ಇಂದು (ಅಕ್ಟೋಬರ-೯, ಗುರುವಾರ) ವಿಶ್ವ ಅಂಚೆ ದಿನದ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಆಗ ಒಂದು ಕಾಲವಿತ್ತು, ನಮ್ಮ ಎಲ್ಲ ವ್ಯವಹಾರಗಳು ಕೇವಲ ಪತ್ರದ ಮುಖೇನ ನಡೆಯುತ್ತಿದ್ದವು. ಸೈಕಲ್ ಮೇಲೆ ಟ್ರಿನ್ ಟ್ರಿನ್ ಎಂಬ ಸೈಕಲ್ ಗಂಟೆಯ ಶಬ್ದ ಮಾಡುತ್ತಾ, ಮನೆ ಮುಂದೆ ಬಂದು ನಿಂತು “ಪೋಸ್ಟ್” ಎಂದು ಕೂಗಿ ಕರೆದು ಪತ್ರ ನೀಡುತ್ತಿದ್ದ ಪೋಸ್ಟಮ್ಯಾನ್. ಸೇನೆಯಲ್ಲಿ ಸೈನಿಕನಿಂದ ಯಾವುದೇ ಸುಖ-ದುಃಖದ ಸಂದೇಶಗಳು ಬಂದರೂ ಅವು ಕೇವಲ ಊರಿನ ಪೋಸ್ಟನಲ್ಲಿ ಟೆಲಿಗ್ರಾಮ್ ಮೂಲಕವೇ ಬರುತ್ತಿದ್ದವು. ಮನೆಯವರಿಗೆ, ನೆಂಟರಿಗೆ ಅಥವಾ ಸಂಬಂಧಿಗಳಿಗೆ ಯಾವುದೇ ವಿಷಯದ ಬಗ್ಗೆ ತಿಳಿಸಬೇಕೆಂದರೂ ೧೫ ಪೈಸೆ ಮೌಲ್ಯದ ಪೋಸ್ಟ್ ಕಾರ್ಡಗಳೇ ನಮಗೆ ಗತಿ. ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಪರ್ಕ-ಸಂವಹನದ ಮಾಧ್ಯಮ-ಜಾಲವಾಗಿ ಕಾರ್ಯನಿರ್ವಹಿಸುತ್ತಿದ್ದ ಪೋಸ್ಟಲ್ ಇಲಾಖೆಯು ಮನಿ ಆರ್ಡರ್, ಇನಲ್ಯಾಂಡ್, ವೃದ್ಯಾಪ್ಯ ವೇತನ, ಅಂಗವಿಕಲರ ವೇತನ, ನೌಕರರ ಮಾಸಿಕ ಪಿಂಚಣ, ಮೋಬೈಲ್ ಬ್ಯಾಂಕಿಂಗ್ ನಂತಹ ಸೇವೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಏಕೈಕ ಸರಕಾರಿ ಸ್ವಾಮ್ಯದ ಸೇವಾ ಸಂಸ್ಥೆಯಾಗಿ ಸಂಪರ್ಕದ ಸೇತುವೆಯಂತೆ ಕೆಲಸ ಮಾಡುತ್ತಿದೆ. ಪ್ರತಿ ವರ್ಷ ಅಕ್ಟೋಬರ ೯ ರಂದು ವಿಶ್ವದಾದ್ಯಂತ ಅಂಚೆ ದಿನವನ್ನು ಆಚರಿಸಲಾಗುತ್ತಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಸಂವಹನ, ಸಾಮಾಜಿಕ ಸಂಪರ್ಕ ಮತ್ತು ಅಂಚೆ ಸೇವೆಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಅಂಚ ದಿನದ ಆಚರಣೆಯ ಇತಿಹಾಸ

೧೮೭೪ ರಲ್ಲಿ ಸ್ವೀಝರಲ್ಯಾಂಡನ ಬರ್ನ ಎಂಬಲ್ಲಿ ಜರುಗಿದ ಯುನಿವರಸಲ್ ಪೋಸ್ಟಲ್ ಯುನಿಯನ್ ಸಂಸ್ಥೆಯ ಸವಿನೆನಪಿಗಾಗಿ ಪ್ರತಿವರ್ಷ ಅಕ್ಟೋಬರ ೯ ರಂದು ವಿಶ್ವ ಅಂಚೆ ದಿನವನ್ನ್ಲು ಆಚರಿಸಲಾಗುತ್ತಿದೆ. ಈ ದಿನದ ಆಚರಣೆಯ ಪ್ರಮುಖವಾಗಿ ಇಡೀ ಜಗತ್ತಿನಲ್ಲಿ ನಿರಂತರವಾಗಿ ಅಂಚೆ ಸೇವೆಯನ್ನು ನೀಡುವ ಅಂಚೆಯಣ್ಣನ ಶ್ರಮವನ್ನು ಸ್ಮರಿಸುವ ಮಹೋನ್ನತವಾದ ಉದ್ಧೇಶವಾಗಿದೆ. ೧೯೬೯ ರಲ್ಲಿ ಜಪಾನ ದೇಶದ ಟೋಕಿಯೋ ದಲ್ಲಿ ನಡೆದ ಜಾಗತಿಕ ಅಂಚೆ ಸಹಕಾರಿ ಸಂಘ (ಯು.ಪಿ.ಯು.ಸಿ) ವು ಈ ದಿನದಂದು ವಿಶ್ವ ಅಂಚೆ ದಿನವನ್ನಾಗಿ ಆಚರಿಸಲು ಕರೆ ಕೊಟ್ಟಿತು. ಇಂದಿನ ಡಿಜಿಟಲ್ ಯುಗದಲ್ಲಿ ಸಂವಹನ, ಸಾಮಾಜಿಕ ಸಂಪರ್ಕ ಮತ್ತು ಅಂಚೆ ಸೇವೆಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಅಂಚೆ ಇಲಾಖೆಯ ಕಾರ್ಯವೈಖರಿ ಗಮನಾರ್ಹ
ಅಂಚೆ ಸೇವೆಯು ಇಡೀ ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಸರಕು ಸಾಗಾಣಿಕಾ ಸೇವಾ ಸಂಸ್ಥೆಯಾಗಿದೆ. ಆರಂಭದಲ್ಲಿ ಕೇವಲ ಕೆಲವೇ ಸೇವೆಗಳಿಗೆ ಮಾತ್ರ ಸಿಮೀತವಾಗಿದ್ದ ಈ ಪೋಸ್ಟಲ್ ಸೇವೆಯು ಇಂದು ಜಗತ್ತಿನಾದ್ಯಂತ ಲೊಜಿಸ್ಟಿಕ್ ಮ್ಯಾನೇಜಮೆಂಟ್ ಹೆಸರಿನಲ್ಲಿ ವಿಶ್ವದೆಲ್ಲೆಡೆ ತನ್ನ ಸೇವೆಯನ್ನು ಪಸರಿಸಿ ಕೇವಲ ಸಂಪರ್ಕ-ಸಂವಹನದ ಮಾಧ್ಯಮವಾಗಿ ಮಾತ್ರ ಉಳಿದಿಲ್ಲ. ಅದೊಂದು ಸರಕಾರದ ಎಲ್ಲ ಮಹತ್ತರ ಯೋಜನೆಗಳ ಯಶಸ್ವಿ ಅನುಷ್ಠಾನದಲ್ಲಿ ನಾಗರೀಕರಿಗೆ ಅಗತ್ಯ ಸೇವೆಗಳನ್ನೊಳಗೊಂಡಂತೆ ಬ್ಯಾಂಕಿಂಗ್, ವಿಮೆ, ಸಣ್ಣ ಉಳಿತಾಯ ಮತ್ತು ಭವಿಷ್ಯ ನಿಧಿ ಹೀಗೆ ಹಲವಾರು ಪ್ರಮುಖವಾದ ಕ್ಷೇತ್ರಗಳಲ್ಲಿ ಅಮೂಲ್ಯವಾದ ಸೇವೆಯನ್ನು ಒದಗಿಸುತ್ತಿದೆ. ಅದರಲ್ಲಿ ವಿಶೇಷವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ ಜನರ ಕೈಯಲ್ಲಿ ಸ್ಮಾರ್ಟ ಫೋನ್ ಇದ್ದರೂ ಅಂಚೆ ಇಲಾಖೆಯು ಭಾರತದ ಪ್ರಮುಖ ಸಂವಹನ ವಿಧಾನ ಮತ್ತು ಭರವಶೆಯ ಮಾಧ್ಯಮವಾಗಿ ಇಂದಿಗೂ ಉಳಿದುಕೊಂಡಿರುವುದು ಸೇವೆಯ ಮೈಲಿಗಲ್ಲು ಎಂದು ಹೇಳಬಹುದು. ಅದರಲ್ಲೂ ಇಂದಿನ ಹೊಸ ತಂತ್ರಜ್ಞಾನ-ಸಂವಹನದ ವಿಧಾನಗಳ ಆಗಮನದಿಂದ, ಅಂಚೆ ಇಲಾಖೆಯ ಸಾಂಪ್ರದಾಯಿಕ ಸಂದೇಶ ರವಾನೆ ಸೇವೆ ಕೊಂಚ ಕಡಿಮೆಯಾದರೂ ಸರಕಾರಿ ಇಲಾಖೆಗಳ ಪತ್ರ ವ್ಯವಹಾರ, ಗ್ರಾಮೀಣ, ಅರೆ-ನಗರಗಳಲ್ಲಿ ಇನ್ನೂ ಪ್ರಾಥಮಿಕ ಹಂತದ ಸೇವೆಗಳು ಅಸ್ತಿತ್ವದಲ್ಲಿವೆ.
ಆಚರಣೆಯ ಮಹತ್ವ ಭಾರತೀಯ ಅಂಚೆ ಸೇವೆಯು ಇಡೀ ವಿಶ್ವದಲ್ಲಿಯೇ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದ ಸೇವಾ ಸಂಸ್ಥೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದರಿಂದ ರಾಷ್ಟçದ ಎಲ್ಲ ಪ್ರದೇಶಗಳೊಂದಿಗೆ ಸಂಪರ್ಕವನ್ನು ಸಾಧಿಸುವದರೊಂದಿಗೆ ಪತ್ರ ತಲುಪಿದ ಬಗ್ಗೆ ತಿಳಿಯಲು ಇ. ಎಂ. ಎಸ್. ನಂತಹ ಭರವಶೆದಾಯಕ ಸೇವೆಗೆ ಅಂಚೆ ಇಲಾಖೆಯು ಹೆಸರುವಾಸಿಯಾಗಿದೆ, ಪ್ರಸ್ತುತ ಭಾರತೀಯ ಅಂಚೆ ಇಲಾಖೆಯು (ಐ.ಪಿ.ಪಿ.ಬಿ) ಇಂಡಿಯಬ್ ಪೋಸ್ಡಲ್ ಪೇಮೆಂಟ್ ಬ್ಯಾಂಕ್ ಹೆಸರಿನಲ್ಲಿ ಗ್ರಾಮೀಣ, ಅರೆ-ನಗರ ಮತ್ತು ನಗರಗಳ ಜನಸಾಮಾನ್ಯರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವ ಕಾರ್ಯವನ್ನು ಕೈಗೊಳ್ಳುತ್ತಿದೆ. ಅದರ ಜೊತೆಗೆ ಸುಲಭ, ಸರಳ, ಜೀರೋ ಬ್ಯಾಲನ್ಸ್ ಮತ್ತು ಪೇಪರ ಲೆಸ್ ಖಾತೆಗಳನ್ನು ತೆರೆದು ಡಿಜಿಟಲ್ ಬ್ಯಾಂಕಿಂಗ್ ಸೇವೆಯ ಮೂಲಕ ಭಾರತೀಯ ಹಣಕಾಸು ಮತ್ತು ಬ್ಯಾಂಕಿಂಗ್ ಒಳಗೊಳ್ಳುವಿಕೆಯಲ್ಲಿ ಮಹತ್ವದ ಪಾತ್ರ ನರ್ವಹಿಸುತ್ತಾ ದೇಶದ ಆರ್ಥಿಕತೆಗೆ ಸಹಕಾರಿಯಾಗಿದೆ. ಅದರಲ್ಲೂ ವಿಶೇಷವಾಗಿ ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ ಮೂಲಕ ರಾಷ್ಟ್ರದ ಜನರಲ್ಲಿ ಉಳಿತಾಯದ ಮನೋಭಾವನೆ ಬೆಳೆಸಿ, ಅದು ರಾಷ್ಟ್ರದ ಆರ್ಥಿಕಾಭಿವೃದ್ಧಿಗೆ ಬಳಕೆಯಾಗುವಂತೆ ಪೂರಕವಾದ ಸೇವೆಯನ್ನು ನೀಡುತ್ತಿದೆ. ಇದರಿಂದ ಸಾರ್ವಜನಿಕರು ದೇಶದ ಯಾವುದೇ ಪೋಸ್ಟ ಆಪೀಸ್‌ನಿಂದ ಹಣ ಪಾವತಿಸುವ ಮತ್ತು ಪಡೆಯುವ ಸೌಲಭ್ಯವನ್ನು ಪಡೆಯಬಹುದು. ಐ.ಪಿ.ಪಿ.ಬಿ ಮೋಬೈಲ್ ಆಪ್ ಮೂಲಕ ಮನೆಯಿಂದಲೇ ಎಲ್ಲ ಪೋಸ್ಟಲ್, ಬ್ಯಾಂಕಿಂಗ್ ವ್ಯವಹಾರಗಳನ್ನು ಸುಲಭವಾಗಿ ಪಡೆಯಲು ಪ್ರಯೋಜನಕಾರಿಯಾಗಿದೆ.
೨೦೨೫ ನೇಯ ವರ್ಷದ ಘೋಷವಾಕ್ಯ: ಅಕ್ಟೋಬರ ೯ ರಂದು ಆಚರಿಸುತ್ತಿರುವ ಈ ವಿಶ್ವ ಪೋಸ್ಟಲ್ ದಿನವು “ಜನರಿಗಾಗಿ ಅಂಚೆ: ಸ್ಥಳೀಯ ಸೇವೆ ಮತ್ತು ಜಾಗತಿಕ ತಲುಪುವಿಕೆ” ಎಂಬ ಘೋಷವಾಕ್ಯದೊಂದಿಗೆ ತನ್ನ ಸೇವೆಯನ್ನು ಇನ್ನಷ್ಟು ವಿಶಾಲ ವ್ಯಾಪ್ತಿಯಲ್ಲಿ ಪಸರಿಸುವಂತೆ ಮಾಡುವುದು ಮತ್ತು ಜನರಿಗೆ ಉತ್ತಮ ಸೇವೆಗಾಗಿ ಪೋಸ್ಟಲ್ ಇಲಾಖೆ ಎಂಬ ಸಂದೇಶವನ್ನು ಹೊಂದಿದೆ. ಸ್ಥಳೀಯ ಸಮುದಾಯವನ್ನು ಜಗತ್ತಿನೊಂದಿಗೆ ಸಂಪರ್ಕಿಇಸುವ ಅಂಚೆ ಸೇವೆಗಳ ಶಕ್ತಿಯನ್ನು ಎತ್ತಿ ತೊರಿಸುತ್ತದೆ. ಅಂಚೆ ವಲಯವು ಪ್ರಸ್ತುತ ಸಂವಹನ ಅಗತ್ಯತೆಗಳು, ತಂತ್ರಜ್ಞಾನ ಮತ್ತು ಸಮುದಾಯಿಕ ಆದ್ಯತೆಗಳಿಗೆ ಹೇಗೆ ಹೊಂದಿಕೊಳ್ಳಬೇಕು ಎನ್ನುವದು ಈ ವರ್ಷದ ವಿಶ್ವ ಅಂಚೆ ದಿನದ ಆಚರಣೆಯು ಮಹತ್ವ ಪಡೆದುಕೊಂಡಿದೆ.
ಕೊನೆಯ ನುಡಿ
ಆರ್ಥಿಕ ಸೇರ್ಪಡೆಗೆ ಸಹಕಾರಿಯಾಗಬಲ್ಲ, ಸಣ್ಣ ವ್ಯವಹಾರಗಳಯ ಮತ್ತು ಇ-ವಾಣಿಜ್ಯವನ್ನು ಬೆಂಬಲಿಸುವುದು ಮತ್ತು ಸುಸ್ಥಿರ ಮತ್ತು ಪರಿಣಾಮಕಾರಿ ಅಂಚೆ ಕಾರ್ಯಾಚರಣೆಗಳನ್ನು ಉತ್ತೇಜಿಸುವುದು ಈ ದಿನದ ಆಚರಣೆಯ ಧ್ಯೇಯೋದ್ಧೇಶವಾಗಿದೆ. ಭರವಸೆಯ ಸೇವೆಗೆ ಇನ್ನೊಂದು ಹೆಸರೇ ನಮ್ಮ ಭಾರತೀಯ ಅಂಚೆ ಇಲಾಖೆ. ಎಷ್ಟೇ ಇ-ತಂತ್ರಜ್ಞಾನಗಳು, ಸಂಪರ್ಕ-ಸಂವಹನ ವಿಧಾನಗಳು ಬಳಕೆಯು ಈ ಜಗತ್ತಿಗೆ ಪ್ರವೇಶವಾದರೂ ಅಂಚೆ ಇಲಾಖೆಯ ಮತ್ತು ನಮ್ಮ ಅಂಚೆಯಣ್ಣ ಕಾರ್ಯ ಎಂದಿಗೂ ನಿಲ್ಲೊದಿಲ್ಲ. ತನ್ನ ಸೇವೆಯ ಮೂಲಕ ಜನಮಾನಸದಲ್ಲಿ ನಂಬಿಕೆ, ವಿಶ್ವಾಸ ಮತ್ತು ಭರವಸೆಯ ಆಶಾಕಿರಣವಾಗಿರುವ ಅಂಚೆ ಇಲಾಖೆಯು ಹೀಗೆ ಸೇವೆ ಸಲ್ಲಿಸುವಂತಾಗಲಿ. ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸರ್ವರಿಗೂ ಭಾರತೀಯ ಅಂಚೆ ದಿನದ ಶುಭಾಶಯಗಳನ್ನು ತಿಳಿಸುತ್ತಾ ಅದರ ಕಾರ್ಯವೈಖರಿ ಬದಲಾವಣೆಯತ್ತ ಸಾಗಲಿ, ಪರಿಣಾಮಕಾರಿ ಮತ್ತು ವಿಶ್ವಮಾನ್ಯ ಸಂಪರ್ಕ-ಸಂವಹನ ಮಾಧ್ಯಮವಾಗಿ ಹೊರಹೊಮ್ಮಲೆಂಬುದೇ ಆಶಯ.
