ಇಂದು (ಅಕ್ಟೋಬರ-೨ ಗುರುವಾರ) ವಿಶ್ವ ಅಹಿಂಸಾ ದಿನಾಚರಣೆ (ಮಹಾತ್ಮಾ ಗಾಂಧೀಜಿಯವರ ಜನ್ಮ ದಿನ) ತನಿಮಿತ್ಯ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಥಾಮಸ್ ಅಲ್ವಾ ಎಡಿಸನ್ ಅವರು, ಅಹಿಂಸೆಯು ಅತ್ಯುನ್ನತ ನೀತಿಶಾಸ್ತ್ರಕ್ಕೆ ಕಾರಣವಾಗುತ್ತದೆ. ಅದು ಎಲ್ಲಾ ವಿಕಾಸದ ಗುರಿಯಾಗಿದೆ. ನಾವು ಇತರ ಎಲ್ಲಾ ಜೀವಿಗಳಿಗೆ ಹಾನಿ ಮಾಡುವುದನ್ನು ನಿಲ್ಲಿಸುವವರೆಗೆ, ನಾವು ಇನ್ನೂ ಅನಾಗರೀಕರು” ಎಂದು ಹೇಳಿದ್ದಾರೆ. ಸತ್ಯ, ಶಾಂತಿ, ಸತ್ಯಾಗ್ರಹ, ಅಹಿಂಸೆ ಮತ್ತು ತ್ಯಾಗಗಳೆಂಬ ಪಂಚ ಮೂಲಮಂತ್ರ ಜಪಿಸುತ್ತಾ, ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿ ಹೋರಾಡಿ, ರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪಾತ್ರ ಅನನ್ಯವಾದುದು. ಅಹಿಂಸೆಯೇ ಪರಮೋಧರ್ಮ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವರೇ ನಮ್ಮ ಗಾಂಧೀ ತಾತ. ರಾಷ್ಟ್ರಪತಿ ಎಂದು ಕರೆಯಿಸಿಕೊಳ್ಳುವ ಮತ್ತು ಅಹಿಂಸೆ, ಸತ್ಯ ಮತ್ತು ಶಾಂತಿಯನ್ನೇ ತಮ್ಮ ಉಸಿರನ್ನಾಗಿಸಿಕೊಂಡು ದೇಶದ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಮುಂಚೂಣಿಯಲ್ಲಿ ಹೋರಾಡಿದ ಮಹಾತ್ಮಾ ಗಾಂಧೀಜಿಯವರ ಜನ್ಮ ದಿನ ಅಕ್ಟೋಬರ-೨ ರಂದು ಇಡೀ ವಿಶ್ವದಾದ್ಯಂತ ಅಹಿಂಸಾ ದಿನವನ್ನಾಗಿ ಆಚರಿಸುತ್ತಿದೆ. ಪ್ರಸ್ತುತ ಜಗತ್ತಿನಲ್ಲಿ ಗಾಂಧೀಜಿಯವರಂತಹ ಮಹಾಪುರುಷರ ಆದರ್ಶ, ತತ್ವ ಮತ್ತು ಮೌಲ್ವಿಕ, ಜೀವನ ಚರಿತ್ರೆ ಮತ್ತು ವಿಚಾರಧಾರೆಗಳ ಬಗ್ಗೆ ವಿದ್ಯಾರ್ಥಿಗಳು, ಯುವಕರು, ನಾಗರೀಕರು ಮತ್ತು ವಿಶ್ವದೆಲ್ಲೆಡೆ ಪಸರಿಸುವಂತೆ ಮಾಡಲು ಈ ದಿನವನ್ನು ಆಚರಿಸಲಾಗುತ್ತಿದೆ. ಅಹಿಂಸಾ ತತ್ವ. ತಾಳ್ಮೆ, ಶಾಂತಿ, ಸಂಯಮದಂತಹ ಮೌಲ್ವಿಕ ಗುಣಗಳನ್ನು ಒಡಮೂಡಿಸುವದು ತನ್ಮೂಲಕ ಸಮಾಜದಲ್ಲಿ ಸ್ವಾಸ್ಥ್ಯವನ್ನು ಕಾಪಾಡುವ ಮಹೋನ್ನತವಾದ ಉದ್ದೇಶದಿಂದ ಈ ದಿನದ ಆಚರಣೆಯು ಮಹತ್ವ ಪಡೆದುಕೊಂಡಿದೆ.
ಈ ಧಿನದ ಆಚರಣೆಯ ಹಿನ್ನೆಲೆ
ವಿಶ್ವಸಂಸ್ಥೆಯು ಜೂನ-೧೫, ೨೦೦೭ ರಲ್ಲಿ ೧೪೦ ರಾಷ್ಟçಗಳ ಅಂಗೀಕಾರದೊಂದಿಗೆ ಮಹಾತ್ಮಾ ಗಾಂಧೀಜಿಯವರ ಜನ್ಮದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸುವಂತೆ ಕರೆ ಕೊಟ್ಟಿತು. ಹಿಂಸೆಯಿಂದಲ್ಲ, ಶಾಂತಿಯಿಂದ ಬದಲಾವಣೆ ಸಾಧಿಸಬಹುದು ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟ ಅದಮ್ಯ ಚೇತನ ಮಹಾತ್ಮಾ ಗಾಂಧೀಜಿಯವರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಶಾಂತಿ, ಸಹಿಂಷ್ಣುತೆ ಮತ್ತು ತಿಳುವಳಿಕೆಯ ಸಂಸ್ಕೃತಿಯನ್ನು ಭದ್ರಪಡಿಸುವ ಗುರಿಯೊಂದಿಗೆ ಮತ್ತು ಅಹಿಂಸೆಯ ಸಂದೇಶವನ್ನು ಪ್ರಸಾರ ಮಾಡಲು ಈ ದಿನವನ್ನು ಆಚರಿಸಲಾಗುತ್ತಿದೆ. ಈ ಜಗತ್ತಿನಾದ್ಯಂತ ಸರಳ ಜೀವನ, ತಾತ್ವಿಕ-ಮೌಲ್ವಿಕ ಮತ್ತು ವೈಚಾರಿಕತೆಯ ಮೂಲಕವೇ ಇಡೀ ವಿಶ್ವದೆಲ್ಲೆಡೆ ಮತ್ತು ಜಾಗತಿಕ ಮಟ್ಟದಲ್ಲಿ ಅವರ ತತ್ವಾದರ್ಶಗಳು ಪಸರಿಸುವಂತೆ ಮಾಡಿ, ಸಮಾಜದಲ್ಲಿ ಶಿಸ್ತು-ಶಾಂತಿ, ಅಹಿಂಸಾ ಭಾವ ಅನುಕರಣೆಯಾಗಲೆಂಬ ಮಹತ್ವಾಕಾಂಕ್ಷೆಯೊಂದಿಗೆ ಈ ದಿನವನ್ನು ಅರ್ಥಪೂರ್ಣವನ್ನಾಗಿ ಆಚರಿಸಲಾಗುತ್ತಿದೆ.

ಆಚರಣೆಯ ಮಹತ್ವ
ಎಲ್ಲರೂ ಸಮಾನರು, ಇತರರನ್ನು ಗೌರವದಿಂದ ಕಾಣಬೇಕು, “ಸರ್ವೇ ಜನಾಃ ಸುಖಿನೋ ಭವಂತು” ಮತ್ತು “ವಸುದೈವ ಕುಟುಂಬಕಂ” ಎಂಬ ಸಮಷ್ಠಿ ಭಾವ ಮತ್ತು ಅಹಿಂಸಾ ತತ್ವದಡಿಯಲ್ಲಿ ಬದುಕಿದವರು ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು. ವಿಶ್ವದೆಲ್ಲೆಡೆ ಅಹಿಂಸೆಯ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತ್ಯಾಗಿ ಮಹಾತ್ಮಾ ಗಾಂಧೀಜಿಯವರ ತಾತ್ವಿಕ-ವೈಚಾರಿಕ ಗುಣಗಳನ್ನು ತಿಳಿಸುತ್ತಾ, ವಿದ್ಯಾರ್ಥಿಗಳು, ಸಾರ್ವಜನಿಕರು, ಸಮಾಜ ಮತ್ತು ಸಮುದಾಯದಲ್ಲಿ ಸಾಮಾಜಿಕ ಬದಲಾವಣೆಯನ್ನು ತರುವುದು ಮತ್ತು ಅಹಿಂಸಾ ತತ್ವಗಳನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸುವುದು ಮತ್ತು ಜಗತ್ತಿನಾದ್ಯಂತ ವಿಶ್ವಶಾಂತಿ ಮತ್ತು ಅಹಿಂಸೆಯ ತತ್ವದಡಿಯಲ್ಲಿ ಎಲ್ಲರೂ ಬಾಳಿ ಬದುಕಬೇಕೆಂಬ ಮಹೋನ್ನತ ಉದ್ಧೇಶದಿಂದ ಈ ಅಂತರಾಷ್ಟ್ರೀಯ ಅಹಿಂಸಾ ದಿನದ ಆಚರಿಸಲಾಗುತ್ತಿದೆ.
ರಾಷ್ಟ್ರಪಿತನ ತತ್ವಾದರ್ಶಗಳು ನಮಗೆಲ್ಲ ಮಾರ್ಗದರ್ಶಿಯಾಗಲಿ
ಸ್ವಾತಂತ್ರ್ಯ ಹೋರಾಟದಲ್ಲಿ ಅಗ್ರಪಂಕ್ತಿಯ ನಾಯಕರಾಗಿದ್ದ ಗಾಂಧೀಜಿಯವರು ಪರರ ನಿಂದನೆ, ಹಿಂಸೆ ನೀಡುವುದು, ಅಪಹಾಸ್ಯ ಮಾಡುವುದು, ಮಾನಸಿಕ-ದೈಹಿಕವಾಗಿ ತೊಂದರೆ ಕೊಡುವದನ್ನು ನಿಲ್ಲಿಸುವುದರ ಮೂಲಕ ನಾಗರೀಕ ಹಕ್ಕುಗಳನ್ನು ರಕ್ಷಿಸಿ, ಸಮಾಜದಲ್ಲಿ ಪರಿವರ್ತನೆಯನ್ನು ತರುವಲ್ಲಿ ಕೈಗೊಂಡ ಚಳುವಳಿ ಮತ್ತು ಸತ್ಯಾಗ್ರಹದಂತಹ ಹೋರಾಟದ ಹಾದಿ, ನಾಯಕತ್ವ ಗುಣಗಳು ನಮಗೆಲ್ಲ ದಾರಿದೀಪವಾಗಬೇಕು. ಮಹಾತ್ಮಾ ಗಾಂಧೀಜಿಯವರು ಒಂದು ಸಾರಿ ಆಫ್ರಿಕಾ ದೇಶಕ್ಕೆ ಹೋದಾಗ ನ್ಯಾಯವಾದಿಯಾಗಿದ್ದ ಅವರು ಕೋರ್ಟನಲ್ಲಿ ವಕಾಲತ್ತು ನಡೆಸುತ್ತಿರುವ ಸಂದರ್ಭದಲ್ಲಿ ಅವರಿಗಾದ ಅವಮಾನ-ಅಪಹಾಸ್ಯದಿಂದ ಮನನೊಂದ ಅವರು ಅಸ್ಪೃಶ್ಯತೆ ಎಂಬ ಮೌಢ್ಯತೆ ದೇಶದಿಂದ ದೂರವಾಗಲಿ, ನೊಂದ-ಶೋಷಿತ ವರ್ಗದವರ ರಕ್ಷಣೆಗಾಗಿ ಅಹಿಂಸಾ ತತ್ವವನ್ನು ಪ್ರತಿಪಾದಿಸಿದರು. ರೋನಾಲ್ಡ್ ರೇಗನ್ ಅವರು, “ಶಾಂತಿ ಎಂದರೆ ಸಂಘರ್ಷದ ಕೊರತೆ ಅಲ್ಲ. ಬದಲಾಗಿ ಅದನ್ನು ಶಾಂತಿಪೂರ್ಣ ಮಾರ್ಗಗಳಲ್ಲಿ ಎದುರಿಸುವ ಸಾಮರ್ಥ್ಯ” ಎಂದು ಹೇಳಿದ್ದಾರೆ. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಕೇವಲ ಸತ್ಯ-ಶಾಂತಿ, ಉಪವಾಸ-ಸತ್ಯಾಗ್ರಹ ಮತ್ತು ಅಹಿಂಸಾ ತತ್ತಗಳಿಂದಲೇ ಪ್ರತಿಭಟಿಸಿದ ಧೀಮಂತ ನಮ್ಮ ಮಹಾತ್ಮಾ ಗಾಂಧೀಜಿಯವರ ಜೀವನ-ಆದರ್ಶ, ತತ್ವ-ಸಿದ್ದಾಂತ, ಮೌಲ್ಯಗಳು ಮತ್ತು ಉದಾತ್ತವಾದ ಚಿಂತನೆಗಳು ನಮ್ಮ ಮುಂದಿನ ಜನಾಂಗಕ್ಕೆ ದಾರಿದೀಪವಾಗಬೇಕು.
ಕೊನೆಯ ನುಡಿ
೨೦೨೫ ನೇಯ ವರ್ಷದ ಘೋಷವಾಕ್ಯವು ಜಾಗತಿಕವಾಗಿ ಅಹಿಂಸಾತ್ಮಕ ಚಟುವಟಿಕೆಗಳನ್ನು ತಡೆಗಟಗಟಲು ಮತ್ತು ನಿಯಂತ್ರಿಸಲು ಪ್ರಯತ್ನಶೀಲರಾಗಬೇಕು ಮತ್ತು ಅಗತ್ಯ ಚರ್ಚೆಗಳು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ “ಹಿಂಸಾತ್ಮಕವಲ್ಲದ ಮಾರ್ಗದ ಮೂಲಕ ಜಾಗತಿಕ ಐಕ್ಯತೆಗೆ ಉತ್ತೇಜನ ನೀಡುವುದು” ಎಂಬ ಘೋಷವಾಕ್ಯದ ಮೂಲಕ ವಿಶ್ವದೆಲ್ಲೆಡೆ ಒಗ್ಗಟ್ಟು, ಪರಸ್ಪರ ಬೆಂಬಲ ಮತ್ತು ಸಹಕಾರದೊಂದಿಗೆ ಜನರಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುವುದು ಮತ್ತು ಅಹಿಂಸಾತ್ಮಕ ಕ್ರಿಯೆಗಳಿಗೆ ಕಡಿವಾಣ ಹಾಕುವುದು ಈ ವರ್ಷದ ಪ್ರಮುಖ ಧ್ಯೇಯೋದ್ಧೇಶವಾಗಿದೆ. ಆದ್ದರಿಂದ ಜಗತ್ತಿನಲ್ಲೆಡೆ ಬಸವಣ್ಣವರ “ದಯವೇ ಧರ್ಮದ ಮೂಲ” ಎಂಬುದನ್ನು ಸಾರುತ್ತಾ, ಸಮಾಜದಲ್ಲಿ ಸಮಾನತೆ, ಭಾವೈಕ್ಯತೆ, ಸಾಮರಸ್ಯತೆ, ಧರ್ಮ ಸಹಿಂಷ್ಣುತೆ ಮತ್ತು ಸಮಗ್ರತೆಗೆ ನಾಂದಿ ಹಾಡಿದ ಮಹಾತ್ಮಾ ಗಾಂಧೀಜಿಯವರ ಜಯಂತಿಯನ್ನು ಕೇವಲ ಸಾಂಕೇತಿಕವಾಗಿ ಭಾವಚಿತ್ರಕ್ಕೆ ಪೂಜೆ, ನಮನ ಸಲ್ಲಿಸಿ ಅವರ ಬಗ್ಗೆ ದೊಡ್ಡದಾದ ಭಾಷಣ ಮಾಡಿದರೆ ಸಾಲದು. ನಾವೆಲ್ಲರೂ ಅವರ ಪ್ರತಿಯೊಂದು ತತ್ವಗಳೆಲ್ಲವನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡು ಅವರ ಜನ್ಮದಿನವನ್ನು ಅಹಿಂಸಾ ದಿನವನ್ನಾಗಿ ಆಚರಿಸಿ ಅರ್ಥಪೂರ್ಣವನ್ನಾಗಿಸಬೇಕು. ಜೀವನದಲ್ಲಿ ಪರರಿಗೆ ನಿಂದೆ, ಅವಮಾನ, ಅಪಮಾನ, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡದೇ ಎಲ್ಲರನ್ನು ಪ್ರೀತಿ-ಗೌರವ ಭಾವನೆಯಿಂದ ಕಾಣುವ ಗುಣ ಪ್ರತಿಯೊಬ್ಬರಲ್ಲಿಯ ಒಡಮೂಡಬೇಕು. ಅಂದಾಗ ಮಾತ್ರ ಈ ಅಂತರಾಷ್ಟ್ರೀಯ ಅಹಿಂಸಾ ದಿನದ ಆಚರಣೆಯು ಅರ್ಥಪೂರ್ಣವಾಗುತ್ತದೆ. ಶಾಲೆ-ಕಾಲೇಜುಗಳಲ್ಲಿ ಈ ದಿನವನ್ನು ಆಚರಿಸುತ್ತಾ, ವಿದ್ಯಾರ್ಥಿಗಳಲ್ಲಿ ಗಾಂಧೀಜಿಯವರ ರಾಷ್ಟ್ರ ಪ್ರೇಮ, ರಾಷ್ಟ್ರಾಭಿಮಾನ, ಸೈದ್ದಾಂತಿಕ, ತಾತ್ವಿಕ ಮತ್ತು ಮೌಲ್ವಿಕ ವಿಚಾರಧಾರೆಗಳನ್ನು ವಿದ್ಯಾರ್ಥಿಗಳ ಮನದಲ್ಲಿ ಬಿತ್ತಿ ಶಿಸ್ತು, ಸಂಯಮ, ತಾಳ್ಮೆ, ಸಹನೆ ಮತ್ತು ಅಹಿಂಸಾ ತತ್ವಗಳಂತಹ ಮೌಲ್ಯಗಳ ಧಾರಣೆ ಮಾಡಿಸಬೇಕೆಂಬುದೇ ನನ್ನದೊಂದು ಆಶಯವಾಗಿದೆ.
