ವಿಜಯದಶಮಿ ವಿಶೇಷ
ಲೇಖನ
– ಮನು ಪತ್ತಾರ (ಕಲಕೇರಿ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ವಿಜಯದಶಮಿ ಎಂದು ಹೆಸರಾದ ಈ ಹಬ್ಬಕ್ಕೆ, ಜನಪದರು “ಬನ್ನಿ ಹಬ್ಬ” ಮತ್ತು “ಮಣ್ಣಿನ ಹಬ್ಬ” ಎಂದು ಕರೆದು ಹೊನ್ನಿನ ಹೊನಲನ್ನು ಹರಿಸುವ ಈ ಶುಭ ಗಳಿಗೆಯನ್ನು ಹೃದಯ ತುಂಬಿ ಹಾಡಿ ಹರ್ಷದ ಹೊಳೆಯನ್ನೇ ಹರಿಸಿದ್ದಾರೆ.
ಈ ಸಂದರ್ಭ, ಭೂ ಸಿರಿಯಲ್ಲಿ ಬೆಳೆದ ಕಾಳುಗಳು ಕಾಡನ್ನು ಬಿಟ್ಟು ಕೆಲವೇ ದಿನಗಳಲ್ಲಿ ನಾಡ ಸೇರುವ ಶುಭ ಘಳಿಗೆಯಾಗಿದೆ. ರೈತರು ತಮ್ಮ ಸಿರಿ ಸಂಪತ್ತು ಹೆಚ್ಚಾಗುವುದೆಂದು ನಂಬಿಕೊಂಡಿರುವ ಕಾಲವಿದು ಆದ್ದರಿಂದ ರೈತರು ಕೃಷಿ ಪರಿಕರಗಳನ್ನು ದೇವರ ಜಗುಲಿಯ ಪಕ್ಕದಲ್ಲಿಟ್ಟು, ಸಸಿಯನ್ನು ಹಾಕಿ ಬೀಜ ಮತ್ತು ಭೂಮಿಯ ಪೂಜೆ ಮಾಡಿ ಸಮೃದ್ಧತೆ ಎಲ್ಲಡೆಯೂ ತುಂಬಿ ತುಳುಕಲೆಂದು ಹರಕೆ ಹೊರುತ್ತಾರೆ ಹಾಗೂ ಈ ಜಗ ಅನ್ನಮಯವಾಗಲಿ ಎಂದು ಬೇಡಿಕೊಳ್ಳುವರು. ಭೂಮಿ ಪೂಜೆಯ ಪದ್ದತಿ ಶಾತವಾಹನರ ಕಾಲದಿಂದಲೂ ನಡೆದುಕೊಂಡು ಬಂದಿರುವ ಬಗೆಗೆ ಜನಪದರ ಹಾಡುಗಳು ಹಾಗೂ ಇತಿಹಾಸದ ಪುಟಗಳು ಸಾಕ್ಷಿಯಾಗಿವೆ.
ವ್ಯಾಪಾರಿಯು ಕೂಡಾ ತನ್ನ ವ್ಯಾಪಾರಕ್ಕೆ ಈ ಹಬ್ಬ , ನವ ಚೈತನ್ಯ ನೀಡಲಿ ಎಂದು ತೂಕ ಮತ್ತು ಮಾಪನ ಗಳಿಗೆ ಪೂಜೆ ಮಾಡಿ ಹೊಸ ಬೆಳಸನ್ನು ತೂಗಿ ವ್ಯಾಪಾರಕ್ಕೆ ಶುಭಾರಂಭದ ಮುನ್ನುಡಿ ಬರೆಯುವನು
ಕುಶಲ ಕರ್ಮಿಗಳು, ಸೈನಿಕರು ಈ ಹಬ್ಬದಲ್ಲಿ ತಮ್ಮ ಕಾರ್ಯಾಗಾರ ದಲ್ಲಿರುವ ಆಯುಧಗಳನ್ನು ಹೊರ ತಗೆದು ಈ ಅಶ್ವಿಜ ಶುದ್ಧ ನವಮಿಯ ದಿನದಂದೇ ಸ್ವಚ್ಛಗೊಳಿಸಿ, ಪರೀಕ್ಷೆಗೆ ಒಳಪಡಿಸಿ ಪೂಜಿಸುವರು ಈ ಕಾರಣಕ್ಕಾಗಿ ಈ ದಿನವನ್ನು ಆಯುಧಗಳ ಪೂಜೆ ಹಾಗೂ ಖಂಡೆಯ ಪೂಜೆ ಎಂದು ಕೂಡಾ ಕರೆಯಲಾಗುವುದು.
ಹಳ್ಳಿಯಲ್ಲಿರುವ ದೇಸಾಯಿ, ಗೌಡ್ರು, ಪಟೇಲ್ ರುಗಳ ಮನೆಯಲ್ಲಿರುವ ಆಯುಧಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕವಾಗಿ ಪೂಜೆಯನ್ನು ಮಾಡಿ ಇದೇ ದಿನ ಸಾಯಂಕಾಲ ವೀರರ ಕೈಯಲ್ಲಿ ಕೊಟ್ಟು, ರಾಜ ವೈಭವದಿಂದ ಮೆರವಣಿಗೆಯನ್ನು ಮಾಡುವ ಪದ್ಧತಿ ಕಂಡುಬರುವುದು. ಅಲ್ಲದೆ ಊರಿನ ದೇವತೆಗಳನ್ನು ಪಲ್ಲಕ್ಕಿಯಲ್ಲಿ ಕೂಡಿಸಿಕೊಂಡು ಊರ ಸೀಮೆಗೆ ಮೆರವಣಿಗೆಯ ಮೂಲಕ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸುವ ಸಂಪ್ರದಾಯ ಶತಮಾನಗಳಿಂದಲೂ ಸಾಗಿ ಬಂದಿದೆ.

ಗ್ರಾಮ ದೇವತೆಗಳ ಮೆರವಣಿಗೆಯ ನಂತರ ಊರಿನಲ್ಲಿರುವ ಬನ್ನಿ ಕಟ್ಟೆಗೆ ಬಂದು, ದೇವಾನುದೇವತೆಗಳಿಗೆ ಬನ್ನಿಯನ್ನು ಅರ್ಪಿಸಿ ನಂತರ ಸಾಮೂಹಿಕ ಬನ್ನಿ ಎಲೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಈ ಬನ್ನಿ ಬಂಗಾರ ವಾಗಲಿ ಎಂದು ಒಬ್ಬರಿಗೊಬ್ಬರು ಬನ್ನಿ ಕೊಡುತ್ತಾ ಇಡೀ ಊರನ್ನೇ ಬಂಗಾರ ಮಾಯವಾಗಿ ಮಾಡಿ ಸಂಭ್ರಮದ ಹೊಳೆಯಲ್ಲಿ ತೇಲಾಡುವರು.
ಈ ಸಾಂಪ್ರದಾಯಿಕ ಬನ್ನಿ ಬಂಗಾರದ ಹಬ್ಬಕ್ಕೆ ಪೌರಾಣಿಕ, ಧಾರ್ಮಿಕ ಮತ್ತು ಸಾಮಾಜಿಕ ಹಿನ್ನೆಲೆ ಇದೆ, ಮಹಾಭಾರತದ ಪಾಂಡವರು ಕೌರವರ ಮೋಸಕ್ಕೆ ಬಲಿಯಾಗಿ ಅಜ್ಞಾತವಾಸ ಕ್ಕೆ ಹೋಗಬೇಕಾಯಿತು, ಆವಾಗ್ಗೆ ಪಾಂಡವರು ತಮ್ಮ ಆಯುಧಗಳನ್ನು ” ಶಮಿ ವೃಕ್ಷ” ವಾದ ಬನ್ನಿ ಮರದ ಒಡಲೊಳಗೆ ಇಟ್ಟು ಬರಿಗೈಯಲ್ಲಿ ಹೋದರಂತೆ ಅಲ್ಲದೇ, ಇದೇ ದಿನದಂದು ಅಜ್ಞಾತವಾಸವನ್ನು ಮುಗಿಸಿಕೊಂಡು ಬಂದ ಪಾಂಡವರು ಬನ್ನಿ ಮರದಲ್ಲಿ ಜೋಪಾನವಾಗಿದ್ದ ಆಯುಧಗಳನ್ನು ಇಳುವಿಕೊಂಡರಂತೆ, ಈ ಹಿನ್ನೆಲೆಯಲ್ಲಿಯೇ ಗ್ರಾಮೀಣ ಭಾಗದ ಜನರು ತಮ್ಮ ಆಯುಧಗಳನ್ನು ಮೆರಸುವ ಪದ್ದತಿಯನ್ನು ರೂಢಿಸಿಕೊಂಡು ಬಂದಿರುವರು.

ರೈತಾಪಿ ವರ್ಗ, ಪಾಂಡವರು ಅಜ್ಞಾತವಾಸ ಅನುಭವಿಸುವ ಸಂದರ್ಭದಲ್ಲಿ ಅವರಿಗುಣಿಸಲು ತಮ್ಮ ರಾಶಿಯ ಕಣದಲ್ಲಿ ‘ರಾಶಿ ಬುತ್ತಿ’ ಬರ ಮಾಡಿಕೊಳ್ಳಲು ಪದ್ದತಿಯನ್ನಿಟ್ಟು ಕೊಂಡಿರುವರು. ಅಲ್ಲದೆ ಮಣ್ಣಿನಲ್ಲಿ ಪಾಂಡವರನ್ನು ಹೊಲುವ ಮೂರ್ತಿಗಳನ್ನು ಮಾಡಿ ಕಣದ ದಂಡೆಯ ಮೇಲಿನ ಹೊಟ್ಟಿನ ಕುಟ್ಟರಿಯ ಎಡ ಭಾಗದಲ್ಲಿಟ್ಟು, ಕೌರವರು ನಿಮಗೆ ಸೂಜಿಯ ಮೊನೆಯಷ್ಟು ಜಾಗೆ ಕೊಡದೆ ಹೋದರಲ್ಲಾ ಎಂದು ಅನುಕಂಪ ವ್ಯಕ್ತಪಡಿಸಿ, ನಿಮ್ಮ ಜೊತೆಗೆ ನಾವು ಇದ್ದೇವೆ ಅನ್ನುವ ಅರ್ಥದಲ್ಲಿ ಅಭಯ ನೀಡಿ, ಪೂಜಾ ಕಾರ್ಯವನ್ನು ನೇರವೇರಿಸಿ ರಾಶಿ ಬುತ್ತಿಯ ಎಡೆ ಹಿಡಿದು, ಪಾಂಡವರಿಗೂ ಊಣ್ಣುವಷ್ಟು ಕಾಳು ಕಡ್ಡಿಗಳು ವೃದ್ಧಿಯಾಗಲಿ ಎಂದು ನಿವೇದಿಸಿಕೊಳ್ಳುವರು.
ಜನಪದರು ಯಾವತ್ತೂ ನ್ಯಾಯ ಪರ ವಕಾಲತ್ತು ವಹಿಸಿರುವುದನ್ನು ಕಾಣಬಹುದು, ಪಾಂಡವರಿಗೆ ಆದ ಅನ್ಯಾಯವನ್ನು ಅವರು ಅನುಭವಿಸಿದ ಅಜ್ಞಾತವಾಸವನ್ನು ಕರಳು ಮುದುಡಿ ಬೀಳುವಂತೆ ಹಾಡಿದ್ದಾರೆ.
ಕಲ್ಲು ಕಡುಬು ಮಾಡಿ, ಮುಳ್ಳು ಶಾಂವಿಗೆ ಮಾಡಿ,
ಬನ್ನಿಯ ಎಲಿಯಾಗ ಎಡಿ ಮಾಡಿ / ಪಾಂಡವರು
ಉಂಡು ಹೋಗ್ಯಾರೋ ವನವಾಸಕ //
ಪಾಂಡವರು ವನವಾಸಕ್ಕೆ ಹೋಗುವಾಗಿನ ಸಂದರ್ಭವನ್ನು ಕಡಿಮೆ ಸಾಲುಗಳಲ್ಲಿ ಸಶಕ್ತವಾಗಿ ಚಿತ್ರಿಸಿದ ಜನಪದರು ಸಮಯ ಸಂದರ್ಭಗಳನ್ನು ಅತ್ಯಂತ ಪ್ರಭಾವಶಾಲಿ ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿರುವರು. ಕಲ್ಲನ್ನು ಕಡುಬು ಮಾಡುವುದು, ಮುಳ್ಳು ಶಾಂವಿಗೆ ಮಾಡುವುದು ಹಾಗೂ ಬನ್ನಿಯ ಎಲೆಯಲ್ಲಿ ಊಟ ಮಾಡುವ ಚಿತ್ರಣವು ಅವರುಗಳ ಧಾರುಣ ಪರಿಸ್ಥಿತಿಯನ್ನು ತುಂಬಾ ಗಂಭೀರವಾಗಿ ಕೇಳಗರ ಮುಂದೆ ಕಣ್ಣಿಗೆ ಕಟ್ಟುವಂತೆ ತಿಳಿಸಿದ್ದಾರೆ. ಜನಪದ ಕವಿಯ ಈ ಸಾಲುಗಳು ಪಾಂಡವರ ಬಗೆಗೆ ಅನುಕಂಪ ಮೂಡಿಸಿ ಅವರಿಗಾದ ಅನ್ಯಾಯವನ್ನು ಪ್ರತಿಭಟಿಸಲು ಪ್ರಚೋದಿಸುತ್ತವೆ, ಇದು ಜನಪದ ಕವಿಯ ಕಾವ್ಯ ಶ್ರೇಷ್ಠತೆಯ ದಾರಿಯಾಗಿದೆ.
ಭಾರತದ ಈ ಭೂ ಪ್ರದೇಶದ ಮೇಲೆ ಹತ್ತಾರು ಪರಕೀಯರು ದಾಳಿ ಮಾಡಿ ಇಲ್ಲಿನ ಭೌತಿಕ ಸಿರಿ ಸಂಪತ್ತನ್ನು ತಮ್ಮ ದೇಶಕ್ಕೆ ಸಾಗಿಸಿದ ಕಥೆ ಎಲ್ಲರಿಗೂ ತಿಳಿದ ಸಂಗತಿಯೇ, ಅದರಲ್ಲಿ ಮಹಮ್ಮದೀಯ ರಾಜರು ಈ ಪ್ರದೇಶದಲ್ಲಿನ ಸಂಪತ್ತನ್ನು ಅವ್ಯಾಹತವಾಗಿ ಲೂಟಿ ಮಾಡಿ ಮಾಡಿದ್ದಷ್ಟೇ ಅಲ್ಲದೇ ತಮ್ಮಗಳ ಪ್ರಭುತ್ವವನ್ನು ಒಪ್ಪಿಕೊಳ್ಳುವಂತಹ ಸಂದರ್ಭವನ್ನು ಸೃಷ್ಟಿ ಮಾಡಿ, ಈ ನೆಲದ ಸಾಂಸ್ಕೃತಿಕ ಮೇಲೆ ಹಲವು ರೀತಿಯ ಗಾಯಗಳನ್ನು ಮಾಡಿರುವುದು ಇತಿಹಾಸ ಸಾರಿ ಹೇಳುವುದು ಇದನ್ನು ತಡೆಯಬೇಕೆನ್ನುವ ಹಿನ್ನೆಲೆಯಲ್ಲಿ ಈ ದಿನದಂದು ಹಂಪೆ ಯಲ್ಲಿ ವಿಜಯನಗರದ ಸ್ಥಾಪನೆಗೆ ಗುದ್ದಲಿಪೂಜೆ ಮಾಡಲಾಯಿತು ಆದ್ದರಿಂದ ಈ ಹಬ್ಬಕ್ಕೆ “ವಿಜಯದಶಮಿ” ಎಂದು ಕೂಡಾ ಕರೆಯಲಾಗಿದೆ ಎಂದು ಜನಪದ ಸಾಹಿತ್ಯ ಸಾರಿ ಹೇಳುವುದು
ಬನ್ನೀಯ ಗಿಡ ಹುಟ್ಟಿ, ಹೊನ್ನೀನ ಮಳೆಗರೆದು
ಚೆನ್ನಪಟ್ಟಣಕೆ ಹೊಳಿಹರಿದು / ಹಂಪ್ಯಾಗ
ಬನ್ನಾಣ ವೀರ ಗುಟ್ಟಾಗಿ //
ಜನಪದರು ಹಾಡುವ ಈ ಹಂತಿ ಹಾಡಿನಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಸುಳಿವು ದೊರೆಯುವುದು.
ವಿಜಯನಗರ ಸಾಮ್ರಾಜ್ಯವನ್ನು ಆಳಿದ ಬಹುತೇಕ ರಾಜ ಮಹಾರಾಜರು ವಿಜಯದಶಮಿ ಯನ್ನು ಅತ್ಯಂತ ವೈಭವದಿಂದ ಆಚರಣೆ ಮಾಡಿದ ಬಗ್ಗೆ ತಿಳಿದು ಬರುವುದು ಈ ಹಬ್ಬವನ್ನು ಆಚರಿಸುವ ಸಲುವಾಗಿ ಹಂಪಿ ಯಲ್ಲಿ ಮಹಾನವಮಿ ದಿಬ್ಬವನ್ನು ನಿರ್ಮಾಣ ಮಾಡಿರುವುದನ್ನು ಕಾಣಬಹುದಾಗಿದೆ. ಮುಂದುವರೆದು ಮೈಸೂರಿನ ಅರಸರು ಕೂಡಾ ಈ ಹಬ್ಬವನ್ನು “ನಾಡ ಹಬ್ಬ” ಎಂದು ಕರೆದು ನಾಡ ದೇವಿ ಚಾಮುಂಡೇಶ್ವರಿ ಯ ತೇರನ್ನು ಎಳೆಯುವ ಮೂಲಕ ಈ ಹಬ್ಬಕ್ಕೆ ಇನ್ನಷ್ಟು ಮೆರುಗನ್ನು ತಂದರು, ಕರ್ನಾಟಕದ ಪ್ರತಿಯೊಂದು ಹಳ್ಳಿಯಲ್ಲಿಯೂ ವಿವಿಧ ರೀತಿಯಲ್ಲಿ ಆಚರಿಸಿ ಶಕ್ತಿ ದೇವತೆಯನ್ನು ಆರಾಧಿಸುವ ಪದ್ಧತಿ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ.
ಬನ್ನಿ ಮುಡಿಯೋಣ ಬಾರ ಕೋಲು ಕೋಲ
ಚಿನ್ನ ತರುವೋಣ ಬಾರ ಕೋಲು ಕೋಲ //
ಬೆಳೆದ ಬೆಳಸಿಗೆ ಬನ್ನಿ, ಭೂಮಿ ತಾಯಿಗೆ ಬನ್ನಿ
ನಾಡ ಸಂಪತ್ತ ಬೆರಿ ಬನ್ನಿ
ದೇವ ದೇವರ ಬನ್ನಿ, ದೈವ ದೈವದ ಬನ್ನಿ
ನಾವು ಮುಡೀವುದು ನಮ ಬನ್ನಿ
ಹಡೆದ ತಾಯಿಗೆ ಬನ್ನಿ, ಹಡೆದ ತಂದೆಗೆ ಬನ್ನಿ
ಪಡೆದ ಗಂಡನಿಗೆ ನಮ ಬನ್ನಿ
ಹೀಗೆ ಸಾಗುವ ಈ ಹಾಡು ತಾತ್ವಿಕತೆಯನ್ನು ತುಂಬಿ ಕೊಂಡಿದೆ ಅಲ್ಲದೆ ಕನ್ನಡ ಕುಲಕ್ಕೆ ಹಾರೈಕೆಯಿದೆ. ಕನ್ನಡಿಗರಾಚರಿಸುವ ಈ ಹಬ್ಬದಲ್ಲಿ ಧಾರ್ಮಿಕ, ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಹಾಗೂ ಕೌಟುಂಬಿಕ ಕಲ್ಪನೆಗಳ ಪ್ರೇಮ ಸಮ್ಮಿಲನವಾಗಿದೆ.
ಕಣ್ಣು ಮೂಗಿಲೆ ನನ್ನ , ಹೆಣ್ಣು ಮಗಳು ಚೆಲವಿ
ಬಣ್ಣಕ ನನ್ನ ಸೊಸಿ ಚೆಲುವಿ // ದಸರೇಕ
ಬನ್ನಿ ಮುಡಿವಾಗ ಮಗ ಚೆಲುವ //
ಬಂಜಿ ಬಾಗಿಲ ಮುಂದ ಬಂಗಾರದೊಳಕಲ್ಲ
ಬಂದು ಕುಟ್ಟಾಕ ಸೊಸಿಯಿಲ್ಲ // ಮಾನಾಮಿ
ಬನ್ನಿ ಮುಡಿಯಾಕ ಮಗನಿಲ್ಲ //
ಬನ್ನಿ ಮುಡಿಯೋದು ಬಂತು, ಬಂಗಾರ ಕೊಡುವುದು ಬಂತು
ಬಂದ ನನಕಾಲ ಹಿಡಿದಾನ // ನನ್ನಣ್ಣ
ಬಂಗಾರದಂತ ಸೊಸಿ ನನಗಿರಲಿ //
ಅರ್ಥಪೂರ್ಣವಾದ ಇಂತಹ ನೂರಾರು ತ್ರಿಪದಿಗಳನ್ನು ಹಾಡಿ ನಾಡ ಹಬ್ಬ ಮಹಾನವಮಿ ಯನ್ನು ಜನಪದರು ಜನಪ್ರಿಯಗೊಳಿಸಿದ್ದಾರೆ. ಪೌರಾಣಿಕವಾಗಿ ಜಗನ್ಮಾತೆಯಾದ ಪಾರ್ವತಿ ದೇವಿಯು ಲೋಕಕಲ್ಯಾಣಕ್ಕಾಗಿ ದೇವಿಯ ಅವತಾರವೆತ್ತಿ ಜಗದ ಕಂಟಕನಾಗಿ ಹೊರಹೊಮ್ಮಿದ ಮಹಿಷಾಸುರ, ಚಂಡ, ಮುಂಡ, ರಕ್ತ ಬೀಜಾಸುರು ಮುಂತಾದ ದುಷ್ಟ ಶಕ್ತಿಗಳನ್ನು ತನ್ನ ಅಧೀಮ ಶಕ್ತಿಯಿಂದ ಸಂಹಾರ ಮಾಡಿ ಲೋಕ ಪೂಜಿತಳಾದಳೆಂದು ತಿಳಿಯಲಾಗಿದೆ. ಈ ಕಾರಣವಾಗಿ ಈ ಮಹಾನವಮಿ ಯನ್ನು ವಿಜಯದಶಮಿ ಆಗಿ ಎಂದು ಆಚರಿಸುತ್ತಾ ಬರಲಾಗಿದೆ.
ಹೀಗೆ ಹಲವಾರು ಕಾರಣಗಳಿಂದಾಗಿ ಕನ್ನಡ ನಾಡಿನ ನಾಡ ಹಬ್ಬವಾದ ಬನ್ನಿ ಹಬ್ಬವನ್ನು ಜನರು ಭಕ್ತಿ ಭಾವದಿಂದ, ಆಯಾ ಊರಿನ ಸಂಪ್ರದಾಯಕ್ಕೆ ಅನುಗುಣವಾಗಿ ಹಲವಾರು ಪದ್ದತಿಗಳ ಮೂಲಕ ಆಚರಿಸುತ್ತಾರೆ.
ಜಾನಪದ ಸಾಹಿತ್ಯ ಈ ಹಬ್ಬವನ್ನು ಅತ್ಯಂತ ಶ್ರೀಮಂತಗೊಳಿಸಿದೆ, ಜನಪದರು ಬನ್ನಿ ಹಬ್ಬದ ಎಲ್ಲ ಶ್ರೇಷ್ಠತೆಯನ್ನು ತಮ್ಮ ಹಾಡುಗಳಲ್ಲಿ ಸೂಚ್ಯವಾಗಿ ಹೇಳಿ ಇದರಲ್ಲಿ ಭಾಗವಹಿಸುವ ಸೊಗಸುಗಾರಿಕೆಯನ್ನು ರಾಗ ಬದ್ಧವಾಗಿ, ತಾಳ ಬದ್ದವಾಗಿ ಹಾಡಿ ತೋರಿಸಿ ಲೋಕಪ್ರಿಯಗೊಳಿಸಿದ್ದಾರೆ.
