ಲೇಖನ
– ವೀಣಾ ಹೇಮಂತಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಮನುಷ್ಯನ ಜೀವನದಲ್ಲಿ ಶಿಕ್ಷಣ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಕಲಿಕೆಯಿಂದ ಶಿಕ್ಷಣದ ಪ್ರಾರಂಭವಾಗುತ್ತದೆ. ಶಿಕ್ಷಣಕ್ಕೆ ಒಂದು ಸೀಮಿತ ಚೌಕಟ್ಟು ಇದ್ದರೆ ಕಲಿಕೆ ಸೀಮಾತೀತ. ಒಬ್ಬ ವ್ಯಕ್ತಿ ತನ್ನ ಜೀವಿತದ ಕೊನೆಯವರೆಗೂ ಕಲಿಕೆಯಲ್ಲಿ ತೊಡಗಿಕೊಳ್ಳಬಹುದು.
ಕಲಿಕೆಯೇ ಜೀವನ
ಕಲಿಕೆಯ ಇಂಗ್ಲಿಷ್ ಪದ ಲರ್ನಿಂಗ್ ನಲ್ಲಿ(learning )ಮೊದಲ ಅಕ್ಷರ ಎಲ್ ತೆಗೆದಾಗ ನಮಗೆ ದೊರೆಯುವುದು ಅರ್ನಿಂಗ್(earning) ಅಂದರೆ ಗಳಿಕೆ.
ಕಲಿಕೆಯಿಂದಲೂ ನಾವು ಗಳಿಸಲು ಸಾಧ್ಯ.. ಕಲಿಕೆಯ ಮೂಲಕ ನಾವು ವಿದ್ಯೆಯನ್ನು, ಜ್ಞಾನವನ್ನು, ಅನುಭವಗಳನ್ನು ಸಂಪಾದಿಸುತ್ತೇವೆ. ಹಣ ಗಳಿಕೆ
ಆಮೇಲಿನ ಮಾತು.
ಮನುಷ್ಯ ಜೀವನದಲ್ಲಿ ಮೊಟ್ಟಮೊದಲು ಪ್ರಾರಂಭವಾಗುವುದು ಕಲಿಕೆ.. ಹುಟ್ಟಿದ ಕೂಸು ಹಸಿವಾದರೆ ಅಳುವ ಮೂಲಕ ಬೇರೆಯವರ ಗಮನವನ್ನು ಸೆಳೆಯಲು ಕಲಿಯುತ್ತದೆ. ಮುಂದೆ ವಸ್ತುಗಳನ್ನು ಹಿಡಿಯಲು, ನಡೆಯಲು, ಮಾತನಾಡಲು ಕಲಿಯುವ ಮಗು ಮೂರು ವರ್ಷ ಪ್ರಾಯವಾಗುವ ಹೊತ್ತಿಗೆ ಲೌಕಿಕ ಜಗತ್ತಿನ ಹಲವಾರು ವಿಷಯಗಳನ್ನು ಕಲಿಯುತ್ತದೆ. ಈ ಕಲಿಕೆಯ ಮುಂದಿನ ಭಾಗವೇ ಶಿಕ್ಷಣ. ಅಕ್ಷರಗಳನ್ನು ತಿದ್ದಿ ತೀಡಿ ಬರೆಯುತ್ತಾ, ವಸ್ತುಗಳನ್ನು ಗುರುತಿಸುತ್ತಾ, ಪದಗಳನ್ನು ಜೋಡಿಸುತ್ತಾ ಮಗು ಸತತವಾಗಿ ಕಲಿಯುವ ಪ್ರಕ್ರಿಯೆಯಲ್ಲಿ ತೊಡಗುತ್ತದೆ.
ಕೇವಲ ಶಾಲೆಯ ಕಲಿಕೆ ಮಾತ್ರ ಕಲಿಕೆಯಲ್ಲ.. ಬೇರೆಯವರನ್ನು ನೋಡಿ ಅನುಕರಿಸಿ ಅವರಂತೆ ತಾನೂ ಕೂಡ ಸ್ಪಂದಿಸುವ, ಪ್ರತಿಕ್ರಿಯಿಸುವುದು ಕೂಡ ಕಲಿಕೆಯೇ.
ಇಂಗ್ಲೀಷ್ ನ ಒಂದು ಆಖ್ಯಾಯಿಕೆಯಂತೆ ಅವರ್ ಚಿಲ್ಡ್ರನ್ ವಿಲ್ ನೆವರ್ ಲಿಸನ್ ಟು ದೇರ್ ಪೇರೆಂಟ್ಸ್ ಬಟ್ ನೆವರ್ ಫೇಲ್ ಟು ಇಮಿಟೇಟ್ ದೇರ್ ಪೇರೆಂಟ್ಸ್ ಅಂದರೆ ಮಕ್ಕಳು ತಮ್ಮ ಪಾಲಕರ ಮಾತನ್ನು ಎಂದೂ ಕೇಳದಿದ್ದರೂ ಕೂಡ ತಮ್ಮ ಪಾಲಕರನ್ನು ಅನುಕರಿಸುತ್ತಾರೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳ ಮುಂದೆ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು.ಮನೆಯಲ್ಲಿ ಪುಸ್ತಕ ಓದುವ ತಂದೆ ತಾಯಂದಿರ ಮಕ್ಕಳು ತಾವು ಕೂಡ ಕೈಲಿ ಪುಸ್ತಕ ಹಿಡಿದುಕೊಂಡರೆ ಮನೆಯಲ್ಲಿ ಕಿರುಚಾಡುವ ಪಾಲಕರನ್ನು ನೋಡಿ ಮಕ್ಕಳು ಕೂಡ ಜೋರಾಗಿ ಮಾತನಾಡಲು ಪ್ರಾರಂಭಿಸುತ್ತಾರೆ.

ಈ ಹಿಂದೆ ಯಾರದಾದರೂ ಮನೆಗೆ ಹೋದಾಗ ಅವರ ಮನೆಯ ಟೀಪಾಯಿಯ ಮೇಲೆ ಸುಧಾ, ಕರ್ಮವೀರ ತರಂಗಗಳಂತಹ ವಾರಪತ್ರಿಕೆಗಳು, ಮಯೂರ, ತುಷಾರ ಮತ್ತು ಕಸ್ತೂರಿಯಂತಹ ಮಾಸಪತ್ರಿಕೆಗಳು, ಪ್ರಜಾವಾಣಿ ಸಂಯುಕ್ತ ಕರ್ನಾಟಕ ಕನ್ನಡ ಪ್ರಭ ಮುಂತಾದ ದಿನಪತ್ರಿಕೆಗಳು ದೊರೆಯುತ್ತಿದ್ದವು. ಆದರೆ ಈಗ ಯಾರದಾದರೂ ಮನೆಗೆ ಹೋದಾಗ ಅವರ ಟೀಪಾಯಿಯ ಮೇಲೆ ಟಿವಿಯ ರಿಮೋಟ್ ಮತ್ತು ಮನೆಯ ಸದಸ್ಯರ ಮೊಬೈಲ್ ಗಳು ದೊರೆಯಬಹುದು.
ಇಲ್ಲಿ ಪಾಲಕರು ಕೂಡ ಕಲಿಯುವುದು ಬಹಳಷ್ಟಿದೆ. ಎಲ್ಲ ಮಕ್ಕಳ ಕಲಿಕೆಯ ಆಸಕ್ತಿ ಒಂದೇ ತೆರನಾಗಿ ಇರುವುದಿಲ್ಲ. ಪ್ರತಿಯೊಂದು ಮಗುವು ವಿಭಿನ್ನ, ವಿಶೇಷ ಮತ್ತು ವಿಶಿಷ್ಟ.. ಪಂಚೇಂದ್ರಿಯಗಳ ಮೂಲಕ ಕಲಿಯುವುದು ಹೆಚ್ಚು ಪರಿಣಾಮಕಾರಿ. ಕೆಲವರ ಘ್ರಾಣಶಕ್ತಿ ತುಂಬಾ ಚೆನ್ನಾಗಿದ್ದರೆ ಮತ್ತೆ ಕೆಲವರ ಗ್ರಹಣ ಶಕ್ತಿ ಅದ್ಭುತವಾದುದು, ಇನ್ನು ಕೆಲವರ ಕಿವಿ ಚುರುಕಾಗಿದ್ದರೆ ಮತ್ತೆ ಕೆಲವರ ರಸಗ್ರಹಣ ತುಂಬಾ ಚೆನ್ನಾಗಿರುತ್ತದೆ. ಕೆಲವರ ಚರ್ಮ ಹೆಚ್ಚು ಸಂವೇದನಾಶೀಲವಾಗಿದ್ದರೆ ಮತ್ತೆ ಕೆಲವರ ಚರ್ಮ ಒರಟಾಗಿರುತ್ತದೆ. ಯಾವ ರೀತಿ ನಮ್ಮ ಕೈಯ ಐದು ಬೆರಳುಗಳು ಸಮನಾಗಿಲ್ಲವೋ ಅಂತೆಯೇ ನಮ್ಮ ಪಂಚೇಂದ್ರಿಯಗಳು ಕೂಡ. ಪ್ರತಿಯೊಬ್ಬ ಮಗು ವಿಭಿನ್ನವಾಗಿದ್ದು ತನ್ನ ಆಸಕ್ತಿಗೆ ಪೂರಕವಾಗಿರುವ ಪಂಚೇಂದ್ರಿಯದ ಮೂಲಕ ಮಗು ಕಲಿಯುವುದು ಹೆಚ್ಚು ಸೂಕ್ತ.
ಮಗುವಿನ ಕಲಿಕೆ ಮತ್ತು ಶಿಕ್ಷಣ ಚೆನ್ನಾಗಿ ನಡೆಯುತ್ತಿದೆ ಎಂದು ಅರಿವ ಬಗೆ ಹೀಗಿದೆ.. ಮಗು ತನಗೆ ಕಲಿಕೆಯಲ್ಲಿ ತೊಂದರೆ ಆಗುತ್ತಿರುವುದನ್ನು ಕುರಿತು ಹೇಳಲು ಸಾಧ್ಯವಿಲ್ಲದ ವಯಸ್ಸಿನಲ್ಲಿ, ಅಂದರೆ ಆರು ಮತ್ತು ಏಳರ ವಯಸ್ಸಿನಲ್ಲಿ ಬೇರೆಲ್ಲ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಮಗು ಪುಸ್ತಕದ ಮುಂದೆ ಕುಳಿತಾಗ ಇಲ್ಲದ ನೆವಗಳನ್ನು ತೆಗೆಯುತ್ತಾನೆ. ಓದಲು ಕುಳಿತಾಗ ಹೊಟ್ಟೆ ಹಸಿವಾಗಿದೆ, ಇಲ್ಲವೇ ಹೊಟ್ಟೆ ನೋಯುತ್ತದೆ, ಬಾತ್ರೂಮಿಗೆ ಹೋಗಬೇಕು ಹೀಗೆ ಹಲವಾರು ಕಾರಣಗಳು ಮಗು ಪಾಲಕರ ಮುಂದೊಡ್ಡುತ್ತದೆ. ಪಾಲಕರು ಮಗುವಿನ ಈ ತೊಂದರೆಯನ್ನು ಚಂಚಲಚಿತ್ತತೆ, ಕಲಿಕೆಯಲ್ಲಿ ಲಕ್ಷ ವಹಿಸುವುದಿಲ್ಲ ಎಂದು ದೂರುತ್ತಾರೆ. ಆದರೆ ಕೆಲ ಮಕ್ಕಳು ಪ್ರಯೋಗಾತ್ಮಕ ಕಲಿಕೆಯಲ್ಲಿ ಆಸಕ್ತರಾಗಿರುತ್ತಾರೆ. ಅಂತಹ ಮಕ್ಕಳನ್ನು ಪ್ರಾರಂಭಿಕ ಹಂತದಲ್ಲಿ ನೀವು ಗುರುತಿಸಿದರೆ ಅವರಿಗೆ ಕೆಲ ತಾಂತ್ರಿಕ ಮತ್ತು ವೃತ್ತಿಪರ ತರಬೇತಿಗಳನ್ನು ನೀಡುವ ಮೂಲಕ, ಥೆರಪಿಗಳನ್ನು ನೀಡುವ ಮೂಲಕ ಮಗುವಿನ ಕಲಿಕೆಯ ತೊಂದರೆಯನ್ನು ನಿವಾರಿಸಬಹುದು.
ಮತ್ತೆ ಕೆಲ ಮಕ್ಕಳು ಅಭ್ಯಾಸದಲ್ಲಿ ತುಂಬಾ ಚುರುಕಾಗಿದ್ದು, ಇದನ್ನು ಬೆಳವಣಿಗೆಯ ಕಲಿಕೆ ಎಂದು ಕೂಡ ಹೇಳಬಹುದು.

ಮತ್ತೆ ಕೆಲ ಪಾಲಕರ ಅವಜ್ಞೆಯಿಂದ ಅವರಿಗೆ ತಮ್ಮ ಮಗುವಿನ ಕಲಿಕೆಯ ತೊಂದರೆ ಕುರಿತು ಅರಿವಾಗುವುದಿಲ್ಲ. ಅಂತಹ ಮಕ್ಕಳ ಪಾಲಕರು ಮಕ್ಕಳು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವಾಗ ಪಾಲಕ ಮತ್ತು ಶಿಕ್ಷಕರ ಮೀಟಿಂಗ್ನಲ್ಲಿ ಮಕ್ಕಳ ಪ್ರಗತಿಯ ಕುರಿತು ಶಿಕ್ಷಕರು ಪಾಲಕರಲ್ಲಿ ದೂರನ್ನು ಹೇಳಿದಾಗ ಕೆಲ ಪಾಲಕರು ಎಚ್ಚೆತ್ತುಕೊಂಡು ಶೀಘ್ರ ಮಗುವಿನ ಸುಧಾರಣೆಗೆ ಪ್ರಯತ್ನಿಸುತ್ತಾರೆ. ಮತ್ತೆ ಕೆಲ ಪಾಲಕರು ಇಂತಹ ಸಮಯದಲ್ಲಿ ಮಕ್ಕಳನ್ನು ಸುಧಾರಿಸಲಾಗದೆ ಕೈ ಚೆಲ್ಲುತ್ತಾರೆ.
ನಮ್ಮ ಮಕ್ಕಳ ಸ್ನೇಹಿತರೊಂದಿಗೆ ನಾವು ಒಡನಾಡಿದಾಗ ನಮಗೆ ನಮ್ಮ ಮಕ್ಕಳ ನಡೆ-ನುಡಿಗಳ, ಕುಂದು-ಕೊರತೆಗಳ ಅರಿವು ಉಂಟಾಗುತ್ತದೆ ಜೊತೆಗೆ ಮಕ್ಕಳು ಎಂತಹ ಸಹವಾಸದಲ್ಲಿ ಇದ್ದಾರೆ ಎಂದು ಗೊತ್ತಾಗುತ್ತದೆ. ಆಗ ಮಕ್ಕಳ ಚಿತ್ರವನ್ನು ಒಳ್ಳೆಯ ಸಂಗತಿಗಳತ್ತ, ಒಳ್ಳೆಯ ಸ್ನೇಹಿತರತ್ತ ಸೆಳೆಯುವ ಅವಕಾಶ ದೊರೆಯುತ್ತದೆ.
ಮಕ್ಕಳ ಸ್ನೇಹಿತರಲ್ಲಿಯೂ ಕೆಲವೊಮ್ಮೆ ದೂರು ಇಲ್ಲವೆ ಚಾಡಿ ಹೇಳುವ ಸ್ವಭಾವವಿದ್ದರೆ ಅದನ್ನು ಅರಿತುಕೊಳ್ಳುವ ಜಾಣ್ಮೆ ಕೂಡ ಪಾಲಕರಲ್ಲಿ ಇರಬೇಕಾಗುತ್ತದೆ.
