Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರ ನಗರ ಬಂದ್ ಸಂಪೂರ್ಣ ಯಶಸ್ವಿ!

ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿ ಭೂಸಗೊಂಡ ಆಯ್ಕೆ

ಪ್ರೇಮಚಂದ್ ಕಾದಂಬರಿಗಳು ಸಾಮಾಜಿಕ ಜೀವನದ ವಾಸ್ತವ ಚಿತ್ರಣ :ಪ್ರೊ.ಪೀರಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಸಾಂಸ್ಕೃತಿಕ ರಾಯಭಾರಿ ಮೈಸೂರು ಒಡೆಯರು
ವಿಶೇಷ ಲೇಖನ

ಸಾಂಸ್ಕೃತಿಕ ರಾಯಭಾರಿ ಮೈಸೂರು ಒಡೆಯರು

By Updated:No Comments10 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನಾಳೆ ಐತಿಹಾಸಿಕ ನಗರ ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿಗಾಗಿ ಅರಮನೆ ನಗರಿ ಶೃಂಗಾರಗೊಂಡು ಝಗಮಗಿಸುತ್ತ ಸಜ್ಜಾಗಿದೆ. ಈ ಹೊತ್ತಲ್ಲಿ ಮೈಸೂರಿಗೆ ಪ್ರಖ್ಯಾತಿ ತಂದುಕೊಟ್ಟ ಮೈಸೂರು ಅರಸರನ್ನು ನೆನೆಯದಿದ್ದರೆ ಹೇಗೆ? ಅವರ ಕುರಿತು ಈ ವಿಶೇಷ ಲೇಖನ

ಲೇಖನ
– ರಶ್ಮಿ ಕೆ. ವಿಶ್ವನಾಥ್
ಮೈಸೂರು

ಉದಯರಶ್ಮಿ ದಿನಪತ್ರಿಕೆ

ಇದು, ಮೈಸೂರಿಗೆ ʼವಿಶ್ವವಿಖ್ಯಾತ ಮೈಸೂರುʼ ಎಂಬ ಹೆಸರು ತಂದುಕೊಟ್ಟ ಸಾಂಸ್ಕೃತಿಕ ಮೈಸೂರಿನ ರಾಯಭಾರಿಗಳಾದಂತಹ ಅಂಬಾವಿಲಾಸ ಅರಮನೆಯ ಮೈಸೂರು ಒಡೆಯರ ಸ್ವಾರಸ್ಯಕರ ಕಥೆ.
ʼಜಗತ್ಪ್ರಸಿದ್ಧ ಮೈಸೂರುʼ
ಮೈಸೂರಿನ ವಿಷಯ ಬಂದಾಗ ಕೆಲವು ವಿಶೇ಼ಷಣಗಳೂ ಸಹ ಅದರೊಂದಿಗೆ ಸೇರಿಕೊಳ್ಳುತ್ತವೆ. ಅದು ಹೇಗೆ ಮೈಸೂರು ಜಗತ್ತಿನಾದ್ಯಾಂತ ಇಷ್ಟೊಂದು ಪ್ರಸಿದ್ಧಿ ಪಡೆಯಿತು. ಇದಕ್ಕೆ ಕಾರಣರಾದವರು ಯಾರು? ಕಾರಣವಾದ ಅಂಶಗಳಾವುವು? ಈ ಕುತೂಹಲ ಮೂಡಲೇಬೇಕಲ್ಲ?. ಸಾಕ್ಷಿ ಕಣ್ಣ ಮುಂದೆಯೇ ಇದೆ. ಅದೇ ಮೈಸೂರು ದಸರಾ. ಅಷ್ಟೆಯೇ? ಅದನ್ನು ಆಚರಿಸಿಕೊಂಡು ಬಂದವರು ಯಾರು? ಹೌದು ಅವರೇ ಮೈಸೂರಿನ ಒಡೆಯರು ಅಥವಾ ಅರಸರು ಅಥವಾ ದೊರೆಗಳು. ಅವರಿಗಿಂತ ಹೆಚ್ಚು ಗೌರವಕ್ಕೆ ಪಾತ್ರರಾಗುವವರು ಯಾರಿರಲು ಸಾಧ್ಯ? ಅದೇಕೆ ಮೈಸೂರಿನ ಅರಸರು ಎಂದ ತಕ್ಷಣ ನಮ್ಮ ಎರಡೂ ಕೈಗಳು ತಮಗೆ ತಾವೇ ಜೋಡಿಸಿಕೊಳ್ಳುತ್ತವೆ. ಹೌದು ಅಂತಹ ಕೆಲಸಗಳನ್ನು ನಮ್ಮ ಮೈಸೂರಿನ ದೊರೆಗಳು ಮಾಡಿ ಹೋಗಿದ್ದಾರೆ ಅಂದಮೇಲೆ ಕೃತಜ್ಞತೆ ಇರದೇ ಇರುತ್ತದೆಯೇ?
ಕತ್ತಲಲ್ಲಿ ಕನವರಸೆದ್ದು ಲೈಟ್‌ ಸ್ವಿಚ್‌ ಅದುಮಿದರೆ ಬರುವ ಬೆಳಕು, ಮನುಷ್ಯನ ಜೀವಜಲ ನಲ್ಲಿ ನೀರು ಇವೆಲ್ಲವೂ ಅವರು ಕೊಟ್ಟ ಕೊಡುಗೆ. ಒಂದಲ್ಲಾ ಎರಡಲ್ಲಾ ಕೊಡುಗೆಗಳ ಸಾಲೇ ಇದೆ. ಅವುಗಳೆಲ್ಲದರ ಉಪಯೋಗ ತೆಗೆದುಕೊಳ್ಳುತ್ತಿದ್ದೇವೆಯೆ ಹೊರತೂ, ಅವುಗಳ ನಿರ್ಮಾತೃ ಬಗ್ಗೆ ಸರಿಯಾಗಿ ತಿಳಿದಿಲ್ಲ ಅಲ್ಲವೆ? ಮೈಸೂರಿನ ಅರಸರ ಇತಿಹಾಸ, ಸಮಾಜದ ಅಭಿವೃದ್ಧಿಗೆ ಅವರುಗಳ ಕೊಡುಗೆ ಎಲ್ಲವೂ ಒಂದು ದಂತ ಕಥೆಯೆ. ಆ ಕಥೆ ತಿಳಿಯದಿದ್ದರೆ ಜೀವನದ ಸಾರ್ಥಕತೆ ಸಿಗುವುದಾದರೂ ಹೇಗೆ. ಬನ್ನಿ ಅವುಗಳನ್ನೊಮ್ಮೆ ನೋಡೋಣ.
ಆದರೆ ಅದಕ್ಕೂ ಮುಂಚೆ ವಿಜ್ಞಾನ ಒಪ್ಪಿದರೂ ಒಪ್ಪದಿದ್ದರೂ ಇಂದಿಗೂ ನಮ್ಮೆಲ್ಲರ ಮುಂದೆಯೇ ಇರುವ ಸಾಕ್ಷಿ, ನಮ್ಮ ಮೈಸೂರು ಅರಸರ ಜೀವನಕ್ಕೆ ಸಂಬಂದಿಸಿದ ʼಅಲಮೇಲಮ್ಮನ ಕಥೆ.ʼ ಏನಿದು ಕಥೆ? ನಮ್ಮೆಲ್ಲರಿಗು ತಿಳಿದಿರುವುದೇ ಆದರೆ ಆ ಶಾಪವಷ್ಟೇ ಗೊತ್ತು. ಉಳಿದದ್ದು, ಇಲ್ಲಿದೆ.
ಅದು ಸುಮಾರು ಕ್ರಿ.ಶ.610ರ ಸಮಯ ಶ್ರೀರಂಗಪಟ್ಟಣ ವಿಜಯನಗರದ ಸಾಮಂತ ರಾಜ್ಯವಾಗಿದ್ದಂತಹ ಕಾಲ. ಆ ದೀಪನಗರಿ ಶ್ರೀರಂಗಪಟ್ಟಣವನ್ನು ಆಳುತ್ತಿದ್ದವರೇ ತಿರುಮಲ ರಾಜ. ಅವರಿಗಿದ್ದ ಇಬ್ಬರು ರಾಣಿಯರಲ್ಲಿ ಅಲಮೇಲಮ್ಮ ಎರಡನೆಯವರು. ರಾಜರ ಕಾಯಿಲೆ ಎಂದೇ ಹೆಸರಾಗಿದ್ದ ಸಂಧಿವಾತ ಒಮ್ಮೆ ರಾಜ ತಿರುಮಲನಿಗೂ ಕಾಣಿಸಿತು. ಕಾಯಿಲೆ ಉಲ್ಬಣಗೊಂಡಾಗ ಜ್ಯೋತಿಷಿಗಳ ಸಲಹೆಯ ಮೇರೆಗೆ, ತಿರುಮಲ ರಾಜ ತನ್ನ ಮೊದಲ ಪತ್ನಿಯೊಂದಿಗೆ ಚಿಕಿತ್ಸೆಗಾಗಿ ತಲಕಾಡಿಗೆ ಹೋದರು. ಶ್ರೀರಂಗಪಟ್ಟಣದ ಜವಾಬ್ದಾರಿ ಉಳಿದ ಎರಡನೇ ರಾಣಿ ಅಲಮೇಲಮ್ಮನ ಹೆಗಲೇರಿತು. ಶ್ರೀರಂಗಪಟ್ಟಣವನ್ನು ಮೈಸೂರಿನ ತೆಕ್ಕೆಗೆ ತೆಗೆದುಕೊಳ್ಳಲು, ಅರಸ ತಿರುಮಲ ಇಲ್ಲದಿರುವುದನ್ನೇ ಕಾಯುತ್ತಿದ್ದ ಮೈಸೂರಿನ ರಾಜ ಒಡೆಯರ್‌ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿ, ಶ್ರೀರಂಗಪಟ್ಟಣವನ್ನು ವಶಕ್ಕೆ ತೆಗೆದುಕೊಂಡರು. ಆ ಸಮಯದಲ್ಲಿ ಶ್ರೀರಂಗನಾಥನ ದೇವಿ ರಂಗನಾಯಕಿಯ ಅಪ್ರತಿಮ ಭಕ್ತೆಯಾಗಿದ್ದರಿಂದ, ಪ್ರತೀ ಶುಕ್ರವಾರ ಮತ್ತು ಮಂಗಳವಾರ ತನಗೆ ಅತ್ಯಂತ ಪ್ರಿಯವಾಗಿದ್ದ ತನ್ನೆಲ್ಲಾ ಒಡವೆಗಳನ್ನು ರಂಗನಾಯಕಿ ದೇವಿಯ ಅಲಂಕಾರಕ್ಕೆ ಕೊಟ್ಟು ಮತ್ತೆ ತಿರುಗಿ ಪಡೆಯುತ್ತಿದ್ದ ರಾಣಿ ಅಲಮೇಲಮ್ಮ ಸಹ ತನ್ನ ಪ್ರಾಣಪ್ರಿಯವಾದ ಒಡವೆಗಳೊಂದಿಗೆ ತಲಕಾಡಿಗೆ ಓಡಿಹೋದಳು.
ಅಲ್ಲಿ ಕಾಯಿಲೆ ಉಲ್ಬಣಗೊಂಡು, ಚಿಕಿತ್ಸೆ ಫಲಕಾರಿಯಾಗದೆ ರಾಜ ತಿರುಮಲ ಅಸುನೀಗಿದರು. ಆಗಿನ ಕಾಲದಲ್ಲಿ ಪತಿಯನ್ನು ಕಳೆದುಕೊಂಡ ವಿದವೆಯರು ಯಾವುದೇ ಒಡವೆಗಳನ್ನು ಹಾಕಿಕೊಂಡು ಅಲಂಕಾರ ಮಾಡಿಕೊಳ್ಳುವ ಹಾಗಿರಲಿಲ್ಲವಾದ್ದರಿಂದ ಮತ್ತು ತಿರುಮಲ ರಾಜನಿಗೆ ಮಕ್ಕಳೂ ಸಹ ಇಲ್ಲವಾದ್ದರಿಂದ ವಾರಕ್ಕೆರಡು ಬಾರಿ ರಂಗನಾಥಸ್ವಾಮಿ ದೇವಿಯ ಅಲಂಕಾರ ಮಾಡುತ್ತಿದ್ದ ಅಲಮೇಲಮ್ಮನ ಒಡವೆಗಳು ಶಾಶ್ವತವಾಗಿ ದೇವಸ್ಥಾನಕ್ಕೆ ಸಿಕ್ಕಿಬಿಟ್ಟರೆ ಒಳ್ಳೆಯದಲ್ಲವೇ ಎಂಬ ಆಲೋಚನೆ ಶ್ರೀರಂಗಪಟ್ಟಣ ದೇವಸ್ಥಾನದ ಅರ್ಚಕ ವರ್ಗಕ್ಕೆ ಬರುತ್ತದೆ. ಅದನ್ನೇ ಮೈಸೂರಿನ ರಾಜ ಒಡೆಯರ್‌ಗೆ ಹೇಳಿದಾಗ, ಇದು ಅವರಿಗೂ ಸಹ ಸರಿ ಎನ್ನಿಸಿ, ಅಲಮೇಲಮ್ಮನನ್ನು ವಿನಂತಿಸಿ ಒಡೆವೆಯನ್ನು ತರುವಂತೆ ಹೇಳಿ ರಾಜ ಒಡೆಯರ್‌ ರಾಜಭಟರನ್ನು ತಲಕಾಡಿಗೆ ಕಳುಹಿಸುತ್ತಾರೆ.
ಒಡವೆಗಳನ್ನು ಕೊಡಲೊಪ್ಪದ ಅಲಮೇಲಮ್ಮನ ಶಾಪ
ಆದರೆ ಅಲಮೇಲಮ್ಮ ತನ್ನ ಒಲವಿನ ಒಡವೆ ಕೊಡುವುದಕ್ಕೆ ಒಪ್ಪುವುದಿಲ್ಲ. ಆದ್ದರಿಂದ ಒತ್ತಾಯ ಮಾಡಿ ಒಡವೆ ತರುವಂತೆ ರಾಜ ಒಡೆಯರ್‌ ಸೈನಿಕರನ್ನು ಕಳುಹಿಸುತ್ತಾರೆ. ಈವಾಗಲೂ ತನ್ನ ಒಡವೆ ಕೊಡಲು ಒಪ್ಪದ ಅಲಮೇಲಮ್ಮ ಆ ಸೈನಿಕರಿಂದ ತಪ್ಪಿಸಿಕೊಂಡು ತನ್ನ ಒಡವೆಗಳೊಂದಿಗೆ ಓಡಲಾರಂಭಿಸಿದಳು. ಓಡಿ ಓಡಿ ಮಾಲಂಗಿಯ ಕಾವೇರಿ ನದೀ ತೀರದಲ್ಲಿ ಸೈನಿಕರಿಂದ ತಪ್ಪಿಸಿಕೊಳ್ಳಲಾರದ ಸ್ಥಿತಿಯಲ್ಲಿ ಸಿಕ್ಕಿಕೊಂಡುಬಿಡುತ್ತಾಳೆ. ಇನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ತಿಳಿದಾಗ, ಅದೇ ಕಾವೇರಿ ನದಿಗೆ ಹಾರಿ ಜೀವಬಿಡುತ್ತಾಳೆ. ಹಾಗೆ ಹಾರುವ ಮುನ್ನ “ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದೆ ಇರಲಿ” ಎಂಬ 3 ಶಾಪಗಳನ್ನು ಕೊಟ್ಟು ಹೋಗುತ್ತಾಳೆ. ನಾನು ರಂಗನಾಯಕಿಯ ನಿಜವಾದ ಭಕ್ತೆಯೇ ಆಗಿದ್ದರೆ ಮತ್ತು ಪತಿವ್ರತೆಯೇ ಆಗಿದ್ದರೆ ನನ್ನ ಶಾಪಗಳು ಸಹ ನಿಜವಾಗಲಿ ಎಂದು ಹೇಳೀ ತಾನು ತನ್ನ ಒಡವೆಗಳೊಂದಿಗೆ ಕಾವೇರಿ ನದಿಗೆ ಹಾರುತ್ತಾಳೆ.
ಮರಳಿನಿಂದ ಆವೃತ್ತವಾದ ತಲಕಾಡು
ಅಂತೆಯೇ ಅಂದಿನ ಸಮಯದಲ್ಲಿ ಸಂಪದ್ಭರಿತವಾಗಿದ್ದ ತಲಕಾಡು ಮರಳಿನಿಂದ ಆವೃತ್ತವಾಯಿತು. ಸುಮಾರು 30ಕ್ಕೂ ಹೆಚ್ಚು ದೇವಸ್ಥಾನಗಳು ಅಲ್ಲಿ ಮರಳಿನಿಂದ ಮುಚ್ಚಿಹೋಗಿವೆ. ಅಲಮೇಲಮ್ಮ ಹಾರಿದ ಮಾಲಂಗಿಯ ಕಾವೇರಿ ನದಿಯಲ್ಲಿ ದೊಡ್ಡ ದೊಡ್ಡ ಸುಳಿಗಳು ನಿರ್ಮಾಣವಾದವು.
ನಿಜವಾದ ಅಲಮೇಲಮ್ಮ ಶಾಪ
ಅದೇ ರೀತಿ ಮೈಸೂರು ರಾಜರಿಗೆ ಮಕ್ಕಳಾಗುತ್ತಿಲ್ಲ. ಆದ್ದರಿಂದ ದತ್ತು ಪಡೆಯಲಾಗುತ್ತಿದೆ. 17ನೇ ಶತಮಾನದಿಂದ ಇಲ್ಲಿಯವರೆಗೆ 7 ಜನ ರಾಜರು ದತ್ತುಪುತ್ರರೇ ಆಗಿದ್ದಾರೆ. ಮೊದಮೊದಲಿಗೆ ಆ ಶಾಪವನ್ನು ಗಂಭಿರವಾಗಿ ಪರಿಗಣಿಸದಿದ್ದ ಒಡೆಯರು, ಶಾಪ ನಿಜವಾಗುತ್ತಿದೆ ಎಂಬುದನ್ನು ಮನಗಂಡ ನಂತರ ಶಾಪವಿಮೋಚನೆಗಾಗಿ ಅಲಮೇಲಮ್ಮನ ಒಂದು ಬಂಗಾರದ ಮೂರ್ತಿ ಮಾಡಿಸಿ, ಅದಕ್ಕೆ ಪೂಜಿಸಲಾರಂಭಿಸಿದರು. ಇಂದಿಗೂ ಸಹ ಪ್ರತೀ ದಸರಾದಲ್ಲಿ ಅಲಮೇಲಮ್ಮನ ಬಂಗಾರದ ಮೂರ್ತಿಗೆ ವಿಷೇಶ ಪೂಜೆ ಸಲ್ಲಸುವ ಪದ್ಧತಿ ಮುಂದುವರೆದುಕೊಂಡು ಬಂದಿದೆ.
ಇದು ಚರಿತ್ರೆ ನಂತರ ನಡೆದದ್ದು ಇತಿಹಾಸದ ಪುಟಗಳಲ್ಲಿ ಬರೆದಿಡಬೇಕಾದ ದಾಖಲೆಗಳಲ್ಲಿ ದಾಖಲಾಗಿರುವ ಮತ್ತು ನಾವೆಲ್ಲರೂ ಇಂದಿಗೂ ಅವುಗಳಿಂದ ಪ್ರಯೋಜನ ಪಡೆಯುತ್ತಿರುವ ಸಾಧನೆ.
ಆ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಹಿಡಿದಿಟ್ಟರೂ ಸಹ ಮತ್ತೂ ಇನ್ನಷ್ಟು ನಮಗೆ ತಿಳಿಯದಂತೆ ಲೆಕ್ಕಕ್ಕೆ ಸಿಗದೆ ಮರೆಯಾಗುವ ಅಭಿವೃದ್ಧಿ ಕೆಲಸಗಳು. ಪಟ್ಟಿ ಮಾಡಲು ಸಾಧ್ಯವಾದ ಮೈಸೂರಿನ ಒಡೆಯರ ಒಂದಷ್ಟು ಸಾಧನೆಗಳು ಇಲ್ಲಿವೆ.


ನುಡಿದಂತೆ ನಡೆದ ಒಡೆಯರು
ಇಷ್ಟೆಲ್ಲಾ ಕಾಣಿಕೆ ಕೊಟ್ಟ ಮೈಸೂರಿನ ಒಡೆಯರು ಒಟ್ಟು 25 ಜನ. ಆ 25 ಜನರೂ ಕೂಡಾ ನುಡಿದಂತೆ ನಡೆದವರು, ನಡೆದಂತೆ ನುಡಿದವರು. ಅದರಲ್ಲಿ ಮೊದಲ 8 ಜನ ರಾಜರು ಪ್ರಭಾವಿ ಆಡಳಿತಗಾರರೇನು ಆಗಿರಲಿಲ್ಲ. ಉಳಿದ 17 ಜನ ರಾಜರಲ್ಲಿ 13 ಜನ ದೀಪನಗರಿ ಶ್ರೀರಂಗಪಟ್ಟಣದಲ್ಲಿದ್ದುಕೊಂಡು ಮೈಸೂರಿಗಾಗಿ ಶ್ರಮಿಸಿದವರು. ನಂತರ ಬಂದ 4 ಜನ ಒಡೆಯರು ಸುಂದರ ನಗರಿ ಮೈಸೂರಿನಲ್ಲಿದ್ದವರು.
1799 ಇಸವಿ ಜೂನ್‌ 30ನೇ ತಾರೀಕು ಅಂದರೆ 225 ವರ್ಷಗಳ ಹಿಂದೆ, 5 ವರ್ಷದ ಒಬ್ಬ ರಾಜ ಆಡಳಿತಕ್ಕೆ ಬಂದರು. ಅಲ್ಲಿಂದ ಇಲ್ಲಿಯವರೆಗೆ ಒಟ್ಟು 4 ಜನ ರಾಜರು ಮತ್ತು ಇಬ್ಬರು ರಾಜಕುಮಾರರು ಬಂದಿದ್ದಾರೆ.
ಮೈಸೂರು ಸಂಸ್ಥಾನದ ಮೊದಲ ಪ್ರಮುಖ ಮಹಾರಾಜ ಮುಮ್ಮಡಿ ಅಥವಾ ಮೂರನೇ ಕೃಷ್ಣರಾಜ ಒಡೆಯರ್‌, ಅವರ ದತ್ತುಪುತ್ರ 10ನೇ ಚಾಮರಾಜೇಂದ್ರ ಒಡೆಯರ್ ಅವರ ಧರ್ಮಪತ್ನಿ ವಾಣಿವಿಲಾಸ ಸನ್ನಿಧಾನ ಅಥವಾ ಕೆಂಪನಂಜಮ್ಮಣ್ಣಿ. ಅವರಿಗಿದ್ದ ಇಬ್ಬರು ಪುತ್ರರಲ್ಲಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಜ್ಯೇಷ್ಠಪುತ್ರ. ನಂತರದ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ತಮ್ಮ ಕಂಠೀರವ ನರಸಿಂಹರಾಜ ಒಡೆಯರ್ ಮಗನಾದ ಜಯಚಾಮರಾಜೇಂದ್ರ ಒಡೆಯರ್‌ ಅವರ ಮೊದಲ ರಾಣಿ ಸತ್ಯಪ್ರೇಮ ಕುಮಾರಿ, ಅವರ ಮಗನೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪತ್ನಿ ಪ್ರಮೋದಾದೇವಿ ಒಡೆಯರ್, ಅವರ ದತ್ತುಪುತ್ರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ. ಇವರ ಮಗ ಆದ್ಯವೀರ್‌ ನರಸಿಂಹರಾಜ ಒಡೆಯರ್.
(ಮುಮ್ಮಡಿ ಕೃಷ್ಣರಾಜ ಒಡೆಯರ್‌ – 10ನೇ ಚಾಮರಾಜೇಂದ್ರ ಒಡೆಯರ್ – ನಾಲ್ವಡಿ ಕೃಷ್ಣರಾಜ ಒಡೆಯರ್‌ – ಜಯಚಾಮರಾಜೇಂದ್ರ ಒಡೆಯರ್‌ – ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ – ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ – ಆದ್ಯವೀರ್‌ ನರಸಿಂಹರಾಜ ಒಡೆಯರ್)
ಆ 25 ರಾಜರಲ್ಲಿ ಕೆಲವರಿಗೆ 10 ಜನ ಕೆಲವರಿಗೆ 5 ಜನ ರಾಣಿಯರು ಹೀಗೆ. ಒಟ್ಟು 105 ಜನ ರಾಣಿಯರಿದ್ದರು. ಎಲ್ಲಾ ರಾಣಿಯರು ಪ್ರಾಮಾಣಿಕವಾಗಿ ಮದುವೆ ಆಗಿದ್ದವರೇ ಆಗಿದ್ದರು. ಅವರೆಲ್ಲರಿಗೂ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟು, ಗೌರವಯುತವಾಗಿ ಕಾಣಲಾಗುತ್ತಿತ್ತು.


ಮೊದಲ 12-13 ರಾಜರ ಆಳ್ವಿಕೆಯವರೆಗೂ ಸತಿಸಹಗಮನ ಪದ್ಧತಿ ಇತ್ತು. ಮೊದಲ ಬಾರಿಗೆ ಕೊಲ್ಕತ್ತಾದಲ್ಲಿ ಸತಿಸಹಗಮನ ಪದ್ಧತಿ ವಿರುದ್ಧ ಹೋರಾಟ ನಡೆದ ಪ್ರಭಾವ ನಂತರ ಮೈಸೂರಿನ ಒಡೆಯರ್‌ ಮನೆತನದಲ್ಲೂ ಸಹ ಸತಿಸಹಗಮನ ಪದ್ಧತಿಯನ್ನು ನಿಲ್ಲಿಸಲಾಯಿತು.
ಮರದ ಅರಮನೆ ಬೆಂಕಿಗಾಹುತಿ
ಪ್ರಸ್ತುತ ಇರುವ ಅಂಬಾವಿಲಾಸ ಅರಮನೆ 5ನೆಯ ಅರಮನೆ. ಇದಕ್ಕೂ ಮುಂಚೆ ಇದ್ದದ್ದು 95 ವರ್ಷ ಹಳೆಯ ಮರದ ಅರಮನೆ. ಹಾಗಾದರೆ ಅದೇನಾಯಿತು? ಈ ಅರಮನೆ ಏಕೆ ಬಂತು? ಈ ಕಥೆಯನ್ನು ನೋಡಿಬರುವ.
ಮರದ ಅರಮನೆಯಲ್ಲಿದ್ದದ್ದು ಇಂದಿನ ಅರಮನೆಯ ಜಯರಾಮ ಬಲರಾಮ ಗೇಟಿನ ಎದುರಗಡೆ ಆಲ್ಬರ್ಟ್‌ ವಿಕ್ಟರ್‌ ರಸ್ತೆಯಲ್ಲಿ ನಿಲ್ಲಿಸಲಾಗಿರುವ ಅಮೃಮಶಿಲೆಯ ಪ್ರತಿಮೆಯಲ್ಲಿರುವ ರಾಜ 10ನೇ ಚಾಮರಾಜೇಂದ್ರ ಒಡೆಯರ್‌.
ಅವರು 1894ರಲ್ಲಿ ಅಖಿಲ ಭಾರತೀಯ ವೈದ್ಯಕೀಯ ಸಮ್ಮೇಳನದ ಉದ್ಘಾಟನೆಗೆಂದು ಕೋಲ್ಕತ್ತಾಗೆ ಹೋಗಿದ್ದಂತಹ ಸಮಯದಲ್ಲಿ. ಉದ್ಘಾಟನೆ ಮಾಡಿದ ರಾತ್ರಿ ಗಂಟಲು ಬೇನೆ(ಡಫ್ತೀರಿಯಾ) ಬಂದು ನಿಧನರಾದರು.
ಕೊಲ್ಕೊತ್ತಾ ನಗರದ ಮುಖ್ಯ ನ್ಯಾಯಾದೀಶ (ಚೀಫ್‌ ಜಸ್ಟೀಸ್‌) ಗುರುನಾಥ್‌ ಬ್ಯಾನರ್ಜಿಯವರು “ನಾವು ಕೋಲ್ಕತ್ತಾದವರು ಮೈಸೂರಿಗಿಂತ ಚೆನ್ನಾಗಿ ಅಂತ್ಯ ಸಂಸ್ಕಾರ ಮಾಡುತ್ತೇವೆ” ಎಂದು ಕೆಂಪನಂಜಮ್ಮಣ್ಣಿಯವರಿಗೆ ಮಾತು ಕೊಟ್ಟು, ಕೋಲ್ಕತ್ತಾದ ಗಂಗಾನದಿಯ ಪಕ್ಕದಲ್ಲಿರುವ ಕಾಳಿಘಾಟ್‌ನಲ್ಲಿ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ಮಾಡಲಾಯಿತು. ಅವರ ನೆನಪಿಗಾಗಿ ಇಂದಿಗೂ ಸಹ ಪ್ರತೀವರ್ಷ ಆ ದಿನ ಕೋಲ್ಕತ್ತ ನಗರ ಅನ್ನದಾನವನ್ನು ಏರ್ಪಡಿಸುತ್ತಾ ಬಂದಿದೆ.
1897ರಲ್ಲಿ ಕೆಂಪನಂಜಮ್ಮಣ್ಣಿಯವರ ಸಮಯದಲ್ಲಿ ಅವರ ಜ್ಯೇಷ್ಠ ಪುತ್ರಿ ಜಯಲಕ್ಷ್ಮಮ್ಮಣ್ಣಿಯವರ ಮದುವೆ ಸಂದರ್ಭದಲ್ಲಿ 5ನೇ ದಿನದ ಶಾಸ್ತ್ರವಾದ ಗುರುಟಣೆ ಉಯ್ಯಾಲೆ ಮಾಡುವ ದಿನ, ಆ ಶಾಸ್ತ್ರಕ್ಕೂ ಮೊದಲೇ, ಅರಮನೆಯ ಸಹಾಯಕಿಯರು(ಅವ್ಯಯರು) ಅಡುಗೆ ಮನೆಯಿಂದ ಕಾಯಿಸಿದ ಹಾಲು ಮತ್ತು ಬೆಂಕಿಯನ್ನು ತೆಗೆದುಕೊಂಡು ಹೋಗುವ ಸಮಯದಲ್ಲಿ ಗಾಳಿ ಜೋರಾಗಿ ಬೀಸಿದ್ದರಿಂದ, ಆ ಬೆಂಕಿ ಚಪ್ಪರದ ಮೇಲೆ ಬಿದ್ದು ಅರಮನೆಯುದ್ದಗಳಕ್ಕೂ ಪಸರಿಸಿತು. ಆದಕಾರಣ ಅರಮನೆ 1897ರ ಫೆಬ್ರವರಿ 27ನೇ ತಾರೀಖು ಭಾನುವಾರ ಬೆಳಗ್ಗೆ 9 ಗಂಟೆಗೆ, ಆಕಸ್ಮಿಕ ಬೆಂಕಿಯಲ್ಲಿ ಆ ಮರದ ಅರಮನೆ ಸುಟ್ಟುಹೋಯಿತು. ಆ ಸಮಯದಲ್ಲಿ ಮದುವೆಗೆ ಬಂದಿದ್ದ ಜನರೆಲ್ಲರನ್ನೂ ಜೋಪಾನವಾಗಿ ಬ್ರಹ್ಮಪುರಿ ದ್ವಾರದಿಂದ ಜಗನ್ಮೋಹನ ಅರಮನೆಗೆ ಕಳುಹಿಸಲಾಯಿತು. ಹಾಗಾಗಿ ಯಾರಿಗೂ ಏನೂ ತೊಂದರೆ ಆಗಲಿಲ್ಲ. ಕಿಳ್ಳೆ ಮೊಹಲ್ಲಾದ ಜನರೆಲ್ಲ ಸೇರಿ ಅರಮನೆಯ ಒಳಗಿದ್ದ ಅಂಬಾರಿ ವಜ್ರ ವೈಡೂರ್ಯ ಎಲ್ಲವನ್ನೂ ಈಚೆಗೆ ಸಾಗಿಸಿದರು. ಆದರೆ ಇದೆಲ್ಲವನ್ನೂ ಸಾಗಿಸುವಾಗ ಅರಮನೆಯ 4 ನೌಕರರು ಮತ್ತು ಬೆಂಕಿಯನ್ನು ನಂದಿಸಲು ಬಂದ 4 ಜನ ನೌಕರರು ದಾರುಣವಾಗಿ ಬೆಂಕಿಯಲ್ಲಿ ಸುಟ್ಟು ಸತ್ತುಹೋದರು. ಆ 8 ಜನರ ಕುಟುಂಬಕ್ಕೆ ರಾಣಿ ಕೆಂಪನಂಜಮ್ಮಣ್ಣಿಯವರು 1 ವಾರದೊಳಗೆ ಪುನರ್ವಸತಿ ನಿರ್ಮಿಸಿಕೊಟ್ಟು, ಉದ್ಯೋಗ ಕೊಟ್ಟು ನೋಡಿಕೊಂಡರು.
ಮಹಾರಾಜರನ್ನು ಕಳೆದುಕೊಂಡಂತಹ ಕೆಂಪನಂಜಮ್ಮಣ್ಣಿಯವರು, ಬಾಲಕ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಅತ್ಯತ್ತಮ ಶಿಕ್ಷಣವನ್ನು ಕೊಡಿಸಬೇಕೆಂಬ ಬಯಕೆಯಲ್ಲಿ. ಇಂದು ಪ್ರೇಜರ್‌ ಟೌನ್ ಎಂದು ಅವರ ಹೆಸರಿನಲ್ಲಿರುವಷ್ಟು ಪ್ರಸಿದ್ದಿ ಪಡೆದಿದ್ದ ಪ್ರೇಜರ್‌ ಅವರನ್ನು ಕರೆಸಿದರು. ಅವರು ಆಡಳಿತದ ಪ್ರತಿಯೊಂದು ಅಂಶಗಳನ್ನು ನಾಲ್ವಡಿಯವರನ್ನು ಹೊರಗೆ ಕರೆದುಕೊಂಡುಹೋಗಿ ತೋರಿಸಿ ಹೇಳಿಕೊಟ್ಟರು.
ಮರದ ಅರಮನೆ ಧಗಧಗನೆ ಉರಿಯುವಾಗ 12 ವರ್ಷದ ಬಾಲಕ ನಾಲ್ವಡಿ ಕೃಷ್ಣರಾಜ ಒಡೆಯರ್‌, ಕಣ್ಣೀರು ಹಾಕುತ್ತಾ ನಿಂತಿದ್ದ ಅರಮನೆಯ ಮುಸ್ಲಿಂ ಸೇವಕ ವೃದ್ಧನಿಗೆ “ಅಳಬೇಡಿ ತಾತ ಇದು ಪ್ರಕೃತಿಯಿಂದಾದದ್ದು, ಇದಕ್ಕಿನ್ನ ಭವ್ಯವಾದ ಅರಮನೆಯನ್ನು ನಾನು ಕಟ್ಟಿಸುತ್ತೇನೆ” ಎಂದು ಸಮಾಧಾನ ಮಾಡಿ, ಅಷ್ಟು ಚಿಕ್ಕ ವಯಸ್ಸಿನಲ್ಲೇ ಪ್ರೌಢಿಮೆ ಮೆರೆಯುತ್ತಾರೆ.
ಅಂದು ಭಾನುವಾರ ಜೊತೆಗೆ ಯಂತ್ರ ಕೆಟ್ಟು ಹೋಗಿದ್ದರಿಂದ ನಲ್ಲಿಯಲ್ಲಿ ನೀರು ಬರುತ್ತಿರಲಿಲ್ಲ, ಕೆರೆಯು ಬತ್ತಿಹೋಗಿತ್ತು. ಜನ ಸಾಲಾಗಿ ನಿಂತು ಆ ಕೆರೆಯಲ್ಲಿದ್ದ ಕೆಸರನ್ನೇ ತುಂಬಿಕೊಂಡು ಬಂದು ಅದರಿಂದಲೇ ಬೆಂಕಿ ನಂದಿಸಲು ಪ್ರಯತ್ನಿಸಿದರು. ಇದ್ದಂತಹ ಒಂದೇ ಒಂದು ಅಗ್ನಿಶಾಮಕ ಧಳ ಬೆಂಗಳೂರಿನಲ್ಲಿತ್ತು. ಅದು ಮೈಸೂರಿಗೆ ಬರುವುದರೋಳಗಾಗಿ ಅರಮನೆ ಉರಿದುಹೋಗಿತ್ತು.
ಅರಮನೆ ನವನಿರ್ಮಾಣಕ್ಕೆ ಯೋಜನೆ
ಅದಾದ 1 ವಾರದಲ್ಲೆ ಅನಾಹುತಕ್ಕೆ ಕಾರಣವನ್ನು ಕುರಿತು 100 ಪುಟಗಳ ವಿವರಣೆಯನ್ನು ತೆಗೆದುಕೊಂಡ ರಾಣಿ ಕೆಂಪನಂಜಮ್ಮಣ್ಣಿಯವರು, 15 ದಿನಗಳಲ್ಲೇ ಅರಮನೆಯ ನವನಿರ್ಮಾಣಕ್ಕೆ ಯೋಜನೆಗಳನ್ನೂ ರೂಪಿಸಲು ಆರಂಭಿಸಿದರು.
ಅಂಬಾವಿಲಾಸ ಅರಮನೆ
ಶಿಮ್ಲಾದಲ್ಲಿರುವ ವೈಸ್ ರಾಯ್‌ ಭನವವನ್ನು ವಿನ್ಯಾಸಗೊಳಿಸಿದ, ಸರ್‌ ಹೆನ್ರಿ ಇರ್ವಿನ್‌ನನ್ನು ಕರೆಸಿ ಅರಮನೆಯ ವಿನ್ಯಾಸವನ್ನು ಮಾಡಿಕೊಡುವಂತೆ ಕೇಳಿಕೊಳ್ಳಲಾಯಿತು. 6 ತಿಂಗಳುಗಳ ಕಾಲ ಮೈಸೂರಿನಲ್ಲೇ ಇದ್ದಂತಹ (ಇವಾಗಿನ ಮೈಸೂರಿನ ಇರ್ವಿನ್‌ ರಸ್ತೆ) ಇರ್ವಿನ್‌ ಅರಮನೆಯ ವಿನ್ಯಾಸವನ್ನು ಮಾಡಿಕೊಟ್ಟಿದ್ದಕ್ಕಾಗಿ, ಕೆಂಪನಂಜಮ್ಮಣ್ಣಿಯವರು ಅವನಿಗೆ ರೂ.12000 ಸಂಭಾವನೆಯನ್ನು ಕೊಡುತ್ತಾರೆ. ಇವಾಗಿನ ಅಂಬಾವಿಲಾಸ ಅರಮನೆಯನ್ನು ಕಟ್ಟಿದ ಇಂಜಿನಿಯರ್‌ ಬಿ ಪಿ ರಾಘವಲು ನಾಯ್ಡು. ರಾಣಿ ಕೆಂಪನಂಜಮ್ಮಣ್ಣಿಯವರು, ಬಿ ಪಿ ರಾಘವಲು ನಾಯ್ಡು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್‌ ಮೂರೂ ಜನರು ಕುಳಿತು ಅರಮನೆಯನ್ನು ಕಟ್ಟುವ ಬಗ್ಗೆ ಚರ್ಚೆ ಮಾಡಿ ವಿಶ್ವದ ಅತೀ ಶ್ರೇಷ್ಠ ವಸ್ತುಗಳೆಲ್ಲವೂ ಅರಮನೆಯಲ್ಲಿರಬೇಕು. ಶ್ರೇಷ್ಠ ಕೆಲಸಗಾರರು ಅರಮನೆಗಾಗಿ ಕೆಲಸ ಮಾಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳುತ್ತಾರೆ.
ಹಾಗಾಗಿ ಅಮರಶಿಲ್ಪಿ ಜಕ್ಕಣ್ಣಾಚಾರಿಯ ವಂಶಜರನ್ನು ಮತ್ತು ಆಗ್ರಾದಲ್ಲಿ ತಾಜ್ ಮಹಲ್‌ ನಿರ್ಮಿಸಿದ ಸಂತಾನದವರನ್ನು ಕರೆಸಲಾಗುತ್ತದೆ. 3000 ವರ್ಷಗಳಷ್ಟು ಪ್ರಾಚೀನವಾದ ಭೂಕಂಪನ ರಹಿತ ಚಾಮುಂಡಿ ಬೆಟ್ಟ ಎಂದು ವಿಜ್ಞಾನಿಗಳು ಹೇಳಿರುವ ಚಾಮುಂಡಿ ಬೆಟ್ಟದಲ್ಲಿಂತಹ ಕೆಂಪುಶಿಲೆಗಳನ್ನು ತರಿಸಿ ಶೇಶಾದ್ರಿ ಐಯ್ಯರ್‌ರವರು ಅರಮನೆಗೆ ಉದ್ದನೆಯ ಕಂಬಗಳನ್ನು ನಿಲ್ಲಿಸಿದರು. 12 ವರ್ಷಗಳ ಕಾಲ ಅಂಬಾವಿಲಾಸ ಅರಮನೆಗೋಸ್ಗರ ಸಾವಿರಾರು ಕೈಗಳು ಕೆಲಸ ಮಾಡಿದವು.
ಎಚ್‌ ವೈ ಶಾರದಾಪ್ರಸಾದ್‌ ಅವರ ತಂದೆ ಯೋಗನರಸಿಂಹಂ 1916ರ ಮೈಸೂರು ವಿಶ್ವವಿದ್ಯಾನಿಲಯದ ಮೊದಲ ತಂಡ(ಬ್ಯಾಚ್‌) ವಿದ್ಯಾರ್ಥಿಯಾದ ಸಂಗಿತ ವಿದ್ವಾನ್‌ ಅವರ ತಂದೆ ನಾರಾಣಪ್ಪ, ಹೊಳೆನರಸೀಪುರದಿಂದ ಕಾಲುನಡಿಗೆಯಲ್ಲಿ ಬಂದು ಅರಮನೆಯ ಟ್ರೆಷರಿಯಲ್ಲಿ ಅಕೌಂಟ್ಸ್‌ ವಿಭಾಗದಲ್ಲಿ ಕೆಲಸಕ್ಕೆ ಸೇರಿ ಅರ್ಥಿಕ ಪಾರದರ್ಶಕತೆಯನ್ನು ಮೆರೆದವರು. ಹಾಗಾಗಿಯೆ ಇವಾಗಿರುವ ಆಂಬಾವಿಲಾಸ ಅರಮನೆ ಕಟ್ಟಲು ಕರ್ಚಾದ 49 ಲಕ್ಷದ 63 ಸಾವಿರದ 913 ರುಪಾಯಿಗಳ ಲೆಕ್ಕವನ್ನು ಕರಾರುವಕ್ಕಾಗಿ ದಾಖಲಿಸಿದ್ದಾರೆ.
ಜಗಮಗಿಸುವ 1 ಲಕ್ಷಕ್ಕೂ ಹೆಚ್ಚಿನ ಬಲ್ಬುಗಳು
ಪ್ರತಿದಿನವೂ ಸಂಜೆ ಅರಮನೆಯ ಲೈಟುಗಳನ್ನು ಆನ್‌ ಮಾಡುವುದಕ್ಕಾಗಿ ಕಾದು ನೋಡುವಾಗ ಸರಿಯಾಗಿ 7 ಗಂಟೆಗೆ ಜಗಮಗಿಸುವ 1 ಲಕ್ಷಕ್ಕೂ ಹೆಚ್ಚಿನ ಬಲ್ಬುಗಳು ಸಾಮಾನ್ಯ ಬಲ್ಬುಗಳಲ್ಲ. ಸ್ಕ್ರೂ(ತಿರುಪು) ಇರುವ ಬಲ್ಬುಗಳು. ಇವುಗಳನ್ನು ಚೀಫ್‌ ಎಲೆಕ್ಟ್ರಿಕಲ್‌ ಇಂಜಿನಿಯರ್‌ ಕರ್ನಲ್‌ ಬ್ರಿಕ್ಸ್‌ ಎಂಬ ಮಹಾಶಯ ಹಾಕಿದನು. ಇಂತಹ ಬಲ್ಬುಗಳನ್ನು ಅರಮನೆಯಲ್ಲಿ ಬಿಟ್ಟು ಬೇರೆಲ್ಲೂ ಕಾಣಲು ಸಿಗುವುದಿಲ್ಲ.
ಮೊದಲಿನ ಮರದ ಅರಮನೆಯಲ್ಲಿ ಇದ್ದಂತಹ ಡೈನಮೋ ವಿದ್ಯುತ್‌ ರೀತಿ, ಮೊದಲಿಗೆ ಈ ಅರಮನೆಗೆ ವಿದ್ಯುತ್‌ ಬೆಳಕನ್ನು ಕೊಟ್ಟವರು ಶೇಶಾದ್ರಿ ಐಯ್ಯರ್‌ರವರು. .
ಪ್ರಮೋದಾದೇವಿ ಒಡೆಯರ್‌ ಮತ್ತು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಈವಾಗ ವಾಸಿಸುತ್ತಿರುವ ಅರಮನೆಯಲ್ಲಿ ಮೊದಲಿನ ಮರದ ಅರಮನೆಯನ್ನು ಕಾಣಬಹುದು.
1907ನೇ ಇಸವಿಯಲ್ಲಿ ಗೃಹಪ್ರವೇಶ ಆಗಿ ಪ್ರವಾಸಿಗರಿಗು ತೆರೆದಿಡಲಾದ ಅಂಬಾವಿಲಾಸ ಅರಮನೆಯ ಸಂಪೂರ್ಣ ಕಾಮಗಾರಿ 1912ರಲ್ಲಿ ಮುಕ್ತಾಯವಾಯಿತು.
ಮೈಸೂರು ಒಡೆಯರುಗಳ ವಿವರ
ಮೈಸೂರಿನ ಮೊದಲ ಹೆಸರಾಂತ ರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಭಾರತೀಯ ಶಿಕ್ಷಣವನ್ನು ಪಡೆದವರು, ಯುದ್ಧನೀತಿಯಲ್ಲಿ ಪರಿಣಿತಿ ಹೊಂದಿದ ಇವರು ದೀರ್ಗಾಯುಷಿ.
ಅವರ ಮಗ 10ನೇ ಚಾಮರಾಜೇಂದ್ರ ಒಡೆಯರ್ ಬೆಂಗಳೂರು ಅರಮನೆಯಲ್ಲಿ ಓದಿ, ಪಾಶ್ಚಾತ್ಯ ವಿದ್ಯಾಭ್ಯಾಸವನ್ನು ಮನೆಯ ಮೇಷ್ಟ್ರರಾಗಿ ಬರುತ್ತಿದ್ದ ಪ್ರೊ ಮಾಲೆಸನ್‌ ಎಂಬುವವರಿಂದ ಕಲಿತವರು. ಪ್ರೊ ಮಾಲೆಸನ್‌ ನಂತರದ ದಿನಗಳಲ್ಲಿ 10ನೇ ಚಾಮರಾಜೇಂದ್ರ ಒಡೆಯರ್ಗೆ ಪೋಷಕರಾಗಿ, ನಂತರ ಗೆಳೆಯರೂ ಆದವರು.
ʼಕರ್ನಲ್‌ʼ ಎಂಬ ಬಿರುದ್ದು ತೆಗೆದುಕೊಂಡಿದ್ದ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಾಮಾನ್ಯ ಶಾಲೆಯಲ್ಲೇ ಓದಿದವರು. ಆದರೆ ಪ್ರೇಜರ್‌(ಪ್ರೇಜರ್‌ ಟೌನ್) ನಾಲ್ವಡಿಯವರಿಗೆ ಆಡಳಿತದ ಬಗ್ಗೆ ವಿವರವಾಗಿ ಹೇಳಿಕೊಟ್ಟರು, 6 ವರ್ಷಗಳ ಕಾಲ ಪ್ರತಿಯೊಂದನ್ನು ಪ್ರಾಯೋಗಿಕವಾಗಿ ಕರೆದುಕೊಂಡು ಹೋಗಿ ತೋರಿಸಿ ಹೇಳಿಕೊಟ್ಟರು. ನ್ಯಾಯಾಲಯದಲ್ಲಿ ಕೂರಿಸಿಕೊಂಡು ಕೋರ್ಟ್‌ ಕಲಾಪವನ್ನು ತೋರಿಸುತ್ತಿದ್ದರು, ನದಿಗಳ ಹತ್ತಿರ ಕರೆದುಕೊಂಡು ಹೋಗುತ್ತಿದ್ದರು. ವ್ಯವಹರಿಸುವುದನ್ನು ಹೇಳಿಕೊಟ್ಟರು. ಕನ್ನಡ, ಸಂಸ್ಕೃತ, ಉರ್ದು, ಹಿಂದಿ & ಇಂಗ್ಲಿಷ್ ಭಾಷೆಗಳನ್ನು ಬಲ್ಲವರಾಗಿದ್ದರು. ಬುದ್ಧ ಗಯಾ ಕ್ಷೇತ್ರಗಳನ್ನು ನೋಡಿಬಂದವರು. ಜಗತ್ತನ್ನು 2 ಬಾರಿ ಸುತ್ತಿ ಬಂದವರು. ಇಂಗ್ಲೆಂಡ್‌, ಅಮೇರಿಕಾದಲ್ಲಿದ್ದ ಪ್ರಜಾಪ್ರಭುತ್ವದ ಬಗ್ಗೆ ಖುದ್ದು ನೋಡಿ ತಿಳಿದವರು. ಇಂಗ್ಲೀಷಿನವರಿಗಿಂತ ಇಂಗ್ಲಿಷನ್ನು ಅಚ್ಚುಕಟ್ಟಾಗಿ ಮಾತನಾಡಬಲ್ಲವರಾಗಿದ್ದರು ಎಂಬುದನ್ನು ಇಂಗ್ಲೀಷಿನವರೆ ಬರೆದಿಟ್ಟಿರುವ ದಾಖಲೆಗಳಿವೆ. ವಿದೇಶಿ ಪತ್ರಿಕೆಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ಆಧುನಿಕ “ಜನಕ ಮಹಾರಾಜ” ಎಂದು ಕರೆಯಲಾಗಿದೆ.
10ನೇ ಚಾಮರಾಜೇಂದ್ರ ಒಡೆಯರ್ರವರ ತಂದೆಗೆ ತಕ್ಕ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮೈಸೂರನ್ನು 1902 ರಿಂದ 1939ರವರೆಗೆ ಆಳಿದ ಮಹಾರಾಜ. ಸರ್ಕಾರದ ದಾಖಲೆಗಳಲ್ಲಿಯೂ ಸಹ ದಾಖಲಿಸಿರುವಂತೆ, ಸತತವಾಗಿ 6 ವರ್ಷಗಳ ಕಾಲ ದಿವಸಕ್ಕೆ 16 ಗಂಟೆ ಓದುತ್ತಿದ್ದ ರಾಜ. ಇವರು ಜ್ಞಾನಬಲದ ಮೇಲೆ ರಾಜರಾದವರು. ಆದ್ದರಿಂದಲೇ ʼನಾಲೆಡ್ಜ್‌ ಕಿಂಗ್ʼ ಎಂದು ಕರೆಸಿಕೊಂಡವರು. ಮಹಾಮಹೋಪಾಧ್ಯಾಯ, ಇಂಟರ್‌ ನ್ಯಾಷನಲಿಷ್ಟ್ ವಿ.ಎಸ್. ಶ್ರೀನಿವಾಸಶಾಸ್ತ್ರಿಯವರು, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ನಿಧನವಾದ ರಾತ್ರಿ ಮದ್ರಾಸ್‌ ಆಕಾಶವಾಣಿಯಲ್ಲಿ ನಾಲ್ವಡಿಯವರನ್ನು ರಾಜಶ್ರೀ(ಸೇಂಟ್‌ ಕಿಂಗ್) ಅಂದರೆ ಅವರು ರಾಜರೂ ಹೌದು ಋಷಿಯೂ ಹೌದುʼ ಎಂದು ಕರೆದರು.
ನಾಲ್ವಡಿ ಕೃಷ್ಣರಾಜ ಒಡೆಯರ್‌ ಮತ್ತು ಕಂಠೀರವ ನರಸಿಂಹರಾಜ ಒಡೆಯರ್‌ ಜೋಡೆತ್ತುಗಳಿದ್ದ ಹಾಗೆ. 1885 ರಲ್ಲಿ ಬಂದಂತಹ ʼಮೈಸೂರು ಪ್ರಜಾಪ್ರತಿನಿಧಿ ಸಭಾʼಗೆ ಕಂಠೀರವ ನರಸಿಂಹರಾಜ ಒಡೆಯರ್‌ರವರನ್ನು ʼಎಕ್ಟ್ರಾರ್ಡಿನರಿ ಸ್ಪೆಷಲ್‌ ಮೆಂಬರ್‌ʼ ಎಂದು ಗೆಜೆಟ್‌ ನೋಟಿಫಿಕೇಶನ್‌ ಆಗಿತ್ತು. ಅವರಿಬ್ವರು ಅಣ್ಣನಿಗೆ ತಕ್ಕ ತಮ್ಮ, ತಮ್ಮನಿಗೆ ತಕ್ಕ ಅಣ್ಣನಂತೆ ಇದ್ದರು.
ಹೀಗೆ ಮೈಸೂರು ಒಡೆಯರು ಜನಸಾಮಾನ್ಯರ ನೋವುಗಳಿಗೆ, ಅವಶ್ಯಕತೆಗಳಿಗೆ ಸ್ಪಂದಿಸಿ, ಅಗಿನ ಕಾಲದಲ್ಲೇ ಮೈಸೂರು, ಜಗತ್ತಿನಾದ್ಯಂತ ಹೆಸರು ಮಾಡುವಂತೆ ಮಾಡಿ, ಮೈಸೂರನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದವರು. ನಿತ್ಯವೂ ಬೆಳಗೆದ್ದು ಮೊದಲಿಗೆ ನೆನೆಯುವಂತಹ ಸ್ಥಾನದಲ್ಲಿರುವ ಮೈಸೂರು ಒಡೆಯರ ಕಥೆ ಸಾಮಾನ್ಯವಾದದ್ದಂತೂ ಅಲ್ಲವೇ ಅಲ್ಲ ಬದಲಿಗೆ ಕರ್ನಾಟಕದ ಹೆಮ್ಮೆ, ಮೈಸೂರಿಗೆ ಕಣ್ಣಿನ ರೆಪ್ಪೆಯ ರೀತಿಯಲ್ಲಿ ಕಾವಲಾಗಿದ್ದು ರಕ್ಷಣೆಯನ್ನಿತ್ತ ಮಹಾನುಭಾವರುಗಳು ನಮ್ಮ ಮೈಸೂರಿನ ಒಡೆಯರು.

ಜಯಚಾಮರಾಜೇಂದ್ರ ಒಡೆಯರ್

ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಕಂಠೀರವ ನರಸಿಂಹರಾಜ ಒಡೆಯರ್ಗೆ ಮಗು ಜನಿಸಿದಂತಹ ಸಮಯದಲ್ಲಿ ಇಂಗ್ಲೆಂಡಿಗೆ ಜಯವಾದ್ದರಿಂದ ಅದು ನಮಗೂ ಸಹ ಜಯ ಎಂದು ಭಾವಿಸಿ, ಆ ಮಗುವಿಗೆ ಜಯಚಾಮರಾಜೇಂದ್ರ ಒಡೆಯರ್ ಎಂದು ನಾಮಕರಣ ಮಾಡಲಾಯಿತು. ಇವರು ಮಹಾರಾಜ ಕಾಲೇಜಿನ ಫಿಲಾಸಫಿ ಮತ್ತು ಇತಿಹಾಸದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ರಾಜ್ಯಶಾಸ್ತ್ರ ವಿದ್ಯಾರ್ಥಿ. ಹಲವಾರು ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದಂತಹ ಇವರು ರಾಜಕೀಯದಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಸತ್ಯಪ್ರೇಮ ಕುಮಾರಿ, ಪ್ರಮೋದಾ ದೇವಿ ಒಡೆಯರ್‌, ತ್ರಿಷಿಕಾ ಕಮಾರಿ ದೇವಿ ಈ ಮೂರು ರಾಣಿಯರನ್ನು ಬಿಟ್ಟು ಉಳಿದ ಎಲ್ಲಾ ರಾಣಿಯರ ಹೆಸರು ʼಅಮ್ಮಣ್ಣಿʼಯಿಂದಲೇ ಕೊನೆಯಾಗುವುದು ವಿಶೇಷ.

ಮೈಸೂರು ಒಡೆಯರ ಒಂದಷ್ಟು ಸಾಧನೆಗಳು
👉1902 ರಲ್ಲಿ ಏಷ್ಯಾದಲ್ಲೆ ಪ್ರಥಮ ವಿದ್ಯುತ್ ಉತ್ಪಾಧನ ಘಟಕ ಸ್ಥಾಪಿಸಿದರು.
👉1903 ರಲ್ಲಿ ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ಮಾಣ.
👉1905 ರಲ್ಲಿ ಬೆಂಗಳೂರಿಗೆ ವಿದ್ಯುತ್ ಸಂಪರ್ಕ (ಏಷ್ಯಾದಲ್ಲೆ ಪ್ರಥಮ)
👉1907 ವಾಣಿ ವಿಲಾಸಸಾಗರ ಅಣೆಕಟ್ಟೆ (ಮುಕ್ತಾಯ ವರ್ಷ)
👉1907 ಮೈಸೂರು ಪ್ರಜಾ ಪ್ರತಿನಿಧಿ ಸಭೆ.
👉1909 ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆ.
👉1909 ಭಾರತದ ಮೊದಲ ಬಾಯ್ಸ್ ಸ್ಕೌಡ್ ತರಬೇತಿ
👉1910 ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಶಂಕುಸ್ಥಾಪನೆ.
👉1913 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು.
👉1913 ಕೃಷಿ ವಿಶ್ವವಿದ್ಯಾನಿಲಯದ ಸ್ಥಾಪನೆ.
👉1915 ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ
👉1916 ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ.
👉1916 ಯುವರಾಜ ಕಾಲೇಜು.
👉1916 ಮೈಸೂರು ಚೇಂಬರ್ ಆಫ್ ಕಾಮರ್ಸ್.
👉1917 ಮಹಾರಾಣೀ ಮಹಿಳಾ ಕಾಲೇಜು.
👉1918 ಜಸ್ಟಿಸ್ ಮಿಲ್ಲರ್ ಸಮಿತಿ ಸ್ಥಾಪನೆ
👉1921 ಲಲಿತ ಮಹಲ್ ಅರಮನೆ ಸ್ಥಾಪನೆ.
👉1921 ವಿಜ್ಞಾನ ಕಾಲೇಜು ಬೆಂಗಳೂರು.
👉1923 ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ.
👉1924 ಮೈಸೂರು ಮೆಡಿಕಲ್ ಕಾಲೇಜು.
👉1925 ಕೃಷ್ಣರಾಜನಗರ ಸ್ಥಾಪನೆ.
👉1925 ನಿಮಾನ್ಸ್ ಆಸ್ಪತ್ರೆ ಸ್ಥಾಪನೆ.
👉1927 ಕೃಷ್ಣರಾಜ ಆಸ್ಪತ್ರೆ ಮೈಸೂರು.
👉1928 ಬೆಂಗಳೂರು ಕೆ ಆರ್ ಮಾರುಕಟ್ಟೆ.
👉1930 ಮಾರ್ಕೋನಹಳ್ಳಿ ಡ್ಯಾಮ್ ತುಮಕೂರು.
👉1933 ಮೈಸೂರು ಸಕ್ಕರೆ ಕಾರ್ಖಾನೆ ಮಂಡ್ಯ.
👉1933 ಕೆ ಆರ್ ಮಿಲ್.
👉1933 ಬೆಂಗಳೂರು ಟೌನ್ ಹಾಲ್.
👉1933 ಸಂತ ಫಿಲೊಮಿನ ಚರ್ಚ್ ಮೈಸೂರು.
👉1934 ವಾಣಿವಿಲಾಸ ಮಕ್ಕಳ ಆಸ್ಪತ್ರೆ.
👉1935 ಮೈಸೂರು ಪೇಪರ್ ಮಿಲ್ ಭದ್ರಾವತಿ.
👉1936 ಮೈಸೂರು ಲ್ಯಾಂಪ್ಸ್.
👉1937 ಮೈಸೂರು ಪೆಂಟ್ ಅಂಡ್ ವಾರ್ನಿಷ್
👉1937 ಪೆಪರ್ ಮಿಲ್ ಬೆಳಗೊಳ
👉1938 ಮಹಾರಾಣಿ ಮಹಿಳಾ ಕಾಲೇಜು
👉1939 ಮಂಡ್ಯ ಜಿಲ್ಲೆ ನಿರ್ಮಾಣ.
👉1939 ಹಿರೇಭಾಸ್ಕರ ಅಣಕಟ್ಟೇ
👉ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನ ಘಟಕ ಜೋಗ.
👉ಬಾಲ್ಯ ವಿವಾಹ ರದ್ದತಿ.
👉ಮಹಿಳಾ ಶಿಕ್ಷಣಕ್ಕೆ ಒತ್ತು.
👉ಹಿಂದುಳಿದವರ ಸುಧಾರಣೆಗಾಗಿ ಮೀಸಲಾತಿ
👉 ಸಿ ಎಫ್‌ ಟಿ ಆರ್‌ ಐ ನಿರ್ಮಾಣ
👉 ದೇವರಾಜ ಮಾರುಕಟ್ಟೆ ನಿರ್ಮಾಣ
👉 1805 ರಲ್ಲಿ ನಿರ್ಮಿಸಿದ ಸರ್ಕಾರಿ ಅತಿಥಿ ಗೃಹ
👉 ಲ್ಯಾಂಡ್ಸ್ಡೌನಿರ್ಮಾಣ
👉 1881 ರಲ್ಲಿ (ಡಿಸಿ ಆಫೀಸ್‌) ಅಠಾರಾ ಕಛೇರಿಯನ್ನು ಸ್ಥಾಪನೆ
👉 18ನೇ ಶತಮಾನದಲ್ಲಿ ಗಂಡಭೇರುಂಡ ಲಾಂಚನ
👉 ಮೈಸೂರಿನ ಮೊದಲ ಕಟ್ಟಡ 1799 ಟಿಪ್ಪು ವಿರುದ್ಧ ಹೋರಾಡಿದ ದಂಡನಾಯಕ ಫೀಲ್ಡ್‌ ಮಾರ್ಷಲ್‌ ಆರ್ಥರ್‌ ವೆಲ್ಲೆಸ್ಲಿ ವಾಸವಿದ್ದಂತಹ ವೆಲ್ಲಿಂಗ್‌ಟನ್‌ ಲಾಡ್ಜ್‌. ಇಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮ್ಯೂಸಿಯಮ್‌ಗಳಿವೆ.

ಪತ್ರಾಗಾರ ಇಲಾಖೆಯಲ್ಲಿ 200 ವರ್ಷದ ದಾಖಲೆಗಳು ಭಧ್ರ

ಅದೃಷ್ಟವಶಾತ್‌ ಕರ್ನಾಟಕ ಸರ್ಕಾರ 1972ರಲ್ಲಿ ರಾಜ್ಯ ಪತ್ರಾಗಾರ ಇಲಾಖೆಯನ್ನು ಪ್ರಾರಂಭಿಸಿತು. 1983ನೇ ಇಸವಿಯಲ್ಲಿ ಮೈಸೂರಿನ ಅರಮನೆಯ ಗಾಯಿತ್ರಿ ದೇವಸ್ಥಾನದ ಒಳಗಿರುವ ಕಟ್ಟಡದಲ್ಲಿ ವಿಭಾಗೀಯ ಪತ್ರಾಗಾರ ಇಲಾಖೆ ಬಂದಿತು. ಅದು ಈವಾಗ ಮೈಸೂರಿನ ಜೆ.ಪಿ.ನಗರದಲ್ಲಿ ಸ್ವಂತ ಕಟ್ಟಡದಲ್ಲಿದೆ. ಅಲ್ಲಿ ಇರಿಗೇಷನ್‌ ರಿಪೋರ್ಟ್‌, ಪೊಲೀಸ್‌ ಮ್ಯಾನ್ಯುಯಲ್‌, ಬೋರ್ಡ್‌ ಆಫ್‌ ರೆವಿನ್ಯು ರೆಕಾರ್ಡ್‌, ಸೆನ್ಸೆಸ್‌ ರಿಪೋರ್ಟ್‌ಗಳಂತಹ 200 ವರ್ಷದ ದಾಖಲೆಗಳನ್ನು ಜೋಪಾನವಾಗಿ ಇಡಲಾಗಿದೆ. ಬೇಕೆಂದರೆ ಕೇಳಿ ಫೋಟೊ ಅಥವಾ ಜೆರಾಕ್ಸ್‌ ತೆಗೆದುಕೊಂಡು ವಾಪಸ್‌ ಕೊಡಬಹುದು. ಇವಾಗಿನ ಕನ್ನಡ ನಾಡಿನ ಅಧಿಕೃತ ಮುಖವಾಣಿ ʼಕರ್ನಾಟಕ ರಾಜ್ಯಪತ್ರʼಕ್ಕೆ ಮೊದಲಿಗೆ ಮೈಸೂರಿನ ಗಜೆಟ್‌ ಎಂದು ಹೆಸರಿತ್ತು, ನಂತರ ಗೆಜೆಟ್‌ ಆಯಿತು.
ಮೈಸೂರಿಗಾಗಿ ಸೇವೆ ಸಲ್ಲಿಸಿರುವ ಸರ್.ಎಂ. ವಿಶ್ವೇಶ್ವರಯ್ಯನಂತಹ ಹಲವಾರು ಅಧಿಕಾರಿಗಳು ಸಹಿ ಮಾಡಿರುವಂತಹ 1 ಲಕ್ಷ ಕಡತ(ಫೈಲ್)ಗಳನ್ನು ಟ್ರಂಕುಗಳಲ್ಲಿ ತುಂಬಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ರವರು ಕರ್ನಾಟಕ ಸರ್ಕಾರಕ್ಕೆ ನೀಡಿದ್ದಾರೆ. ಅದೆಲ್ಲವನ್ನೂ ಜೆ ಪಿ ನಗರದ ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಜೋಪಾನವಾಗಿ ಇಡಲಾಗಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರ ನಗರ ಬಂದ್ ಸಂಪೂರ್ಣ ಯಶಸ್ವಿ!

ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿ ಭೂಸಗೊಂಡ ಆಯ್ಕೆ

ಪ್ರೇಮಚಂದ್ ಕಾದಂಬರಿಗಳು ಸಾಮಾಜಿಕ ಜೀವನದ ವಾಸ್ತವ ಚಿತ್ರಣ :ಪ್ರೊ.ಪೀರಾ

ಕನೇರಿ ಶ್ರೀಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಭಂಧ ಖಂಡನೀಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರ ನಗರ ಬಂದ್ ಸಂಪೂರ್ಣ ಯಶಸ್ವಿ!
    In (ರಾಜ್ಯ ) ಜಿಲ್ಲೆ
  • ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿ ಭೂಸಗೊಂಡ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಪ್ರೇಮಚಂದ್ ಕಾದಂಬರಿಗಳು ಸಾಮಾಜಿಕ ಜೀವನದ ವಾಸ್ತವ ಚಿತ್ರಣ :ಪ್ರೊ.ಪೀರಾ
    In (ರಾಜ್ಯ ) ಜಿಲ್ಲೆ
  • ಕನೇರಿ ಶ್ರೀಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಭಂಧ ಖಂಡನೀಯ
    In (ರಾಜ್ಯ ) ಜಿಲ್ಲೆ
  • ತಲ್ಲಣಿಸದಿರು ತಾಳು ಮನವೇ..
    In ಭಾವರಶ್ಮಿ
  • ಮಾನವೀಯತೆ, ಚಾರಿತ್ರ್ಯ ನಿರ್ಮಾಣ ಶಿಕ್ಷಣದ ಅಗತ್ಯವಿದೆ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಸರ್ಕಾರದಿಂದ ಶ್ರೀಗಳಿಗೆ ಅಪಮಾನ :ಸಂಸದ ಜಿಗಜಿಣಗಿ
    In (ರಾಜ್ಯ ) ಜಿಲ್ಲೆ
  • ರೋಟರಿ ಸಂಸ್ಥೆಯಿಂದ ಕಣ್ಣು ಉಚಿತ ತಪಾಸಣೆ ಶಿಬಿರ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ ಪು.ಕೆ. ಪಟ್ಟಣಕ್ಕೆ ಸಚಿವ ಶಿವಾನಂದರ ಕೊಡುಗೆ
    In (ರಾಜ್ಯ ) ಜಿಲ್ಲೆ
  • ಚನ್ನಬಸವಣ್ಣನವರು ಯುವಕರ ಹೆಗ್ಗುರುತು :ಡಿ.ಎನ್.ಅಕ್ಕಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.