ಇಂದು (ಅಕ್ಟೋಬರ-೧, ಬುಧವಾರ) “ರಾಷ್ಟ್ರೀಯ ಹಿರಿಯ ಜೀವಿಗಳ ದಿನಾಚರಣೆ” ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಮಾರ್ಕ ಟ್ವೇನ್ ಅವರು “ ಔಟಜ ಚಿge is ಟಿoಣ ಚಿ ಜeಜಿeಚಿಣ, buಣ ಚಿ viಛಿಣoಡಿಥಿ. ಓoಣ ಚಿ ಠಿuಟಿishmeಟಿಣ, buಣ ಚಿ ಠಿಡಿiviಟeಜge” ಎಂದು ಹೇಳಿದ್ದಾರೆ. ಮಕ್ಕಳು ಬೇಕೆಂದು ನೂರೊಂದು ದೇವರಿಗೆ ಹರಕೆ ಹೊತ್ತು-ಹೆತ್ತು ತನ್ನೆಲ್ಲ ಆಶೋತ್ತರಗಳನ್ನು ಮಕ್ಕಳಿಗಾಗಿಯೇ ತ್ಯಾಗ ಮಾಡಿ ಕೇವಲ ಗಂಡ, ಮಕ್ಕಳು, ಮನೆ-ಕುಟುಂಬದ ಸದಸ್ಯರ ಒಳಿತಿಗಾಗಿ ಸದಾ ಜೀವನವನ್ನೇ ಸವೆಯುತ್ತಿರುವ ತ್ಯಾಗಜೀವಿ ಎಂದರೆ ಅವಳೇ ತಾಯಿ. ಕೂಲಿ-ನಾಲಿಯನ್ನಾದರೂ ಮಾಡಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಮತ್ತು ಬದುಕಿಗೊಂದು ಆಸರೆ ಕಲ್ಪಿಸಿ ಅವರು ತಮ್ಮ ಕಾಲ ಮೇಲೆ ನಿಂತು ಸ್ವಾವಲಂಬಿಗಳನ್ನಾಗಿಸಲು ಯಾವಾಗಲೂ ಚಿಂತಿಸುತ್ತಿರುವ ತಂದೆ-ಪೋಷಕರ ಪಾತ್ರ ಅನನ್ಯವಾದುದು. “ಏನೆಲ್ಲ ಮರೆತರು ತಮ್ಮ, ಹಡೆದವರ ನೀ ಮರಿಬ್ಯಾಡ. ಉಪಕಾರ ತೀರಿಸಬೇಕು ಈ ಮಾತು ತಿಳಿದು ನೋಡು” ಎಂಬ ಭಜನಾ ಪದದ ಹಿಂದಿನ ಸಾರ-ಸಂದೇಶವನ್ನು ಅರಿತು ನಾವೆಲ್ಲರೂ ಹಿರಿಯ ಜೀವಿಗಳನ್ನು ಮಕ್ಕಳಂತೆ ನೋಡಬೇಕು. ಆದರೆ ಇಂದಿನ ಆಧುನಿಕತೆ, ಕುಟುಂಬ ವಿಘಟನೆ ಮತ್ತು ಪಾಶ್ಚಾತ್ಯ ಜೀವನ ಶೈಲಿಗಳಿಂದಾಗಿ ನಮ್ಮ ಮನ, ಮನೆ, ಕುಟುಂಬ ಮತ್ತು ಸಮಾಜದಲ್ಲಿ ಬದುಕುವ ರೀತಿ-ನೀತಿ ಮತ್ತು ಜೀವನ ಕ್ರಮ ಬದಲಾಗುತ್ತಿದೆ. ಇಂದು ‘ನಾವಿಬ್ಬರು ನಮಗಿಬ್ಬರು’ (ಗಂಡ-ಹೆಂಡತಿ ಮತ್ತು ಮಕ್ಕಳು) ಎಂಬ ಸಂಕುಚಿತ ಭಾವ ಬರುತ್ತಿದೆ. ಆದರೆ ತಮ್ಮ ಬಹುಪಾಲು ಜೀವನವನ್ನು ಕೇವಲ ಮಕ್ಕಳ ಪಾಲನೆ-ಪೋಷಣೆ, ಕುಟುಂಬ ನಿರ್ವಹಣೆ ಮತ್ತು ಇತರರ ಶ್ರೇಯಸ್ಸಿಗಾಗಿಯೇ ಹಗಲಿರುಳು ದುಡಿದು ಇಂದು ವಯೋವೃದ್ಧರಾಗಿರುವ ಕುಟುಂಬದ ಹಿರಿಯ ಜೀವಿಗಳನ್ನು ಪ್ರೀತಿಸುವ, ಗೌರವಿಸುವ ಮತ್ತು ಉಪಚರಿಸುವ ಪರಿಯು ಕಳವಳಕಾರಿ ಸಂಗತಿ.
ತಿರಸ್ಕಾರ ಭಾವ ಸಲ್ಲದು

ಮಕ್ಕಳಿಗಾಗಿ ಆಸ್ತಿಯನ್ನು ಮಾಡುವ ಬದಲು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಉದ್ಯೋಗ ಮತ್ತು ಗ್ರಹಸ್ಥರನ್ನಾಗಿ ಮಾಡಿ ಸದಾ ಮಕ್ಕಳ ಅಭಿವೃದ್ಧಿಯನ್ನೇ ಬಯಸುವ ತಂದೆ-ತಾಯಿಯರನ್ನು ನೋಡಿಕೊಳ್ಳುವ ರೀತಿ-ನೀತಿ, ನೀಡುವ ಗೌರವ, ಆರೋಗ್ಯ ರಕ್ಷಣೆ ಇಲ್ಲದಂತಾಗಿ ಬಹಳ ಕ್ರೌರ್ಯದಿಂದ ಕಾಣುವದು ಮತ್ತು ಚಿತ್ರಹಿಂಸೆ ನೀಡಿ ಮನೆ ಹೊರಗೆ ಹಾಕುವ ದೃಶ್ಯಗಳನ್ನು ಕಂಡರೆ ಮನ ಕಲುಕುವಂತಾಗುತ್ತದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ೧೦ ಹಿರಿಯ ಜೀವಿಗಳಲ್ಲಿ ಸುಮಾರು ೬ ಕ್ಕಿಂತಲೂ ಹೆಚ್ಚು ಜನ ವಯೋವೃದ್ಧ ತಂದೆ-ತಾಯಿಯರನ್ನು ಮನೆಯಿಂದ ಬಲವಂತವಾಗಿ ಹೊರ ಹಾಕುತ್ತಿರುವ ಘಟನೆಗಳು ನಡೆಯುತ್ತಿರುವ ತೀರ ಕಳವಳಕಾರಿ ಸಂಗತಿ. ಹೊತ್ತು-ಹೆತ್ತು ಮತ್ತು ಬದುಕಿಗೊಂದು ಆಶ್ರಯ ನೀಡಿದ ತಂದೆ-ತಾಯಿಯರನ್ನು ಹೊರೆಯಾಗಿ ನೋಡಲಾರಂಭಿಸಿದ್ದಾರೆ.
ಇಂದು ವಯೋವೃದ್ಧ ಹಿರಿಯ ಜೀವಿಗಳು ಕುಟುಂಬದಲ್ಲಿ ನೀಡುವ ಹಿಂಸೆ, ಅಗೌರವ ಮತ್ತು ನೀಡುವ ಕಷ್ಟಗಳಿಂದ ನೊಂದು-ಬೆಂದು, ಮನನೊಂದು ಕೊನೆಗೆ ವೃದ್ಧಾಶ್ರಮಗಳನ್ನು ಸೇರುವ ಪರಿಸ್ಥಿತಿಯು ನಮ್ಮ ಸಂಸ್ಕೃತಿಗೆ ಒಂದು ಕಪ್ಪುಚಿಕ್ಕೆ ಬಿದ್ದಂತಾಗಿದೆ. ಉದಾಹರಣೆಗೆ ೨೦೨೪ ರಲ್ಲಿ ವಿದೇಶದಲ್ಲಿರುವ ಮಕ್ಕಳು ತಮ್ಮ ವಯೋವೃದ್ಧ ತಂದೆ ಹಿಡಕಲ್ ಆಸ್ಪತ್ರೆಯಲ್ಲಿ ತೀರಿಕೊಂಡಾಗ ‘ನಮಗೆ ಸಂಬಂಧವಿಲ್ಲ ನೀವೇ ಅಂತ್ಯಕ್ರಿಯೆ ಮಾಡಿ ಇಲ್ಲವಾದರೆ ಬೀಸಾಡಿ ಬಿಡಿ’ ಎಂದು ಹೇಳಿದ್ದನ್ನು ನೋಡಿದರೆ ಮಕ್ಕಳು ಎಷ್ಟೇ ಶಿಕ್ಷಣ ಪಡೆದರೂ, ಯಾವುದೇ ಉದ್ಯೋಗ ಮಾಡಿದರೂ ಏನಂತೆ ಅವರಲ್ಲಿ ಸಂಸ್ಕಾರವಿಲ್ಲದಿದ್ದರೆ. ಈ ಅಮಾನವೀಯತೆಯ ಘಟನೆ ಕೇಳಿದ ಯಾರ ಕಣ್ಣಂಚಿನಲ್ಲಿ ದುಃಖದ ಭಾವ ಮೂಡದೇ ಇರದು.
“ಮುಪ್ಪಿನ ಕಾಲಕ ಜೋಪಾನ ಮಾಡಾಕ ಮಕ್ಕಳು ಬೇಕಂತ, ಹರಕೆ ಹೊತ್ತ ಹಡೆದರ ಮಗನ, ಏನು ಆಯಿತು ಮುಂದ..”
ಎಂಬ ತತ್ವಪದ (ಭಜನಾಪದ) ವನ್ನು ನಾವೆಲ್ಲರೂ ಕೇಳಿದ್ದೇವೆ. ಅವರನ್ನು ನಮ್ಮ ಮಕ್ಕಳಂತೆ ಕಾಣುವ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮತ್ತು ಪ್ರೀತಿ-ವಾತ್ಸಲ್ಯ, ತಾಯಿ ಹೃದಯದಿಂದ ಉಪಚರಿಸುವಂತೆ ಮತ್ತು ಗೌರವಯುತವಾಗಿ ಕಾಣುವಂತಹ ವಾತಾವರಣ ಪ್ರತಿ ಮನೆ, ಕುಟುಂಬ ಮತ್ತು ಕುಟುಂಬದ ಸದಸ್ಯರಲ್ಲಿ ಅರಿವು ಮೂಡಬೇಕು.
ಹಿರಿಯ ಜೀವಿಗಳು ಸಂಸ್ಕೃತಿ-ಸಂಸ್ಕಾರದ ಪ್ರತಿಬಿಂಬ
ಸಂಸ್ಕೃತಿ-ಸಂಸ್ಕಾರದ ಪ್ರತೀಕ, ಸಂಪ್ರದಾಯ, ಆಚರಣೆ ಮತ್ತು ಪದ್ಧತಿಗಳ ಅನುಸರಣೆಯ ಪ್ರತಿಬಿಂಬ ಮತ್ತು ಅಮೂಲ್ಯವಾದ ಜೀವನಾನುಭವದ ರಸಪಾಕವನ್ನು ಹೊಂದಿರುವ ಹಿರಿಯ ಜೀವಿಗಳ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದು ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಮನೆಯ ಪದ್ಧತಿ, ಆಚರಣೆ ಮತ್ತು ಸಾಮಾಜಿಕ-ಧಾರ್ಮಿಕ ವಿಧಿ ವಿಧಾನಗಳನ್ನು ಪರಿಚಯಿಸಲು ಹಾಗೂ ಉಳಿಸಿ-ಬೆಳೆಸಲು ನಮ್ಮ ಹಿರಿಯರು ನಮಗೆ ಬೇಕು. ಆದ್ದರಿಂದ ನಮಗೆ ಜನ್ಮ ನೀಡಿ, ತಪ್ಪು ಮಾಡಿದಾಗ ತಿದ್ದಿ-ತೀಡಿ, ಶಿಕ್ಷಣ ನೀಡಿ, ಉದ್ಯೋಗ ದೊರಕಲು ಸದಾಶಯ ಮಾಡಿದ ಹಾಗೂ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಿದ ಅವರನ್ನು ಗೌರವ-ಪೂಜ್ಯನೀಯ ಭಾವನೆಯಿಂದ ಕಾಣುವಂತಹ ಮಾನವೀಯತೆ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು.
ಮಕ್ಕಳೇ ತನ್ನೆಲ್ಲಾ ಸರ್ವಸ್ವವೆಂದು ತಿಳಿದು ಇಡೀ ಬದುಕನ್ನೇ ಅವರಿಗಾಗಿಯೇ ಸಮರ್ಪಿಸಿದ ಅಪ್ಪ-ಅಮ್ಮ, ಅಜ್ಜ-ಅಜ್ಜಿ ಮತ್ತು ಪೋಷಕರನ್ನು ಜೀವನದ ಸಂಧ್ಯಾಕಾಲದಲ್ಲಿ ನೋಡಿಕೊಳ್ಳುವವರು ಯಾರು? ಎಂಬ ಪ್ರಶ್ನೆಗೆ ಉತ್ತರಗಳೇ ಸಿಗುತ್ತಿಲ್ಲ. ತಂದೆ-ತಾಯಿ ಗಳಿಸಿಟ್ಟ ಹಣ, ನಗ-ನಾಣ್ಯ, ಆಸ್ತಿ-ಪಾಸ್ತಿ ಮತ್ತು ಇತರ ಎಲ್ಲ ವಸ್ತುಗಳು ಮಕ್ಕಳಿಗೆ ಬೇಕು. ಆದರೆ ಚಿಕ್ಕಂದಿನಲ್ಲಿ ತಂದೆ-ತಾಯಿಯೇ ನೈಜ ದೇವರು ಎಂದು ಗೌರವಿಸುವ ನಮ್ಮಲ್ಲಿ ಹಿರಿಯ ಜೀವಿಗಳನ್ನು ತಿರಸ್ಕಾರ ಭಾವ ಬರಬಾರದು. ಮೊಮ್ಮಕ್ಕಳೊಂದಿಗೆ ನಕ್ಕು-ನಲಿದು ಅಂಬೆಗಾಲಿಕ್ಕುತ್ತಾ ಆಟವಾಡುವ ಮತ್ತು ಮಕ್ಕಳೊಂದಿಗೆ ಮಕ್ಕಳಾಗಿ ಬದುಕುವ, ಸದಾ ಅಧ್ಯಾತ್ಮ-ಪ್ರವಚನ ಮತ್ತು ದೇವರ ನಾಮಸ್ಮರಣೆ ಪಠಿಸುತ್ತಾ ಕಾಲ ಕಳೆಯುತ್ತಿರುವ ಹಿರಿಯ ಜೀವಿಗಳನ್ನು ತುಂಬಾ ಪ್ರೀತಿ, ವಾತ್ಸಲ್ಯ ಮತ್ತು ಕರುಣೆಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಅರಿಯಬೇಕು.

ಕೊನೆಯ ನುಡಿ
ಹಿರಿಯರ ಅನುಭವದ ಮಾತಿನಂತೆ, “ಹೆತ್ತವರ ಮನಸ್ಸನ್ನು ನೋಯಿಸಿದ ಗೆದ್ದವರು ಇತಿಹಾಸದಲ್ಲೇ ಇಲ್ಲ. ತಾಯಿಯನ್ನು ಪೂಜಿಸಿ ಸೋತವರು ಚರಿತ್ರೆಯಲ್ಲೇ ಇಲ್ಲ” ಎಂದು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು. ಅಜ್ಜ-ಅಜ್ಜಿ, ತಂದೆ-ತಾಯಿ, ಕುಟುಂಬದ ಹಿರಿಯರು ನಮಗೆ ಆಲದ ಮರವಿದ್ದಂತೆ. ನಮ್ಮ ವಂಶದ ಕುಡಿಗಳಾದ ಮಕ್ಕಳಿಗೆ ಪ್ರೀತಿ-ಮಮತೆ, ವಾತ್ಸಲ್ಯ, ಸಂಸ್ಕೃತಿ-ಸಂಸ್ಕಾರ, ಜೀವನ-ಮೌಲ್ಯಗಳ ಆಸ್ತಿಯಿದ್ದಂತೆ. ಅದ್ದರಿಂದ ಕುಟುಂಬ ವ್ಯವಸ್ಥೆ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾವನಾತ್ಮಕತೆಗೆ ಹೆಸರುವಾಸಿಯಾದ ನಮ್ಮ ದೇಶದಲ್ಲಿ ಹಿರಿಯ ಜೀವಿಗಳನ್ನು ಮನೆಯಿಂದ ದೂರ ತಳ್ಳಿ ಅವರು ವೃದ್ಧಾಶ್ರಮ ಸೇರುವಂತಹ ದುಸ್ಥಿತಿ ಬರದಂತೆ ನೋಡಿಕೊಳ್ಳಬೇಕು. ದೇವರು ಬೇರೆಲ್ಲೂ ಇಲ್ಲ, ಅವರು ನಮ್ಮ ಹಿರಿಯ ಜೀವಿಗಳ ರೂಪದಲ್ಲೇ ಇರುತ್ತಾನೆ ಎಂಬುದನ್ನು ಅರಿತು ವಯೋ ಸಹಜವಾಗಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಕುಂದುಹೋಗುತ್ತಿರುವ ಆ ಹಿರಿಯ ಜೀವಿಗಳನ್ನು ಸಂತೋಷದಿಂದ ಇನ್ನಷ್ಟು ಕಾಲ ಮಕ್ಕಳು-ಮೊಮ್ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರಾಗಿ ನೂರು ಕಾಲ ಬಾಳಿ-ಬದುಕುವಂತಾಗಬೇಕು.
ಕುಟುಂಬದ ಊರುಗೋಲಾಗಿರುವ ಹಿರಿಯ ಜೀವಿಗಳಿಗೆ ಹಕ್ಕು, ಅವಕಾಶ, ಆರೋಗ್ಯ ರಕ್ಷಣೆ, ಬದುಕಿಗೊಂದು ಆಶ್ರಯ ಮತ್ತು ಜೀವ ಭದ್ರತೆಯು ದೊರೆತು ಅವರು ಇತರರಂತೆ ಬಾಳಿ ಬದುಕಲು ಸೂಕ್ತ ಕಾನೂನುಗಳನ್ನು ರೂಪಿಸಬೇಕಾಗಿರುವದು ಇಂದಿನ ಅಗತ್ಯತೆಯಾಗಿದೆ. ವೃದ್ಧಾಶ್ರಮಕ್ಕೆ ತಳ್ಳುವ, ಚಿತ್ರಹಿಂಸೆ ನೀಡುವಂತಹ ಮಕ್ಕಳ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಜಾರಿಗೊಳಿಸಿ ಅವರಿಗೆ ಅವಶ್ಯಕ ಭದ್ರತೆ ನೀಡುವಂತಾಬೇಕು. ಅಷ್ಟೇ ಅಲ್ಲದೇ ಮುಂದೆ ನಮ್ಮ ಮಕ್ಕಳು ವಯೋವೃದ್ಧರಾದ ಸಂದರ್ಭದಲ್ಲಿ ನಮ್ಮ ಮಕ್ಕಳು ವೃದ್ಧಾಶ್ರಮಗಳಿಗೆ ಕಳಿಸಬಾರದೆಂಬ ಕನಿಷ್ಠ ಪ್ರಜ್ಞೆಯಿಂದ ಹಿರಿಯ ಜೀವಿಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕೆಂಬುದೇ ನನ್ನ ಆಶಯವಾಗಿದೆ.
