್ಧ ಅವರು, “ಮನುಷ್ಯನಿಗೆ ಆರೋಗ್ಯವೇ ಶ್ರೇಷ್ಠ ಉಡುಗೊರೆ. ಸಂತೃಪ್ತಿಯೇ ಶ್ರೇಷ್ಠ ಸಂಪತ್ತು. ವಿಶ್ವಾಸಾರ್ಹತೆಯೇ ಶ್ರೇಷ್ಠ ಸಂಬಂಧ” ಎಂದು ಹೇಳಿದ್ದಾರೆ. ಮಾನಸಿಕ ಆರೋಗ್ಯ ಎಂದರೆ ಮನಸ್ಸಿನ ಆರೋಗ್ಯ, ಮನಸ್ಸು ಆರೋಗ್ಯದಿಂದಿರುವುದು ದು ಹೇಳಬಹುದು. ಒಬ್ಬ ವ್ಯಕ್ತಿ ತನ್ನೊಂದಿಗೆ ಮತ್ತು ಸುತ್ತಮುತ್ತಲಿನ ಪರಿಸರದೊಂದಿಗೆ ಹೊಂದಾಣಿಕೆಯ ಮನೋಭಾವವನ್ನು ಹೊಂದಿರುವ ಸ್ಥಿತಿಯೇ ಮಾನಸಿಕ ಆರೋಗ್ಯವಾಗಿದೆ.
ಖ್ಯಾತ್ ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರೀಡ್ ಅವರು, “ಸಾವನ್ನು ಪಡೆಯಲು ಸಾವಿರ ದಾರಿಗಳಿವೆ, ಆದರೆ ಬದುಕನ್ನು ಕಂಡುಕೊಳ್ಳಲು ದಾರಿ ಒಂದೇ ಅದುವೇ ಆತ್ಮವಿಶ್ವಾಸ” ಎಂದು ಹೇಳಿದ್ದಾರೆ. ಪ್ರತಿ ವರ್ಷ ಅಕ್ಟೋಬರ ೧೦ ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವು ಪ್ರಮುಖ ಕಾರಣವಾಗಿದೆ. ಶಾಲೆೆ-ಕಾಲೇಜು ಮತ್ತು ಸಾರ್ವಜನಿಕವಾಗಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಆರೋಗ್ಯ ಶಿಕ್ಷಣ ನೀಡುತ್ತಾ, ಮಾನಸಿಕ ಅಸ್ವಸ್ಥತೆಯ ವಿರುದ್ಧ ಹೋರಾಡಬೇಕೆಂಬ ಮಹೋನ್ನತವಾದ ಉದ್ಧೇಶದಿಂದ ಜಾಗತಿಕವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲರಿಗೂ ಉತ್ತಮ ಗುಣಮಟ್ಟದ ಮಾನಸಿಕ ಆರೋಗ್ಯ ರಕ್ಷಣೆಯನ್ನು ಒದಗಿಸುವುದು ಪ್ರಮುಖ ಗುರಿಯಾಗಿದೆ.
ಆಚರಣೆಯ ಇತಿಹಾಸ

ಮೊಟ್ಟಮೊದಲಿಗೆ ೧೯೯೨ ರಲ್ಲಿ ದಕ್ಷಿಣ ಆಫ್ರಿಕಾದ ಕೇಫ್ ಟೌನದಲ್ಲಿ ಜರುಗಿದ ಸಭೆಯಲ್ಲಿ ವರ್ಲ್ಡ ಫೆಡರೇಷನ್ ಫಾರ್ ಮೆಂಟಲ್ ಹೆಲ್ತ್ ಸಂಸ್ಥೆಯು ಮಾನಸಿಕ ಆರೋಗ್ಯ ಜಾಗೃತಿಗಾಗಿ ಒಂದು ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಪ್ರಸ್ತಾಪಿಸಲಾಯಿತು. ನಂತರ ಈ ದಿನವನ್ನು ಆಚರಣೆಯನ್ನು ಅಧಿಕೃತವಾಗಿ ಅಂಗೀಕರಿಸಿ, ೧೯೯೨ ಈ ದಿನವನ್ನು ಆಚರಿಸಲು ತೀರ್ಮಾನಿಸಲಾಯಿತು. ವಿಶ್ವದಾದ್ಯಂತ ಉತ್ತಮ ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯನ್ನು ತಿಳಿಸುವ, ಜನರ ಮಾನಸಿಕ ಯೋಗಕ್ಷೇಮವನ್ನು ಪ್ರೇರೇಪಿಸುವ ಮತ್ತು ಕಾಳಜಿ ವಹಿಸುವ ಕ್ರಮಗಳ ಬಗ್ಗೆ ಬೆಳಕು ಚೆಲ್ಲಲು ಮತ್ತು ಅವಶ್ಯಕ ಅರಿವು ಮೂಡಿಸುವುದು ಈ ದಿನದ ಆಚರಣೆಯು ಮಹತ್ವವನ್ನು ಪಡೆದುಕೊಂಡಿದೆ.
ಆಚರಣೆಯ ಮಹತ್ವ
ಮಾನಸಿಕ ಆರೋಗ್ಯವು ವ್ಯಕ್ತಿಯ ಇಡೀ ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆರೋಗ್ಯವು ಹದಗೆಟ್ಟು ಖಿನ್ನತೆ, ಆತಂಕ, ಮಾನಸಿಕ ಒತ್ತಡ, ಉದ್ವೇಗ, ಆಕ್ರೋಶ, ಆವೇಶದಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ಎಳೆಯ ವಯಸ್ಸಿನವರು ಮತ್ತು ಹದಿಹರೆಯದವರಲ್ಲಿ ಮಾನಸಿಕ ಆರೋಗ್ಯ ಸಂಬಂಧಿ ಸಮಸ್ಯೆಗಳು ತಲೆದೋರುತ್ತವೆ. ಜನರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಮತ್ತು ಕಟ್ಟುಕತೆಗಳನ್ನು ಹೋಗಲಾಡಿಸಿ, ಆರೋಗ್ಯ ಕಾಪಾಡಿಕೊಳ್ಳುವ ವಿವಿಧ ಹಂತಗಳ ಬಗ್ಗೆ ಜಾಗೃತಿ ಮೂಡಿಸುವುದು. ಯಾವುದೇ ಕಾರಣಕ್ಕೂ ಮಾನಸಿಕ ಆರೋಗ್ಯವನ್ನು ನಿರ್ಲಕ್ಷ್ಯ ಮಾಡದೇ ಮಾನಸಿಕ ತೊಂದರೆ, ದುಗುಡ, ಆತಂಕ, ಸಂಘರ್ಷ-ಒತ್ತಡ, ಖಿನ್ನತೆ ಮತ್ತು ಅಂರ್ತಮುಖಿ ಮಾನಸಿಕ ವೇದನೆಯ ಬಗ್ಗೆ ಮನೋವೈದ್ಯರಲ್ಲಿ ಹೇಳಿಕೊಂಡು ಆಪ್ತಸಮಾಲೋಚನೆಯ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ ಪ್ರತಿ ಎಂಟು ಜನರಲ್ಲಿ ಒಬ್ಬ ವ್ಯಕ್ತಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ಕಂಡುಬಂದಿದೆ.
೨೦೨೫ ನೇಯ ವರ್ಷದ ಧ್ಯೇಯವಾಕ್ಯ
“ಮಾನವೀಯ ತುರ್ತು ಪರಿಸ್ಥಿತಿಗಳಲ್ಲಿ ಮಾನಸಿಕ ಆರೋಗ್ಯ” ಎಂಬ ಘೋಷವಾಕ್ಯದೊಂದಿಗೆ ಸಂಘರ್ಷ, ವಿಪತ್ತು ಮತ್ತು ಆರೋಗ್ಯ ತುರ್ತು ಪರಿಸ್ಥಿಗಳಂತಹ ಸಂದರ್ಭಗಳು ಜನರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ. ಅಂತಹ ಸನ್ನಿವೇಶಗಳಲ್ಲಿ ಆಹಾರ, ನೀರು ಮತ್ತು ಔಷಧಿಗಳಲ್ಲದೇ, ಬದುಕಿ ಉಳಿದವರಿಗೆ ನಿಭಾಯಿಸಲು, ಚೇತರಿಸಿಕೊಳ್ಳಲು ಮತ್ತು ಪುನರ್ ನಿರ್ಮಿಸಲು ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಬೆಂಬಲವೂ ಅತ್ಯಗತ್ಯವಾಗಿರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಈ ವರ್ಷದ ಆಚರಣೆಯ ಧ್ಯೇಯೋದ್ಧೇಶವಾಗಿದೆ.
ಕೊನೆಯ ನುಡಿ
ಈ ದಿನದ ಆಚರಣೆಯನ್ನು ಪ್ರತಿ ಶಾಲೆ-ಕಾಲೇಜು, ಸರ್ಕಾರ, ಸಂಸ್ಥೆಗಳು ಮತ್ತು ಸಾರ್ವಜನಿಕವಾಗಿ ಜಾಗೃತಿ ಮೂಡಿಸುವದರ ಮೂಲಕ ಯುವಕರು, ಸಮುದಾಯ, ಸಾರ್ವಜನಿಕರು ಮತ್ತು ಸಮಾಜದಲ್ಲಿ ಅರಿವು ಮೂಡಿಸಬೇಕು. ತೀವ್ರ ವೇದನೆ, ಖಿನ್ನತೆ, ಮಾನಸಿಕ ಹಿಂಸೆ, ವೈಫಲ್ಯ ಮತ್ತು ಯಾವುದೇ ಸಮಸ್ಯೆಯಿಂದ ಬಳಲುತ್ತಿರುವ ಜನರಲ್ಲಿ ಆತ್ಮಹತ್ಯಾ ಮನೋಭಾವ ಹೆಚ್ಚಾಗಿರುತ್ತದೆ. ಅದರಲ್ಲೂ ಹೆಚ್ಚಾಗಿ ಯುವಕರಲ್ಲಿ ಇದು ಅತೀ ಗಂಭೀರ ಸ್ವರೂಪದ ಮಾನಸಿಕ ಸಮಸ್ಯೆಯಾಗಿ ಕಂಡುಬರುತ್ತಿದೆ. ಆದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿರುವ ಯುವಕರಿಗೆ ಆಪ್ತಸಮಾಲೋಚನೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ ಎಂಬ ಆತ್ಮವಿಶ್ವಾಸ ಮತ್ತು ಅರಿವಿನ ಬೆಳಕನ್ನು ಮೂಡುವಂತೆ ಮಾಡುವುದು ಇಂದಿನ ಅಗತ್ಯತೆಯಾಗಿದೆ.
