ಇಂದು (ಅಕ್ಟೋಬರ-೭, ಮಂಗಳವಾರ) ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಮಹರ್ಷಿ ವಾಲ್ಮೀಕಿ ಅವರು ಹೃದಯ ಶುದ್ಧತೆಯೇ ನಿಜವಾದ ಸೌಂದರ್ಯ ಎಂದು ಹೇಳಿದ್ದಾರೆ. ವ್ಯಕ್ತಿಯು ಬಾಹಿರಂಗವಾಗಿ ಶುದ್ದಾವಾದರೆ ಸಾಲದು. ಆತನು ಅಂತರಂಗ ಮತ್ತು ಭಾವದಲ್ಲಿಯೂ ಹೃದಯವಂತಿಕೆಯಿದ್ದರೆ ಅದೇ ಅವನಿಗೆ ನಿಜವಾದ ಸೌಂದರ್ಯವೆಂದು ಹೇಳಿದ್ದಾರೆ. ಸಂಸ್ಕೃತದಲ್ಲಿ ರಾಮಯಣ ಮಹಾಕಾವ್ಯವನ್ನು ರಚಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅದಕ್ಕಾಗಿ ಅವರನ್ನು ಆದಿಕವಿ ಎಂತಲೂ ಕರೆಯುತ್ತಾರೆ. ಮಹರ್ಷಿ ವಾಲ್ಮೀಕಿಯವರು ಪವಿತ್ರ ಮತ್ತು ಸಾಹಿತ್ಯ ಮಾಲೆಯಲ್ಲಿ ಸರ್ವಶ್ರೇಷ್ಠ ಸ್ಥಾನ ಪಡೆದ ಮಹಾಕಾವ್ಯ ರಾಮಾಯಣ ವನ್ನು ಸಂಸ್ಕೃತದಲ್ಲಿ ರಚಿಸುವದರ ಮೂಲಕ ನ್ಯಾಯ-ನೀತಿ ಮತ್ತು ಧರ್ಮ ನಿರಪೇಕ್ಷತೆಗಳ ಬಗ್ಗೆ ಹಾಗೂ ಯುಗ ಯುಗಗಳ ಇತಿಹಾಸ ಮತ್ತು ರಾಮರಾಜ್ಯವನ್ನು ಸುಂದರವಾಗಿ ವರ್ಣಿಸಿದ್ದಾರೆ. ವಾಲ್ಮೀಕಿ ಮಹಕಾವ್ಯವು ಮಾನವ ಕುಲಕ್ಕೆ ಆದರ್ಶಗಳನ್ನು ನೀಡುವ ಮೂಲಕ ಜ್ಞಾನದ ಕೊಡುಗೆಯನ್ನು ನೀಡಿದೆ. ಈ ವರ್ಷ ಅಕ್ಟೋಬರ ೭ ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ವಾಲ್ಮೀಕಿ ಜಯಂತಿ ಆಚರಣೆಯು ತಮ್ಮ ಮಿತಿಗಳನ್ನು ಮೀರಿಸಿ, ತಮ್ಮ ಬೋಧನೆಗಳ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು ಜನ ಸಾಮಾನ್ಯರನ್ನು ಪ್ರೇರೇಪಿಸಿದ ಮಹಾನ್ ಸಂತನಿಗೆ ಸಲ್ಲಿಸುವ ಗೌರವವಾಗಿದೆ.
ದರೋಡೆಕೋರ ವಾಲ್ಮೀಕಿಯಾದ ಬಗೆ: ವಾಲ್ಮೀಕಿಯವರು ಪೂರ್ವಾಶ್ರಮದಲ್ಲಿ ರತ್ನಾಕರ ನೆಂಬ ಹೆಸರಿನ ಒಬ್ಬ ಬೇಟೆಗಾರ ಮತ್ತು ಡಕಾಯಿತನಾಗಿ ಕಾಡಿನಲ್ಲಿ ಸಂಚರಿಸುವ ಪ್ರಯಾಣಿಕರಿಂದ ಹಣ ದೋಚುವ ಸಾಮಾನ್ಯ ವ್ಯಕ್ತಿಯಾಗಿದ್ದರು. ನಾರದ ಮಹರ್ಷಿಗಳ ಹಿತೋಪದೇಶದಿಂದ ಪರಿವರ್ತನೆಗೊಂಡು ಅನೇಕ ವರ್ಷಗಳ ಕಾಲ ಘೋರ ತಪಸ್ಸು, ಧ್ಯಾನ ಮತ್ತು ಅನು಼ಷ್ಠಾನ ಕುಳಿತಾಗ ಅವರ ಸುತ್ತ ಒಂದು ದೊಡ್ಡ ಹುತ್ತ ಬೆಳೆಯಿತು. ಹೀಗೆ ಸಂಸ್ಕೃತದಲ್ಲಿ ಹುತ್ತಕ್ಕೆ ವಾಲ್ಮೀಕ ಎಂತಲೂ, ಆ ಹುತ್ತವನ್ನು ಭೇದಿಸಿ ಹೊರ ಬಂದಿದ್ದಕ್ಕೆ ವಾಲ್ಮೀಕಿ ಎಂಬ ಹೆಸರು ಬಂದಿತು. ಲೋಕೋತ್ತರವಾದ ಆದಿಕಾವ್ಯವನ್ನು ಲೋಕಕ್ಕೆ ನೀಡಿದ ಆದಿಕವಿ ವಾಲ್ಮೀಕಿಯವರು ರಾಮಾಯಣದಲ್ಲಿ ಶ್ರೀರಾಮನಂಥ ನಾಯಕ, ರಾವಣನಂಥ ಪ್ರತಿನಾಯಕ ನೂರಾರು ಅದ್ಭುತ ಪಾತ್ರಗಳನ್ನು ಸೃಷ್ಟಿಸಿದ ಇವರ ಪ್ರತಿಭೆ ಅನನ್ಯವಾದುದು.
ರಾಮಾಯಣ ಮಹಾಕಾವ್ಯ ರಚನೆಗೆ ಪ್ರೇರಣೆ: ವಾಲ್ಮೀಕಿ ಮಹರ್ಷಿ ಅವರು ತಮಸಾ ನದಿಯ ತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚ ಪಕ್ಷಿಯ ಜೋಡಿಯನ್ನು ನೋಡುತ್ತಾ, ಕುಳಿತಿದ್ದರು. ಬೇಟೆಗಾರನೊಬ್ಬ ಆ ಕ್ರೌಂಚಪಕ್ಷಿಯ ಜೋಡಿ ಪೈಕಿ ಗಂಡು ಪಕ್ಷಿಯನ್ನು ಬಾಣದಿಮದ ಹೊಡೆದು ಕೊಲ್ಲುತ್ತಾನೆ. ಗಂಡು ಪಕ್ಷಿಯನ್ನು ಕಳೆದುಕೊಂಡ ಆ ಹೆಣ್ಣು ಕ್ರೌಂಚಪಕ್ಷಿ ಸಂಕಟದಿAದ ಕೂಗಲಾರಂಭಿಸಿತು, ಈ ಹೃದಯ ವಿದ್ರಾವಕ ಸನ್ನಿವೇಶವನ್ನು ಕಂಡ ವಾಲ್ಮೀಕಿ ಕರುಣೆಮ ದುಃಖ ಹಾಗೂ ಕೋಪದಿಂದ ಶಪಿಸುತ್ತಾ, ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ ಯತ್ಕೌಂಚ ಮಿಥುನಾದೇಕಮವಧೀಃ ಕಾಮಮೋಹಿತಮ್ ಎಂಬ ಶ್ಲೋಕವನ್ನು ಬರೆಯುತ್ತಾನೆ. ಮುಂದೆ ೨೪೦೦೦ ಶ್ಲೋಕಗಳನ್ನೊಳಗೊಂಡ ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಲು ಪ್ರೇರಣೆಯಾಯಿತು ಎಂದು ಹೇಳಬಹುದು. ಋಷಿಪುಂಗರಲ್ಲಿಯೇ ಶ್ರೇಷ್ಠ ಮತ್ತು ದಾರ್ಶನಿಕರಾದ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಆಚರಿಸುವ ನಾವೆಲ್ಲರೂ ಅವರ ಜೀವನ, ತತ್ವಾದರ್ಶಗಳು, ಮೌಲ್ಯಗಳು, ವಿಚಾರಧಾರೆ ಮತ್ತು ಬೋಧಿಸಿದ ಬದುಕಿನ ಮೌಲ್ಯಗಳ ಬಗ್ಗೆ ಅರಿತುಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂದಿನ ಜಯಂತಿ ಆಚರಣೆಯು ಅರ್ಥಪೂರ್ಣ ಮತ್ತು ಸಾರ್ಥಕವಾಗುತ್ತದೆ
ಕೊನೆಯ ನುಡಿ
ಜಗತ್ತಿನಲ್ಲಿ ಯಾವುದೇ ಸಾಧನೆಯನ್ನು ಗೈಯಲು ಜಾತಿ-ಮತಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಮಹರ್ಷಿ ವಾಲ್ಮೀಕಿಯವರೇ ಉತ್ತಮ ಉದಾಹರಣೆಯಾಗಿದ್ದಾರೆ. ಸಾಮಾನ್ಯ ವ್ಯಕ್ತಿಯಾಗಿದ್ದ ವಾಲ್ಮೀಕಿಯು ರಾಮಾಯಣವನ್ನು ರಚಿಸಿ ಭರತ ನಾಡಿನ ಅಸಾಮಾನ್ಯ ಹಾಗೂ ಒಬ್ಬ ಶ್ರೇಷ್ಠ ಸಂತ, ಸಾಧ್ವಿ, ಮಹರ್ಷಿಯಾಗಿದ್ದಾರೆ. ಅದಕ್ಕಂತಲೇ ವಾಲ್ಮೀಕಿ ಅವರು ವೈರಿಯನ್ನು ಇಲ್ಲವಾಗಿಸಲು ಅವನ ತೆ ತೆಗೆಯಬೇಕಾಗಿಲ್ಲ. ನಮ್ಮ ತಲೆಯಿಂದ ಅವನನ್ನು ತೆಗೆದು ಹಾಕಿದರೆ ಸಾಕು ಎಂದು ಹೇಳಿರುವುದು ನಿಜಕ್ಕೂ ಸತ್ಯವಾದ ಮಾತು. ಶ್ರೇಷ್ಠ ಸಂತ, ಮಹಾ ಸಾಧ್ವೀ, ಮಹರ್ಷಿ ಶ್ರೀ ವಾಲ್ಮೀಕಿಯವರು ರಾಮಾಯಣದಂತಹ ಕಾವ್ಯಗಳ ಮೂಲಕ ಹಿಂದೂ ಪರಂಪರೆಯನ್ನು ಹಾಗೂ ತತ್ವಾದರ್ಶ, ಮೌಲ್ಯಗಳನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ನಾವೆಲ್ಲರೂ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆನ್ನುವುದು ನನ್ನದೊಂದು ಆಶಯ.
