ಲೇಖನ
– ಜಯಶ್ರೀ ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ನನ್ನೊಲವೆ
ಪ್ರೀತಿ ಯಾವಾಗ ಹೇಗೆ ಎಲ್ಲಿ ಮೊಳೆಯುಡೆಯುತ್ತದೋ ಗೊತ್ತೇ ಆಗುವುದಿಲ್ಲ. ಮಳೆಗಾಲದ ದಿನವೆಂದು ಗೊತ್ತಿದ್ದರೂ ಹೂಬಿಸಿಲಿದ್ದಿದ್ದರಿಂದ ಕೊಡೆಯನ್ನು ಬಿಟ್ಟು ಬಸ್ ಏರಿದ್ದೆ. ಕೆಳಗಿಳಿಯುವಷ್ಟರಲ್ಲಿ ಮಳೆ ಹನಿಗಳು ಟಿಪ್ ಟಿಪ್ ಎಂದು ಭೂ ರಮೆ ಕೆನ್ನೆಯನ್ನು ಚುಂಬಿಸತೊಡಗಿದ್ದವು. ಬನ್ನಿ ನನ್ನ ಕೊಡೆ ಕೆಳಗೆ ಜೋರಾಗುತ್ತಿದೆ ಮಳೆ ಎಂಬ ನಿನ್ನ ಗಂಭೀರ ದನಿಗೆ ತಲೆದೂಗಿ ಕೊಡೆಯಿಲ್ಲದ ನಾನು ತುಸು ಮುಜುಗರದಿಂದಲೇ ನಿನ್ನ ಕೊಡೆಯಲ್ಲಿ ತಲೆ ಬಾಗಿಸಿದೆ. ಇಬ್ಬರೂ ಜೊತೆಗೂಡಿ ನಡೆಯುವಾಗ ಬೆರಳುಗಳು ತಾಗಿದವು. ಕೆಲ ಹೆಜ್ಜೆಗಳಲ್ಲಿ ಪರಿಚಯವಾಯಿತು. ಆ ಪರಿಚಯ ಸ್ನೇಹವಾಗಲು, ಆ ಸ್ನೇಹ ಪ್ರೀತಿಯಾಗಿ ಬದಲಾಗಲು ಬಹಳ ಸಮಯ ಬೇಕಾಗಲಿಲ್ಲ.
ಮಧ್ಯಾಹ್ನದ ಹೊತ್ತಲ್ಲಿ ಕರಿಮೋಡಗಳು ಕಟ್ಟಿ ಹಗಲಲ್ಲಿಯೇ ಕತ್ತಲಾವರಿಸಿದಂತೆ ನನ್ನ ಬಾಳ ಪುಸ್ತಕದಲ್ಲಿ ಒಂಟಿತನದ ಕರಾಳ ಛಾಯೆ ಭರ್ಜರಿಯಾಗಿ ಕೈವಾಡ ತೋರಿಸುತ್ತಿದ್ದಾಗ ಬರಗಾಲದಲ್ಲಿಯ ಅನಿರೀಕ್ಷಿತ ಮಳೆಯಂತೆ ಬಂದವನು ನೀನು. ಬಾಯಾರಿದವಳಿಗೆ ಬರೀ ನೀರು ಕೊಟ್ಟರೆ ಸಾಕಿತ್ತು. ಅಂಥದ್ದರಲ್ಲಿ ಪ್ರೀತಿಯ ಸವಿಜೇನಿನ ಮಳೆ ಸುರಿಸಿದೆ. ಪ್ರೀತಿಯಿಲ್ಲದ ಮರಭೂಮಿಯಲಿದ್ದು ಬಿಕ್ಕಿಸುತ್ತಿದ್ದವಳಿಗೆ ಓಯಾಸಿಸ್ ಆದವನು ನೀನು. ನಿನ್ನ ಕೈಯಲ್ಲಿನ ಗೊಂಬೆಯಂತೆ ನೀನು ಚಾವಿ ಕೊಟ್ಟಾಗಲೊಮ್ಮೆ ನಿನ್ನ ತಾಳಕ್ಕೆ ಕುಣಿಯುವ ಮನಸ್ಸು ನನ್ನದಾಯಿತು.
ನೀನು ವೀಣೆಯಾದರೆ ನಾನು ತಂತಿಯಾದೆ. ನೀನು ಹೃದಯವಾದರೆ ನಾನು ಲಬ್ ಡಬ್ ಬಡಿತವಾದೆ. ತುಡಿತ ಮಿಡಿತ ಬಡಿತಗಳ ಅರಿವಿಲ್ಲದ ನಾನು ಹೃದಯದ ಸದ್ದಿನ ಏರಿಳಿತದಲ್ಲಿ ಪ್ರೀತಿ ನಾದಕ್ಕೆ ನಾಗರ ಹಾವಿನಂತೆ ತಲೆ ಅಲ್ಲಾಡಿಸಿದ್ದೇನೆ. ಸದ್ದಿಲ್ಲದೆ ಸುದ್ದಿ ಮಾಡದೆ ಹೃದಯದ ಬಾಗಿಲು ತೆರೆದು ಯಾರೂ ಕಾಲಿಡದ ಖಾಲಿ ಹೃದಯದಲ್ಲಿ ಒಳಬಂದವನು ನೀನು. ಎದೆಯ ಗಡಿಯಾರದಲ್ಲಿ ನಿನ್ನ ನೆನಪಿನದೆ ಟಿಕ್ ಟಿಕ್ ಸದ್ದು. ದುಂಡನೆಯ ಮುದ್ದು ಮುಖದಲ್ಲಿ ಚಿಗುರೊಡೆದ ಮೀಸೆ ಹೊತ್ತ ಗಂಡಸಾಗಿ ಡಿಮ್ಯಾಂಡ್ ತೋರದೇ ನನಾಗಿಯೇ ಬಳಿ ಬಂದು ನನ್ನ ಕೈ ಬಳೆಗಳಲ್ಲಿ ಕೈ ಹಾಕಿ ಆ ಕಡೆ ಈ ಕಡೆ ಸರಿಸುತ್ತ ‘ದಿನ ರಾತ್ರಿ ನಿದ್ದೆಯಲಿ ಕನಸಿನ ರಾಣಿಯಾಗಿ ಬರುವ ನೀನು ನನ್ನೆದೆಯ ಗೋಡೆಯ ತುಂಬೆಲ್ಲ ನಿನ್ನಾಸೆಯ ಚಿತ್ತಾರವ ಬರೆಯುವಿಯಾ?’ ಎಂದು ಕೇಳಿದ್ದು ಇನ್ನೂ ಕಿವಿಯಲ್ಲಿ ಗುಂಯ್ಯಗುಡುತ್ತಿದೆ.

ಕನಸುಗಳ ಪರಿಚಯವಿರದ ಕಂಗಳಲ್ಲಿ ಕಾಮನ ಬಿಲ್ಲಿನಷ್ಟೇ ಸುಂದರವಾದ ವಿಧ ವಿಧ ಕನಸಿನ ರಂಗಿನ ಕನಸು ತುಂಬಿದೆ. ಕನಸು ಮನಸಿನಲ್ಲೂ ದಿನ ರಾತ್ರಿಯಲ್ಲೂ ನಿನ್ನದೇ ಪ್ರೀತಿಯ ನೆನಪಿನ ಉಸಿರಾಟ ಶುರು ಮಾಡಿಸಿದೆ. ಹಾಗಂತ ಪಟ ಪಟ ಮಾತನಾಡಿ ಮಾತಿನಲ್ಲೇ ಪ್ರೀತಿಯ ಅರಮನೆ ಕಟ್ಟುವ ಜಾಯಮಾನ ನಿನ್ನದಲ್ಲ. ಪೂರ್ಣವಿರಾಮವಿರದ ನನ್ನ ಮಾತುಗಳನ್ನು ಕಿವಿಗೊಟ್ಟು ಮೂಕ ಪ್ರಾಣಿಯಂತೆ ಬರಿ ಹೂಂ ಹೂಂ ಅಂತ ಕೇಳುತ್ತ ಆಗೊಮ್ಮೆ ಈಗೊಮ್ಮೆ ತುಟಿಯಂಚಿನಲ್ಲಿ ಕಿರುನಗು ಸೂಸಿ ನಾನು ಇನ್ನಷ್ಟು ಪ್ರೀತಿಯ ಪದಗಳನ್ನು ಉದುರಿಸೋಕೆ ಪುಟಿ ಕೊಡುತ್ತ ನಿನ್ನ ಅಂತರಂಗದಲ್ಲಿರುವ ಭಾವನೆಗಳಿಗೆ ತಲೆದೂಗಿ ಒಂದಾಗುವೆ ಎನ್ನುವ ಭರವಸೆ ಆ ನಿನ್ನ ತುಂಟ ನಗುವಿನಲ್ಲಿ ಬರುತ್ತಿತ್ತು.
ನೀರು ಕಾಣದೆ ಒಣಗಿದ ಸಸಿಯು ಮಳೆಯ ಹನಿಗಳಿಗೆ ಮತ್ತೆ ಚಿಗುರೊಡೆಯುವಂತೆ ಶುಷ್ಕಗೊಂಡಿದ್ದ ಪ್ರೀತಿಯ ನದಿಯು ಜೀವ ತುಂಬಿಕೊಂಡು ಹರಿಯುತಿದೆ. ಪಕ್ವಗೊಂಡ ಹಣ್ಣಿನಂತಿರುವ ನಿನ್ನ ಮನ ನನ್ನೊಂದಿಗಿರುವಾಗ ಜಗದ ಚಿಂತೆ ನನಗೇಕೆ ಗೆಳೆಯ? ಪ್ರೀತಿಯ ಸಂಕೇತವಾದ ಗುಲಾಬಿ ಹೂವಿನ ಕೆಳಗೆ ಮುಳ್ಳುಗಳು ಇದ್ದೇ ಇವೆ ಪ್ರೀತಿಯಲ್ಲಿ ನೋವಿದ್ದೇ ಇದೆ. ನೋವಿಲ್ಲದ ಪ್ರೀತಿ ಇಲ್ಲವೇ ಇಲ್ಲ. ಪ್ರೀತಿಯಲ್ಲಿ ಕೋಪ ತಾಪ ಮನಸ್ತಾಪಗಳು ಕ್ಷಣಿಕ ಕಣೊ ಪ್ರೀತಿಯ ಶಕ್ತಿಯ ಮುಂದೆ ಇವುಗಳ ಆಟ ನಡೆಯಲ್ಲ. ಲವ್ ಎಂಬ ಹಿರೋನ ಮುಂದೆ ಇವೆಲ್ಲ ಬಿಗ್ ಬಿಗ್ ಜಿರೋಗಳೆ ಸರಿ.
ಮೊದಲಿನಿಂದಲೂ ನನ್ನದು ಸ್ವಲ್ಪ ಏನು ಸ್ವಲ್ಪ ಹೆಚ್ಚೇ ಎನಿಸುವಷ್ಟು ಹಟದ ಸ್ವಭಾವ ನನ್ನ ಮೊಂಡುತನಕ್ಕೆ ಬೇಸರಿಸಿಕೊಳ್ಳದೆ ನನ್ನನ್ನು ವಶೀಕರಣಗೊಳಿಸಿ ಪ್ರೀತಿಯ ಮುಲಾಮು ಹಚ್ಚಿ ವಾಸಿ ಮಾಡುವ ನಿನ್ನ ಗುಣ ನನಗೆ ತುಂಬಾ ಇಷ್ಟ. ನಿನ್ನ ಪ್ರೀತಿಯಲ್ಲಿ ದೈವತ್ವವೂ ತಲೆಬಾಗಲು ಸಿದ್ಧವಾಗಿದೆ. ಅಷ್ಟು ಎತ್ತರವಾದ ಆಳವಾದ ಪ್ರೀತಿ ನಿನ್ನದು. ಬೆಳದಿಂಗಳು ಚೆಲ್ಲಿದ ರಾತ್ರಿಯಲ್ಲಿ ನಿನ್ನ ಮಡಿಲಲ್ಲಿ ನನ್ನ ತಲೆ ಚೆಲ್ಲಿ ಮಿನುಗುವ ತಾರೆಗಳನು ಎಣಿಸುತ ನಿನ್ನ ಮಿನುಗುವ ಕಂಗಳನು ನೋಡುವಾಸೆ. ಜಿನುಗುವ ಮಳೆಯಲ್ಲಿ ಒಂದೇ ಕೊಡೆಯಲ್ಲಿ ಕೈಗೆ ಕೈ ತಾಗಿಸಿ ನಡೆಯುವಾಸೆ ಇನ್ನೂ ಈ ತರದ ಆಸೆಗಳ ಅಲೆಗಳು ಮನದ ಸಾಗರದಲ್ಲಿ ಅಬ್ಬರ ಹೆಚ್ಚಿಸುತ್ತಿವೆ. ಅಬ್ಬರಕ್ಕೆ ಬೆರಗಾಗಿ ನಿಂತ ನಾನು ನಿನ್ನ ಬರುವನ್ನೇ ಕಾಯುತ್ತಿದ್ದೇನೆ.
ನನ್ನೆದೆಯ ತೋಟದಲಿ ಪ್ರೀತಿಯ ಹೂವನು ನೀನಾಗಿಯೇ ಅರಳಿಸಿ ಮಕರಂದವನು ಹೀರುವ ಸಮಯದಲ್ಲಿ ಒಮ್ಮಿಂದೊಮ್ಮೆಲೇ ನನ್ನ ಮೊಂಡುತನಕ್ಕೆ ಬೇಜಾರಾಗಿ ಹಿಮದಂತೆ ಗಟ್ಟಿಯಾಗಿ ಚಳಿಗೆ ಮತ್ತಷ್ಟು ಗಟ್ಟಿಯಾಗಿ ಕಲ್ಲಿನಂತೆ ಕುಳಿತಿರುವೆ. ನಿನ್ನ ಅನುಪಸ್ಥಿತಿಯಲ್ಲಿ ಮಕರಂದವನು ಹೀರಲು ಝೆಂಕಾರ ಮೂಡಿಸುತ್ತ ಬೇರೆ ದುಂಬಿಗಳು ಹತ್ತಿರ ಹತಿರವೇ ಸುಳಿಯುತ್ತ ಹಿಂಬಾಲಿಸುತ್ತಿವೆ. ಬಾಳ ದೋಣಿ ನಡೆಸಲು ನಾ ನಾವಿಕನಾಗುವೆ. ಎಂದು ನಾ ನೀ ಎನ್ನುವ ಹೀರೋಗಳೆಲ್ಲ ಕೈಯಲ್ಲಿ ಒಲವಿನೋಲೆಯ ಅರ್ಜಿ ಹಿಡಿದುಕೊಂಡು ಸಾಲುಗಟ್ಟಿ ಬರುತ್ತಿದ್ದಾರೆ. ಅವರಿಗೆಲ್ಲ ನನ್ನ ಬಾಳಿನ ಹೀರೋ ನೀನೇ ಎಂದು ಎದೆ ತಟ್ಟಿ ಹೇಳಬೇಕೆಂದರೆ ಎದೆಯಲ್ಲಿರುವ ನೀನು ಎದುರಿಗಿಲ್ಲ. ಎದುರಿಗೆ ಬಂದು ಅವರೆದುರಲ್ಲೇ ಕೊರಳಿಗೆ ಮೂರು ಗಂಟು ಹಾಕಿ ನನ್ನ ಹೆಜ್ಜೆಯ ಮೇಲೆ ಏಳು ಹೆಜ್ಜೆ ಹಾಕಿ ಭುವಿಯಲ್ಲೇ ಸ್ವರ್ಗ ಲೋಕ ತೋರಿಸಲು ಬಂದು ಬಿಡು.
ಮನೆಯವರಿಗೆಲ್ಲ ಮದುವೆ ಚಿಂತೆ ಹತ್ತಿಕೊಂಡಿದೆಯೆಂದು ಗೊತ್ತಾಗಿ ಹೆದರಿಕೆ ಉಂಟಾಗಿ ನಿನ್ನ ರೂಮ್ ಬಳಿ ಬಂದೆ. ನೋವುಗಳನ್ನೆಲ್ಲ ಹೇಳುವ ಮುನ್ನವೇ ತಿಳಿದುಕೊಳ್ಳುವ ಜಾಣ ನೀನು. ಭಯದಲ್ಲಿದ್ದ ಮುಖ ಕಂಡು ಸಾವಕಾಶವಾಗಿ ಕುಳ್ಳರಿಸಿದೆ. ಮೂರು ಗಂಟುಗಳು ನಂಟಾಗಬೇಕೇ ಹೊರತು ಕಗ್ಗಂಟಾಗಲು ನಾನು ಬಿಡುವುದಿಲ್ಲ ಎಂದೆ. ಹೆದರಿದ ಹರಿಣಿಯಂತಿದ್ದ ನನ್ನನ್ನು ಪಕ್ಕಕ್ಕೆ ಎಳೆದುಕೊಂಡು ಮೆಲ್ಲನೆ ಅಂಗೈಯನ್ನು ಸವರುತ್ತ ನನ್ನತ್ತ ಬಾಗಿದೆ. ನೂರಾನೆ ಬಲ ಬಂದಂತೆ ಮುಗುಳ್ನಗೆ ಬೀರಿ ತಲೆಯಲ್ಲಾಡಿಸಿದೆ. ನನ್ನ ನಗುಮೊಗವ ಬೊಗಸೆಯಲ್ಲಿ ಹಿಡಿದು ಎಂದೂ ನೋಡದವನಂತೆ ದಿಟ್ಟಿಸಿ ನೋಡಿ ಪೂರ್ಣಚಂದಿರನಂತೆ ಪೂರ್ಣ ಸುಂದರಿ ನೀನು. ಇನ್ಮುಂದೆ ಇಡೀ ಬದುಕು ನಿನ್ನೊಂದಿಗೆ ಸುಂದರಿ ಎನ್ನುತ್ತ ಕೆಂದುಟಿಗಳನು ಮೆತ್ತಗೆ ಸ್ಪರ್ಶಿಸುತ್ತ ಗೊತ್ತಾಗದಂತೆ ಅಧರಗಳಿಂದ ಅಧರಗಳಿಗೆ ಬೀಗ ಹಾಕಿದೆ. ಮೊದಲ ಮುತ್ತಿನ ಅನುಭವ ಮೈಮನವೆಲ್ಲ ರೋಮಾಂಚನ ಸೂಕ್ಷ್ಮವಾಗಿ ಕಂಪಿಸುತ್ತಿದ್ದ ನನ್ನ ಬಿಗಿಯಾಗಿ ಆಲಂಗಿಸಿದೆ. ದೀರ್ಘ ಕಾಲದ ಆಲಿಂಗನ ಬಾಳಿನುದ್ದಕ್ಕೂ ಹೀಗೆ ದೀರ್ಘವಾಗಿ ಸಿಗಲೆಂದೆ. ಒಲ್ಲದ ಮನಸ್ಸಿನಿಂದ ತೋಳಿಂದ ಬಿಡಿಸಿಕೊಂಡು ಮನೆಯತ್ತ ಓಡಿದೆ. ಆ ರಾತ್ರಿಯೆಲ್ಲ ನಿನ್ನದೇ ನೆನಪಲ್ಲಿ ನೀನಿತ್ತ ಗೊಂಬೆ ತಬ್ಬಿಕೊಂಡು ಮಲಗಿದ್ದು ನೆನೆದರೆ ಈಗಲೂ ನಾಚಿಕೆ ಆಗುತ್ತೆ ಕಣೋ.
ಅದೆಷ್ಟು ಹೇಳಿದರೂ ತೀರದು. ಮಾತಿಗೆ ನಿಲುಕದ ಗಂಭಿರ ಸ್ವರೂಪದ ವ್ಯಕ್ತಿತ್ವ ನಿನ್ನದು ಅದಕ್ಕೆ ಹೃದಯಕ್ಕೆ ನೀ ನನ್ನವನೆಂಬ ಒಳಜಂಭ. ಅದೆಷ್ಟು ದುಂಬಿಗಳು ಈ ಹೂವಿನ ಸುತ್ತ ಹಾರಾಡಿದರೂ ನಿಧಿ ಕಾಯುವ ನಾಗ ಶೇಷನಂತೆ ನನ್ನ ಮೇಲೆ ಕಣ್ಣಿಟ್ಟು ಕಾಯುತಿರುವೆ ಎನ್ನುವದೂ ನನಗೆ ಗೊತ್ತು. ಹೂವಿನ ರಾಶಿಯಲ್ಲಿ ಕೆಂಗುಲಾಬಿಯಾಗಿ ಕಣ್ಮನ ಸೆಳೆಯುತಿರುವ ನಾನು ಮೊಂಡುತನದ ಸ್ವಭಾವದಿಂದ ದೂರವಾಗಿರುವೆ. ಹೆತ್ತವರು ನಮ್ಮೀರ್ವರನು ಬೇರೆ ಮಾಡುವ ಮುನ್ನ ಈ ಮಾಗಿಯ ಚಳಿ ಮುಗಿಯುವ ಮುನ್ನ ಬೆರೆತು ಮೈ ಬಿಸಿ ಏರಿಸಲು ಬಂದು ಬಿಡು. ಪ್ರೀತಿಯ ಸಾಗರದಲ್ಲಿ ನಮ್ಮ ಸಂಸಾರ ಆನಂದ ಸಾಗರ ಎಂಬ ಹಾಡು ಗುನು ಗುನಿಸುತ ಇಬ್ಬರೂ ಸವಿಜೇನು ಮೆಲ್ಲುತ ಸುಖ ದುಃಖಗಳ ತೆರೆಗಳ ಮೇಲೆ ಪಯಣಿಸುವ ಬಾ ಗೆಳೆಯ. ಬೆಚ್ಚನೆಯ ಅಪ್ಪುಗೆಯಲಿ ಪ್ರೀತಿಯ ಹಿಮ ಕರಗಿಸಲು ಬಂದು ಬಿಡು. ಕಣ್ತೆರೆದು ಕಾದಿರುವೆ ನಿನಗಾಗಿ ಒಲವಿನ ಸಾಗರದ ದಂಡೆಯಲಿ
ಒಲವಿನಿಂದ
ನಿನ್ನೊಲವಿಗಾಗಿ ಕಾಯುತಿರುವ
ನಿನ್ನೊಲವು
